ಶ್ರೀ ನಾರಾಯಣ ಗುರು ಜೀವನಚರಿತ್ರೆ : ಅಧ್ಯಾಯ 12

ಕುಮಾರನ್ ಆಶಾನ್ ಅವರು ರಚಿಸಿದ ಗುರುಗಳ ಜೀವನ ಚರಿತ್ರೆಯನ್ನು ಅನುವಾದಿಸುವ ಪ್ರಯತ್ನ ಇಲ್ಲಿದೆ. ಹದಿನೈದು ಪುಟ್ಟ ಅಧ್ಯಾಯಗಳ ಈ ಕೃತಿ ನಾರಾಯಣ ಗುರುಗಳ ಬದುಕಿನ ಸಂಕ್ಷಿಪ್ತ ಪರಿಚಯ ಮಾಡಿಕೊಡುತ್ತದೆ. ಈ ಸರಣಿಯ 12ನೇ ಅಧ್ಯಾಯ ಇಲ್ಲಿದೆ…। ಎನ್.ಎ.ಎಂ.ಇಸ್ಮಾಯಿಲ್

ಸ್ವಾಮಿಗಳಿಗೆ ಪ್ರಯಾಣಕ್ಕೆ ಜೊತೆಯಾಗಿದ್ದ ಅನುಯಾಯಿಗಳಲ್ಲಿ ಒಬ್ಬರಾಗಿದ್ದ ಕೊಚ್ಚುಮಾಯಿರಟ್ಟಿ ಆಶಾನ್ ಕಾಲರಾ ಬಾಧೆಯಿಂದ ತೀರಿಕೊಂಡಿದ್ದರು. ಚಿಕಿತ್ಸೆ ನೀಡುತ್ತಿದ್ದ ಡಾಕ್ಟರ್ ಕಾಯಿಲೆ ವಾಸಿಯಾಗುವುದೆಂಬ ಭರವಸೆ ಕೊಟ್ಟ ಮೇಲೂ ಆಶಾನ್ ತೀರಿಕೊಂಡಿದ್ದರು. ಅದೇ ಡಾಕ್ಟರ್ ಸ್ವಾಮಿಗಳಿಗೆ ಬಾಧಿಸಿರುವ ಕಾಯಿಲೆ ವಾಸಿಯಾಗುವುದು ಕಷ್ಟ ಎಂದೂ ಹೇಳಿದ್ದರು.

ಹಿಂದಿನ ಅಧ್ಯಾಯ ಇಲ್ಲಿದೆ https://aralimara.com/2024/08/01/guru-43/ ಮುಂದೆ ಓದಿ…


ಅಧ್ಯಾಯ 12

ಮುಂದಿನ ಕೆಲವು ದಿನಗಳಲ್ಲಿ ಸ್ವಾಮಿಗಳು ತಮ್ಮನ್ನು ಬಾಧಿಸಿದ್ದ ಮಹಾರೋಗ ಮತ್ತು ಅದರ ಪರಿಣಾಮದಿಂದ ಆರಂಭವಾಗಿದ್ದ ಇತರ ತೊಂದರೆಗಳನ್ನು ನಿವಾರಿಸಿಕೊಂಡು ಪವಾಡಸದೃಶವಾಗಿ ಚೇತರಿಸಿಕೊಂಡರು.

ಹಿಂದೆ ಸ್ವಾಮಿಗಳು ಯೋಗಾಭ್ಯಾಸ ನಿರತರಾಗಿದ್ದ ಕಾಲದಲ್ಲಿ ನೈಯ್ಯಾಟಿಂಕರಕ್ಕೆ ಸಮೀಪ ಅರುಮಾನೂರು ಎಂಬ ಗ್ರಾಮದಲ್ಲಿರುವಾಗ ಅವರಿಗೆ ಇದೇ ಬಗೆಯಲ್ಲಿ ಕಾಲರಾ ಬಾಧಿಸಿತ್ತು. ಎಲ್ಲಾ ಚಿಕಿತ್ಸೆಗಳನ್ನೂ ನಿಲ್ಲಿಸಲು ಹೇಳಿ ಸ್ವಾಮಿಗಳು ನಿರಾಳರಾದದ್ದರ ಹಿಂದೆಯೇ ರೋಗ ವಾಸಿಯಾಯಿತೆಂದು ಹೇಳಲಾಗುತ್ತದೆ.

ಪ್ರಸಿದ್ಧ ಡಾಕ್ಟರ್ ರಾವ್ ಸಾಹೇಬ್ ಕೆ. ಕೃಷ್ಣನ್ ಅವರು ಸ್ವಾಮಿಗಳನ್ನು ಚಿಕಿತ್ಸೆಗಾಗಿ ಆಲುವಾದಿಂದ ಪಾಲಕ್ಕಾಡಿಗೆ ಕರೆದೊಯ್ದು ಅಲ್ಲಿಯೇ ಉಳಿಸಿಕೊಂಡಿದ್ದರು. ಈ ದಿನಗಳಲ್ಲಿ ಸ್ಥಳೀಯ ಈಳವ ಸಮುದಾಯದವರ ವತಿಯಿಂದ ಅಲ್ಲೊಂದು ದೇವಾಲಯ ನಿರ್ಮಿಸುವುದು ಮತ್ತು ಸಂಘಟನೆಯೊಂದನ್ನು ರೂಪಿಸುವುದರ ಚಿಂತನೆಗಳು ನಡೆದವು. ಧನುರ್ಮಾಸದ ಎಂಟನೇ ದಿನ ಸ್ವಾಮಿಗಳು ಅಲ್ಲಿ ದೊಡ್ಡದೊಂದು ಸಮಾರಂಭದಲ್ಲಿ ದೇಗುಲಕ್ಕಾಗಿ ಗುದ್ದಲಿ ಪೂಜೆ ನಡೆಸಿದರು. ಮರುದಿನವೇ ಸ್ವಾಮಿಗಳು ಕೋಝಿಕ್ಕೋಡ್ ತಲುಪಿದರು. ಅವರನ್ನು ಸ್ವಾಗತಿಸಲು ಕೋಝಿಕ್ಕೋಡ್‌ನ ಸ್ವಜಾತೀಯರು ಮಾಡಿದ್ದ ಏರ್ಪಾಡು ಸ್ತುತ್ಯರ್ಹವಾಗಿತ್ತು. ಇದೇ ತಿಂಗಳ ಹನ್ನೆರಡನೇ ದಿನ ಮುಂಜಾನೆ ಕೋಝಿಕ್ಕೋಡ್‌ನ ಶ್ರೀಕಂಠೇಶ್ವರ ದೇವಸ್ಥಾನದ ಶಂಕು ಸ್ಥಾಪನೆಯನ್ನು ನೆರವೇರಿಸಿದರು.

ಧನುರ್ಮಾಸದ ಹದಿನೈದನೇ ದಿನ ಬೆಳಿಗ್ಗೆ ಅಲ್ಲಿನ ಆ್ಯನಿ ಹಾಲ್ ಸಭಾಂಗಣದಲ್ಲಿ ಸ್ಥಳೀಯ ಥಿಯಾಸಫಿಕಲ್ ಸೊಸೈಟಿಯ ಸದಸ್ಯರು, ವಿದ್ವಾಂಸರು, ಕೆಲವು ಬ್ರಾಹ್ಮಣರು ಮತ್ತು ನಾಯರ್‌ಗಳೂ ಸೇರಿ ಸ್ವಾಮಿಗಳಿಗೆ ಒಂದು ಸನ್ಮಾನ ಪತ್ರವನ್ನರ್ಪಿಸಿದರು. ಅವರಿಗೆ ಸ್ವಾಮಿಗಳ ಬಗ್ಗೆ ಇದ್ದ ಭಕ್ತಿ ಮತ್ತು ಗೌರವಗಳು ಎಂಥದ್ದು ಎಂಬುದನ್ನು ಸನ್ಮಾನ ಪತ್ರದಿಂದ ಆರಿಸಿ ಉದ್ಧರಿಸಿರುವ ಕೆಳಗಿನ ಸಾಲುಗಳೇ ಹೇಳುತ್ತವೆ.

“ಏವಂ ಸದ್ಧರ್ಮಕರ್ಮಾಚರಣ ವಿಷಯಣಿಂ ಬುದ್ಧಿ ಮಸ್ಮಾಕಮತ್ರಾ
ಧಾತುಂ ಕಾರುಣ್ಯಪೂರ್ವಂ ನಿಜನಿಲತಯಮಪಾಹಾಯ ಚಾಭ್ಯಾಗಮದ್ಯತ್
ಶ್ರೀಮನ್ನಾರಾಯಣಾಖ್ಯಃ ಶಿವಗಿರಿನಿಲಾಯಧೀಶ್ವರಾ ದೇಶಿಕೇಯಂ
ತಸ್ಮತ್ ಸಂತುಷ್ಟಾಚಿತ್ತೋ  ವಯಮಪಿ ತನುಸಃ ಸ್ವಾಗತಂ ವಂದನಂ ಚ.”

“We…..recognising in you a born leader of men, a genuine descendant of the ancient saints of our mother land, a true Bramhana soul sent out by the guardians of humanity for the uplifting and redemption of a community whose spiritual interest those who call themselves highcaste have grown so sadly oblivious.”

ಈ ಪ್ರವಾಸದ ವೇಳೆ ಸ್ವಾಮಿಗಳು ತಲಶ್ಶೇರಿಯವರೇಗೂ ಹೋಗಿ ಅಲ್ಲಿನ ದೇಗುಲ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ‘[1]ಜ್ಞಾನೋದಯಯೋಗಂ’ನ ಕಾರ್ಯಕರ್ತರು ಮತ್ತು ಸಾರ್ವಜನಿಕರ ನಡುವೆ ಇದ್ದ ಕೆಲವು ವಿವಾದಗಳನ್ನು ಮಾತುಕತೆಯ ಮೂಲಕ ಪರಿಹರಿಸಿದರು. ಈ ಅವಧಿಯಲ್ಲಿ ಕೆಲ ದಿನಗಳ ಕಾಲ ಉತ್ತರ ಮಲಯಾಳದ (ಉತ್ತರ ಕೇರಳದ) ಹಲವು ಸಣ್ಣ ಪಟ್ಟಣಗಳನ್ನು ಸಂದರ್ಶಿಸಿದರು.

ಮಕರ ಮಾಸದಲ್ಲಿ ಕಣ್ಣೂರಿನಲ್ಲಿ ಈಳವ ಸಮುದಾಯದವರಿಗಾಗಿ ದೇಗುಲವೊಂದರ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಿದರು. ಅಲ್ಲಿಂದ ಮಂಗಳೂರಿಗೆ ಪ್ರಯಾಣ ಬೆಳೆಸಿದರು. ಅಲ್ಲಿ ತುಳು ಮಾತನಾಡುವ, ಬಿಲ್ಲವರು ಎಂದು ಗುರುತಿಸಿಕೊಳ್ಳುವ ತೀಯ ಸಮುದಾಯದವರು ತಮಗೊಂದು ದೇವಾಲಯ ಬೇಕೆಂಬ ಅಪೇಕ್ಷೆಯನ್ನಿಟ್ಟಿದ್ದರು. ಈ ದೇಗುಲ ನಿರ್ಮಾಣದ ಪೂರ್ವಸಿದ್ಧತೆಗಾಗಿ ಸ್ವಾಮಿಗಳು ಮಂಗಳೂರು ಪ್ರವಾಸ ಕೈಗೊಳ್ಳಬೇಕಾಯಿತು.

ಮಲಯಾಳ ವರ್ಷ 1083ರ ಕುಂಭ ಮಾಸದ ಮೊದಲ ದಿನ (ಫೆ. 12, 1908) ತಲಶ್ಶೇರಿ ಜಗನ್ನಾಥ ದೇಗುಲದ ಪ್ರತಿಷ್ಠಾಪನೆ ನಡೆಸಿದರು. ಈ ಕ್ಷೇತ್ರದ ನಿರ್ವಹಣೆಯು ಶಾಶ್ವತವಾಗಿ ಶಿವಗಿರಿ ಮಠದ ಅಧೀನದಲ್ಲಿರುತ್ತದೆಂಬ ಒಡಂಬಂಡಿಕೆಯೊಂದನ್ನು ‘ಜ್ಞಾನೋದಯಯೋಗಂ’ ಜೊತೆಗೆ ಮಾಡಿಕೊಳ್ಳಲಾಯಿತು.

ಹಿಂದಿರುಗುವ ವೇಳೆ ಸ್ವಾಮಿಗಳು ಕೊಚ್ಚಿಯಲ್ಲಿ ಕುಳಂಬಡಿ ಎಂಬಲ್ಲಿರುವ ದುರ್ಗೆಯ ದೇಗುಲದ ಜೀರ್ಣೋದ್ಧಾರವನ್ನು ಪೂರ್ಣಗೊಳಿಸಿ ಪುನರ್ ಪ್ರತಿಷ್ಠೆ ನಡೆಸಿದರು. ಅಷ್ಟೇ ಅಲ್ಲ, ಇಲ್ಲಿ ನಡೆಯುತ್ತಿದ್ದ ಪೂರಂ ತುಳ್ಳಲ್ ಎಂಬ ಅಶ್ಲೀಲ ಆಯಾಮ ಪಡೆದುಕೊಳ್ಳುತ್ತಿದ್ದ ಕುಣಿತ ಮತ್ತು ಪ್ರಾಣಿಬಲಿಯನ್ನು ನಿಲ್ಲಿಸುವಂತೆ ಜನರನ್ನು ಒಪ್ಪಿಸುವಲ್ಲಿ ಯಶಸ್ವಿಯಾದರು. ಅದೇ ವರ್ಷ ಮೇಷ ಮತ್ತು ವೃಷಭ ಮಾಸಗಳಲ್ಲಿ ಶಿವಗಿರಿಯ ಧಾರ್ಮಿಕ ಕಾರ್ಯಗಳಿಗಾಗಿ ಕೊಲ್ಲಂ ಮುಂತಾದ ತಾಲೂಕುಗಳಲ್ಲಿ ಪ್ರವಾಸ ಕೈಗೊಂಡರು.


[1] 1904ರಲ್ಲಿ ವರದೂರು ಕಣಿಯಿಲ್ ಕುಂಞಿಕಣ್ಣನ್   ತಲಶ್ಶೇರಿಯಲ್ಲೊಂದು ದೇಗುಲ ಬೇಕು ಎಂಬ ಅಪೇಕ್ಷೆಯನ್ನು ನಾರಾಯಣ ಗುರುಗಳಿಗೆ ನಿವೇದಿಸಿಕೊಂಡರು. ಇದಕ್ಕೆ ಸ್ಪಂದಿಸಿದ ಗುರುಗಳು ದೇಗುಲ ನಿರ್ಮಾಣದ ಪೂರ್ವಸಿದ್ಧತೆಗಳಿಗಾಗಿ ಒಂದು ಸಮಿತಿ ರೂಪಿಸಲು ಹೇಳಿ ಅದಕ್ಕೆ ತಮ್ಮ ಪ್ರತಿನಿಧಿಯಾಗಿ ಕುಮಾರನ್ ಆಶಾನ್ ಅವರನ್ನೇ ನೇಮಿಸಿದರು. ಹೀಗೇ ರೂಪುಗೊಂಡ ಸಮಿತಿ ಮಲಬಾರ್ ಪ್ರದೇಶದ ತೀಯಾ ಸಮುದಾಯದವರ ಹಿಂದುಳಿಯುವಿಕೆಯನ್ನು ನಿವಾರಿಸಲು ಅಗತ್ಯವಿರುವ ಸಂಘಟನೆಯೊಂದನ್ನು ರೂಪಿಸಲೂ ತೀರ್ಮಾನಿಸಿತು. ಈ ಸಂಘಟನೆಗೆ ಕುಮರಾನ್ ಆಶಾನ್ ಅವರಿಟ್ಟ ಹೆಸರೇ ‘ಜ್ಞಾನೋದಯ ಯೋಗಂ’. ಇದನ್ನು ಆಗ ‘ವಡಕ್ಕೇ ಮಲಯಾಳತ್ತಿಲೇ ಶ್ರೀ ಜ್ಞಾನೋದಯಯೋಗಂ’  (ಉತ್ತರ ಮಲಯಾಳದ ಜ್ಞಾನೋದಯ ಸಭಾ) ಎಂಬ ಹೆಸರಿನಲ್ಲೇ ನೋಂದಾಯಿಸಲಾಗಿತ್ತು.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

1 Response

Leave a Reply

This site uses Akismet to reduce spam. Learn how your comment data is processed.