ವಚನ ವೈವಿಧ್ಯ#15: ದರ್ಶನಕ್ಕೆ ಹೊಸ ವ್ಯಾಖ್ಯಾನ-ಸಕಳೇಶ ಮಾದರಸ

ಈ ವಚನವನ್ನು ಇವತ್ತು ಓದಿದಾಗ ‘ದರ್ಶನ’ ಅನ್ನುವ ಮಾತಿನ ಇನ್ನೊಂದು ಅರ್ಥ ಹೊಳೆಯುತ್ತದೆ...। ಓ.ಎಲ್.ನಾಗಭೂಷಣ ಸ್ವಾಮಿ

ದೊರೆಕೊಂಡಂತೆ ತಣಿದಿಹ ಮನದವರ ತೋರಾ
ದುಃಖಕ್ಕೆ ದೂರವಾಗಿಹರ ತೋರಾ
ಸದಾನಂದದಲ್ಲಿ ಸುಖಿಯಾಗಿಪ್ಪವರ ತೋರಾ
ಸಕಳೇಶ್ವರದೇವಾ ಎನಗಿದೇ ವರವು ಕಂಡಾ
ತಂದೆ

ಏನು ದೊರೆಯುತ್ತದೆಯೋ ಅದರಲ್ಲೇ ತಣಿವನ್ನು, ತೃಪ್ತಿಯನ್ನು ಪಡೆದಿರುವವರನ್ನು ತೋರಿಸು. ದುಃಖಕ್ಕೆ ದೂರವಾಗಿರುವವರನ್ನು ತೋರಿಸು. ಸದಾ ಆನಂದದಲ್ಲಿ ಅಥವಾ ಸತ್ (ದೇವರು, ಸತ್ಯ) ಆನಂದದಲ್ಲಿ ಇರುವವರನ್ನು ತೋರಿಸು. ಇದೇ ನೀನು ಕೊಡಬಹುದಾದ ದೊಡ್ಡ ವರ, ತಂದೇ.

ಈ ವಚನವನ್ನು ಇವತ್ತು ಓದಿದಾಗ ‘ದರ್ಶನ’ ಅನ್ನುವ ಮಾತಿನ ಇನ್ನೊಂದು ಅರ್ಥ ಹೊಳೆಯುತ್ತದೆ. ತೃಪ್ತಿ ಮತ್ತು ಸುಖ ದುಃಖ ದೂರವಾಗಿ ಬದುಕುವ ಗುಣಗಳಿರುವವರು ಅಪೂರ್ವವೇ ಅಲ್ಲವೇ. ಎಷ್ಟು ಅಪೂರ್ವವೆಂದರೆ ಸ್ವತಃ ದೇವರೇ ನಮಗೆ ವರಕೊಟ್ಟು ಅವರು ಕಾಣುವ ಹಾಗೆ ಮಾಡಬೇಕು. ಅಂಥ ಗುಣಗಳು ಇರುವವರು ಇದ್ದರೆ ಅವರೇ ದೇವರು. ದೇವರಿಗೆ ಬಯಕೆ ಇಲ್ಲ, ದುಃಖವಿಲ್ಲ, ಅವನು ಸದಾನಂದ ಅನ್ನುವ

ಮಾತುಗಳು ಇವೆಯಲ್ಲ. ನಾವು, ನಮ್ಮಲ್ಲಿಲ್ಲದವನ್ನು, ಇರಬೇಕಾದುದನ್ನು, ಅಂದರೆ ಸುಖ-ದುಃಖಗಳ ದ್ವಂದ್ವವಿರದ, ಸದಾ ಆನಂದವಾಗಿರುವ ಗುಣಗಳನ್ನು ಒಟ್ಟಾಗಿಸಿ ದೇವರ ಕಲ್ಪನೆ ಮಾಡಿಕೊಂಡಿದ್ದೇವೆ. ಕಲ್ಪನೆಯ ದೇವರನ್ನು ಕಾಣುವುದಕ್ಕಿಂತ ಈ ಗುಣ ಇರುವ ಮನುಷ್ಯರನ್ನೇ ಕಂಡರೆ ಅದೇ ದೊಡ್ಡದು. ಜೊತೆಯಲ್ಲಿರುವ ಮನುಷ್ಯರಲ್ಲಿ ದೈವತ್ವನ್ನು ಕಾಣುವುದೇ ದರ್ಶನ. ಹಸಿವಾದಾಗ ಊಟ, ಮಾತಾಡಿಸಬೇಕು ಅನ್ನಿಸಿದಾಗ ಗೆಳೆಯರು, ಬಿಸಿಲಲ್ಲಿ ನಡೆಯುವಾಗ ನೆರಳು, ದಣಿದಾಗ ನಿದ್ರೆ, ದಾಹವಾದಾಗ ನೀರು ಸಿಕ್ಕರೆ ಸಾಕು. ಬೇಕಾದದ್ದು, ಬೇಕಾದ ಹೊತ್ತಿನಲ್ಲಿ ಯಾರಿಗೆ ದೊರೆಯುವುದೋ ಅವರೇ ಶ್ರೀಮಂತರು. ಬೇಡವಾದದ್ದನ್ನೆಲ್ಲ ಬೇಕು ಅಂದುಕೊಳ್ಳುತ್ತಾ ಅವನ್ನು ಪಡೆಯುವುದಕ್ಕೆ ‘ಶ್ರೀಮಂತ’ರಾಗಲು ಹೆಣಗುತ್ತೇವಲ್ಲವೇ. ಮಾದರಸ ಹೇಳುವಂಥವರು ಕಂಡರೆ ಪುಣ್ಯ. ನಾವೇ ಹಾಗಾದರೆ ಬಲು ದೊಡ್ಡ ಭಾಗ್ಯ.


ಸಕಳೇಶ ಮಾದರಸ

ಸಕಳೇಶ ಮಾದರಸರ ೧೩೫ ವಚನಗಳು ಪ್ರಕಟವಾಗಿವೆ. ಸಕಳೇಶ್ವರ ಎಂಬುದು ವಚನಾಂಕಿತ. ಇವರನ್ನು ಕುರಿತು ಅನೇಕ ಮಧ್ಯಕಾಲೀನ ಕೃತಿಗಳು ಉಲ್ಲೇಖ ಮಾಡುತ್ತವೆ.   ಸಂಗೀತಜ್ಞ,  ವೀಣಾದಿ ವಾದ್ಯಗಳ ಕಲಾವಿದ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.