ಕೆಲವರಿಗೆ ಸಿಟ್ಟು ಮಾಡ್ಕೊಳೋದೇ ಒಂದು ಹೆಮ್ಮೆಯ ವಿಷಯ. ನಂಗೆ ಸಿಟ್ಟು ಬಂದ್ರೆ ಮನುಷ್ಯನೇ / ಳೇ ಅಲ್ಲ ಅಂತ ಅಬ್ಬರಿಸ್ತಾ ಇರ್ತಾರೆ. ಸಿಟ್ಟು ತಡ್ಕೊಳಕ್ಕೆ ಆಗದಿರೋರು ಖಂಡಿತಾ ಮನುಷ್ಯರಲ್ಲ, ಅದು ನಮಗೂ ಗೊತ್ತಿದೆ! ಒಂದಷ್ಟು ಹೊತ್ತು ತಾವು ಮನುಷ್ಯರಾಗಿ ಉಳಿಯದ ಬಗ್ಗೆ ಅಷ್ಟು ಕೊಚ್ಚಿಕೊಳ್ಳುವಂಥದ್ದೇನಿದೆ? ~ ಚೇತನಾ ತೀರ್ಥಹಳ್ಳಿ
ಬುದ್ಧನ ಅನೇಕ ಸನ್ಯಾಸಿ ಶಿಷ್ಯರಲ್ಲಿ ಮೋಳಿಯ ಪಗ್ಗುಣ ಒಬ್ಬ. ಎಲ್ಲರ ಜೊತೆ ನಗುನಗುತ್ತ ಸ್ನೇಹದಿಂದ ಇರುತ್ತಿದ್ದ ಅವನಿಗೆ ಸಿಟ್ಟು ಮಾತ್ರ ಬಹಳ ಬೇಗ ಬರುತ್ತಿತ್ತು. ಬಾಕಿಯಂತೆ ಅವನು ಎಲ್ಲರಿಗೂ ಸಹಾಯ ಮಾಡುತ್ತ, ಮಾತಾಡಿಸುತ್ತ, ಬಂದವರನ್ನು ಉಪಚರಿಸುತ್ತ ಇರುತ್ತಿದ್ದ.
ಪಗ್ಗುಣನ ಸಿಟ್ಟಿನ ಸುದ್ದಿ ಬುದ್ಧನ ಕಿವಿ ಮುಟ್ಟಿತು. “ಎಲ್ಲಾ ಸರಿ, ಪಗ್ಗುಣ ಬಹಳ ಒಳ್ಳೆ ಸಹೋದರ. ಸ್ವಲ್ಪ ಸಿಟ್ಟು ಅಷ್ಟೇ” ಅಂತ ಒಂದಿಬ್ಬರು ವಹಿಸಿಕೊಂಡು ಬಂದರು. ಆಗ ಬುದ್ಧ ಸ್ವಲ್ಪವಾದರೂ ಸಿಟ್ಟು ಸಿಟ್ಟೇ, ಜಾಸ್ತಿಯಾದರೂ ಸಿಟ್ಟು ಸಿಟ್ಟೇ ಅನ್ನುತ್ತ ಒಂದು ಕತೆ ಹೇಳಿದ.
ಸಾವತ್ತಿಯಲ್ಲಿ ವಿದೇಹಿಕಾ ಅನ್ನುವ ಒಬ್ಬಳು ಗೃಹಿಣಿ ಇದ್ಳು. ಅವಳು ಬಹಳ ಸುಶೀಲೆ, ಸದ್ಗುಣಿ ಮತ್ತು ಸೌಮ್ಯ ಸ್ವಭಾವದವಳೆಂದೆ ಎಲ್ಲರ ಗೌರವ ಪಡೆದಿದ್ಳು. ಅವಳ ಮನೆಯಲ್ಲೊಬ್ಳು ಕಾಳಿ ಅನ್ನುವ ಕೆಲಸದವಳಿದ್ಳು. ಒಂದಿನ ಕಾಳಿಗೆ ತನ್ನ ಒಡತಿಯನ್ನ ಪರೀಕ್ಷಿಸೋ ಮನಸಾಯ್ತು. ಮನಸಾಗಿದ್ದೇ ಕಾಳಿ, ಮಾರನೆ ದಿನ ಬೆಳಗ್ಗೆ ಕೊಂಚ ತಡವಾಗಿ ಎದ್ಳು. ಅವತ್ತು ವಿದೇಹಿಕಾ “ಯಾಕೆ ತಡವಾಯ್ತು?” ಅಂತ ಕೇಳಿದಳಷ್ಟೆ. ಕಾಳಿ “ಏನಿಲ್ಲ, ಸುಮ್ಮನೆ” ಅಂದರೂ ಮರುಪ್ರಶ್ನೆ ಮಾಡ್ಲಿಲ್ಲ. ಅದರ ಮರುದಿನ ಕಾಳಿ ಇನ್ನೂ ಕೊಂಚ ತಡವಾಗಿ ಎದ್ಳು. ಅವತ್ತು ವಿದೇಹಿಕಾ ಚೂರು ದನಿ ಎತ್ತರಿಸಿ, “ಯಾಕೆ ಇಷ್ಟು ತಡವಾಗಿ ಎದ್ದೆ?” ಅಂತ ಕೇಳಿದ್ಳು. ಕಾಳಿ “ಏನಿಲ್ಲ, ಸುಮ್ಮನೆ” ಅಂದ್ಳು. ಆಗ ವಿದೇಹಿಕಾ ಮುಖ ಸಿಂಡರಿಸಿದ್ಳು. ಅದರ ಮರುದಿನ ಕಾಳಿ ಮತ್ತೂ ಕೊಂಚ ತಡವಾಗಿ ಎದ್ಳು. ಅವತ್ತು ವಿದೇಹಿಕಾ ಹುಬ್ಬು ಗಂಟಿಕ್ಕಿಕೊಂಡು ಕೋಪ ತೋರುತ್ತಾ “ಯಾಕೆ ಇಷ್ಟು ತಡವಾಗಿ ಎದ್ದೆ?” ಅಂತ ಕೇಳಿದ್ಳು. ಕಾಳಿ ಅವತ್ತೂ “ಏನಿಲ್ಲ, ಸುಮ್ಮನೆ” ಅಂದ್ಳು. ಒಡತಿಗೆ ಸಿಟ್ಟು ಜಾಸ್ತಿಯಾಗಿ ಚೆನ್ನಾಗಿ ಬೈದುಬಿಟ್ಳು. ಮಾರನೆ ದಿನ ಕಾಳಿ ಸೂರ್ಯ ನೆತ್ತಿಗೇರುವ ಹೊತ್ತಿಗೆ ಎದ್ಳು. ಅವತ್ತಂತೂ ವಿದೇಹಿಕಾ ಅವಳನ್ನು ಬೈದಿದ್ದಲ್ಲದೆ ಮುಡಿಯ ಚೂಡಾಮಣಿಯಿಂದ ಹಣೆಗೆ ಚುಚ್ಚಿಯೂಬಿಟ್ಳು. ಕಾಳಿ ರಕ್ತ ಒಸರುತ್ತಿದ್ದ ಹಣೆ ಮೇಲೆ ಕೈಯೊತ್ತಿಕೊಂಡು ಬೀದಿಯ ತುಂಬಾ ವಿದೇಹಿಕಾಳ ಕಾರನಾಮೆ ಹೇಳಿಕೊಂಡು ತಿರುಗಿದ್ಳು. ಅವತ್ತಿಂದ ಊರಮಂದಿಗೆ ವಿದೇಹಿಕಾ ಮೇಲಿದ್ದ ಗೌರವ ಬಹಳ ಮಟ್ಟಿಗೆ ಕಡಿಮೆಯಾಯ್ತು.
“ಆದ್ದರಿಂದ ಬಿಕ್ಖುಗಳೇ, ನಿಮಗೆ ಕೋಪ ಬರಿಸುವವರು ಇಲ್ಲಿ ಇಲ್ಲದ ಕಾರಣಕ್ಕಷ್ಟೇ ನೀವು ಸೌಮ್ಯವಾಗಿದ್ದೀರಿ, ಸಂತರಾಗಿದ್ದೀರಿ. ನಿಮಗೇನಾದರೂ ಕೊರತೆಯಾದರೆ, ಯಾರಾದರೂ ನಿಮ್ಮ ಅಹಂಕಾರ ಕೆಣಕಿದರೆ, ಬೇಕಿದ್ದು ದೊರೆಯದೆ ಹೋದರೆ ನೀವೂ ವಿದೇಹಿಕಾಳಂತೆ ಸಿಟ್ಟುಗೊಳ್ಳೋದಿಲ್ಲ ಅನ್ನುವ ಖಾತ್ರಿ ಇದೆಯೇ? ಆದ್ದರಿಂದ ಯಾವ ಕಾರಣಕ್ಕೂ ಸಿಟ್ಟನ್ನು, ಸಿಟ್ಟು ಮಾಡಿಕೊಳ್ಳುವವರನ್ನು ಸಮರ್ಥಿಸಬೇಡಿ. ಅದನ್ನು ನಿಮ್ಮ ತಲೆಯ ಪಾತ್ರೆಯಿಂದ ಸಂಪೂರ್ಣ ಒರೆಸಿಹಾಕಿ” ಅಂದ ಬುದ್ಧ.
ಕೆಲವರಿಗೆ ಸಿಟ್ಟು ಮಾಡ್ಕೊಳೋದೇ ಒಂದು ಹೆಮ್ಮೆಯ ವಿಷಯ. ನಂಗೆ ಸಿಟ್ಟು ಬಂದ್ರೆ ಮನುಷ್ಯನೇ / ಳೇ ಅಲ್ಲ ಅಂತ ಅಬ್ಬರಿಸ್ತಾ ಇರ್ತಾರೆ. ಸಿಟ್ಟು ತಡ್ಕೊಳಕ್ಕೆ ಆಗದಿರೋರು ಖಂಡಿತಾ ಮನುಷ್ಯರಲ್ಲ, ಅದು ನಮಗೂ ಗೊತ್ತಿದೆ! ಒಂದಷ್ಟು ಹೊತ್ತು ತಾವು ಮನುಷ್ಯರಾಗಿ ಉಳಿಯದ ಬಗ್ಗೆ ಅಷ್ಟು ಕೊಚ್ಚಿಕೊಳ್ಳುವಂಥದ್ದೇನಿದೆ?
ಇನ್ನು ಕೆಲವರು ತಮ್ಮ ಮಕ್ಕಳು ಅಥವಾ ಮೊಮ್ಮಕ್ಕಳ ಸಿಟ್ಟು ಸಂಭ್ರಮಿಸೋದು ನೋಡಬೇಕು. “ಮೊಬೈಲೇ ಎಸ್ದುಬಿಡತ್ತೆ…” “ಪಾತ್ರೆನೇ ಬಿಸಾಡಿಬಿಡ್ತಾನೆ/ ಳೆ” ಎಂದೆಲ್ಲ ವಿವರ ಕೊಡ್ತಾರೆ. ಅವರಿಗೆ ತಮ್ಮ ಪ್ರೀತಿಪಾತ್ರರು ಸಿಟ್ಟುಕೊಂಡಷ್ಟೂ ಅವರು ತಮ್ಮನ್ನು ಗಮನಿಸ್ತಾರೆ ಅನ್ನುವ ಖುಷಿ! ತಮ್ಮ ಸಂಬಂಧವನ್ನು ಭದ್ರಪಡಿಸಿಕೊಳ್ಳಲಾದರೂ ಆ ಮತ್ತೊಬ್ಬರು ಸಿಟ್ಟುಕೊಳ್ತಾ ಇರಬೇಕು. ತಾವು ತಪ್ಪು ಮಾಡಿದಾಗ ಅಥವಾ ಮನೆಯಲ್ಲಿ ಏನೋ ಒಂದು ಕೊರತೆ ಉಂಟಾದಾಗ ಮನೆಯ ಮುಖ್ಯಸ್ಥರು ಅದಕ್ಕೆ ಸಿಟ್ಟು ಮಾಡಿಕೊಳ್ಳಲಿಲ್ಲವೆಂದರೆ ಇಡೀ ಮನೆಮಂದಿ ಗಾಬರಿಯಾಗುವ ಅತಿರೇಕಗಳು ನಮ್ಮಲ್ಲಿವೆ. ಅವರ ಸಿಟ್ಟು, ಅವರು ಇನ್ನೂ ಮನೆಗೆ ಸಲ್ಲುತ್ತಿದ್ದಾರೆ, ಮನೆಗೆ ಇನ್ನಷ್ಟು ಕಾಲ ಆಧಾರವಾಗಿರುತ್ತಾರೆ ಅನ್ನುವುದರ ಅಕ್ನಾಲೆಜ್ಮೆಂಟ್!
ಹೀಗೆ ಪ್ರತಿಯೊಬ್ಬರ ಪಾಲಿಗೂ ಅವರ ಸಿಟ್ಟಿಗೆ ತಮ್ಮ ಸ್ವಾರ್ಥದ ತುಪ್ಪ ಎರೆಯುವವರು ಇರುತ್ತಲೇ ಇರುವಾಗ ಅದನ್ನು ಹತೋಟಿಯಲ್ಲಿ ಇಟ್ಟುಕೊಳ್ಳೋದಾದ್ರೂ ಹೇಗೆ!?
ಸಿಟ್ಟು ತಮ್ಮ ಗುರುತಿಗೆ ಅಂಟಿಕೊಂಡವರ ಲಕ್ಷಣ. ತಮ್ಮ ಹೆಸರು, ಹುದ್ದೆ, ಸಂಬಂಧ ಇತ್ಯಾದಿಗೆ ಅಂಟಿಕೊಂಡಷ್ಟೂ ಅದನ್ನು ಸಾಬೀತುಪಡಿಸುವ, ಅದನ್ನು ಗಟ್ಟಿ ಮಾಡಿಕೊಳ್ಳುವ ಹಪಾಹಪಿ ಹೆಚ್ಚು. ತಮ್ಮ ದೇಹದೊಳಗೆ, ಹೆಸರಿನೊಳಗೆ, ಹುದ್ದೆಯೊಳಗೆ ಹುದುಗಿಕೊಂಡಷ್ಟೂ ಅಹಂಕಾರ ಗೋಡೆ ಗಟ್ಟಿಯಾಗುತ್ತ ಹೋಗುವುದು. ಆ ಗೋಡೆಗೆ ಮಾತಿನ, ಸೋಲಿನ, ಸವಾಲಿನ ಯಾವುದೇ ಚೆಂಡು ಬಡಿದರೂ ಅದು ರಪ್ಪನೆ ತಿರುಗಿ ಎಸೆದವರತ್ತ ಹೋಗುವಷ್ಟು ಗಟ್ಟಿ ಆ ಗೋಡೆ. ಆ ಗುರುತುಗಳಿಂದ ಕಳಚಿಕೊಂಡಾಗ ಗೋಡೆಯೂ ಮೆದುವಾಗುವುದು. ಬಡಿದ ಚೆಂಡು ಮರಳುವ ವೇಗವೂ ಕಡಿಮೆಯಾಗಿ ನಡುವಲ್ಲೆ ಬಿದ್ದುಹೋಗುವುದು.
ಎದುರಾಳಿ ಎಸೆದ ಹಾಗೆ ನಡುವಲ್ಲೆ ಬೀಳುವುದು ತಮ್ಮ ತಡೆಯುವ ಸಾಮರ್ಥ್ಯದ ಕೊರತೆ ಅಂದುಕೊಂಡರೆ ಅದು ನಿಜಕ್ಕೂ ನಮ್ಮ ಸೋಲು. ಆ ಚೆಂಡು ಬೀಳುವುದು ನಮ್ಮ ತಾಳಿಕೆಯ ಸಾಮರ್ಥ್ಯದ ಹೆಚ್ಚುಗಾರಿಕೆ. ಈ ತಾಳಿಕೆಯೇ ಸಿಟ್ಟಿನ ಬಹುದೊಡ್ಡ ಆಂಟಿಡೋಟ್.

