ಕ್ಷಣಕಾಲ ಮೌನ. ಆಮೇಲೆ ಇದ್ದಕ್ಕಿದ್ದಂತೆ ಹೊಟ್ಟೆ ಹಿಡಿದುಕೊಂಡು ನಗುತ್ತಾ ಚಪ್ಪಾಳೆ ತಟ್ಟುತ್ತಾ “ಅಯ್ಯೋ ಆ ಮುದುಕ ಫಂಗ್‌ಗಾನ್ ನಾಲಗೆ ಬಹಳ ಉದ್ದವಾಯ್ತು ನೋಡು! ಮೈತ್ರೇಯನನ್ನು ಗುರುತಿಸಲು ಸಾಧ್ಯವಾಗದವನನ್ನು ನಮ್ಮ ಭೇಟಿಗೆ ಕಳಿಸಿದ್ದಾನೆ. ನಿನ್ನ ನಮಸ್ಕಾರ ನಮಗೆ ಬೇಡ” ಅನ್ನುತ್ತಾ ಅವನಿಗೆ ಬೆನ್ನು ಹಾಕಿ ಓಡತೊಡಗಿದರು ಹಾನ್‍ಶಾನ್ ಮತ್ತು ಶೀದೇ । ಚೇತನಾ ತೀರ್ಥಹಳ್ಳಿ
ಜೆನ್ ಪರಂಪರೆ, ಬಹುತೇಕ ಒಂಟಿ ಸಾಧಕರ ಪರಂಪರೆ. ಜನರ ನಡುವೆ ಇದ್ದುಕೊಂಡೇ ಯಾರೊಂದಿಗೂ ತಮ್ಮನ್ನು ಗುರುತಿಸಿಕೊಳ್ಳದೆ, ಅಂಟಿಕೊಳ್ಳದೆ / ಅಂಟಿಸಿಕೊಳ್ಳದೆ ಸಾಧನೆ ನಡೆಸುವ ರೂಢಿ ಜೆನ್ ಸಾಧಕರದ್ದು. ಸೂಫಿಗಳಲ್ಲಿ ರೂಮಿ – ತಬ್ರೀಜಿ ಇರುವಂತೆ, ಭಾರತದಲ್ಲಿ ಷಾ ಹುಸೇನ್ – ಮಾಧೋ ಲಾಲರ ನಡುವೆ ಸೂಫಿ ಸೌಹಾರ್ದದ ಸಖ್ಯ ಮತ್ತು ಸಾಧನೆಯ ಜೊತೆಗಾರಿಕೆ ಕಂಡಂತೆ, ಝೆನ್ ಪರಂಪರೆಯಲ್ಲಿ ಇದ್ದೀತೇ ಅನ್ನುವ ಕುತೂಹಲವಿತ್ತು. ಈ ಹುಡುಕಾಟದಲ್ಲಿ ಕಂಡಿದ್ದು ಹಾನ್‌ಶಾನ್ ಮತ್ತು ಶೀದೇ ಜೋಡಿ. (ಹಾನ್‌ಶಾನ್ ಪದ್ಯಗಳನ್ನು ಓದುವ ಆಸಕ್ತಿಯಿದ್ದರೆ ಕಮೆಂಟ್ ಬಾಕ್ಸ್ ಗಮನಿಸಿ. ವರ್ಷದ ಹಿಂದಿನ ಅನುವಾದಗಳಿವೆ)
ಹಾನ್‍ಶಾನ್ – ಶೀದೇ – ಫಂಗ್‌ಗಾನ್ ಈ ಮೂವರನ್ನು ಒಟ್ಟಾಗಿ ತಿಯಾನ್ ತಾಯ್ ಸಾನ್ ಅಂತ ಕರೀತಾರೆ. ಇವರಲ್ಲಿ ಫಂಗ್‌ಗಾನ್ ಹಿರಿಯ, ಜೆನ್ ಗುರು. ಅನಾಥನಾಗಿ ಬೀದಿಪಾಲಾಗಿದ್ದ ಶೀದೇನಲ್ಲಿ ಬೋಧಿಸತ್ವವನ್ನ ಕಂಡ ಫಂಗ್‌ಗಾನ್, ಅವನನ್ನ ತಾನಿದ್ದ ಗುವೋಚಿಂಗ್ ಮೊನಾಸ್ಟರಿಗೆ ಕರೆತಂದು ಸಾಕಿ ಬೆಳೆಸ್ತಾನೆ. ಧ್ಯಾನ – ಅಭ್ಯಾಸದ ಜೊತೆಗೆ ಅಡುಗೆ ಮನೆ ಶುಚಿಗೊಳಿಸೋ ಕೆಲವನ್ನೂ ಹಚ್ತಾನೆ. (ಅದಕ್ಕೇ ಶೀದೇಯ ಬಹುತೇಕ ಎಲ್ಲಾ ಚಿತ್ರಗಳು ಕಸಬರಿಗೆಯೊಂದಿಗೇ ಇವೆ)
ಶೀದೇ ಬಹಳ ತುಂಟ. ಪ್ರತಿಯೊಂದನ್ನೂ ಬಹಳ ಉತ್ಸಾಹದಿಂದ ನೋಡುತ್ತಿದ್ದ, ಮಾಡುತ್ತಿದ್ದ. ಆದರೆ ಯಾರ ಜೊತೆಗೂ ಬೆರೆಯುತ್ತಿರಲಿಲ್ಲ. ತಾನಾಯಿತು, ತನ್ನ ಕೆಲಸವಾಯಿತು, ಅಭ್ಯಾಸವಾಯಿತು. ಇಷ್ಟೇ ಅವನ ಜಗತ್ತು. ಅವನು ಯಾವುದಾದರೂ ಒಂದು ವಿಷಯಕ್ಕೆ ಗೊಳ್ಳನೆ ನಕ್ಕುಬಿಟ್ಟರೆ ಮುಗಿಯಿತು. ಅವನಿಗೇನೋ ಬಹಳ ದೊಡ್ಡ ಅರಿವು ದಕ್ಕಿದೆ ಎಂದೇ ಅರ್ಥ.
ಹೀಗಿದ್ದ ಶೀದೇ ಒಮ್ಮೆ ಮೊನಾಸ್ಟರಿಯ ಹಿಂಭಾಗದಲ್ಲಿದ್ದ ಮಂಜಿನ ಬೆಟ್ಟಕ್ಕೆ ಹೋಗ್ತಾನೆ. ಅಲ್ಲೊಬ್ಬ ಒಂಟಿಬಡುಕ ಅಲೆಮಾರಿ, ಜೆನ್ ಕವಿ. ಅವನು ಮಂಜಿನ ಬೆಟ್ಟದಲ್ಲಿ ವಾಸಿಸ್ತಾ ಇದ್ದುದರಿಂದ್ಲೇ ಅವನನ್ನು ಹಾನ್‌ಶಾನ್ ಅಂತ (ಹಾನ್ – ಮಂಜು, ಶಾನ್ – ಬೆಟ್ಟ) ಕರೀತಾ ಇದ್ರು.
ಈ ಹಾನ್‌ಶಾನ್‌ಗೂ ಶೀದೇಗೂ ಗೆಳೆತನವಾಯ್ತು. ಅದೆಷ್ಟು ಗಟ್ಟಿ ಗೆಳೆತನವೆಂದರೆ, ಆಮೇಲಿಂದ ಶೀದೇ ತನ್ನ ಕೆಲಸ ಮುಗಿಸಿ ಫಂಗ್‌ಗಾನ್‌ಗೆ ಮುಖ ತೋರಿಸಿ ಬೆಟ್ಟ ಹತ್ತಿದರೆ ಮುಗಿಯಿತು. ಮತ್ತೆ ಮರಳುತ್ತಿದ್ದುದು ಮರು ದಿನದ ಕೆಲಸಕ್ಕೇ. ಹಾಗೆ ಮೊನಾಸ್ಟರಿಗೆ ಮರಳಿದಾಗೆಲ್ಲ ಅಡುಗೆಮನೆ ತಡಕಾಡಿ ಇದ್ದ ಬದ್ದ ಉಳಿಕೆ ತಿನಿಸನ್ನೆಲ್ಲ ಗೆಳೆಯನಿಗಾಗಿ ಬಿದಿರಿನ ಕೊಳವೆಯಲ್ಲಿ ಹೊತ್ತೊಯ್ಯುತ್ತಿದ್ದ ಶೀದೇ. ತಿಂಡಿ ತಿಂದು, ತಿಳಿ ನೀರು ಕುಡಿದು, ನಿದ್ದೆ ಹೊಡೆದು, ಆಮೇಲೆ ಏನಾದರೊಂದು ವಿಷಯಕ್ಕೆ ಇಬ್ಬರೂ ನಗುತ್ತ ಕುಳಿತುಬಿಟ್ಟರೆ ಮುಗಿಯಿತು! ಅದೇ ಅವರ ಆ ದಿನದ ಧ್ಯಾನ. ಅವರ ನಗುವಿನ ಅಬ್ಬರ, ಶಿಳ್ಳೆ – ಚಪ್ಪಾಳೆಗಳ ಲಯ ಆಲಿಸಲು ಮೊನಾಸ್ಟರಿಯ ಅನುಯಾಯಿಗಳು ಕಾದು ನಿಲ್ಲುತ್ತಿದ್ದರಂತೆ. ಅದರಿಂದೇನೋ ಸಂದೇಶ ಸಿಗುತ್ತದೆ, ಅರಿವು ದಕ್ಕುತ್ತದೆ ಅನ್ನುವ ನಿರೀಕ್ಷೆಯಿಂದ.
ಇಂಥಾ ಈ ವಿಚಿತ್ರ ಜೋಡಿಯ ಖ್ಯಾತಿ ಆಡಳಿತಗಾರರನ್ನು ತಲುಪಲು ಬಹಳ ಕಾಲ ಬೇಕಾಗಲಿಲ್ಲ. ಅದು 8 – 9ನೇ ಶತಮಾನದ, ಟಾಂಗ್ ಡೈನಸ್ಟಿಯ ಕಾಲ. ಬೌದ್ಧ ಧರ್ಮ ತನ್ನ ಉಳಿವಿಗಾಗಿ ಚೀನಾದ ತಾವೋ ಚಿಂತನೆಯೊಡನೆ ಬೆರೆಯುತ್ತಾ ಹೊಸ ಕವಲಿನತ್ತ ಕಾಲಿಡುತ್ತಿದ್ದ ಕಾಲವದು. ಟಾಂಗ್ ದೊರೆಗಳು ಬೌದ್ಧರನ್ನು ಬಹಳ ಎಚ್ಚರಿಕೆಯಿಂದ ಗಮನಿಸುತ್ತಾ ತಮ್ಮ ನೆಲ ಮೂಲದ ಸಿದ್ಧಾಂತಕ್ಕೆ ಧಕ್ಕೆ ತರುತ್ತಿದ್ದಾರೋ ಎಂದು ಕಣ್ಗಾವಲು ಹಾಕಿದ್ದರು.
ಇದರ ಭಾಗವಾಗಿ ಲುಚಿಯು ಯಿನ್ ಎಂಬ ಅಧಿಕಾರಿ ಗುವೋಚಿಂಗ್ ಮೊನಾಸ್ಟರಿಗೆ ಬಂದ. ಬಂದು, ಗೊಳ್ಳನೆ ನಗುವಿನ ಗೆಳೆಯರ ಬಗ್ಗೆ ವಿಚಾರಿಸಿದ. ಆಗ ಗುರು ಫಂಗ್‌ಗಾನ್ ಬೆಟ್ಟದತ್ತ ಬೆಟ್ಟು ಮಾಡಿ, ಸಾಧ್ಯವಾದರೆ ಹುಡುಕು ಅಂದು ಕಳಿಸಿಕೊಟ್ಟ.
ಲುಚಿಯು ಯಿನ್ ಬೆಟ್ಟದ ತುದಿ ತಲುಪಿದಾಗ ಗೆಳೆಯರಿಬ್ಬರು ಹರಟುತ್ತ ಕುಳಿತಿದ್ದರು. ಜೋಲು ಬಟ್ಟೆಯ, ಕೆದರುಗೂದಲಿನ, ವಿಚಿತ್ರವಾಗಿ ತೋರುವ ದುಂಡುಕಣ್ಗಳ ನಡುವಯಸ್ಕರು. ಅವರ ಸುತ್ತ ಪ್ರಶಾಂತವಾದ ಪ್ರಭೆ ಕಂಡೂ ಕಾಣದಂತೆ ಮೂಡಿತ್ತು. ಅವರನ್ನು ಕಂಡವನೇ ಲುಚಿಯು ಯಿನ್ ಗೌರವದಿಂದ ನಮಸ್ಕರಿಸಿ, ತನ್ನ ಗುರುತು ಹೇಳಿಕೊಂಡ. ಅದನ್ನು ಕಂಡು ಗೆಳೆಯರಿಬ್ಬರೂ ಥಟ್ಟನೆ ಮಾತು ನಿಲ್ಲಿಸಿ, ಒಟ್ಟಿಗೆ ಎದ್ದು ನಿಂತರು.
ಕ್ಷಣಕಾಲ ಮೌನ. ಆಮೇಲೆ ಇದ್ದಕ್ಕಿದ್ದಂತೆ ಹೊಟ್ಟೆ ಹಿಡಿದುಕೊಂಡು ನಗುತ್ತಾ ಚಪ್ಪಾಳೆ ತಟ್ಟುತ್ತಾ “ಅಯ್ಯೋ ಆ ಮುದುಕ ಫಂಗ್‌ಗಾನ್ ನಾಲಗೆ ಬಹಳ ಉದ್ದವಾಯ್ತು ನೋಡು! ಮೈತ್ರೇಯನನ್ನು ಗುರುತಿಸಲು ಸಾಧ್ಯವಾಗದವನನ್ನು ನಮ್ಮ ಭೇಟಿಗೆ ಕಳಿಸಿದ್ದಾನೆ. ನಿನ್ನ ನಮಸ್ಕಾರ ನಮಗೆ ಬೇಡ” ಅನ್ನುತ್ತಾ ಅವನಿಗೆ ಬೆನ್ನು ಹಾಕಿ ಓಡತೊಡಗಿದರು.
ಲುಚಿಯು ಅವರನ್ನು ಹಿಂಬಾಲಿಸಿದ. ಆದರೇನು? ಅವನ ಕಣ್ಣೆದುರೇ ಹಾನ್‌ಶಾನ್ ಗುಹೆಯೊಂದನ್ನು ಹೊಕ್ಕು ಬಂಡೆ ಅಡ್ಡ ಇಟ್ಟುಕೊಂಡ. ಅವನ ಜೊತೆಗೇ ಇದ್ದ ಶೀದೇ ಕಣ್ಮರೆಯಾದ. ಆಮೇಲೆ ಅವರಿಬ್ಬರನ್ನು ಕಂಡವರಿಲ್ಲ.
ನಿರಾಶನಾದ ಲುಚಿಯು, ಮಂಜಿನ ಬೆಟ್ಟದುದ್ದಕ್ಕೂ ಕಣ್ಣು ಹಾಯಿಸುತ್ತ ಮರಳಿ ಹೆಜ್ಜೆ ಹಾಕಿದ. ದಾರಿಯುದ್ದಕ್ಕೂ ಅವನಿಗೆ ಅಲ್ಲಲ್ಲಿ ಬಂಡೆಗಳ ಮೇಲೆ, ಬಿದಿರಿನ ಎಲೆಗಳ ಮೇಲೆ, ಕಾಂಡಗಳ ಮೇಲೆಲ್ಲ ಪದ್ಯಗಳು ಕಂಡವು. ಅವನ್ನೆಲ್ಲ ಪ್ರತಿ ಮಾಡಿಕೊಂಡ. ಮುಂದೊಮ್ಮೆ ಅವನ್ನೆಲ್ಲ ಒಗ್ಗೂಡಿಸಿ ಪ್ರಕಟಿಸಿದ. ಅವನಿಂದಾಗಿ ವಿಕ್ಷಿಪ್ತ ಜೋಡಿಯ ಹೆಸರು ಲೋಕದ ಕಿವಿಗೆ ಬೀಳುವಂತಾಯ್ತು. ಜೆನ್ ಸಾಧಕರ ಜಗತ್ತಿನಲ್ಲಿ ಮೈತ್ರಿಯ ಸಂಕೇತವಾಗಿ ಹಾನ್‌ಶಾನ್ ಮತ್ತು ಶೀದೇ ಹೆಸರು ಶಾಶ್ವತವಾಗಿ ದಾಖಲಾಯ್ತು.
ನಮ್ಮ ದೇಶವನ್ನು ಇವತ್ತಿಗೂ ಪಾತಾಳದಲ್ಲಿ ಇರಿಸಿರುವ ಜಾತಿಪ್ರಜ್ಞೆಯಷ್ಟೇ ವರ್ಗಪ್ರಜ್ಞೆ ಬಲವಾಗಿತ್ತು ಅಂದಿನ ಚೀನಾದಲ್ಲಿ. ಒಬ್ಬ ಕವಿ, ಜೆನ್ ಸಾಧಕ – ಗುರುವಿಗೂ ಒಬ್ಬ ಅನಾಥ – ಕಸ ಗುಡಿಸುವ ಕೆಲಸಗಾರನಿಗೂ ಗೆಳೆತನವೆಂದರೆ ಅಂದಿನ ಚೀನಾದಲ್ಲಿ ಬಹಳ ದೊಡ್ಡ ಕ್ರಾಂತಿಯೇ ಸರಿ. ಇವರಿಬ್ಬರ ಮೈತ್ರಿ ಅವರವರ ವೈಯಕ್ತಿಕ ಸಾಧನೆಯ ಜೊತೆಗೇ ಸಮಾಜಕ್ಕೂ ಒಂದು ಪಾಠವಾಗಿತ್ತು ಅಂದರೆ ತಪ್ಪಾಗಲಾರದು.
.

