ಸಂಗ್ರಹ – ಅನುವಾದ: ಚಿದಂಬರ ನರೇಂದ್ರ
ಲತಾ ಮಂಗೇಶ್ಕರ್ ಮತ್ತು ಮೊಹಮ್ಮದ ರಫೀ ಅವರಿಗೆ ಒಂದು ಹಾಡಿಗೆ ಐದು ಆರು ಸಾವಿರ ಸಿಗುತ್ತಿದ್ದ ಕಾಲದಲ್ಲಿ ಒಬ್ಬ ಗಾಯಕ ಒಂದು ಹಾಡಿಗೆ ಇಪತ್ತೈದು ಸಾವಿರ ಪಡೆದುಕೊಂಡ ವಿಷಯ ನಿಮಗೆ ಗೊತ್ತಾ?
ನಿರ್ದೇಶಕ ಕೆ. ಆಸಿಫ್, ಮೊಘಲ್-ಏ-ಆಜಂ ಸಿನೇಮಾ ನಿರ್ಮಿಸುತ್ತಿದ್ದರು. ಅವರಿಗೆ ತಾನಸೇನ್ ನ ದನಿ ಬೇಕಾಗಿತ್ತು. ಆ ದನಿ ಯಾರದಾಗಿರಬೇಕು ಎಂದು ಅವರು ತಲೆ ಕೆಡಿಸಿಕೊಂಡಿದ್ದಾಗ ಸಂಗೀತ ನಿರ್ದೇಶಕ ನೌಶಾದ್ ಅಲಿ ಒಬ್ಬ ಕರ್ಮಠ ಶಾಸ್ತ್ರೀಯ ಸಂಗೀತಗಾರನ ಹೆಸರು ಪ್ರಸ್ತಾಪ ಮಾಡುತ್ತಾರೆ. ಕೂಡಲೇ ಆಸಿಫ್ ಸಾಹೇಬರು ಆ ಸಂಗೀತಗಾರ ರ ಬಳಿ ಹೋಗಿ ತಮ್ಮ ಸಿನೇಮಾಕ್ಕೆ ಹಾಡಬೇಕೆಂದು ಒತ್ತಾಯ ಮಾಡುತ್ತಾರೆ. ಆಸಿಫ್ ಎಷ್ಟು ಅಂಗಲಾಚಿದರೂ ಆ ಸಂಗೀತಗಾರ ಸಿನೇಮಾಕ್ಕಾಗಿ ಹಾಡಲು ಒಪ್ಪಿಕೊಳ್ಳುವುದೇ ಇಲ್ಲ. ಆದರೂ ಆಸಿಫ್ ತಮ್ಮ ಪಟ್ಟು ಸಡಿಲಿಸುವುದಿಲ್ಲ. ಆಸಿಫ್ ರ ಹಟ ನೋಡಿ ಆ ಸಂಗೀತಗಾರರಿಗೆ ಆಶ್ಚರ್ಯ. ಕೊನೆಗೆ ಹೇಗಾದರೂ ಮಾಡಿ ಆಸಿಫ್ ರನ್ನ ಅವಾಯ್ಡ್ ಮಾಡಬೇಕೆಂದು ತೀರ್ಮಾನಿಸಿದ ಆ ಗಾಯಕ, ನನಗೆ ಇಪ್ಪತ್ತೈದು ಸಾವಿರ ರೂಪಾಯಿ ಕೊಟ್ಟರೆ ಮಾತ್ರ ನಾನು ನಿಮ್ಮ ಸಿನೇಮಾಕ್ಕೆ ಹಾಡುತ್ತೇನೆ ಅಂತ ಅಸಾಧ್ಯ ಶರತ್ತು ಹಾಕುತ್ತಾರೆ. ಕೂಡಲೇ ಅದಕ್ಕೆ ಒಪ್ಪಿಕೊಳ್ಳುವ ಕೆ.ಆಸಿಫ್ ತಕ್ಷಣ ಆ ಗಾಯಕರಿಗೆ ಹತ್ತು ಸಾವಿರ ರೂಪಾಯಿ ಸೈನಿಂಗ್ ಅಮೌಂಟ್ ಕೊಡುತ್ತಾರೆ. ಕೊನೆಗೆ ವಿಧಿಯಲ್ಲದೇ ಆ ಗಾಯಕರಿಗೆ ಸಿನೇಮಾಕ್ಕಾಗಿ ಹಾಡು ಹಾಡಲೇ ಬೇಕಾಗುತ್ತದೆ. ಆ ಹಾಡುಗಾರ ಬೇರಾರೂ ಅಲ್ಲ, ಹಿಂದೂಸ್ತಾನಿ ಸಂಗೀತದ ದಿಗ್ಗಜ ಕಲಾವಿದ ಉಸ್ತಾದ್ ಬಡೇ ಗುಲಾಂ ಅಲೀ ಖಾನ್ ಸಾಹೇಬರು. ಕೆ. ಆಸಿಫ್ ರ ಸಿನೇಮಾ ಕುರಿತಾದ ಉತ್ಕಟತೆಯ ಕಾರಣವಾಗಿ ಉಸ್ತಾದ್ ಸಾಹೇಬರು ತಾನ್ ಸೇನ್ ನ ದನಿಯಾಗಿ ಸಿನೇಮಾಕ್ಕೆ ಹಾಡಬೇಕಾಗಿ ಬಂತು.

