ಶೂನ್ಯವಾದದ ಕ್ರೈಸ್ತ ಸೂಫಿ : ಮಾರ್ಗರೆಟ್ ಪೊರೆಟಿ

ತರ್ಕ – ಪಾಂಡಿತ್ಯಗಳಿಗಿಂತ, ನಿಯಮ – ಸದಾಚಾರಗಳಿಗಿಂತ ಪ್ರೇಮವೇ ಭಗವಂತನನ್ನು ತಲುಪಲು ಸರಿಯಾದ ದಾರಿ ಎಂದು ಪ್ರತಿಪಾದಿಸಿದ್ದಳು ಮಾರ್ಗರೆಟ್ ಪೊರೆಟಿ. 13ನೇ ಶತಮಾನದಲ್ಲಿ ಜೀವಿಸಿದ್ದ ಈಕೆಯ ಚಿಂತನೆಗಳು ಚರ್ಚ್ ಪುರೋಹಿತಷಾಹಿಯ ಬುಡವನ್ನೇ ಅಲುಗಾಡಿಸಿದ್ದವು. ಇವಳಿಗೆ ಚರ್ಚ್ ಅದೆಷ್ಟು ಹೆದರಿತ್ತೆಂದರೆ, ಇವಳಿಂದ ತನಗೆ ಉಳಿಗಾಲವಿಲ್ಲೆಂದು, ಈಕೆಯನ್ನು ನಡುಬೀದಿಯಲ್ಲಿ ಜನಸಂದಣಿಯ ಮುಂದೆ ಜೀವಂತ ಇರುವಾಗಲೇ ಬೆಂಕಿ ಇಟ್ಟು ಸುಟ್ಟುಹಾಕಿತು. ಈ ಕ್ರಾಂತಿಕಾರಿ ಆಧ್ಯಾತ್ಮಿಕ ಹೆಣ್ಣಿನ ಚಿಂತನೆ ಮತ್ತು ಕೃತಿಯ ಕಿರುಪರಿಚಯ ಇಲ್ಲಿದೆ । ಚೇತನಾ ತೀರ್ಥಹಳ್ಳಿ

“ದೇವರನ್ನು ತಲುಪಲು ಕೇವಲ ಪ್ರೀತಿ ಸಾಕು, ಧಾರ್ಮಿಕ ನಿಯಮಗಳು ಅಥವಾ ಚರ್ಚ್‌ನ ಮಧ್ಯಸ್ಥಿಕೆ ಅನಿವಾರ್ಯವಲ್ಲ” – 13ನೇ ಶತಮಾನದಲ್ಲಿ, ಕ್ರಿಶ್ಚಿಯನ್ ಸಮುದಾಯದ ನಡುವೆ ಈ ಮಾತನ್ನು ಒಬ್ಬ ಹೆಣ್ಣು ಮಗಳು ಹೇಳಿದ್ದರೆ ಸುಮ್ಮನೆ ಬಿಡುತ್ತಿದ್ದರೇ?
ಇಲ್ಲ, ಬಿಡಲಿಲ್ಲ. ಪ್ಯಾರಿಸ್‌ನ ನಡುಬೀದಿಯಲ್ಲಿ ನಿಲ್ಲಿಸಿ ಅವಳನ್ನು ಜೀವಂತ ಸುಟ್ಟು ಹಾಕಲಾಯಿತು.

ಮಾರ್ಗರೆಟ್ ಪೊರೆಟೆ, 13ನೇ ಶತಮಾನದಲ್ಲಿ ಆಗಿಹೋದ ಅಧ್ಯಾತ್ಮಿಕ ಚಿಂತಕಿ. ಚರ್ಚ್ ಪುರೋಹಿತಷಾಹಿ ವಿರುದ್ಧ ಸೆಟೆದು ನಿಂತಿದ್ದ, ದೇವರನ್ನು ತಲುಪಲು ಶುದ್ಧ ಅಧ್ಯಾತ್ಮವೊಂದೇ ದಾರಿ ಎಂದು ನಂಬಿದ್ದ, ಪ್ರೇಮವೇ ಅತ್ಯುನ್ನತ ಧ್ಯಾನವೆಂದು ಪ್ರತಿಪಾದಿಸುತ್ತಿದ್ದ ಈ ಕ್ರಾಂತಿಕಾರಿ ಹೆಣ್ಣು, ಯಾವ ಬೆದರಿಕೆ – ಬಹಿಷ್ಕಾರಗಳಿಗೂ ಬಗ್ಗದೆ ತಮ್ಮ ನಿಲುವನ್ನು ದಿಟ್ಟವಾಗಿ ಜನರ ಮುಂದಿಟ್ಟಳು. Le Mirouer des simples âmes – The Mirror of Simple Souls (ಸರಳ ಆತ್ಮಗಳ ಕನ್ನಡಿ) ಎಂಬ ಕೃತಿಯ ಮೂಲಕ ‘ಪ್ರೇಮವೇ ಮೋಕ್ಷದ ದಾರಿ’ ಎಂಬ ತನ್ನ ಚಿಂತನೆಯನ್ನು ವಿವರಿಸಿದಳು. ಇದರ ಸಂಪೂರ್ಣ ಶೀರ್ಷಿಕೆ : Le Mirouer des simples âmes anéanties et qui seulement demeurent en vouloir et désir d’amour – ಇದರ ಸರಳ ಅರ್ಥ : ಪ್ರೇಮದ ಹಂಬಲದಲ್ಲಿ ಲಯಗೊಳ್ಳುವ ಸರಳ ಆತ್ಮಗಳ ಕೈಗನ್ನಡಿ – ಎಂದು.

ಭಗವಂತನ ಪ್ರೇಮದಲ್ಲಿ ಸಂಪೂರ್ಣ ಶರಣಾಗಿ, ನಮ್ಮನ್ನು ನಾವೇ ಇಲ್ಲವಾಗಿಸಿಕೊಂಡು ಅವನನ್ನು ಹೊಂದುವ ಚಿಂತನೆ ಈ ಕೃತಿಯ ಮುಖ್ಯ ತಿರುಳು. ಈ ಪುಸ್ತಕವು ಸಂಭಾಷಣೆಯ ರೂಪದಲ್ಲಿದ್ದು, ಇದರಲ್ಲಿ ಮುಖ್ಯವಾಗಿ ಮೂರು ಪಾತ್ರಗಳ ನಡುವೆ ಸಂವಾದ ನಡೆಯುತ್ತದೆ. ದಿವ್ಯ ಪ್ರೇಮವನ್ನು ಪ್ರತಿನಿಧಿಸುವ ಪ್ರೀತಿ (Lady Love/Amour), ಮನುಷ್ಯನ ತರ್ಕ ಮತ್ತು ಚರ್ಚ್‌ನ ನಿಯಮಗಳನ್ನು ಪ್ರತಿನಿಹಿಸುವ ವಿವೇಚನೆ (Reason/Raison) ಹಾಗೂ ದೇವರನ್ನು ಅರಸುತ್ತಿರುವ ಭಕ್ತರು ಅಥವಾ ಸಾಧಕರ ಆತ್ಮ (The Soul/L’Âme)ಗಳೇ ಈ ಮೂರು ಪಾತ್ರಗಳು. ಇಡೀ ಪುಸ್ತಕದಲ್ಲಿ ‘ತರ್ಕ’ ಕೇಳುವ ಪ್ರಶ್ನೆಗಳಿಗೆ ‘ಪ್ರೀತಿ’ಉತ್ತರಿಸುತ್ತಾ ಹೋಗುತ್ತದೆ. ಅಂತಿಮವಾಗಿ, ದೇವರನ್ನು ತಲುಪಲು ತರ್ಕ ಬೇಕಿಲ್ಲ, ಕೇವಲ ಪ್ರೀತಿ ಮಾತ್ರ ಸಾಕು ಎಂದು ಇದು ಸಾರುತ್ತದೆ.  

ಈ ಪ್ರೀತಿಯೂ ಕೇವಲ ದಾರಿಯಷ್ಟೆ. ಈ ದಾರಿಯ ಏಳು ಹಂತಗಳನ್ನು ಕ್ರಮಿಸಿದರೆ, ಅಂತಿಮವಾಗಿ  ಭಗವಂತನೊಡನೆ ಒಂದಾಗಬಹುದೆಂದು ಈ ಕೃತಿಯು ಹೇಳುತ್ತದೆ. ಆಜ್ಞೆಗಳ ಪಾಲನೆ, ಪುಣ್ಯ ಕಾರ್ಯಗಳ ಹಂತ, ಸದಾಚಾರ, ಪರವಶತೆ, ದೈವೇಚ್ಛೆಗೆ ಶರಣಾಗತಿ, ಲಯ ಅಥವಾ ಶೂನ್ಯತೆ, ಪರಿಪೂರ್ಣ ಮುಕ್ತಿ – ಇವೇ ಆ ಏಳು ಹಂತಗಳು. ಯಾವಾಗ ಆತ್ಮವು ತನ್ನ ಅಹಂಕಾರವನ್ನು ಬಿಟ್ಟು ಸಂಪೂರ್ಣವಾಗಿ ಶೂನ್ಯವಾಗುತ್ತದೆಯೋ (Annihilated Soul), ಆಗ ಆ ಆತ್ಮದಲ್ಲಿ ದೇವರು ನೆಲೆಸುತ್ತಾನೆ” ಅನ್ನುವುದು ಮಾರ್ಗರೆಟ್ ವಿವರಣೆ.

ಮಾರ್ಗರೆಟ್ ಪೊರೆಟೆ, ಚರ್ಚ್ ನಿಯಮಗಳನ್ನು ಒಪ್ಪದ, ಸ್ವತಂತ್ರ ಆಧ್ಯಾತ್ಮಿಕ ವಿಚಾರಗಳನ್ನು ಹೊಂದಿದ್ದ, ಕೇವಲ ಹೆಣ್ಣುಗಳೇ ಸದಸ್ಯರಾಗಿದ್ದ ಬೆಗೈನ್ ಪಂಥಕ್ಕೆ ಸೇರಿದವಳು. ಅವಳು, “ಆತ್ಮವು ದೇಭಗವಂತನ ಪ್ರೇಮದಲ್ಲಿ  ಲಯವಾದ ಮೇಲೆ ಅದಕ್ಕೆ ಯಾವ ಕಟ್ಟು- ಕಟ್ಟಳೆಗಳ ಅಗತ್ಯವೂ ಇರುವುದಿಲ್ಲ (ಎಲ್ಲ ಬಗೆಯ ಧಾರ್ಮಿಕ ನಿಯಮಗಳಿಂದ ಮುಕ್ತವಾಗುವುದು); ಪ್ರೇಮಕ್ಕೆ ಭಗವಂತನೇ ಮೂಲ ಮತ್ತು ಅವನನ್ನು ತಲುಪುವ ಏಕೈಕ ದಾರಿಯೂ ಅದೇ ಆಗಿದೆ; ಪಾಂಡಿತ್ಯಕ್ಕಿಂತ ಪ್ರೀತಿ ದೊಡ್ಡದು; ಚರ್ಚ್ ದೊಡ್ಡದಾಗಿರಬಹುದು, ಆದರೆ ಪ್ರೇಮದಿಂದ ತುಂಬಿದ ಆತ್ಮವು ಅದಕ್ಕಿಂತಲೂ ಮಿಗಿಲಾದದ್ದು” ಎಂದು ಗಟ್ಟಿ ದನಿಯಲ್ಲಿ ಘೋಷಿಸಿದಳು. ಅವಳು ಹೇಳುತ್ತಿದ್ದ ಸತ್ಯಗಳ ಹೊಡೆತಕ್ಕೆ ಚರ್ಚ್ ತತ್ತರಿಸಿಹೋಯಿತು. ಎಲ್ಲಕ್ಕಿಂತ ಹೆಚ್ಚಾಗಿ, ಒಂದು ಹೆಣ್ಣಾಗಿ ಅವಳು ದೇವರು ಮತ್ತು ಧರ್ಮದ ಬಗ್ಗೆ ಮಾತಾಡುತ್ತಾಳೆ ಅನ್ನುವುದು ಅದರ ಸಿಟ್ಟಿನ ಮೂಲವಾಗಿತ್ತು. ಸಾಲದ್ದಕ್ಕೆ, ಅವಳು ತನ್ನ ಆಧ್ಯಾತ್ಮಿಕ ಚಿಂತನೆಗಳನ್ನು ಧರ್ಮದ ಭಾಷೆಯೆಂದು ಪರಿಗಣಿತವಾಗಿದ್ದ ಲ್ಯಾಟಿನ್ ಬಿಟ್ಟು ತನ್ನ ದೇಶದ ಜನಸಾಮಾನ್ಯರ ಆಡುಭಾಷೆಯಾಗಿದ್ದ ಫ್ರೆಂಚ್ ಭಾಷೆಯಲ್ಲಿ ಬರೆದಿದ್ದಳು; ಮತ್ತು. ಅದರ ಮೂರು ಮುಖ್ಯ ಪಾತ್ರಗಳಾದ – ಪ್ರೀತಿ, ತರ್ಕ ಮತ್ತು ಆತ್ಮ – ಗಳನ್ನು ಹೆಣ್ಣಾಗಿ ಸಂಬೋಧಿಸಿದ್ದಳು. ಇದನ್ನಂತೂ ಚರ್ಚ್ ಸಹಿಸಲು ಸಾಧ್ಯವೇ ಇರಲಿಲ್ಲ. ಪುರುಷಪ್ರಧಾನ ಸಮಾಜದಲ್ಲಿ ದೇವರಿಗೆ ಸಂಬಂಧಿಸಿದ ಪುಸ್ತಕದಲ್ಲಿ ಗಹನ ಚರ್ಚೆ ನಡೆಸುವ ಪಾತ್ರಗಳನ್ನು ಹೆಣ್ಣಾಗಿಸುವುದೇ? ಹೆಣ್ಣಿಗೆ ಈ ಅಧಿಕಾರ ಕೊಡುವುದಾದರೂ ಹೇಗೆ!?

ಮಾರ್ಗರೆಟ್ ಈ ವಿರೋಧವನ್ನು ನಿರೀಕ್ಷಿಸಿದ್ದಳು. ಪುರೋಹಿತಷಾಹಿಯ ಧಮಕಿಗೆ ಅವಳು ಸೊಪ್ಪು ಹಾಕಲಿಲ್ಲ. ಜನ ಸಾಮಾನ್ಯರ ನಡುವೆ, ಅವರಲ್ಲಿ ಒಬ್ಬಳಾಗಿದ್ದುಕೊಂಡೇ ಪ್ರೇಮದ ಮಹತ್ವವನ್ನು ಸಾರಿದಳು. ಪ್ರೇಮಭಕ್ತಿಯೇ ನಿಜವಾದ ಸಾಧನೆಯೆಂದು ಬೋಧಿಸಿದಳು. ವಿಶೇಷವಾಗಿ ಹೆಣ್ಣುಮಕ್ಕಳು ಅವಳ ಮಾತುಗಳಿಂದ ಆಕರ್ಷಿತರಾದರು. ಅವರಲ್ಲಿ ಸಣ್ಣ ಮಟ್ಟದ ಬದಲಾವಣೆ ಕಾಣತೊಡಗಿತು. ಈ ಬದಲಾವಣೆ ಎಷ್ಟೇ ಸಣ್ಣದಾಗಿದ್ದರೂ ಚರ್ಚ್‌ನ ಅಡಿಪಾಯವನ್ನೇ ಅಲುಗಾಡಿಸುವಷ್ಟು ಸಮರ್ಥವಾಗಿತ್ತು.

ಮಾರ್ಗರೆಟ್ ಮಾತುಗಳು ಪುರೋಹಿತಷಾಹಿಯನ್ನು ಎಷ್ಟು ಕಂಗೆಡಿಸಿದವು ಅಂದರೆ, ಅವಳನ್ನು ಮುಗಿಸದೆ ತನಗೆ ಉಳಿಗಾಲವೇ ಇಲ್ಲವೆಂದು ಅದು ನಿರ್ಧರಿಸಿತು. 1310ರಲ್ಲಿ ಚರ್ಚ್ ಅವಳ ಕೃತಿಯನ್ನು ‘ಧರ್ಮವಿರೋಧಿ’ ಎಂದು ಘೋಷಿಸಿ ಅದನ್ನು ಸಾರ್ವಜನಿಕವಾಗಿ ಸುಟ್ಟುಹಾಕಲು ಆದೇಶಿಸಿತು. ಆ ಪುಸ್ತಕದ ಪ್ರತಿ ಯಾರ ಮನೆಯಲ್ಲಾದರೂ ಕಂಡುಬಂದರೆ, ಅವರಿಗೆ ಉಗ್ರ ಶಿಕ್ಷೆ ನೀಡುವುದಾಗಿ ಬೆದರಿಕೆ ಒಡ್ಡಿತು. ಆಷ್ಟಾದರೂ ಅದರ ಆತಂಕ ಅಳಿಯಲಿಲ್ಲ. ಕೊನೆಗೆ ಮಾರ್ಗರೆಟ್‌ಳನ್ನೇ ಸುಟ್ಟುಹಾಕಲು ಮುಂದಾಯಿತು. ಅದೇ ವರ್ಷ, ಜೂನ್ ತಿಂಗಳಲ್ಲಿ ನಡು  ರಸ್ತೆಯಲ್ಲಿ, ಜನ ಸಂದಣಿಯ ಮುಂದೆ ಅವಳನ್ನು ಕಟ್ಟಿಹಾಕಿ ಬೆಂಕಿ ಇಟ್ಟು ತನ್ನ ಭಯ ನೀಗಿಕೊಂಡಿತು.

ಅತಿ ದೊಡ್ಡ ಧಾರ್ಮಿಕ ಸಂಸ್ಥೆಯೊಂದು ಹೆಣ್ಣೊಬ್ಬಳ ವಿಚಾರಗಳಿಗೆ, ಅದೂ ಅಷ್ಟೇನೂ ಪ್ರಚಲಿತವಾಗಿಲ್ಲದ, ಪುಟ್ಟದೊಂದು ಪುಸ್ತಕರೂಪದಲ್ಲಿದ್ದ ವಿಚಾರಗಳಿಗೆ ಆ ಪಾಟಿ ಹೆದರಿತ್ತೆಂದರೆ, ಆ ಸಂಸ್ಥೆ ಎಷ್ಟು ಟೊಳ್ಳಾಗಿತ್ತು ಮತ್ತು ಆ ಹೆಣ್ಣಿನ ವಿಚಾರಗಳು ಎಷ್ಟು ಗಟ್ಟಿಯಾಗಿದ್ದವು; ಊಹಿಸಿ. ಸುಡುವ ಮುನ್ನ ನಡೆಸಲಾದ ವಿಚಾರಣೆಯ ಸಮಯದಲ್ಲಿ ಮಾರ್ಗರೆಟ್ ತನ್ನ ಪರವಾಗಿ, ತನ್ನ ವಿಚಾರವನ್ನು ಸಮರ್ಥಿಸಿಕೊಳ್ಳಲು ಒಂದು ಮಾತನ್ನೂ ಆಡಲಿಲ್ಲ. ಪ್ರತಿಯೊಂದು ಪ್ರಶ್ನೆಗೂ ಮೌನವೇ ಅವಳ ಉತ್ತರವಾಯಿತು. ಮೂರ್ಖರ ಮುಂದೆ ಮಾತು ಅರ್ಥಹೀನ ಅನ್ನುವುದು ಅವಳಿಗೆ ತಿಳಿದಿತ್ತು.

ನಂತರದಲ್ಲೂ ಮಾರ್ಗರೆಟ್ ಪುಸ್ತಕದ ಪ್ರತಿಗಳನ್ನು ಹುಡುಹುಡುಕಿ ನಾಶಪಡಿಸಲಾಯಿತು. ಆದರೆ ಅವಳ ಚಿಂತನೆಗಳಿಂದ ಪ್ರಭಾವಿತರಾಗಿದ್ದ ಕೆಲವರು, ಅದನ್ನು ಉಳಿಸಿಕೊಳ್ಳಲೇಬೇಕೆಂದು ನಿರ್ಧರಿಸಿದ್ದರು. ರಹಸ್ಯವಾಗಿ ಅವಳ ಹೆಸರಿಲ್ಲದೆ ಅದನ್ನು ಪ್ರತಿ ಮಾಡಿ ಹಂಚತೊಡಗಿದರು. ಕ್ರಮೇಣ ಲ್ಯಾಟಿನ್, ಇಟಾಲಿಯನ್ ಮತ್ತು ಇಂಗ್ಲಿಶ್ ಭಾಷೆಗಳಿಗೂ ಅನುವಾದ ಮಾಡಿಸಿದರು. ವಿಚಿತ್ರವೆಂದರೆ, ಯಾವ ಪುಸ್ತಕದ ಬರಹಕ್ಕಾಗಿ ಮಾರ್ಗರೆಟ್‌ಗೆ ಮರಣದಂಡನೆ ವಿಧಿಸಲಾಗಿತ್ತೋ, ಅದೇ ಪುಸ್ತಕವನ್ನು ಶತಮಾನ ಕಳೆಯುವ ಮೊದಲೇ ಇಂಗ್ಲೆಂಡಿನ ಚರ್ಚ್‌ಗಳಲ್ಲಿ ಓದುವ ಪದ್ಧತಿ ಶುರುವಾಗಿತ್ತು! ಆದರೆ, ಅದು ಒಬ್ಬ ಹೆಣ್ಣು ಬರೆದಿದ್ದೆಂದು ಅವರಿಗೆ ತಿಳಿದಿರಲಿಲ್ಲ. ಬಹುಶಃ ಆದ್ದರಿಂದಲೇ ಅವರಿಗದು ಒಪ್ಪಿತವಾಗಿದ್ದು. 1946ರಲ್ಲಿ ಇಟಲಿಯ ಸ್ಕಾಲರ್ ರೊಮಾನಾ ಗ್ವಾರ್ನಿಯೇರಿ, ‘ದ ಮಿರರ್ ಆಫ್ ಸಿಂಪಲ್ ಸೋಲ್ಸ್’ ಕೃತಿಯ ಕರ್ತೃ ಮಾರ್ಗರೆಟ್ ಪೊರೆಟೆ ಅನ್ನುವುದನ್ನು ಸಂಶೋಧನೆಯ ಮೂಲಕ ಸಾಬೀತುಪಡಿಸಿ, ಅವಳನ್ನು ಜಗತ್ತಿಗೆ ಪರಿಚಯಿಸಿದರು.

ಅತ್ಯುನ್ನತ ಆಧ್ಯಾತ್ಮಿಕ ಚಿಂತನೆಯೊಂದು, ಅದರ ದ್ರಷ್ಟಾರಳು ಹೆಣ್ಣು ಅನ್ನುವ ಕೇವಲ ಒಂದೇ ಒಂದು ಕಾರಣಕ್ಕಾಗಿ 600 ವರ್ಷಗಳ ಕಾಲ ಅಜ್ಞಾತವಾಸ ಅನುಭವಿಸಬೇಕಾಯಿತು. ಅನಂತರದಲ್ಲೂ ಮಾರ್ಗರೆಟ್ ಚಿಂತನೆಗಳಿಗೆ ಸಿಗಬೇಕಿದ್ದ ಮನ್ನಣೆಯಾಗಲೀ ಮಹತ್ವವಾಗಲೀ ಸಿಗಲಿಲ್ಲವೆನ್ನುವುದು ನಿಜಕ್ಕೂ ದೊಡ್ಡ ದುರಂತ.


(ಮಾರ್ಗರೆಟ್ ಪೊರೆಟಿ ಚಿಂತನೆಗಳು ಶೂನ್ಯವಾದದಂತೆಯೂ, ಅದ್ವೈತ ಚಿಂತನೆಯಂತೆಯೂ, ಪ್ರೇಮದ ಅತ್ಯುನ್ನತ ಪ್ರತಿಪಾದನೆಯಿಂದ ಸೂಫಿ ಚಿಂತನೆಯಂತೆಯೂ ಸ್ಥಾಪಿತ ಹಿತಾಸಕ್ತಿಯ ವಿರುದ್ಧದ ಬಂಡಾಯ ಗುಣದಿಂದ ಬೌದ್ಧೀಯತೆಯಂತೆಯೂ ತೋರಿತು. ಆದ್ದರಿಂದ, ‘ಶೂನ್ಯವಾದದ ಅದ್ವೈತ ಸೂಫಿ’ ಎಂದು ಕರೆದಿದ್ದೇನೆ. ಮಾರ್ಗರೆಟ್ ಪೊರೆಟಿಯ ‘ದ ಮಿರರ್ ಆಫ್ ಸೋಲ್ಸ್’ ಕೃತಿಯಿಂದ ಆಯ್ದ ಕೆಲವು ಸಂಭಾಷಣೆಗಳನ್ನು ಮುಂದಿನ ಕಂತುಗಳಲ್ಲಿ ನಿರೀಕ್ಷಿಸಬಹುದು.)

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.