ಕುಮಾರನ್ ಆಶಾನ್ ಅವರು ರಚಿಸಿದ ಗುರುಗಳ ಜೀವನ ಚರಿತ್ರೆಯನ್ನು ಅನುವಾದಿಸುವ ಪ್ರಯತ್ನ ಇಲ್ಲಿದೆ. ಹದಿನೈದು ಪುಟ್ಟ ಅಧ್ಯಾಯಗಳ ಈ ಕೃತಿ ನಾರಾಯಣ ಗುರುಗಳ ಬದುಕಿನ ಸಂಕ್ಷಿಪ್ತ ಪರಿಚಯ ಮಾಡಿಕೊಡುತ್ತದೆ. ಈ ಸರಣಿಯ 10ನೇ ಅಧ್ಯಾಯ ಇಲ್ಲಿದೆ…। ಎನ್.ಎ.ಎಂ.ಇಸ್ಮಾಯಿಲ್
ತಿರುವಿದಾಂಕೂರು ಸರ್ಕಾರ ಸ್ವಾಮಿಗಳನ್ನು ಶ್ರೀ ನಾರಾಯಣ ಧರ್ಮಪರಿಪಾಲನ ಯೋಗಂನ (ಎಸ್ಎನ್ಡಿಪಿ ಯೋಗಂ) ಅಧ್ಯಕ್ಷರು ಹಾಗೂ ಸಮುದಾಯದ ಗುರುವೆಂದು ಪರಿಗಣಿಸಿ ಯಾವುದೇ ಸಿವಿಲ್ ನ್ಯಾಯಾಲಯಗಳಿಗೆ ಕಡ್ಡಾಯವಾಗಿ ಹಾಜರಾಗುವುದರಿಂದ ವಿನಾಯಿತಿ ನೀಡಿತು.
ಹಿಂದಿನ ಅಧ್ಯಾಯ ಇಲ್ಲಿದೆ : https://aralimara.com/2024/07/30/guru-41/ ಮುಂದೆ ಓದಿ…
ಅಧ್ಯಾಯ ಹತ್ತು
ಸ್ವಾಮಿಗಳ ಹೆಸರು ಮಲಬಾರ್ನಲ್ಲೂ ಬಹುಶ್ರುತವಾಗಿತ್ತು. ಶ್ರೀನಾರಾಯಣ ಧರ್ಮ ಪರಿಪಾಲನ ಯೋಗಂನ ಸಾಮಾಜಿಕ ಚಟುವಟಿಕೆಗಳ ವಿವರ ತಿಳಿದ ಮೇಲೆ ಅಲ್ಲಿನ ಜನರಿಗೆ ಸ್ವಾಮಿಗಳ ಕುರಿತ ಆಸಕ್ತಿ ಮತ್ತು ಗೌರವ ಹಿಂದೆಂದಿಗಿಂತಲೂ ಹೆಚ್ಚಿತು. ಮಲಯಾಳ ವರ್ಷ 1081ರಲ್ಲಿ (ಕ್ರಿ.ಶ. 1906) ಈಳವರಿಗಾಗಿ ಒಂದು ದೇಗಲ ಬೇಕು, ಇದನ್ನು ಸ್ವಾಮಿಗಳೇ ಪ್ರತಿಷ್ಠಾಪಿಸಬೇಕೆಂಬ ಚಿಂತನೆಯೊಂದು ಸ್ಥಳೀಯರಲ್ಲಿ ಮೊಳೆಯಿತು. ಅದೇ ವರ್ಷ ಕುಂಭ ಮಾಸದಲ್ಲಿ (ಕ್ರಿ.ಶ. 1906, ಫೆಬ್ರವರಿ) ಅರುವಿಪ್ಪುರಂನ ಶಿವರಾತ್ರಿ ಆಚರಣೆಗಳನ್ನು ಮುಗಿಸಿಕೊಂಡು ತಿರುವಿದಾಂಕೂರಿನ ಕೊಟ್ಟಾಯಂ ಮೊದಲಾದ ಊರುಗಳಲ್ಲಿ ಸಂಚರಿಸಿದ ಸ್ವಾಮಿಗಳು ಕುಮರಕಂ ಈಳವ ಸಮಾಜಂನವರು ನಿರ್ಮಿಸಿದ ಪ್ರಾರಂಭೋತ್ಸವನ್ನು ನಿರ್ವಹಿಸಿದರು. ಈ ಪ್ರದೇಶದಲ್ಲಿದ್ದ ಈಳವರ ಅನೇಕ ಪುರಾತನ ದುರ್ಗಾ ಕ್ಷೇತ್ರಗಳಲ್ಲಿ ನಡೆಯುತ್ತಿದ್ದ ಪ್ರಾಣಿಬಲಿ ನಿಲ್ಲುವಂತೆ ಮಾಡಿದರು.
ಸ್ವಾಮಿಗಳು ಈ ಪ್ರದೇಶಕ್ಕೆ ಭೇಟಿ ನೀಡಿದ್ದು ಅದೇ ಮೊದಲು. ಈ ಸಂದರ್ಭದಲ್ಲಿ ರೋಗ ಬಾಧೆಯುಳ್ಳ ಹಲವರು ಸ್ವಾಮಿಗಳ ದರ್ಶನಕ್ಕಾಗಿ ಬಂದಿದ್ದರು ಮತ್ತು ಆಗ ಕೆಲವು ಪವಾಡಗಳು ಸಂಭವಿಸಿದವೆಂದು ಹೇಳಲಾಗುತ್ತದೆ.
ಕೊಟ್ಟಾಯಂನಿಂದ ಸ್ವಾಮಿಗಳು ಪೆರಿಙೋಟ್ಟುಕರ ಎಂಬಲ್ಲಿಗೆ ಪ್ರಯಾಣಿಸಿದರು. ಇಲ್ಲಿ ಅವರೇ ಸ್ಥಾಪಿಸಿದ ದೇಗುಲ ಮತ್ತು ಮಠವಿತ್ತು. ಇದರ ನಿರ್ವಹಣೆಗೆ ಅಗತ್ಯವಿರುವ ಸಂಪನ್ಮೂಲಕ್ಕಾಗಿ ಸ್ವಲ್ಪ ಆಸ್ತಿಯೂ ದಾನವಾಗಿ ದೊರೆತಿತ್ತು. ಸ್ವಾಮಿಗಳು ಇಲ್ಲಿ ಉಳಿದುಕೊಂಡಿದ್ದ ಸಮಯದಲ್ಲಿ ತಲಶ್ಶೇರಿಯಿಂದ ಬಂದ ಕೆಲವು ಪ್ರಮುಖರು ಸ್ವಾಮಿಗಳು ತಮ್ಮೂರಿಗೆ ಆಹ್ವಾನಿಸಿ ಜೊತೆಯಲ್ಲೇ ಕರೆದೊಯ್ದರು.
ತಲಶ್ಶೇರಿಯ ತೀಯಾ ಸಮುದಾಯದವರಲ್ಲಿ ಕೆಲವರು ಬಹಳ ಕಾಲದಿಂದ ಬ್ರಹ್ಮಸಮಾಜದ ಅನುಯಾಯಿಗಳಾಗಿದ್ದರು. ಇದರಿಂದಾಗಿ ಸಮುದಾಯದೊಳಗೆ ಪಕ್ಷಭೇದವಿತ್ತು. ಸ್ವಾಮಿಗಳು ಎರಡೂ ಪಕ್ಷದವರೊಂದಿಗೆ ಮಾತನಾಡಿ ಅವರೊಳಗೆ ಏಕತೆ ಮೂಡಲು ಕಾರಣವಾದರು.
ಈ ಮೊದಲ ಪ್ರವಾಸದಲ್ಲಿಯೇ ಸ್ವಾಮಿಗಳು ಉತ್ತರ ಮಲಬಾರಿನ ಸ್ವಸಮುದಾಯದವರ ಭಕ್ತಿ, ಗೌರವ ಮತ್ತು ಪ್ರೀತಿಗೆ ಪಾತ್ರರಾದರು. ಅವರ ಮಾರ್ಗದರ್ಶನದಲ್ಲೇ ತಲಶ್ಶೇರಿಯ ಜಗನ್ನಾಥ ದೇವಾಲಯಕ್ಕೆ ಬೇಕಿರುವ ಸ್ಥಳವನ್ನು ಗುರುತಿಸಿ ಗುದ್ದಲಿಪೂಜೆ ನೆರವೇರಿತು.
ಇಲ್ಲಿಂದ ಹಿಂದಿರುಗುವಾಗ ಸ್ವಾಮಿಗಳು ಕೋಝಿಕ್ಕೋಡ್ನಲ್ಲಿ ಎರಡು ದಿನ ಉಳಿದಿದ್ದರು. ಅಲ್ಲಿಂದ ಪೆರಿಙೋಟ್ಟುಕರ, ಪರವೂರ್ ಮುಂತಾದೆಡೆಗಳಿಗೆ ಭೇಟಿ ನೀಡಿ ಮೀನ ಮಾಸದ ಮಧ್ಯಭಾಗದಲ್ಲಿ ಶಿವಗಿರಿ ತಲುಪಿದರು. ಈ ಪ್ರವಾಸದ ಸಂದರ್ಭದಲ್ಲಿ ಪರವೂರ್ ಮತ್ತು ಇತರ ಪ್ರದೇಶಗಳಲ್ಲಿ ‘ತಾಲಿಕೆಟ್ಟು’ ಮದುವೆಗಳನ್ನು ನಿಲ್ಲಿಸಿ ತಾವು ರೂಪಿಸಿದ ಹೊಸ ವಿವಾಹ ಸಂಹಿತೆಯ ಬಳಕೆಯ ಬಗ್ಗೆ ಅರಿವು ಮೂಡಿಸುವ ವ್ಯವಸ್ಥೆ ಮಾಡಿದರು.
(ಮುಂದುವರಿಯುವುದು…)


[…] ಅಧ್ಯಾಯ ಇಲ್ಲಿದೆ : https://aralimara.com/2024/07/31/guru-42/ ಮುಂದೆ […]
LikeLike