ಜಾವೇದ್ ಸಾಬ್ ಪ್ರೇಮವನ್ನ ಇಬ್ಬರು ಮಹಾನ್ ಕವಿಗಳು ಎರಡು ವಿರುದ್ಧ ದಿಕ್ಕಿನಿಂದ ವ್ಯಾಖ್ಯಾನ ಮಾಡಿದ್ದು ಹೀಗೆ… । ಚಿದಂಬರ ನರೇಂದ್ರ
ಗಾಲೀಬ್ ಹೇಳುತ್ತಾನೆ:
ಇಷ್ಕ್ ನೇ ಗಾಲೀಬ್ ನಿಕಮ್ಮಾ ಕರ್ ದಿಯಾ
ವರನಾ ಹಂ ಭೀ ಆದ್ಮೀ ಥೇ ಕಾಮ್ ಕೇ…
ಜಿಗರ್ ಮುರಾದಾಬಾದಿಯವರ ಪದ್ಯ ಹೇಳುತ್ತದೆ:
ಇಷ್ಕ್ ಜಬ್ ತಕ್ ನ ಕರ್ ಸಕೇ ರುಸ್ವಾ
ಆದ್ಮಿ ಕಾಮ್ ಕಾ ನಹೀ ಹೋತಾ…
ಒಬ್ಬರು ಪ್ರೇಮವನ್ನ ರೋಗ ಎಂದು ಹೇಳಿದರೆ ಇನ್ನೊಬ್ಬರು ಔಷಧಿ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ನೀವು ಏನು ಹೇಳುತ್ತೀರಿ ? ಸಂದರ್ಶಕಿಯೊಬ್ಬರು ಕವಿ ಜಾವೇದ್ ಅಖ್ತರ್ ಅವರನ್ನ ಪ್ರಶ್ನೆ ಮಾಡುತ್ತಾರೆ.
ಜಾವೇದ್ ಉತ್ತರಿಸುತ್ತಾರೆ:
ನಿಮ್ಮ ಪ್ರಶ್ನೆ ಕೇಳುವ ಧಾಟಿ ಹೇಗಿದೆಯೆಂದರೆ, ಮಕ್ಕಳು ತಮ್ಮೊಳಗೆ ಜಗಳ ಆಡಿಕೊಂಡಾಗ ತಮ್ಮ ಪರಿಚಯದ ಬಲಿಷ್ಠ ವ್ಯಕ್ತಿಯೊಬ್ಬನನ್ನು ತಮ್ಮ ಪರವಾಗಿ ಜಗಳಕ್ಕೆ ಕರೆದುಕೊಂಡು ಹೋಗುತ್ತವೆಯಲ್ಲ ಹಾಗೆ…. ಗಾಲೀಬ್ ಮತ್ತು ಜಿಗರ್ ಕಾವ್ಯ ಲೋಕದ ದಾದಾ ಗಳು.
ಅದು ಬಹಳ ಪುರುಸೊತ್ತಿನ ಕಾಲವಾಗಿತ್ತು. ಪ್ರೇಮದಲ್ಲಿ ನಾಶವಾಗೋದು ಆಗ ಅಂಥ ದೊಡ್ಡ ವಿಷಯವೇನಾಗಿರಲಿಲ್ಲ. ಕವಿಗಳಿಗೆ ಸಾಕಷ್ಟು ಹೊಲ ಮನೆ ಇತ್ತು, ಜಮೀನ್ದಾರೀ ಇತ್ತು, ಅವರು ಪ್ರೇಮದಲ್ಲಿ ಬರಬಾದ್ ಆದರೂ ಅವರ ಜಮೀನ್ದಾರಿಕೆಗೆ ಯಾವ ತೊಂದರೆ ಇರುತ್ತಿರಲಿಲ್ಲ. ಆದರೆ ಈಗಿನ ಕಾಲದಲ್ಲಿ ಪ್ರೇಮದಲ್ಲಿ ಬರಬಾದ್ ಆಗೋದನ್ನ ನಾವು afford ಮಾಡೋದು ಕಷ್ಟ, ಇದು ನಮಗೆ ಬಹಳ ದುಬಾರಿಯಾಗಿ ಪರಿಣಮಿಸಬಹುದು. ಮತ್ತೊಂದು ವಿಷಯ, ಪ್ರೇಮ ಬದುಕಿನಲ್ಲಿ ಒಮ್ಮೆ ಮಾತ್ರ ಆಗಬೇಕೆಂದೇನಿಲ್ಲ. ನಿಮಗೆ ಒಬ್ಬ ವ್ಯಕ್ತಿಯ ಜೊತೆ ಪ್ರೇಮ ಇದೆ, ಗೆಳೆತನ ಇದೆ, ಆಗರೆ ಏನೋ ಒಂದು ವಿಷಯಕ್ಕೆ ನೀವು ಅವರಿಂದ ದೂರ ಆಗುವಿರಿ, ಅಥವಾ ಅವರು ನಿಮ್ಮಿಂದ ದೂರ ಆಗಬಹುದು. ಆದರೆ ಇಷ್ಟು ಆದ ಮಾತ್ರಕ್ಕೆ ಮುಂದೆ ನೀವು ಯಾರ ಜೊತೆ ಪ್ರೇಮ, ಗೆಳೆತನ ಮಾಡುವುದೇ ಇಲ್ಲ, ಅಥವಾ ಮಾಡಲೇಬಾರದು ಎನ್ನುವುದು ಎಂಥ ಮೂರ್ಖತನ. ಪ್ರೇಮವನ್ನ ಹೀಗೆ ಕಟ್ಟಿ ಹಾಕುವುದು ಅಸಾಧ್ಯ. ನನಗೆ ನನ್ನ ಅಪ್ಪ ಜಾನ್ ನಿಸಾರ್ ಅಖ್ತರ್ ರ ಒಂದು ಪದ್ಯದ ಸಾಲು ನೆನಪಾಗುತ್ತಿದೆ;
ಯೇ ಹಂ ಸೇ ನ ಹೋಗಾ ಕಿಸೀ ಏಕ್ ಕೋ ಚಾಹೇ
ಏ ಇಷ್ಕ್ , ಹಮಾರೀ ನ ತೆರೇ ಸಾಥ್ ನಿಭೇಗಿ …
ಪ್ರೇಮ ಬಹಳ ಸುಂದರವಾದ ಭಾವನೆ. ಮತ್ತು ಪ್ರೀತಿ, ಖುಶಿಯ ಒಂದು ತೀವ್ರವಾದ ಮತ್ತು ಆಳವಾದ ಅಭಿವ್ಯಕ್ತಿ. ಹಾಗೆಯೇ ದ್ವೇಷ ಬಹಳ ಕೆಟ್ಟದಾದ ಭಾವ. ಮತ್ತು ಹಿಂಸೆ ಹಾಗು ಮತಾಂಧತೆ ಇದರ ತೀವ್ರವಾದ ಅಭಿವ್ಯಕ್ತಿಗಳು. ನೀವು ಪ್ರೇಮವನ್ನು ಆಯ್ಕೆ ಮಾಡಿಕೊಳ್ಳುತ್ತೀರೋ ದ್ವೇಷದ ಜೊತೆ ಕೈಗೂಡಿಸುತ್ತೀರೋ ಇದು ನಿಮಗೆ ಸಂಬಂಧಪಟ್ಟದ್ದು. ಒಂದು ಮಾತಂತೂ ಖಂಡಿತ, ಜಗತ್ತಿನಲ್ಲಿ ಎಷ್ಚೆಲ್ಲ ಕಾವ್ಯ ಇದೆಯೋ ಅಗೆಲ್ಲವೂ ಪ್ರೇಮ ಮಾಡುವವರಿಂದ ಮೂಡಿ ಬಂದದ್ದು. ದ್ವೇಷ ಮಾಡುವವರೇನಿದ್ದರೂ ಅಧಿಕಾರ ಚಲಾಯಿಸಬಹುದಷ್ಟೇ.

