ವಚನ ವೈವಿಧ್ಯ#10: ಸತ್ಯವನ್ನು ಹಿಡಿದಿಡಲು ಆಗದು-ಘಟ್ಟಿವಾಳಯ್ಯ

ನಮ್ಮ ಕಾಣ್ಕೆ ಅರಿವು ಎಲ್ಲವು ನೆನಪನ್ನೇ ಆಧರಿಸಿದ್ದು. ಅಂಥ ನಮ್ಮ ಅರಿವು ಸತ್ಯವನ್ನು ಕಾಣಿಸಿಕೊಡಲಾರದು. ಮಾತಿಗೆ ಸಿಲುಕದ, ನೆನಪಿಗೆ ಆಹಾರವಾಗದ ಸತ್ಯವನ್ನೋ ದೇವರನ್ನೋ ಮುಟ್ಟುವುದು ಪೂಜಿಸುವುದು ಅಸಾಧ್ಯ ಅನ್ನುತ್ತದೆ ಈ ವಚನ । ಓ.ಎಲ್.ನಾಗಭೂಷಣ ಸ್ವಾಮಿ

ಅರಿವಿಂಗೆ ಸಿಕ್ಕದುದ ನೆನೆಯಲಮ್ಮಬಹುದೆ ಅಯ್ಯಾ
ನೆನಹಿಂಗೆ ಬಾರದುದ ಕಾಂಬುದು ಹುಸಿ
ಮುಟ್ಟಿ ಪೂಜಿಸುವ ಮಾತು ಮುನ್ನವೇ ದೂರ
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ನಿಲ್ಲು ಮಾಣು (ಸಂ.೭,ವ.೪೧೩)

[ನೆನೆಯಲಮ್ಮಬಹುದೆ-ಧ್ಯಾನಿಸಲು ಯತ್ನಿಸಬಹುದೆ-ಕಾಂಬುದು-ಕಾಣುವುದು, ಮಾಣು-ಬಿಡು]

ಅರಿವಿಗೆ ಸಿಕ್ಕದೆ ಇರುವುದನ್ನು ನೆನೆಯಲು, ಧ್ಯಾನಿಸಲು ಸಾಧ್ಯವೇ? ಧ್ಯಾನಕ್ಕೆ ನೆನಪಿಗೆ ಬಾರದೆ ಇರುವುದು ಕಣ್ಣಿಗೆ ಕಾಣುತ್ತದೆ ಅನ್ನುವುದು ಸುಳ್ಳು. ಇನ್ನು ಅಂಥದನ್ನು ಮುಟ್ಟಿ ಪೂಜಿಸುವ ಮಾತು ಮೊದಲೇ ಬಲು ದೂರದ್ದು.

ಘಟ್ಟಿವಾಳಯ್ಯನವರ ಈ  ವಚನ ಅರಿವನ್ನು ಕುರಿತ ನಮ್ಮ ಕಲ್ಪನೆಗಳನ್ನೆಲ್ಲ ಪ್ರಶ್ನಿಸುತ್ತದೆ. ನಮ್ಮ ಶಿಕ್ಷಣ, ಸಂಸ್ಕೃತಿ  ಎಲ್ಲವೂ ನೆನಪಿಗೇ ಸಂಬಂಧಿಸಿದ್ದು, ನೆನಪನ್ನೇ ಆಧರಿಸಿದ್ದು.  ಆದರೆ ಸತ್ಯ ಅನ್ನುವುದು ಇದ್ದರೆ ಅದು ನೆನಪಿಗೆ ಸಿಲುಕದು. ಅರಿವಿಗೆ ಸಿಲುಕದು. ಅರಿವಿಗೆ ಬಾರದಿರುವ ಸತ್ಯ ನೆನಪಿಗೆ ಬರುತ್ತದೆಯೇ? ಯಾವುದು ನಮ್ಮ ನೆನಪಿನಲ್ಲಿ ದಾಖಲಾಗಿದೆಯೋ ಅದನ್ನು ಮಾತ್ರ ನಾವು ಈಗ ಗುರುತಿಸುತ್ತೇವೆ. ಯಾವುದು ನೆನಪಿಗೆ ಬಾರದೋ ಅದು ನಮಗೆ ಕಾಣುವುದೂ ಇಲ್ಲ. ನಮ್ಮ ಕಾಣ್ಕೆ ಅರಿವು ಎಲ್ಲವು ನೆನಪನ್ನೇ ಆಧರಿಸಿದ್ದು. ಅಂಥ ನಮ್ಮ ಅರಿವು ಸತ್ಯವನ್ನು ಕಾಣಿಸಿಕೊಡಲಾರದು. ಮಾತಿಗೆ ಸಿಲುಕದ, ನೆನಪಿಗೆ ಆಹಾರವಾಗದ ಸತ್ಯವನ್ನೋ ದೇವರನ್ನೋ ಮುಟ್ಟುವುದು ಪೂಜಿಸುವುದು ಅಸಾಧ್ಯ ಅನ್ನುತ್ತದೆ ಈ ವಚನ.

ನಡುಗನ್ನಡದಲ್ಲಿ ನೆನೆ ಎಂಬ ಮಾತನ್ನು ಧ್ಯಾನಿಸು ಅನ್ನುವ ಅರ್ಥದಲ್ಲಿ ಬಳಕೆಯಾಗಿದೆ. ಧ್ಯಾನಿಸುವುದು ಏನಿದ್ದರೂ ನಮಗೆ ಗೊತ್ತಿರುವ, ನಮ್ಮ ಗ್ರಹಿಕೆಗೆ ಬಂದಿರುವ, ಧ್ಯಾನಿಸಬಲ್ಲ ಸಂಗತಿಗಳನ್ನು ಮಾತ್ರವೇ. ಇಂಗ್ಲಿಶಿನ ರಿಕಾಗ್ನಿಶನ್‌ ಎಂಬ ಮಾತು ಕೂಡ ʻಮರಳಿ ಗ್ರಹಿಸುವುದುʼ ಎಂಬ ಅರ್ಥದ್ದು.  ಹಾಗಾದರೆ, ನಾವು ಈ ಮೊದಲು ದೇವರನ್ನು, ಸತ್ಯವನ್ನು ಕಂಡಿಲ್ಲವಾದರೆ, ಕಂಡ ನೆನಪು ನಮ್ಮಲ್ಲಿಲ್ಲವಾದರೆ ಈಗ ಒಂದು ವೇಳೆ ದೇವರು, ಸತ್ಯ ನಮ್ಮ ಕಣ್ಣೆದುರಿಗೇ ಇದ್ದರೂ ಗುರುತಿಸಲಾರೆವು. ಹೀಗಿರುವಾಗ ನಾನು ಸತ್ಯವನ್ನು ಕಂಡೆ, ದೇವರನ್ನು ಕಂಡೆ ಅನ್ನುವ ಮಾತುಗಳೇ ಸರಿಯಲ್ಲ, ಅದು ಅಸಾಧ್ಯ. ತಿಳಿಯುವುದಕ್ಕೂ ಮಿತಿ ಇದೆ. ತಿಳಿಯಲಾಗದ್ದನ್ನು ತಿಳಿಯಲು ಹೆಣಗುವುದು ಅರ್ಥವಿಲ್ಲದ್ದು ಎಂಬುದು ಉಪಯೋಗ ದೃಷ್ಟಿಯ ಮಾತೂ ಆಗಬಹುದು, ಮನುಷ್ಯರ ತಿಳಿವಿನ ಮಿತಿಯನ್ನು ಸೂಚಿಸುವುದು ಆಗಬಹುದು.

ಇಂಥ ವಚನಗಳು ದೇವರೆಂಬ ಕಲ್ಪನೆಯನ್ನೇ ಪ್ರಶ್ನಿಸುವಂತೆ ಇವೆ. ಉದಾಹರಣೆಗೆ ಗುಹೇಶ್ವನೆಂಬುವನು ಸತ್ತು ಅಂತ್ಯ ಸಂಸ್ಕಾರ ನಡೆದು ಗಂಗೆ ಗೌರಿಯರು ಮುಂಡೆಯರಾದರು ಅನ್ನುವ ಅಲ್ಲಮ ವಚನವಿದೆ (ಸಂ.೨, ವ.೧೧೫೪); ಲದ್ದೆಯ ಸೋಮಣ್ಣನವರ ವಚನ ದೇವರ ಹಂಗು ಯಾಕೆ ಬೇಕು ಅನ್ನುತ್ತದೆ (ಸಂ.೭, ವ. ೨೦). ಭಕ್ತಿ ಚಳವಳಿ ಎಂದು ಕರೆಯಲಾಗುವ ವಚನ ಸಾಹಿತ್ಯದಲ್ಲಿ ದೇವರ ಅಸ್ತಿತ್ವವನ್ನು ಪ್ರಶ್ನಿಸುವ ವಚನಗಳು ಗಮನಾರ್ಹ ಸಂಖ್ಯೆಯಲ್ಲಿವೆ.


ಘಟ್ಟಿವಾಳಯ್ಯ

ಹನ್ನೆರಡನೆಯ ಶತಮಾನದ ವಚನಕಾರ. ಈತನ ೧೪೭ ವಚನಗಳು ದೊರೆತಿವೆ.ʻ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲʼ ಎಂಬುದು ವಚನಗಳ ಅಂಕಿತ.  ಈತ ಗೆಜ್ಜೆಗಾರ ಘಟ್ಟಿವಾಳಯ್ಯ ಎಂದೂ ಪ್ರಸಿದ್ಧ. ಮುದ್ದಣ ಎಂಬುದು ಹುಟ್ಟು ಹೆಸರು. ಈತನ ಭಕ್ತಿ ವೈರಾಗ್ಯಗಳನ್ನು ಸಹಿಸದೆ ಈತನ ಹೆಂಡತಿ ತೊರೆದು ಹೋದಳೆಂಬ ಐತಿಹ್ಯವಿದೆ. ಘಟ್ಟಿವಾಳಯ್ಯ ಮದ್ದಳೆ ಬಾರಿಸುವ, ನರ್ತಿಸುತ್ತ ತತ್ವನಿರೂಪಣೆ ಮಾಡುವ ವೃತ್ತಿಯವನು ಎಂಬ ಮಾತಿದೆ. ಈತ ವಿಭೂತಿಯ ಘಟ್ಟಿಗಳನ್ನು ತಯಾರಿಸುವ ಕೆಲಸ ಮಾಡುತಿದ್ದ ಎಂದೂ ಹೇಳಲಾಗಿದೆ. 

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.