ಸ್ವಂತದ ದೇವಾಲಯ (One’s own temple) : ಓಶೋ 365 #Day 348


ಸಾರ್ವಜನಿಕ ದೇವಾಲಯ ಸಾರ್ವಜನಿಕರಿಗೆ ಸಂಬಂಧಿಸಿದ್ದು, ಆದರೆ ನೀವು ನಿಮ್ಮ ವೈಯಕ್ತಿಕ ದೇವಾಲಯವನ್ನೂ ಹೊಂದಿರಬೇಕಾಗುತ್ತದೆ, ಇದು ಖಾಸಗಿ ವಿದ್ಯಮಾನ ~ ಓಶೋ ರಜನೀಶ್ ಕನ್ನಡಕ್ಕೆ ಚಿದಂಬರ ನರೇಂದ್ರ



ಧ್ಯಾನ
ಯಾರನ್ನೋ, ಯಾವುದನ್ನೋ
ಒಲಿಸಿಕೊಳ್ಳುವ ಪ್ರಯತ್ನವಲ್ಲ.
ಧ್ಯಾನ
ನಿಮ್ಮ ನಿಜದ ಹಾಜರಾತಿಯನ್ನು
ನಿಮಗೆ ಅರ್ಪಿಸಿಕೊಳ್ಳುವ ವಿಧಾನ
ಪ್ರತೀ ಕ್ಷಣ.

~ Thich Nhat Hanh

ಪೌರಸ್ತರಾದ ನಾವು ನಮ್ಮದೇ ಆದ ಪ್ರತ್ಯೇಕ ಧ್ಯಾನದ ಕೋಣೆಯನ್ನು ಹೊಂದಿರುತ್ತೇವೆ. ಯಾವ ಕುಟುಂಬಕ್ಕೆಲ್ಲ ಸಾಧ್ಯವೋ ಅವರು ಮನೆಗಳಲ್ಲಿ ತಮ್ಮದೇ ಆದ ಖಾಸಗೀ ದೇವಾಲಯವನ್ನು ಹೊಂದಿರುತ್ತಾರೆ. ಮತ್ತು ಸದಸ್ಯರು ಧ್ಯಾನ ಮತ್ತು ಪೂಜೆಗಾಗಿ ಅಲ್ಲಿಗೆ ಹೋಗುತ್ತಾರೆ.

ಈ ಕೋಣೆಗೆ ಸಂಬಂಧಿಸಿದ, ಧೂಪ, ದೀಪ, ಗಂಟೆ , ಬಣ್ಣ, ಗಾಳಿ ಇತ್ಯಾದಿ ಎಲ್ಲವೂ ಧ್ಯಾನದ ಐಡಿಯಾಕ್ಕೆ ಹೊಂದಿಕೊಂಡಿರುತ್ತದೆ. ನೀವು ಪ್ರತಿದಿನ ಆ ಕೋಣೆಯಲ್ಲಿಯೇ , ಅದೇ ಸಮಯಕ್ಕೆ ಧ್ಯಾನ ಮಾಡುವಿರಾದರೆ, ನೀವು ಶೂ ಬಿಚ್ಚಿ ಆ ಕೋಣೆಯನ್ನು ಪ್ರವೇಶಿಸಿದ ಕೂಡಲೇ ಧ್ಯಾನವನ್ನು ಪ್ರವೇಶಿಸಿಬಿಟ್ಟಿರುತ್ತೀರ.

ನೀವು ಧ್ಯಾನದ ಕೋಣೆಯನ್ನು ಪ್ರವೇಶಿಸಿದ ಕ್ಷಣದಲ್ಲಿಯೇ, ಅದೇ ಗೋಡೆಗಳು, ಅದೇ ಬಣ್ಣ, ಅದೇ ಧೂಪ ದೀಪ, , ಅದೇ ಪರಿಮಳ, ಅದೇ ಮೌನ , ಅದೇ ಸಮಯ, ನಿಮ್ಮ ಅದೇ ದೇಹ , ಅದೇ ಮೈಂಡ್, ಅದೇ ಆರೋಗ್ಯ ಎಲ್ಲವೂ ಒಂದು ಐಕ್ಯತೆಯಲ್ಲಿ ಒಂದಾಗತೊಡಗುತ್ತವೆ. ಆ ಎಲ್ಲಕ್ಕೂ ಇದು ಧ್ಯಾನದ ಸಮಯ ಎನ್ನುವುದು ಗೊತ್ತಾಗುತ್ತದೆ. ಮತ್ತು ಅವು ನಿಮ್ಮೊಡನೆ ಸಂಘರ್ಷಕ್ಕೆ ಇಳಿಯದೇ ಸಹಕಾರಕ್ಕೆ ಮುಂದಾಗುತ್ತವೆ. ಮತ್ತು ಆಗ ನೀವು ಯಾವ ಹರಸಾಹಸವಿಲ್ಲದೇ, ಯಾವ ಬಿಕ್ಕಟ್ಟುಗಳಿಲ್ಲದೆ, ಮೌನವಾಗಿ ಧ್ಯಾನದೊಳಗೆ ಪ್ರವೇಶ ಮಾಡಬಹುದು.

ಆದ್ದರಿಂದ ನಿಮಗೆ ಸಾಧ್ಯವಾಗುವುದಾದರೆ, ಒಂದು ಸಣ್ಣ ಮೂಲೆಯನ್ನು ಗೊತ್ತುಮಾಡಿಕೊಳ್ಳಿ, ಮತ್ತು ಅಲ್ಲಿ ಧ್ಯಾನ ಬಿಟ್ಟು ಬೇರೆ ಏನೂ ಮಾಡಬೇಡಿ. ಇಲ್ಲವಾದರೆ ಆ ಜಾಗಕ್ಕೆ ಗೊಂದಲವಾಗುತ್ತದೆ. ಇದನ್ನು ವಿವರಿಸುವುದು ಕಷ್ಟ.  ಆದರೆ ಒಂದೇ ಜಾಗದಲ್ಲಿ, ಒಂದೇ ಸಮಯದಲ್ಲಿ ಧ್ಯಾನ ಮಾಡುವುದನ್ನು ಆದಷ್ಟು ಪಾಲಿಸಿ. ಕೆಲವೊಮ್ಮೆ ಧ್ಯಾನ ಮಿಸ್ ಆದರೆ ತೊಂದರೆ ಇಲ್ಲ, ಈ ಬಗ್ಗೆ ಗಿಲ್ಟಿ ಫೀಲ್ ಮಾಡಿಕೊಳ್ಳಬೇಡಿ. ನೂರು ದಿನಗಳಲ್ಲಿ ಕನಿಷ್ಟ ಅರವತ್ತು ದಿನ ನಿಮಗೆ ಹೀಗೆ ಧ್ಯಾನ ಮಾಡುವುದು ಸಾಧ್ಯವಾಗುವುದಾದರೆ ಅಷ್ಟು ಸಾಕು.

ಒಬ್ಬ ಝೆನ್ ಮಾಸ್ಟರ್ ಗೆ ಇಬ್ಬರು ಶಿಷ್ಯರಿದ್ದರು. ಪ್ರತಿದಿನ ಅವರಿಬ್ಬರೂ ಮಾಸ್ಟರ್ ಮನೆಯ ಮುಂದಿನ ಗಾರ್ಡನ್ ಲ್ಲಿ ‘ವಾಕಿಂಗ್ ಮೆಡಿಟೇಶನ್’ ಮಾಡುತ್ತಿದ್ದರು.

ಝೆನ್ ಸಂಪ್ರದಾಯದಲ್ಲಿ ಪ್ರತಿ ಕ್ರಿಯೆಯೂ ಧ್ಯಾನವೇ. ಸದಾ 24 ಗಂಟೆ ಕುಳಿತು ಧ್ಯಾನ ಮಾಡುವುದು ಕಷ್ಟ. ಕಾಲುಗಳು ಮರಗಟ್ಟುತ್ತವೆ, ರಕ್ತದ ಚಲನೆಗೆ ತೊಂದರೆಯಾಗುತ್ತದೆ. ಆದ್ದರಿಂದ ಝೆನ್ ಸನ್ಯಾಸಿಗಳು ಸ್ವಲ್ಪ ಹೊತ್ತು ಕೂತು ಧ್ಯಾನ ಮಾಡುತ್ತಾರೆ ಆಮೇಲೆ ಸ್ವಲ್ಪ ಹೊತ್ತು ನಡೆದಾಡುತ್ತ ಧ್ಯಾನ ಮಾಡುತ್ತಾರೆ.

ಮಾಸ್ಟರ್ ನ ಈ ಶಿಷ್ಯರಿಬ್ಬರಿಗೂ ಹೊಗೆಸೊಪ್ಪು ಸೇದುವ ಚಟ ಆದರೆ ಅವರಿಬ್ಬರೂ ಮಾಸ್ಟರ್ ಗೆ ಹೆದರಿ ಗಾರ್ಡನ್ ಲ್ಲಿ ಹೊಗೆಸೊಪ್ಪು ಸೇದುತ್ತಿರಲಿಲ್ಲ.

ಒಂದು ದಿನ ಶಿಷ್ಯರಿಬ್ಬರೂ ಪ್ರತ್ಯೇಕವಾಗಿ ಮಾಸ್ಟರ್ ಬಳಿ ಹೋಗಿ ಗಾರ್ಡನ್ ಲ್ಲಿ ವಾಕಿಂಗ್ ಮೆಡಿಟೇಶನ್ ಮಾಡುವಾಗ ಹೊಗೆ ಸೊಪ್ಪು ಸೇದಲು ಮಾಸ್ಟರ್ ನ ಅನುಮತಿ ಕೇಳಲು ನಿರ್ಧರಿಸಿದರು.

ಮರುದಿನ ಒಬ್ಬ ಶಿಷ್ಯ ಗಾರ್ಡನ್ ಲ್ಲಿ ಹೊಗೆಸೊಪ್ಪು ಸೇದುತ್ತ ನಡೆದಾಡುತ್ತಿರುವುದನ್ನು ಕಂಡು ಇನ್ನೊಬ್ಬ ಶಿಷ್ಯನಿಗೆ ಸಿಟ್ಟು ಬಂತು.

“ ನಾನೂ ಅನುಮತಿ ಕೇಳಿದೆ ಆದರೆ ಮಾಸ್ಟರ್ ನಿರಾಕರಿಸಿಬಿಟ್ಟರು. ನಿನಗೆ ಹೇಗೆ ಒಪ್ಪಿಗೆ ಕೊಟ್ಟರು? ನಾನು ಈಗಲೇ ಮಾಸ್ಟರ್ ಬಳಿ ಹೋಗುತ್ತೇನೆ “ ಅವ ಸಿಟ್ಟಿನಿಂದ ಮಾತಾಡಿದ.

“ ನಿಲ್ಲು ನಿಲ್ಲು, ನೀನು ಮಾಸ್ಟರ್ ನ ಏನಂತ ಕೇಳಿದೆ” ಮೊದಲ ಶಿಷ್ಯ ಕೇಳಿದ.

“ ವಾಕಿಂಗ್ ಮೆಡಿಟೇಶನ್ ಮಾಡುವಾಗ ಹೊಗೆಸೊಪ್ಪು ಸೇದಲೆ? ಎಂದು ಕೇಳಿದೆ “ ಎರಡನೇಯವ  ಉತ್ತರಿಸಿದ.

“ ಅದೇ ನೋಡು ನೀನು ಮಾಡಿದ ತಪ್ಪು. ಹಾಗಲ್ಲ ಕೇಳೋದು. ಹೊಗೆಸೊಪ್ಪು ಸೇದುವಾಗ ವಾಕಿಂಗ್ ಮೆಡಿಟೇಶನ್ ಮಾಡಬಹುದಾ ಅಂತ ಕೇಳಬೇಕಿತ್ತು. ನಾನು ಹಾಗೆ ಕೇಳಿದೆ “
ಮೊದಲ ಶಿಷ್ಯ ನಕ್ಕು ಬಿಟ್ಟ.

*********************************

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.