ಪರಿಣಾಮಗಳಿಗೆ ಯಾವ ಮಹತ್ವ ಇಲ್ಲ ಎಂದು ಯಾವಾಗ ಕ್ಯಾಂಟ್ ಹೇಳುತ್ತಾನೋ ಆಗ ಈ ವಿಚಾರಧಾರೆ ಅಪಾಯದ ಮಟ್ಟ ಮುಟ್ಟುತ್ತದೆ. ನಿಮ್ಮ ಸತ್ಯದಿಂದ ಜಗತ್ತು ಏನು ಮಾಡುತ್ತದೆ ಎನ್ನುವುದಕ್ಕೆ ನೀವು ಜವಾಬ್ದಾರರಲ್ಲ. ನೀವು ನೈತಿಕವಾಗಿ ವ್ಯವಹರಿಸಿದಿರೋ ಇಲ್ಲವೋ ಎನ್ನುವುದಕ್ಕೆ ಮಾತ್ರ ನೀವು ಜವಾಬ್ದಾರರು. ಇನ್ನೊಬ್ಬರ ಪ್ರಾಣ ಉಳಿಸುವುದಕ್ಕಿಂತ ಹೆಚ್ಚಾಗಿ ಇಂಥ ನೈತಿಕತೆಯ ಮೇಲೆ ಕ್ಯಾಂಟ್ ಗೆ ಬಲವಾದ ವಿಶ್ವಾಸ ~ ಚಿದಂಬರ ನರೇಂದ್ರ
ನೈತಿಕತೆಯನ್ನು ಕುರಿತಾದಂಥ ಇಮ್ಯಾನುಯಲ್ ಕ್ಯಾಂಟ್ ನ ಫಿಲೊಸೊಫೀ ಎಷ್ಟು ವಿಚಿತ್ರವಾದ್ದೆಂದರೆ ಇದು ಒಂದು ಕೊಲೆಯನ್ನು ಸಮರ್ಥಿಸುವ ಮಟ್ಟಕ್ಕೂ ಹೋಗಿಬಿಡಬಲ್ಲದು.
ಇದನ್ನು ಅರ್ಥಮಾಡಿಕೊಳ್ಳಲು ಒಂದು ಸನ್ನಿವೇಶವನ್ನು ಕಲ್ಪನೆ ಮಾಡಿಕೊಳ್ಳಿ. ರಾತ್ರಿಯ ಸಮಯ, ಯಾರೋ ನಿಮ್ಮ ಮನೆಯ ಬಾಗಿಲನ್ನು ತಟ್ಟುತ್ತಿದ್ದಾರೆ. ನೀವು ಬಾಗಿಲನ್ನು ತೆರೆಯುತ್ತೀರಿ. ಯಾರೋ ಒಬ್ಬ ವ್ಯಕ್ತಿ ಬಾಗಿಲಲ್ಲಿ ಚೂರಿ ಹಿಡಿದುಕೊಂಡು ನಿಂತಿದ್ದಾನೆ. ಅವನು ನಿಮ್ಮನ್ನು ಪ್ರಶ್ನೆ ಮಾಡುತ್ತಾನೆ, “ನಿನ್ನ ಗೆಳೆಯ ಒಳಗೆ ಇದ್ದಾನ? ನಾನು ಅವನನ್ನು ಕೊಲ್ಲಬೇಕು”. ನಿಜದಲ್ಲಿ ನಿಮ್ಮ ಗೆಳೆಯ ನಿಮ್ಮ ಮನೆಯ ಒಳಗೆಯೇ ಇದ್ದಾನೆ. ಈ ಸಂದರ್ಭದಲ್ಲಿ ನೀವು ನಿಜ ಹೇಳಿದರೆ, ಆ ವ್ಯಕ್ತಿ ನಿಮ್ಮ ಗೆಳೆಯನನ್ನು ಕೊಂದುಬಿಡುತ್ತಾನೆ. ಒಂದು ವೇಳೆ ನೀವು ಸುಳ್ಳು ಹೇಳಿದಿರಾದರೆ ನಿಮ್ಮ ಗೆಳೆಯನ ಜೀವ ಉಳಿದುಬಿಡಬಲ್ಲದು.
ಈಗ ನೀವು ಯೋಚಿಸುತ್ತಿರಬಹುದು ಇಂಥ ಸಂದರ್ಭದಲ್ಲಿ ಸತ್ಯ ಹೇಳುವವನು ಯಾರೋ ಹುಚ್ಚನೇ ಆಗಿರುತ್ತಾನೆ. ಆದರೆ ಕ್ಯಾಂಟ್ ಜಗತ್ತಿನ ಅತ್ಯಂತ ಶ್ರೇಷ್ಠ ನೈತಿಕ ತತ್ತಜ್ಞಾನಿ ಹೇಳುತ್ತಾನೆ ನೀವು ಈಗಲೂ ಸತ್ಯವನ್ನೇ ಹೇಳಬೇಕು. ನಿಮ್ಮ ಗೆಳೆಯ ಸಾಯುತ್ತಾನೋ ಬದುಕುತ್ತಾನೋ ಅದು ಮುಖ್ಯವಲ್ಲ, ನೀವು ಸತ್ಯ ಹೇಳುವುದು ಮುಖ್ಯ.
ನೈತಿಕತೆಯ ಕುರಿತಾದ ಕ್ಯಾಂಟ್ ನ ತತ್ವಜ್ಞಾನ ಒಂದು ಅಪಾಯಕಾರಿ ಐಡಿಯಾದ ಮೂಲಕ ಬಂದಂಥದು. ಅವನ ಪ್ರಕಾರ ನೈತಿಕತೆ ಫಲಿತಾಂಶದ ಮೇಲೆ ಅಲ್ಲ ಮೌಲ್ಯಗಳ ಮೇಲೆ ಅವಲಂಬಿತವಾಗಿರುವಂಥದು. ಅವನು categorical Imperative ಎನ್ನುವ ಸಂಗತಿಯನ್ನು ಹುಟ್ಟುಹಾಕಿದ. ಇದರ ಪ್ರಕಾರ, ಯಾವ ಕೆಲಸಗಳನ್ನು ಎಲ್ಲರೂ ಎಲ್ಲ ಸಂದರ್ಭಗಳಲ್ಲೂ ಮಾಡಬೇಕು ಎಂದು ನೀವು ಬಯಸುತ್ತೀರೋ, ನೀವು ಕೇವಲ ಅಂಥ ಕೆಲಸಗಳನ್ನೇ ಮಾಡಬೇಕು. ಸುಳ್ಳು ಹೇಳುವುದು ಸಾರ್ವತ್ರಿಕ ನಿಯಮ ಆಗಬಾರದು ಎಂದು ನೀವು ಬಯಸುತ್ತಿರಾದರೆ, ನೀವು ಕೂಡ ಯಾವ ಸನ್ನಿವೇಶದಲ್ಲೂ ಸುಳ್ಳು ಹೇಳಬಾರದು. ನೀವು ಯಾರದ್ದಾದರೂ ಜೀವ ಉಳಿಸುತ್ತೀರೋ ಅಥವಾ ಅವರ ನೋವನ್ನು ಕಡಿಮೆ ಮಾಡುತ್ತಿದ್ದೀರೋ ಈ ಯಾವುದೂ ಮ್ಯಾಟರ್ ಆಗುವುದಿಲ್ಲ, ನೀವು ಸುಳ್ಳು ಹೇಳಬಾರದು ಅಷ್ಟೇ. ಏಕೆಂದರೆ ಸುಳ್ಳು ಹೇಳುವುದು ಸಮಾಜದ ಫೌಂಡೇಶನ್ ನ ನಾಶ ಮಾಡಿಬಿಡುತ್ತದೆ. ಪ್ರತಿಯೊಬ್ಬರೂ ತಮ್ಮ ಅನುಕೂಲಕ್ಕೆ, ತಮ್ಮ ಸಮಜಾಯಿಷಿಗೆ ತಕ್ಕಂತೆ ಸುಳ್ಳು ಹೇಳುತ್ತ ಹೋದರೆ, ಆಗ ಭಾಷೆ ಸೋಲುತ್ತದೆ, ನಂಬಿಕೆ ಮತ್ತು ಪ್ರಮಾಣಗಳಿಗೆ ಯಾವ ಅರ್ಥವೂ ಇರುವುದಿಲ್ಲ. ಆದ್ದರಿಂದ ಸುಳ್ಳು ಹೇಳುವುದು ಕೇವಲ ಸಮಯ ಸಂದರ್ಭಗಳಲ್ಲಿ ಮಾತ್ರ ತಪ್ಪು ಅಲ್ಲ, ಒಂದು ಒಂದು ಪರಿಕಲ್ಪನೆಯಾಗಿಯೇ ಇದು ಬಹಳ ದೊಡ್ಡ ತಪ್ಪು.
ಪರಿಣಾಮಗಳಿಗೆ ಯಾವ ಮಹತ್ವ ಇಲ್ಲ ಎಂದು ಯಾವಾಗ ಕ್ಯಾಂಟ್ ಹೇಳುತ್ತಾನೋ ಆಗ ಈ ವಿಚಾರಧಾರೆ ಅಪಾಯದ ಮಟ್ಟ ಮುಟ್ಟುತ್ತದೆ. ನಿಮ್ಮ ಸತ್ಯದಿಂದ ಜಗತ್ತು ಏನು ಮಾಡುತ್ತದೆ ಎನ್ನುವುದಕ್ಕೆ ನೀವು ಜವಾಬ್ದಾರರಲ್ಲ. ನೀವು ನೈತಿಕವಾಗಿ ವ್ಯವಹರಿಸಿದಿರೋ ಇಲ್ಲವೋ ಎನ್ನುವುದಕ್ಕೆ ಮಾತ್ರ ನೀವು ಜವಾಬ್ದಾರರು. ಇನ್ನೊಬ್ಬರ ಪ್ರಾಣ ಉಳಿಸುವುದಕ್ಕಿಂತ ಹೆಚ್ಚಾಗಿ ಇಂಥ ನೈತಿಕತೆಯ ಮೇಲೆ ಕ್ಯಾಂಟ್ ಗೆ ಬಲವಾದ ವಿಶ್ವಾಸ.
ಬಹಳಷ್ಟು ಜನರ ಪ್ರಕಾರ ನೈತಿಕತೆ ಎಂದರೆ ಯಾರಿಗೂ ಹೆಚ್ಚಿನ ಹಾನಿ ಅಗಬಾರದು, ಆದರೆ ಕ್ಯಾಂಟ್ ನ ಪ್ರಕಾರ, ನಿಮ್ಮ ಪ್ರತಿಯೊಂದನ್ನು ಪಣಕ್ಕಿಟ್ಟಾದರೂ ನೀವು ನಿಯಮವನ್ನು ಪಾಲಿಸಬೇಕಾದದ್ದು ನೈತಿಕತೆ. ಆದ್ದರಿಂದ ಒಬ್ಬರ ಪ್ರಾಣ ಉಳಿಸುವುದಕ್ಕಾಗಿ ಸುಳ್ಳು ಹೇಳುವುದು ಕ್ಯಾಂಟ್ ನ ಪ್ರಕಾರ ಯಾಕೆ ತಪ್ಪು ಎಂದರೆ ಆಗ ನೀವು ನಿಮ್ಮ ಜಡ್ಜಮೆಂಟ್, ಸಾರ್ವತ್ರಿಕ ನಿಯಮ (universal law) ಕ್ಕಿಂತ ದೊಡ್ಡದು ಎಂದು ನಂಬುತ್ತಿದ್ದೀರಿ. ಆದರೆ ಇದು ಕ್ಯಾಂಟಿ ಹೇಳುವಂತೆ ಸಾವಿಗಿಂತಲೂ ಕೆಟ್ಟದ್ದು. ಏಕೆಂದರೆ ಸಾವು ಭೌತಿಕಕ್ಕೆ ಸಂಬಂಧಿಸಿದ್ದಾರೆ, ನೈತಿಕ ಭ್ರಷ್ಟಾಚಾರ ಅಧ್ಯಾತ್ಮಕ್ಕೆ ಸಂಬಂಧಿಸಿದ್ದು. ನಿಮ್ಮ ನೈತಿಕತೆಯನ್ನು ಉಳಿಸಿಕೊಳ್ಳಲು ನೀವು ಒಬ್ಬರ ಸಾವನ್ನು ಸಹಿಸಿಕೊಳ್ಳುತ್ತೀರಾ? ವಿಚಾರ ಮಾಡಿ.

