ಶ್ರೀ ನಾರಾಯಣ ಗುರು ಜೀವನಚರಿತ್ರೆ : ಅಂತಿಮ ಅಧ್ಯಾಯ 

ಕುಮಾರನ್ ಆಶಾನ್ ಅವರು ರಚಿಸಿದ ಗುರುಗಳ ಜೀವನ ಚರಿತ್ರೆಯನ್ನು ಅನುವಾದಿಸುವ ಪ್ರಯತ್ನ ಇಲ್ಲಿದೆ. ಹದಿನೈದು ಪುಟ್ಟ ಅಧ್ಯಾಯಗಳ ಈ ಕೃತಿ ನಾರಾಯಣ ಗುರುಗಳ ಬದುಕಿನ ಸಂಕ್ಷಿಪ್ತ ಪರಿಚಯ ಮಾಡಿಕೊಡುತ್ತದೆ. ಈ ಸರಣಿಯ ಕೊನೆಯ ಅಧ್ಯಾಯ ಇಲ್ಲಿದೆ…। ಎನ್.ಎ.ಎಂ.ಇಸ್ಮಾಯಿಲ್

ಕುಮಾರನ್ ಆಶಾನ್ ರಚಿಸಿದ ನಾರಾಯಣ ಗುರುಗಳ ಜೀವನಚರಿತ್ರೆಯ ಕೊನೆಯ ಅಧ್ಯಾಯವಿದು. ಇದನ್ನು ಒಂದು ಸಂಪೂರ್ಣ ಜೀವನ ಚರಿತ್ರೆ ಎಂದು ಭಾವಿಸದೆ, ಬಹುದೊಡ್ಡ ಬದುಕೊಂದರ ದಾಖಲೆಯ ಅಸ್ತಿಪಂಜರವೆಂಬಂತೆ ಕಾಣಬೇಕೆಂದು ಆಶಾನ್ ವಿನಂತಿಸಿದ್ದರು. ಗುರುಗಳ ನೇತೃತ್ವದ ಸಂಘಟನಾತ್ಮಕ ಚಟುವಟಿಕೆಗಳಲ್ಲಿ ಸಕ್ರಿಯ ಪಾಲುದಾರನಾಗಿದ್ದ ಆಶಾನ್ ಅವರಿಗೆ ಗುರುಗಳ ಬದುಕಿನ ಪ್ರಮುಖ ಘಟನೆಗಳ ದಿನಾಂಕ ಸಮೇತ ದಾಖಲಿಸುವುದು ಬಹಳ ಮುಖ್ಯವಾಗಿದ್ದಂತೆ ಕಾಣಿಸುತ್ತದೆ. ಈ ಜೀವನಚರಿತ್ರೆಯ ವಿವರಗಳು 1914ಕ್ಕೆ ಕೊನೆಗೊಳ್ಳುತ್ತವೆ. ಕಳೆದ ಹದಿನೈದು ದಿನಗಳ ಕಾಲ ನಿರಂತರವಾಗಿ ಇದನ್ನು ಓದಿದ ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತವಿದೆ.

ಹಿಂದಿನ ಅಧ್ಯಾಯ ಇಲ್ಲಿ ಓದಿ: https://aralimara.com/2024/08/04/guru-46/


ಅಧ್ಯಾಯ ಹದಿನೈದು

ಶಿವಗಿರಿಯ ಪ್ರತಿಷ್ಠಾಪನೆಗಳು ಮುಗಿದ ನಂತರ ಕೆಲವು ದಿನಗಳ ಕಾಲ ಸ್ವಾಮಿಗಳು ಅಲ್ಲಿಯೇ ಇದ್ದರು. ಆಮೇಲೆ ತಮ್ಮ ಸನ್ಯಾಸಿ ಶಿಷ್ಯರಲ್ಲಿ ಕೆಲವರಿಗೆ ಮಠದ ನಿರ್ವಹಣೆಯ ಜವಾಬ್ದಾರಿ ನೀಡಿದರು. ಹಾಗೆಯೇ ಇನ್ನು ಕೆಲವರಿಗೆ ನಾಡಿನಾದ್ಯಂತ ಸಂಚರಿಸಿ ಉಪನ್ಯಾಸ ಹಾಗೂ ಮತ್ತಿತರ ವಿಧಾನಗಳ ಮೂಲಕ ಜನರಿಗೆ ಧಾರ್ಮಿಕ ವಿಷಯಗಳಲ್ಲಿ ಮಾರ್ಗದರ್ಶನ ಮಾಡಿ ಅವರ ಏಳಿಗೆಗೆ ಶ್ರಮಿಸಬೇಕೆಂದು ಆಜ್ಞಾಪಿಸಿ ಮತ್ತೆ ಉತ್ತರದತ್ತ ಪ್ರಯಾಣ ಆರಂಭಿಸಿದರು. ಚೇರ್ತಲದಲ್ಲಿ ಉಳಿದುಕೊಂಡಾಗ ಅಲ್ಲಿನ ಸ್ವಜನರು ಸ್ವಾಮಿಗಳನ್ನು ಗೌರವದಿಂದ ಸ್ವಾಗತಿಸಿ ಸತ್ಕರಿಸಿದರಷ್ಟೇ ಅಲ್ಲದೆ, ಆಲುವಾದಲ್ಲಿ ನಿರ್ಮಿಸಲು ಉದ್ದೇಶಿಸಿದ ಮಠಕ್ಕೆ  ಕಾಣಿಕೆಯಾಗಿ ದೊಡ್ಡದೊಂದು ಮೊತ್ತವನ್ನು ನೀಡಿದರು. ಅಲ್ಲಿಂದ ಸ್ವಾಮಿಗಳು ಆಲುವಾಕ್ಕೆ ಬಂದು ತಂಗಿದರು. ಈ ವೇಳೆ ತಲಶ್ಶೇರಿಯ ಜಗನ್ನಾಥ ದೇಗುಲದ ಪದಾಧಿಕಾರಿಗಳು ಬಂದು ಸ್ವಾಮಿಗಳನ್ನು ವೃಷಭಮಾಸದಲ್ಲಿ ನಡೆಯುವ ಎಳನೀರಭಿಷೇಕದ ಸಾನಿಧ್ಯ ವಹಿಸಬೇಕೆಂದು ಕೋರಿದರು. ಅದಕ್ಕೊಪ್ಪಿದ ಗುರುಗಳು ತಲಶ್ಶೇರಿಗೆ ಪ್ರಯಾಣ ಬೆಳಿಸಿದರು.

ಈ ಪ್ರಯಾಣದ ವೇಳೆ ಸ್ವಾಮಿಗಳು ಆಲುವಾದಲ್ಲಿ ಸಂಸ್ಥೆಯೊಂದರ ಆರಂಭಕ್ಕೆ ಪ್ರಯತ್ನಿಸುತ್ತಿದ್ದರು. ಜಗನ್ನಾಥ ದೇಗುಲದಲ್ಲಿ ಅಂದು ನಡೆದ ಎಳನೀರಭಿಷೇಕದ ವೇಳೆ ಸಂಗ್ರಹವಾದ ಕಾಣಿಕೆಯಲ್ಲಿ ಒಂದು ಭಾಗವನ್ನು ಆಲುವಾದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಸಂಸ್ಥೆಗಾಗಿ ನೀಡಲು ದೇಗುಲದ ಪದಾಧಿಕಾರಿಗಳು ತೀರ್ಮಾನಿಸಿ ಅದರಂತೆಯೇ ನಡೆದುಕೊಂಡರು. ಆಲುವಾಕ್ಕೆ ಹಿಂದಿರುಗಿದ ತಕ್ಷಣ ಮೊದಲೇ ನಿರ್ಧರಿಸಿಟ್ಟಿದ್ದ ಜಮೀನನ್ನು ಖರೀದಿಸಿ ಕಾನೂನಿನ ಔಪಚಾರಿಕತೆಗಳನ್ನು ಪೂರ್ಣಗೊಳಿಸಿ ವಶಕ್ಕೆ ಪಡೆದರು. ನದಿ ಬದಿಯ ಈ ಜಮೀನಿನಲ್ಲೀಗ ಸ್ವಾಮಿಗಳು ಸ್ಥಾಪಿಸಿದ ಆಶ್ರಮವಿದೆ.

ಕಟಕ ಮಾಸದಲ್ಲಿ ಮತ್ತೆ ಶಿವಗಿರಿಗೆ, ಅಲ್ಲಿಂದ ಅರುವಿಪ್ಪುರಕ್ಕೆ ತೆರಳಿ, ಅಲ್ಲಿ ತಂಗಿದ್ದು, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚರಿಸಿ ಮಲಯಾಳ ವರ್ಷ 1088ರ ಕನ್ಯಾ ಮಾಸದ ಹೊತ್ತಿಗೆ ಆಲುವಾಕ್ಕೆ ಮರಳಿದರು. ಕುಂಭ ಮಾಸದ ಶಿವರಾತ್ರಿಯ ವೇಳೆ ಆಲುವಾದಲ್ಲಿ ದೊಡ್ಡದೊಂದು ಸಭೆಯನ್ನು ಕರೆದ ಸ್ವಾಮಿಗಳು ಆಲುವಾದಲ್ಲಿ ಸಂಸ್ಕೃತ ವಿದ್ಯಾಮಂದಿರವನ್ನು ಆರಂಭಿಸುವ ಬಗ್ಗೆ ಪ್ರಸ್ತಾಪವಿಟ್ಟು ಚರ್ಚಿಸಿದರು. ಈ ವಿದ್ಯಾಮಂದಿರ ಸ್ಥಾಪನೆಗೆ ಜನರನ್ನು ಪ್ರೇರೇಪಿಸುವುದರ ಜೊತೆಗೆ ಇತರ ಕೆಲಸಗಳಿಗಾಗಿ ಸ್ವಾಮಿಗಳು ಮತ್ತೆ ಮಲಬಾರ್‌ ಪ್ರದೇಶದಲ್ಲಿ ಪ್ರವಾಸ ಕೈಗೊಂಡರು. ಈ ಸಂದರ್ಭದಲ್ಲಿ ಹಲವು ಧನಿಕರು ದೊಡ್ಡ ಮೊತ್ತವನ್ನು ಸಂಸ್ಕೃತ ವಿದ್ಯಾಮಂದಿರ ಸ್ಥಾಪನೆಗಾಗಿ ನೀಡುತ್ತೇವೆಂಬ ಮಾತು ಕೊಟ್ಟರು.

ಮೀನ ಮಾಸದಲ್ಲಿ ಸ್ವಾಮಿಗಳು ಶಿವಗಿರಿ, ಅರುವಿಪ್ಪುರಂ ಹಾಗೂ ಕೊಲ್ಲಂನಲ್ಲಿ ಕೆಲವು ದಿನ ವಿಶ್ರಮಿಸಿ ಮೇಷ ಮಾಸದಲ್ಲಿ ಆಲುವಾಗೆ ಹಿಂದಿರುಗಿ ಅಲ್ಲಿಂದ ನೀಲಗಿರಿಗೆ ಹೋಗಿ ಕೆಲ ದಿನಗಳ ವಿಶ್ರಾಂತಿ ಪಡೆದರು. ಹಿಂದಿರುಗುವಾಗ ಪಾಲಕ್ಕಾಡ್‌ನಲ್ಲಿ ಕೆಲದಿನಗಳ ಕಾಲ ತಂಗಿದ್ದು ಮತ್ತೆ ಆಲುವಾ ಆಶ್ರಮಕ್ಕೆ ಬಂದರು.

ಮಲಯಾಳ ವರ್ಷ 1089 ಸಿಂಹ ಮಾಸದಿಂದ ತೊಡಗಿ ವೃಶ್ಚಿಕದ ತನಕವೂ (1913ರ ಆಗಸ್ಟ್ ತಿಂಗಳಿನಿಂದ ಡಿಸೆಂಬರ್ ಅವಧಿ) ಸ್ವಾಮಿಗಳು ಬಹುತೇಕ ಆಲುವಾದಲ್ಲಿಯೇ ತಂಗಿ ಅಲ್ಲಿಂದ ಉತ್ತರಕ್ಕೆ ಪ್ರಯಾಣ ಬೆಳೆಸುತ್ತಿದ್ದರು. ಕೊನೆಗೆ ಆಹ್ವಾನವೊಂದರ ಮೇರೆಗೆ ಕೊಲ್ಲಂ ಮತ್ತು ಕಾರ್ತಿಕಪಳ್ಳಿಗಳನ್ನು ಸಂದರ್ಶಿಸಿದರು. ಕಾರ್ತಿಕಪಳ್ಳಿಯ ಆಲುಂಮೂಟ್ಟಿಲ್ ಮನೆತನದವರು ಮದ್ರಾಸ್‌ನಲ್ಲಿರುವ ಸುಮಾರು 13,000 ರೂಪಾಯಿಗಳಷ್ಟು ಬೆಲೆಬಾಳುವ ಒಂದು ಮನೆ ಮತ್ತು ಜಮೀನನ್ನು ದಾನ ಪತ್ರದ ಮೂಲಕ ಸ್ವಾಮಿಗಳಿಗೆ ಒಪ್ಪಿಸಿದರು. ಈ ಮಧ್ಯೆ ಆಲುವಾ ನದಿ ದಂಡೆಯ ಜಮೀನಿನಲ್ಲಿ ಸಣ್ಣದೊಂದು ಆಶ್ರಮ ನಿರ್ಮಾಣದ ಕೆಲಸ ಪೂರ್ಣಗೊಂಡಿತ್ತು. ಸ್ವಾಮಿಗಳು ಕಾಲರಾ ಬಾಧೆಯಿದ್ದಾಗ ತಂಗಿದ್ದ, ರೈಲು ನಿಲ್ದಾಣಕ್ಕೆ ಸಮೀಪವೇ ಇದ್ದ ಕಟ್ಟಡವನ್ನು ಪರವೂರ್ ವಡಕ್ಕೇಕ್ಕರ ಮೂತ್ತುಕುನ್ನತ್ತ್ ಶ್ರೀನಾರಾಯಣಮಂಗಲ ದೇಗುಲ ಸಮಿತಿಯವರು ಖರೀದಿಸಿ ಸ್ವಾಮಿಗಳಿಗೆ ಸಮರ್ಪಿಸಿದ್ದರು. ಈ ಕಟ್ಟಡವನ್ನು ನವೀಕರಿಸಿ ವಿದ್ಯಾರ್ಥಿಗಳಿಗೂ ಅಧ್ಯಾಪಕರಿಗೂ ತಂಗುವ ವ್ಯವಸ್ಥೆ ಮಾಡಿ ಸಂಸ್ಕೃತ ಕಲಿಸಲು ಶಿಕ್ಷಕರೊಬ್ಬರನ್ನು ನೇಮಿಸಿದರು.

ಮಕರ ಮಾಸದಲ್ಲಿ ಶಿವಗಿರಿಯಲ್ಲಿ ಪೂಯಂ ಮಹೋತ್ಸವವನ್ನು ಆಯೋಜಿಸಿದರು. ಉತ್ಸವ ಬಹಳ ವಿಜೃಂಭಣೆಯಿಂದ ಯಶಸ್ವಿಯಾಗಿ ನಡೆಯಿತು. ಇದೇ ವರ್ಷ ಮೇಷ ಮಾಸದ ಹೊತ್ತಿಗೆ ಆಗ ತಿರುವಿದಾಂಕೂರು ಚೀಫ್ ಜಸ್ಟೀಸ್ ಆಗಿದ್ದ, ಈಗಿನ ದಿವಾನ್ ಮ.ರಾ.ರಾ. ಮನ್ದತ್ತು ಕೃಷ್ಣನ್ ನಾಯರ್ ಅವರು ಆಲುವಾಕ್ಕೆ ಆಗಮಿಸಿ ಸ್ವಾಮಿಗಳನ್ನು ಭೇಟಿಯಾದರು.

ಮೇಷ ಮಾಸದಲ್ಲಿ ನಡೆದ ಎಸ್ಎನ್‌ಡಿಪಿಯ 11ನೇ ವಾರ್ಷಿಕೋತ್ಸವದಲ್ಲಿ ಭಾಗವಹಿಸಿದ್ದ ಮಾಜಿ ದಿವಾನರಾದ ರಾಜಗೋಪಾಲಾಚಾರಿಯವರು ಸ್ವಾಮಿಗಳನ್ನು ಭೇಟಿಯಾಗುವ ನಿರೀಕ್ಷೆಯಲ್ಲಿದ್ದರು. ಆದರೆ ಆಗ ಸ್ವಾಮಿಗಳು ಕುಟ್ಟಾಲದಲ್ಲಿ ವಿಶ್ರಾಂತಿಯಲ್ಲಿದ್ದುದರಿಂದ ಅದು ಸಾಧ್ಯವಾಗಲಿಲ್ಲ. ಇದೇ ತಿಂಗಳ ಕೊನೆಯ ಹೊತ್ತಿಗೆ ಸ್ವಾಮಿಗಳು ಆಲುವಾಕ್ಕೆ ಹಿಂದಿರುಗುವಾಗ ಕೇರಳೀಯ ನಾಯರ್ ಸಮಾಜದ ಕಾರ್ಯಕರ್ತರು ಭೇಟಿಯಾದರು. ಕೊಟ್ಟಾಯಂನಲ್ಲಿ ನಡೆಯುತ್ತಿದ್ದ ತಮ್ಮ ಸಂಘಟನೆಯ ವಾರ್ಷಿಕೋತ್ಸವಕ್ಕೆ ಅತಿಥಿಯಾಗಿ ಬರಬೇಕೆಂದು ಸ್ವಾಮಿಗಳನ್ನು ಆಹ್ವಾನಿಸಿ ಕರೆದೊಯ್ದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸ್ವಾಮಿಗಳು ಅಲ್ಲಿದ್ದ ಸಕಲರ ಪ್ರೀತಿ ಗೌರವಗಳಿಗೆ ಪಾತ್ರರಾದರು. ಈ ಕಾರ್ಯಕ್ರಮದ ನಂತರ ಆಲುವಾಕ್ಕೆ ಬಂದ ಸ್ವಾಮಿಗಳು ಅಲ್ಲಿ ಕೆಲಕಾಲ ತಂಗಿದರು. ಅಲ್ಲಿಂದ ವೃಷಭ ಮಾಸದಲ್ಲಿ ಮಲಬಾರ್ ಸಂದರ್ಶಿಸಿ ಹಿಂದಿರುಗಿದರು. ಮಿಥುನ ಮಾಸದಲ್ಲಿ ಕೊಲ್ಲಂಗೆ ಬಂದರು. ಅಲ್ಲಿನ ಕೆಲವು ಗೃಹಸ್ಥರು ಮತ್ತು ಬ್ರಹ್ಮಚಾರಿಗಳ ಜೊತೆಗೆ ಕುಟ್ಟಾಲಂ ಮುಂತಾದ ಪುಣ್ಯಕ್ಷೇತ್ರಗಳಿಗೆ ಪ್ರಯಾಣಿಸಿದರು. ಹೀಗೆ ಮದ್ರಾಸ್ ತಲುಪಿದ ಸ್ವಾಮಿಗಳು ಅಲ್ಲಿ ಸ್ವಲ್ಪ ಕಾಲ ತಂಗಿ ಬೆಂಗಳೂರಿಗೆ ಹೋಗಿ ಅಲ್ಲಿಂದ ಆಲುವಾಕ್ಕೆ ಮರಳಿದರು.

ಮಲಯಾಳ ವರ್ಷ 1090ರ ಸಿಂಹ ಮಾಸದಲ್ಲಿ (ಆಗಸ್ಟ್-ಸೆಪ್ಟೆಂಬರ್ 1914) ಸ್ವಾಮಿಗಳು ಚೆಂಙನ್ನೂರು ಮತ್ತು ತಿರುವಲ್ಲ ತಾಲೂಕುಗಳಲ್ಲಿ ಪ್ರವಾಸ ಮಾಡಿದರು. ಈ ಪ್ರದೇಶದ ಈಳವರು ಸ್ವಾಮಿಗಳನ್ನು ಬಹಳ ಗೌರವದಿಂದ ಬರಮಾಡಿಕೊಂಡು ಆಲುವಾದಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದ ಶಾಲೆಗಾಗಿ ಧನಸಹಾಯವನ್ನೂ ಮಾಡಿದರು. ಈ ಪ್ರವಾಸದ ವೇಳೆ ಇತರ ಜಾತಿಗಳಿಗೆ ಸೇರಿದ ಅನೇಕ ಪ್ರಮುಖರು ಸ್ವಾಮಿಗಳನ್ನು ಆದರದಿಂದ ಭೇಟಿಯಾಗಿ ಗೌರವಿಸಿದರು. ಅಷ್ಟೇ ಅಲ್ಲ ಸ್ವಾಮಿಗಳು ಅನೇಕ ಸಾರ್ವಜನಿಕ ಸಮಾರಂಭಗಳಲ್ಲಿ ಭಾಗವಹಿಸಿ ತಮ್ಮ ವಿಚಾರಗಳನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ಅನೇಕರ ಜೊತೆಗೆ ನಡೆಸಿದ ಖಾಸಗಿ ಮಾತುಕತೆಗಳಲ್ಲಿ ಅತೀವ ಶೋಷಣೆಗೆ ಒಳಗಾದ ಸಮುದಾಯಗಳ ಬಗ್ಗೆ ಕಾಳಜಿ ಇರಬೇಕಾದ ಅಗತ್ಯವನ್ನು ಸ್ವಾಮಿಗಳು ಒತ್ತಿ ಹೇಳಿದರು. ಅಷ್ಟೇ ಅಲ್ಲ, ಬಹಿರಂಗವಾಗಿ ಈ ಸಮುದಾಯಗಳಿಗೆ ಸೇರಿದವರನ್ನು ಯಾವ ಭೇದಭಾವವೂ ಇಲ್ಲದೆ ವಿಶೇಷ ಪ್ರೀತಿಯಿಂದ ನಡೆಸಿಕೊಂಡು ಮಾದರಿಯಾದರು. ಸ್ವಾಮಿಗಳ ಸ್ಪಷ್ಟವಾದ ಈ ಬಹಿರಂಗ ನಿಲುವು ಆ ಪ್ರದೇಶದಲ್ಲಿ ಸಾಮಾಜಿಕ ಪರಿಸರದ ಮಟ್ಟಿಗೆ ಬಹಳ ಅಗತ್ಯವಾಗಿತ್ತು.

ಧನುರ್ಮಾಸದಲ್ಲಿ ಶಿವಗಿರಿಗೆ ಬಂದ ಸ್ವಾಮಿಗಳು ಅಲ್ಲಿ ಕೆಲಕಾಲ ಇದ್ದು ಅರುವಿಪ್ಪುರಂಗೆ ಹೋಗಿ ಸುತ್ತಮುತ್ತಲಿನ ಪ್ರದೇಶದಲ್ಲಿ ಸಂಚಾರ ನಡೆಸಿದರು. ಈ ಸಂದರ್ಭದಲ್ಲಿ ನೈಯ್ಯಾಟಿಂಕರದ ಪುಲಯ ಸಮುದಾಯದವರು ಇತರ ಜಾತಿಗಳವರಿಂದ ಎದುರಿಸುತ್ತಿರುವ ತೊಂದರೆಗಳ ಬಗ್ಗೆ ಅರಿತಾಗ ಸ್ವಾಮಿಗಳು ಸಹಾನುಭೂತಿ ವ್ಯಕ್ತಪಡಿಸಿ ಅವರ ಜೊತೆ ನಿಂತರು. ಈಳವರೇಕೆ ಸದಾ ಶೋಷಿತರ ಪರವಾಗಿರಬೇಕು ಎಂಬುದನ್ನು ಖಾಸಗಿಯಾಗಿ ಅವರಿಗೆ ವಿವರಿಸಿದರು.

ಪುಲಯ ಸಮುದಾಯದ ನಾಯಕರು ಹಾಗೂ ಅನೇಕ ಸದಸ್ಯರು ಸ್ವಾಮಿಗಳನ್ನು ಭೇಟಿಯಾಗಿ ಸಲಹೆ ಮತ್ತು ಆಶೀರ್ವಾದಗಳನ್ನು ಪಡೆಯುತ್ತಿದ್ದರು. ಈದಿನಗಳಲ್ಲಿ ಸ್ವಾಮಿಗಳನ್ನು ಮತ್ತೊಂದು ವಿಚಾರ ಆಕರ್ಷಿಸಿತು. ಈಳವ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿರುವ ಪ್ರದೇಶಗಳಲ್ಲಿ ಸ್ಥಳೀಯ ಸಮಿತಿಗಳನ್ನು ಸ್ಥಾಪಿಸಿ ಆ ಮೂಲಕ ಎಸ್‌ಎನ್‌ಡಿಪಿ ಯೋಗಂನ ನೇತೃತ್ವದಲ್ಲಿ ಅನುಷ್ಠಾನಕ್ಕೆ ತರಲಾಗುತ್ತಿದ್ದ ಸಾಮಾಜಿಕ ಮತ್ತು ಧಾರ್ಮಿಕ ಆಚರಣೆಗಳ ಸುಧಾರಣೆಯನ್ನು ಹೆಚ್ಚು ಪ್ರಚಾರಕ್ಕೆ ತರುವುದೇ ಈ ಸಂಗತಿ . ಈ ಹಿಂದೆ ಸ್ಥಾಪಿತವಾದ ಎಸ್ಎನ್‌ಡಿಪಿ ಯೋಗಂನಂತೆಯೇ ಈ ಸ್ಥಳೀಯ ಸಮಿತಿಗಳನ್ನೂ ಕೇರಳದ ದಕ್ಷಿಣ ತುದಿಯಲ್ಲೇ ಆರಂಭಿಸಿದರು. ಮೊದಲ ಸ್ಥಳೀಯ ಸಮಿತಿ ಸ್ಥಾಪಿತವಾದದ್ದು ಕೇರಳದ ದಕ್ಷಿಣ ತುತ್ತತುದಿಯಾಗಿರುವ ನೈಯಾಟಿಂಕರ ತಾಲೂಕಿನಲ್ಲಿ. ಈ ಬಗೆಯ ಸಮಿತಿಗಳನ್ನು ವಿವಿಧ ತಾಲೂಕುಗಳು ಮತ್ತು ಪ್ರಾಂತ್ಯಗಳಿಗೆ ವಿಸ್ತರಿಸುವುದಕ್ಕಾಗಿಯೇ ಅರುವಿಪ್ಪುರಂನಲ್ಲಿಯೇ ಕೆಲಕಾಲ ನಿಂತು ಸ್ಥಳೀಯರಿಗೆ ಸಮಿತಿಗಳ ಸ್ಥಾಪನೆ ಹಾಗೂ ವಿಸ್ತರಣೆಗೆ ಪ್ರೇರೇಪಿಸಿದರು.

ಈ ನಡುವೆ ತಿರುವಿದಾಂಕೂರಿನ ಆಗ್ನೇಯ ಗಡಿಯಲ್ಲಿದ್ದ ತಮಿಳು ಪ್ರದೇಶದ ತಾಲೂಕುಗಳಾಗಿರುವ ತೋವಾಳ ಮತ್ತು ಅಗಸ್ತೀಶ್ವರಂಗಳಲ್ಲಿದ್ದ ಈಳವ ಸಮುದಾಯದವರು ಸ್ವಾಮಿಗಳನ್ನು ಆಹ್ವಾನಿಸಿ ಕರೆದೊಯ್ದರು. ತೋವಾಳದ ಕಡುಕ್ಕರ ಎಂಬಲ್ಲಿಯೂ ಅಗಸ್ತೀಶ್ವರದ ಕೋಟ್ಟಾರ್ ಎಂಬಲ್ಲಿಯೂ ಸ್ವಾಮಿಗಳು ಒಂದೆರಡು ದಿನಗಳ ತಂಗಿದರು. ಈ ಸಂದರ್ಭದಲ್ಲಿ ಜನರು ಆಡು, ಕೋಳಿ ಮೊದಲಾದ ಪ್ರಾಣಿಗಳನ್ನು ಬಲಿ ನೀಡುತ್ತಿದ್ದ ಕ್ಷುದ್ರದೇವತೆಗಳ ನೆಲೆಗಳನ್ನು ಸ್ಥಳೀಯರ ಅನುಮತಿ ಪಡೆದು ಒಡೆದು ಹಾಕಿದರು. ಕೆಲವು ದೇವೀಕ್ಷೇತ್ರಗಳಲ್ಲಿ ನಡೆಯುತ್ತಿದ್ದ ಪ್ರಾಣಿಬಲಿಯನ್ನು ನಿಲ್ಲಿಸಲು ಸೂಚಿಸಿ ಅಲ್ಲಿ ಸಾತ್ವಿಕ ಆರಾಧನಾ ಕ್ರಮಗಳನ್ನು ರೂಢಿಸಿಕೊಳ್ಳುವಂತೆ ಮಾಡಿದರು.

ಈ ನಗರದಲ್ಲಿ ವಾಗಯಡಿತ್ತೆರುವು ಆರ್ಮುಗಪೆರುಮಾಳ್ ಪಿಳ್ಳಯಾರ್ ದೇವಸ್ವಂಗೆ ಸಂಬಂಧಿಸಿದ ವಿಚಾರದಲ್ಲಿ ಜಾತಿಗಳ ನಡುವೆ ವಿವಾದವಿತ್ತು. ಇದನ್ನು ಮಾತುಕತೆಯ ಮೂಲಕ ಬಗೆಹರಿಸಿದ ಸ್ವಾಮಿಗಳು ಮುಂದೆ ಸಮಸ್ಯೆಗಳುಂಟಾಗದಂತೆ ವ್ಯವಸ್ಥೆ ಮಾಡಿದರು. ಅಲ್ಲಿಂದ ಶಿವಗಿರಿಯ ಪೂಯಂ ಮಹೋತ್ಸವದಲ್ಲಿ ಉಪಸ್ಥಿತರಿಬೇಕೆಂಬ ಉತ್ಸವ ಸಮಿತಿಯ ಪದಾಧಿಕಾರಿಗಳ ಭಕ್ತಿಪೂರ್ವಕ ಆಹ್ವಾನವನ್ನು ಮನ್ನಿಸಿ ಶಿವಗಿರಿ ತಲುಪಿದರು.

ಶಿವಗಿರಿಯ ಮಹಾದೇವ ಮತ್ತು ಶಾರದೆಯ ಪ್ರತಿಷ್ಠಾಪನೆಗಳು ಯಾವುದೇ ಸಿದ್ಧತೆಯಿಲ್ಲದೆ ತಕ್ಷಣದ ನಿರ್ಧಾರದಂತೆ ನಡೆದಿದ್ದವು. ಇದರಿಂದಾಗಿ ಇಲ್ಲಿ ದೇಗುಲ ನಿರ್ಮಾಣದ ಕೆಲಸಗಳಾಗಿರಲಿಲ್ಲ ಎಂಬುದು ಸಾರ್ವಜನಿಕವಾಗಿ ಗೊತ್ತಿರುವ ಸಂಗತಿ. ಪ್ರತಿಷ್ಠಾಪನೆಯ ದಿನದಿಂದಲೂ ದೇಗುಲದ ಸ್ಥಳದಲ್ಲಿ ಒಂದು ಸಣ್ಣ ತೆಂಗಿನಗರಿಗಳ ಸೂರಿನ ಚಪ್ಪರ ಮಾತ್ರ ಇದ್ದು, ದೇಗುಲ ನಿರ್ಮಾಣದ ಕೆಲಸವನ್ನು ಜನರು ಬೇಗ ಆರಂಭಿಸಿ ಪೂರ್ಣಗೊಳಿಸುತ್ತಾರೆಂಬುದು ಸ್ವಾಮಿಗಳ ನಿರೀಕ್ಷೆಯಾಗಿತ್ತು.

ಸ್ವಾಮಿಗಳು ಶಿವಗಿರಿಯಿಂದ ದೂರವಾಗಿ ಆಲುವಾದಲ್ಲಿಯೇ ಹೆಚ್ಚು ಕಾಲ ಇರತೊಡಗಿದ್ದರಿಂದ ಶಿವಗಿರಿಯ ಸಂಗತಿಗಳ ಕುರಿತ ಜನರ ಉತ್ಸಾಹ ಕಡಿಮೆಯಾಗಿ ಅವರೂ ಆಲುವಾದತ್ತಲೇ ಹೆಚ್ಚು ಆಕರ್ಷಿತರಾದರು. ಇದರಿಂದಾಗಿಯೇ ದೇಗುಲ ನಿರ್ಮಾಣದ ಕೆಲಸ ತಡವಾಯಿತು. ಆದರೂ ಸಮುದಾಯದ ಹಲವು ಪ್ರಮುಖರು ಮತ್ತು ಯೋಗಂನ ಪದಾಧಿಕಾರಿಗಳು ಈ ಕುರಿತಂತೆ ಸದಾ ಚಿಂತಿಸುತ್ತಿದ್ದರು ಮತ್ತು ಕೆಲಸವನ್ನು ಆರಂಭಿಸಲು ಸರಿಯಾದ ಸಂದರ್ಭಕ್ಕಾಗಿ ಎದುರು ನೋಡುತ್ತಿದ್ದರು.

ಪೂಯಂ ಉತ್ಸವಕ್ಕಾಗಿ ಶಿವಗಿರಿಗೆ ಬಂದು ತಂಗಿದ್ದ ಸ್ವಾಮಿಗಳು ನಿರ್ಮಾಣವಾಗಬೇಕಿದ್ದ ದೇಗುಲದ ಸ್ವರೂಪ ಮತ್ತು ವಿನ್ಯಾಸದ ಬಗ್ಗೆ ಗಾಢವಾಗಿ ಆಲೋಚಿಸುತ್ತಿದ್ದರು. ಅಷ್ಟೇ ಅಲ್ಲ ಈ ಕುರಿತಂತೆ ತಮ್ಮ ಚಿಂತನೆಗಳನ್ನು ಹಂಚಿಕೊಂಡದ್ದೂ ಇದೆ. ಸ್ವಾಮಿಗಳ ಮಾತು ಮತ್ತು ಕೃತಿಯ ಮೂಲಕ ಊಹಿಸಬಹುದಾದ ಮತ್ತೊಂದು ಪಾವನ ಯೋಜನೆ ಅವರ ಹೃದಯಾಂತರಾಳದಲ್ಲಿದೆ. ತಮ್ಮ ಸನ್ಯಾಸಿ ಶಿಷ್ಯರು ಮತ್ತು ಬ್ರಹ್ಮಚಾರಿಗಳ ಒಂದು ವಿಶಿಷ್ಟ ಸಂಘವನ್ನು ಕಟ್ಟಿಕೊಂಡು ಅದರ ಮೂಲಕ ಜಾತಿ, ಮತ ಭೇದಗಳಿಲ್ಲದೆ ನಾಡಿಗೂ ಜನರಿಗೂ ಆಧ್ಯಾತ್ಮಿಕ, ನೈತಿಕ ಮತ್ತು ಶೈಕ್ಷಣಿಕವಾದ ಶ್ರೇಯಸ್ಸನ್ನು ತರಲು ಬೇಕಿರುವ ಪ್ರಯತ್ನಗಳನ್ನು ಮಾಡಬೇಕೆಂಬುದೇ ಆ ಯೋಜನೆ.

ಸ್ವಾಮಿಗಳ ಸಂಕ್ಷಿಪ್ತವಾದ ಜೀವನಚರಿತ್ರೆಯನ್ನು ಇಲ್ಲಿಗೆ ಕೊನೆಗೊಳಿಸಬೇಕಾಗಿದೆ. ವಾಚಕರು ಈ ಕೃತಿಯನ್ನು ಅತಿಮನೋಹರವೂ ಅಗಾಧವೂ ಆದ ಸ್ವಾಮಿಗಳ ಬದುಕಿನ ಚರಿತ್ರೆಯ ಅಸ್ತಿಪಂಜರ ಮಾತ್ರವೆಂದು ಅರಿತು ಓದಬೇಕು.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.