ಮೂಲ: ಅಮೀರ್ ಹಸನ್ ಸಿಜಿ । ಕನ್ನಡಕ್ಕೆ: ಚೇತನಾ ತೀರ್ಥಹಳ್ಳಿ
ಒಮ್ಮೆ ಒಬ್ಬ ಪಂಡಿತ, ರಾಜ ಮಹಾರಾಜರುಗಳೂ ಭಕ್ತಿಯಿಂದ ತಲೆ ಬಾಗುತ್ತಿದ್ದ ಕಣ್ಣಿಲ್ಲದ ಒಬ್ಬ ಸಾಧಕನನ್ನು ಪರೀಕ್ಷಿಸಲು ಹೋಗ್ತಾನೆ. ಅವನನ್ನ ಎಲ್ರೂ ಅತೀಂದ್ರಿಯ ಜ್ಞಾನಿ ಅನ್ನುತ್ತಾರೆ, ಅವನಿಗೆಷ್ಟು ಜ್ಞಾನವಿದೆಯೋ ನೋಡೇಬಿಡೋಣ ಅನ್ನುವ ಹುಕಿ ಅವನದ್ದು.
ಕಣ್ಣಿಲ್ಲದ ಸಾಧಕ ಆ ಪಂಡಿತನ್ನ ಆದರದಿಂದ ಬರಮಾಡಿಕೊಂಡು ಸತ್ಕರಿಸ್ತಾನೆ.
ಮಾತಿನ ನಡುವೆ ಪಂಡಿತ, ‘ನಿಮಗೆ ಅತೀಂದ್ರಿಯ ಶಕ್ತಿ ಇದೆ ಅನ್ತಾರಲ್ಲ, ಅದು ಹೇಗಿರತ್ತೆ?’ ಅಂತ ಕೇಳ್ತಾನೆ.
ಅಷ್ಟೊತ್ತಿಗೆ ಅವನ ಮೂಗಿನ ಮೇಲೊಂದು ನೊಣ ಬಂದು ಕೂತ್ಕೊಳತ್ತೆ. ಪಂಡಿತ ಅದನ್ನ ಓಡಿಸ್ತಾನೆ. ಅದು ಮತ್ತೆ ಬಂದು ಕೂತ್ಕೊಳತ್ತೆ.
ಮತ್ತೆ ಅದನ್ನು ಓಡಿಸ್ತಾ, ‘ಎಲ್ರೂ ನಿಮ್ಮನ್ನ ದೈವಪುರುಷ ಅಂತಾರಲ್ಲ, ಅದರ ಮಾನದಂಡ ಏನು’ ಅಂತ ಕೇಳ್ತಾನೆ. ಅದೇ ಹೊತ್ತಿಗೆ ಆ ನೊಣ ಮತ್ತೆ ಬಂದು ಅವನ ಮೂಗಿನ ಮೇಲೆ ಕೂತ್ಕೊಳತ್ತೆ.
ಕಣ್ಣಿಲ್ಲದ ಸಾಧಕ ನಗುತ್ತಾ, ‘ದೈವಪುರುಷರ ಮೂಗಿನ ಮೇಲೆ ನೊಣ ಕೂರೋದಿಲ್ಲ’ ಅನ್ತಾನೆ.
ಪಂಡಿತ ಸುಮ್ಮನೆ ಎದ್ದು ಹೋಗ್ತಾನೆ.

