ಇದು ಶತಮಾನಗಳಿಂದ ನಡೆಯುತ್ತಿರುವ ವಾಗ್ವಾದ. ವಿದ್ವಾಂಸರು, ತತ್ವಜ್ಞಾನಿಗಳು ನಿರಂತರವಾಗಿ ದೈವದ ಅಸ್ತಿತ್ವದ ಬಗ್ಗೆ ನಿರಂತರವಾಗಿ ಚರ್ಚೆ ಮಾಡುತ್ತಿದ್ದಾರೆ. ದೇವರು ಇದ್ದಾನೆ ಎಂದು ವಾದ ಮಾಡು ಹಲವು ವಾದಗಳ ಬಗ್ಗೆ ತಿಳಿದುಕೊಳ್ಳೋಣ… । ಚಿದಂಬರ ನರೇಂದ್ರ (ಸಂಗ್ರಹ – ಅನುವಾದ)
Teleological ವಾದ : ಬ್ರಹ್ಮಾಂಡ ಒಂದು ವಿನ್ಯಾಸಗೊಳಿಸಿದ ಸಂಗತಿಯಂತಿದೆ. ಅದು ಎಷ್ಟು ಪರಿಪೂರ್ಣ ಸ್ಥಿತಿಯಲ್ಲಿ ಇದೆ ಎಂದರೆ, ಇದು ಆಕಸ್ಮಿಕವಾಗಿ ಆಗಿರಲಾರದು. ಆದ್ದರಿಂದ ಈ ವಿನ್ಯಾಸದ ಹಿಂದೆ ಒಬ್ಬ ಡಿಸೈನರ್ ಇದ್ದಾನೆ ಮತ್ತು ಅವನೇ ದೇವರು.
ಕಾಸ್ಮೊಲಾಜಿಕಲ್ ವಾದ : ಇದರ ಪ್ರಕಾರ ಕಾರಣ ಇಲ್ಲದೆ ಏನೂ ಇರುವುದಿಲ್ಲ. ಬ್ರಹ್ಮಾಂಡ ಇದೆ ಎಂದಾದ ಮೇಲೆ, ಇದಕ್ಕೊಂದು ಕಾರಣ ಇರಲೇಬೇಕು. ಕಾರಣ ಇದೆ ಎಂದರೆ ಕಾರಣಕರ್ತ ಇರಲೇಬೇಕು. ಈ ಕಾರಣಕರ್ತನೇ ದೇವರು.
Ontological ವಾದ : ಇದು ಬಹಳ ಅಸಂಗತವಾದದ್ದು. ನೀವು ಒಂದು ಪರಿಪೂರ್ಣ ಅಸ್ತಿತ್ವನ್ನು ಕಲ್ಪನೆ ಮಾಡಿಕೊಳ್ಳುತ್ತೀರಾದರೆ, ಆ ಅಸ್ತಿತ್ವ ಆ ಪರಿಪೂರ್ಣತೆಯ ಭಾಗವಾಗಿರಲೇ ಬೇಕು. ಇಲ್ಲವಾದರೆ ಅದು ನಿಜವಾಗಿ ಪರಿಪೂರ್ಣವಾಗಿರುವದು ಸಾಧ್ಯವಿಲ್ಲ. ಆ ಪರಿಪೂರ್ಣತೆಯೇ ದೇವರು.
Contingency ವಾದ : ಬ್ರಹ್ಮಾಂಡದಲ್ಲಿ ಸಂಗತಿಗಳು ಇವೆ, ಆದರೆ ಅವು ಇರಬೇಕಾಗಿರಲಿಲ್ಲ. ನಾವು ನೋಡುವ ಪ್ರತಿಯೊಂದರ ಅಸ್ತಿತ್ವವೂ ಇನ್ನೊಂದರ ಮೇಲೆ ಅವಲಂಬಿತವಾಗಿದೆ. ಪ್ರತಿಯೊಂದೂ ಇನ್ನೊಂದರ ಮೇಲೆ ಅವಲಂಬಿತವಾಗಿದೆಯಾದರೆ, ಯಾವುದೂ ಅದು ಯಾಕೆ ಇದೆ ಎನ್ನುವುದನ್ನ ವಿವರಿಸುವುದು ಅಸಾಧ್ಯ. ಆದ್ದರಿಂದ ಇದನ್ನು ವಿವರಿಸಲು ಸಾಧ್ಯವಾಗುವ ಯಾವುದರ ಮೇಲೂ ಅವಲಂಬಿತವಾಗದ ಒಂದು ಸಂಗತಿ ಇರಲೇ ಬೇಕು. ಆ ಅವಶ್ಯಕ ಅಸ್ತಿತ್ವವೇ ದೇವರು.
ಈ ಯಾವ ವಾದಗಳೂ ದೇವರ ಅಸ್ತಿತ್ವವನ್ನು ವೈಜ್ಞಾನಿಕವಾಗಿ ಸಾಬೀತು ಮಾಡುವುದಿಲ್ಲ. ದೇವರು ಎನ್ನುವುದು ಒಂದು metaphysical ಪರಿಕಲ್ಪನೆ. ಆದ್ದರಿಂದ ಯಾವುದೆಲ್ಲ ಫಿಸಿಕ್ಸ್ ನ ಆಚೆ ಇದೆಯೋ ಅದನ್ನು ವೈಜ್ಞಾನಿಕವಾಗಿ ವಿವರಿಸುವುದು ಅಸಾಧ್ಯ. ನೀವು ದೇವರನ್ನು ನಂಬುತ್ತೀರಾದರೆ ನಿಮಗೆ ದೇವರು ಇದ್ದಾನೆ. ನಂಬಿಕೆ ಎನ್ನುವುದು ಸಾಕ್ಷಿ ಇಲ್ಲದೇ ವಿಶ್ವಾಸ ಇಡುವ ಸಂಗತಿ. ನೀವು ನಾಸ್ತಿಕರಾದರೆ ನಿಮಗೆ ದೇವರು ಅಸ್ತಿತ್ವದಲ್ಲಿ ಇಲ್ಲ.
ದೇವರು ಇದ್ದಾನೋ ಇಲ್ಲವೋ ಎನ್ನುವ ವಾದ ಮುಂದೆಯೂ ಸಾವಿರಾರು ವರ್ಷಗಳ ವರೆಗೂ ಯಾವ ನಿಖರ ಉತ್ತರವಿಲ್ಲದೇ ಮುಂದುವರೆಯಲಿದೆ. ದೇವರು ಇದ್ದಾನೋ ಇಲ್ಲವೋ ಗೊತ್ತಿಲ್ಲ ಆದರೆ ಒಬ್ಬರ ಅಭಿಪ್ರಾಯವನ್ನು ಹಿಂಸಾತ್ಮಕವಾಗಿ ವಿರೋಧಿಸದೇ, ಗೌರವಪೂರ್ಣವಾಗಿ ಭಿನ್ನಾಭಿಪ್ರಾಯ ಇಟ್ಟುಕೊಳ್ಳುವುದು ಮಾತ್ರ ದೈವಕತೆಯ ಭಾಗ.

