ವಚನ ವೈವಿಧ್ಯ#3 : ಅರ್ಧ ಮಂಚ-ಮೋಳಿಗೆ ಮಾರಯ್ಯ

ಆನೆ, ಕುದುರೆ, ಭಂಡಾರ ಅನ್ನುವದರ ಬದಲು ಕಾರು, ಬೈಕು, ಆರಂಕಿಯ ಸಂಬಳ ಎಂದುಕೊಳ್ಳೋಣ. ಆಗ ಈ ವಚನ ನಮ್ಮ ಕಾಲದ ಬಗ್ಗೆ ಕಾಮೆಂಟರಿ ಮಾಡುತ್ತಿರುವಂತೆ ಇದೆ ಅನ್ನಿಸುವುದಿಲ್ಲವೇ? । ಓ.ಎಲ್.ನಾಗಭೂಷಣ ಸ್ವಾಮಿ

ಆನೆ ಕುದುರೆ ಭಂಡಾರವಿರ್ದಡೇನೊ
ತಾನುಂಬುದು ಪಡಿಯಕ್ಕಿ
ಒಂದಾವಿನ ಹಾಲು
ಮಲಗುವುದರ್ಧ ಮಂಚ.
ಈ ಹುರುಳಿಲ್ಲದ ಸಿರಿಯ ನೆಚ್ಚಿ ಕೆಡಬೇಡ ಮನುಜಾ
ಒಡಲು ಭೂಮಿಯ ಸಂಗ
ಒಡವೆ ತಾನೇನಪ್ಪುದೊ
ಕೈವಿಡಿದ ಮಡದಿ ಪರರ ಸಂಗ
ಪ್ರಾಣ ವಾಯುವಿನ ಸಂಗ
ಸಾವಿಂಗೆ ಸಂಗಡವಾರೂ ಇಲ್ಲ
ಕಾಣಾ
ನಿಃಕಳಂಕ ಮಲ್ಲಿಕಾರ್ಜುನಾ (ಸಂ.೮, ವ.೧೫೧೧)

[ಪಡಿ-ಒಂದು ಅಳತೆ, ಅರ್ಧಸೇರು; ಒಂದಾವಿನ-ಒಂದು ಹಸುವಿನ; ತಾನೇನಪ್ಪುದೋ-ತಾನು ಏನಾಗುವುದೋ;  ಹುರುಳಿಲ್ಲದ-ಅರ್ಥವಿರದ; ನಿಃಕಳಂಕ-ಕಳಂಕವಿರದ]

ಆನೆ, ಕುದುರೆ, ಭಂಡಾರ ಇದ್ದರೇನು, ಉಣ್ಣುವುದು ಅಳತೆ ಮಾಡಿದಷ್ಟು ಅಕ್ಕಿ, ಕುಡಿಯುವುದು ಒಂದು ಹಸುವಿನ ಹಾಲು, ಮಲಗುವುದು ಅರ್ಧಮಂಚ; ಇವೆಲ್ಲ ಹುರುಳಿರದ ಸಂಪತ್ತು; ದೇಹವೇ ಮಣ್ಣಾಗುವಾಗ ವಡವೆ ಏನಾಗುತ್ತದೆ, ಮೈ ಮಣ್ಣಾದ ಮೇಲೆ ಹೆಂಡತಿ ಬೇರೆಯವರ ಸಂಗಡ, ಉಸಿರು ಗಾಳಿಯ ಸಂಗಡ ಹೋಗುವಾಗ ಸಾವಿನಲ್ಲಿ ಜೊತೆಗೆ ಯಾರೂ ಇರುವುದಿಲ್ಲ.

ಆನೆ, ಕುದುರೆ, ಭಂಡಾರ ಅನ್ನುವದರ ಬದಲು ಕಾರು, ಬೈಕು, ಆರಂಕಿಯ ಸಂಬಳ ಎಂದುಕೊಳ್ಳೋಣ. ಆಗ ಈ ವಚನ ನಮ್ಮ ಕಾಲದ ಬಗ್ಗೆ ಕಾಮೆಂಟರಿ ಮಾಡುತ್ತಿರುವಂತೆ ಇದೆ ಅನ್ನಿಸುವುದಿಲ್ಲವೇ. ಅಷ್ಟೆಲ್ಲ ಇದ್ದರೂ ತಿನ್ನುವುದು ಮಾತ್ರ ಹೊಟ್ಟೆ ಹಿಡಿಸುವಷ್ಟೇ-ಒಂದಳತೆ ಅನ್ನ.   ನನಗೆ ಸುಖಕೊಡುವ ಜೊತೆ ಜೀವಿಯೊಡನೆ ಅರ್ಧ ಮಂಚ ಹಂಚಿಕೊಳ್ಳಬೇಕು. ಹಂಚಿಕೊಂಡರೂ ಇಬ್ಬರೂ ಕೂಡ ಸ್ವಂತದ ಸುಖವನ್ನೇ ಅಪೇಕ್ಷಿಸುತ್ತಾ ಸುಖ ಸಿಕ್ಕಿದ್ದೂ ಭ್ರಮೆಯೇ ಆಗಬಹುದು. ಸುಖದ ಸಾಧನ ಅಂದುಕೊಂಡಿರುವ ದೇಹವೂ ಭೂಮಿಯ ಪಾಲು, ಜೀವಿಸಿದ್ದೇನೆನ್ನುವುದಕ್ಕೆ ಗುರುತಾಗಿ ಆಡುತ್ತಿರುವ ಉಸಿರು ಕೂಡ ಗಾಳಿಯ ಪಾಲು. ನನ್ನವಳೆಂದು ಭಾವಿಸಿದ್ದ ಹೆಂಡತಿಯೋ ಗಂಡನೋ ನನ್ನ ನಂತರ ಬೇರೆಯವರ ಪಾಲಾಗಬಹುದು. ಹಾಗಿದ್ದರೆ ನನ್ನ ಜೊತೆಗೆ ಯಾರಿದ್ದಾರೆ, ಏನಿದೆ? ಸಾವು ಒಂದೇ. ಕಾಡುವ ಏಕಾಂಗಿತನ ಕೇವಲ ಆಧುನಿಕ ಕಾಲದ್ದೂ ಅಲ್ಲ. ಅದು ಎಲ್ಲ ಕಾಲದ ಮನುಷ್ಯ ಬದುಕಿನ ಸತ್ಯ. ಇದು ಹತಾಶೆಯ ಮಾತಾಗಿ, ಅಗಾಧ ಒಂಟಿತನದ ಮಾತಾಗಿ ಕೇಳುತ್ತದೆ.

ಸಂಗ ಮತ್ತು ಸಂಗಡ ಎಂಬ ಪದಗಳನ್ನು ಜೊತೆಜೊತೆಗೆ ಬಳಸುತ್ತಾ ಸಂಗವೂ ಕ್ಷಣಿಕ, ಕಲ್ಪಿತ ಮತ್ತು ಒಂಟಿತನ ಸತ್ಯ ಎಂಬುದನ್ನು ನುಡಿಗೊಳಿಸುವ ಚಾತುರ್ಯವೂ ಗಮನ ಸೆಳೆಯುತ್ತದೆ. ಈ ವಚನದ ಅಂಕಿತದ ಭಾಗವಾಗಿರುವ  ನಿಃಕಳಂಕ ಎಂಬ ಮಾತು ಕೂಡ ಈ ವಚನದಲ್ಲಿ ಅರ್ಥಪೂರ್ಣವಾಗಿದೆ. ವಸ್ತುಗಳು ನನ್ನವೆಂಬ ಮೋಹವೋ ಭ್ರಮೆಯೋ ನಂಬಿಕೆಯೋ ಇದೆಯಲ್ಲ ಅದೇ ಕಳಂಕಕ್ಕೆ ಕಾರಣ, ಯಾವುದೂ ನನ್ನದಲ್ಲ ಅನ್ನುವ ನಿಲುವು ಗಟ್ಟಿಯಾದರೆ ಮನಸು, ಭಾವಗಳೂ ಕಳಂಕರಹಿತವಾಗುತ್ತವೆ ಅನ್ನುವ ಅರ್ಥದ ಜಾಡು ಹೊಳೆಯುತ್ತದೆ.

ಇಂಥದೇ ಧೋರಣೆಯನ್ನು ಜೇಡರ ದಾಸಿಮಯ್ಯ ಮತ್ತು ಬಸವಣ್ಣನವರ ವಚನಗಳಲ್ಲೂ ಕಾಣಬಹುದು. ಇಳೆ ನಿಮ್ಮ ದಾನ ಎಂದು ಆರಂಭವಾಗುವ ದಾಸಿಮಯ್ಯನವರ ವಚನ (ಸಂ.೭, ವ.೭೩೪) ಹೊನ್ನಿನೊಳಗೊಂದೊರೆಯ (ಸಂ.೧, ವ.೪೩೬) ಊರ ಸೀರೆಗೆ (ಸಂ.೧, ವ೩೧೦)ಎಂದು ಆರಂಭವಾಗುವ ಬಸವ ವಚನಗಳನ್ನು ನಿದರ್ಶನಕ್ಕೆ ನೋಡಬಹುದು.


ಮೋಳಿಗೆ ಮಾರಯ್ಯ

ಮೋಳಿಗೆ ಎಂದರೆ ಕಟ್ಟಿಗೆಯ ಹೊರೆ ಎಂಬ ವಿವರಣೆ ದೊರೆಯುತ್ತದೆ. ೮೨೦ ವಚನಗಳು ದೊರೆತಿವೆ. ವಚನಾಂಕಿತ- ನಿಃಕಳಂಕ ಮಲ್ಲಿಕಾರ್ಜುನ. ಮಾರಯ್ಯನವರು ಕಲ್ಯಾಣಕ್ಕೆ ವಲಸೆ ಬಂದ ಕಾಶ್ಮೀರ ಪ್ರಾಂತದ ಅರಸರೆಂಬ ಐತಿಹ್ಯವಿದೆ. ಅವರ ಹೆಸರು, ಮತ್ತು ಅರಸುತನ ಕುರಿತ ಶಾಸನಾಧಾರಗಳು ಇದ್ದಂತಿಲ್ಲ. ಕನ್ನಡದ ವಾಕ್ಯ ರಚನೆಯ ವಿಶಿಷ್ಟ ಬಳಕೆಯನ್ನು ಇವರ ವಚನಗಳಲ್ಲಿ ಕಾಣಬಹುದು.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

1 Response

Leave a reply to Basavaraj Dharwad ಪ್ರತ್ಯುತ್ತರವನ್ನು ರದ್ದುಮಾಡಿ

This site uses Akismet to reduce spam. Learn how your comment data is processed.