ನಿಜವಾದ ಜ್ಞಾನ ಇರುವುದು ಕಣ್ಣಿಗೆ ರಾಚುವ ಮಾಹಿತಿಗಳಲ್ಲಿ ಅಲ್ಲ, ಅದು ಇರುವುದು ಕಣ್ಣಿಗೆ ಕಾಣದ ಸತ್ಯದ ಅರಿವಿನಲ್ಲಿ. ನಿಜವಾದ ಬದುಕು ಇರುವುದು ಭೌತಿಕ ಸುಖಗಳು ಅಥವಾ ಐಹಿಕ ವಸ್ತುಗಳಲ್ಲಿ ಅಲ್ಲ. ಅದು ಇರುವುದು ಕಣ್ಣಿಗೆ ಕಾಣದ ಶಾಂತಿ ಮತ್ತು ಸಂತೋಷದಲ್ಲಿ. ಉದ್ಧಾಲಕ ಆರುಣಿ ಹೇಳಿದ್ದೂ ಇದನ್ನೇ. ಲಾವೋ ಜಿ ಹೇಳಿದ್ದು ಇದನ್ನೇ. ಆಧುನಿಕ ವಿಜ್ಞಾನಿಗಳ ಕಾಣ್ಕೆಯಿಂದ ನಾವು ಕಲಿಯಬೇಕಿರುವುದೂ ಇದನ್ನೇ… । ಚೇತನಾ ತೀರ್ಥಹಳ್ಳಿ
ಛಾಂದೋಗ್ಯ ಉಪನಿಷತ್ತಿನಲ್ಲಿ ಶ್ವೇತಕೇತು ಮತ್ತು ಉದ್ದಾಲಕ ಆರುಣಿಯ ಕತೆ ಬಹಳ ಆಸಕ್ತಿಕರವಾದ್ದು.
ಶ್ವೇತಕೇತು ಹನ್ನೆರಡು ವರ್ಷಗಳ ಕಾಲ ಗುರುಕುಲದಲ್ಲಿ ವೇದ-ಶಾಸ್ತ್ರಗಳನ್ನು ಅಭ್ಯಾಸ ಮಾಡಿ ಮನೆಗೆ ಮರಳುತ್ತಾನೆ. ತಾನು ಮಹಾನ್ ಪಂಡಿತನೆಂಬ ಅಹಂಕಾರ ಅವನ ನಡವಳಿಕೆಯಲ್ಲಿ ಎದ್ದು ಕಾಣುತ್ತಿರುತ್ತದೆ. ಇದನ್ನು ಗಮನಿಸಿದ ತಂದೆ ಉದ್ದಾಲಕ ಆರುಣಿ, “ಮಗನೇ, ಯಾವುದನ್ನು ಹೊಂದುವುದರಿಂದ ಕೇಳದ್ದು ಕೇಳಿದಂತಾಗುತ್ತದೆಯೋ, ಅರಿಯದ್ದು ಅರಿತಂತಾಗುತ್ತದೆಯೋ ಮತ್ತು ತಿಳಿಯದ್ದು ತಿಳಿದಂತಾಗುತ್ತದೆಯೋ ಆ ಜ್ಞಾನವನ್ನು ನೀನು ಪಡೆದಿದ್ದೀಯಾ?” ಎಂಬ ಪ್ರಶ್ನೆ ಮುಂದಿಡುತ್ತಾನೆ.
ಶ್ವೇತಕೇತು ತಾನು ಕಲಿತದ್ದೆಲ್ಲ ಎಷ್ಟು ನೆನಪಿಸಿಕೊಂಡರೂ ಉತ್ತರ ಸಿಗದೆ ತಬ್ಬಿಬ್ಬಾಗುತ್ತಾನೆ. ತನ್ನ ಕಲಿಕೆಯಲ್ಲಿ ಕೊರತೆ ಇದೆ ಎಂದು ತಂದೆ ಎದುರು ವಿನಮ್ರನಾಗಿ ಒಪ್ಪಿಕೊಳ್ಳುತ್ತಾನೆ. ಆಮೇಲೆ ಸ್ವತಃ ಉದ್ಧಾಲಕ ಆರುಣಿ ತನ್ನ ಮಗನಿಗೆ ಪಾಠ ಮಾಡಲು ಮುಂದಾಗುತ್ತಾನೆ. ಅದಕ್ಕಾಗಿ ಮಗನಿಗೆ ಒಂದು ಆಲದ ಹಣ್ಣನ್ನು ತರಲು ಹೇಳುತ್ತಾನೆ.
“ಮಗನೇ, ಹಣ್ಣನ್ನು ಬಿಡಿಸಿ ಅದರೊಳಗಿನ ಪುಟ್ಟ ಬೀಜ ಸೀಳು”
ಶ್ವೇತಕೇತು ಹಾಗೇ ಮಾಡುತ್ತಾನೆ.
“ಈಗೇನು ಕಾಣುತ್ತಿದೆ ಹೇಳು”
“ಏನೂ ಕಾಣುತ್ತಿಲ್ಲ ಅಪ್ಪ, ಅಲ್ಲಿ ಏನೂ ಇಲ್ಲ”
“ಮಗನೇ, ಅಲ್ಲಿ ಬೃಹತ್ ಆಲದಮರವೇ ಅಡಗಿದೆ. ಕಣ್ಣಿಗೆ ಕಾಣದ ಸೂಕ್ಷ್ಮದಲ್ಲಿ, ಏನೂ ಇಲ್ಲದ ಶೂನ್ಯದಲ್ಲಿ ಹೊಸತೊಂದು ಆಲದ ಮರದ ಹುಟ್ಟು ಅಡಗಿದೆ. ಇದನ್ನು ನಾವು ‘ಸತ್’ ಅನ್ನುತ್ತೇವೆ” ಆರುಣಿ ವಿವರಿಸುತ್ತಾನೆ. ಆಮೇಲೆ ಮಗನಿಗೆ ನಿರ್ವಾತ ಅಥವಾ ಶೂನ್ಯವೆಂಬುದು ಅನಂತ ಸಾಧ್ಯತೆಗಳ ಅಗೋಚರ ದಿಬ್ಬವೆಂದು ಮನದಟ್ಟು ಮಾಡಿಸುತ್ತಾನೆ.
~
ನಾವು ಕಣ್ಣಿಗೆ ಕಾಣುವುದಷ್ಟೇ ಸತ್ಯ ಅಂದುಕೊಳ್ಳುತ್ತೇವೆ. ಕಣ್ಣಿಗೆ ಕಾಣುವ ವಸ್ತುಗಳು ನಮ್ಮ ದೃಷ್ಟಿ ಸಾಮರ್ಥ್ಯವನ್ನು ಅವಲಂಬಿಸಿರುವುದರಿಂದ, ನಾವು ಕಂಡದ್ದೆಲ್ಲ ಅದು ಕಂಡ ಹಾಗೆ ಇರುವುದಿಲ್ಲ. ಆದ್ದರಿಂದಲೇ, ಯಾವುದು ಕಣ್ಣಿಗೆ ಕಾಣುವುದಿಲ್ಲವೋ ಅದು ಸತ್ ಅಥವಾ ಸತ್ಯವಾಗುತ್ತದೆ, ಅದೇ ಸತ್ವವೂ ಆಗುತ್ತದೆ. ನಮ್ಮ ಪ್ರಯೋಜನಕ್ಕೆ ಬರುವುದು ಆ ಸತ್ವವೇ. ಸೃಷ್ಟಿ ಸಾಧ್ಯವಾಗುವುದು, ಸೃಷ್ಟಿಯ ನಂತರ ಅಸ್ತಿತ್ವದ ಚಲನೆ ಸಾಧ್ಯವಾಗುವುದು ಅಗೋಚರ ಸತ್‌ನಿಂದಲೇ.
ಇದನ್ನೇ, “ಮಣ್ಣಿನಿಂದ ಮಡಿಕೆ ಮಾಡುತ್ತಾರೆ, ಆದರೆ ನೀರನ್ನು ಹಿಡಿದಿಡುವುದು ಅದರೊಳಗಿನ ಶೂನ್ಯ” ಎಂದು ಸರಳವಾಗಿ ವಿವರಿಸುತ್ತಾನೆ ದಾವ್ ದಾರ್ಶನಿಕ ಲಾವೊ ಜಿ. ನಾವು ಗೋಡೆಗಳನ್ನು ಎಬ್ಬಿಸಿ ಮನೆ ಕಟ್ಟಿಕೊಳ್ಳುತ್ತೇವೆ, ವಾಸಿಸುವುದು ಅದರೊಳಗಿನ ಖಾಲಿ ಜಾಗದಲ್ಲಿ. ಕಣ್ಣಿಗೆ ಕಾಣುವ ಗೋಡೆಗಳಲ್ಲಿ ನಾವು ವಾಸ ಮಾಡಲು ಬರುವುದಿಲ್ಲ, ನಮ್ಮ ಪ್ರಯೋಜನಕ್ಕೆ ಬರುವುದು ಕಣ್ಣಿಗೆ ಕಾಣಿಸದ – ಗೋಡೆಗಳ ನಡುವಿನ – ನಿರ್ವಾತ ಮಾತ್ರ.
ಬುದ್ಧನ ಬೋಧನೆಯಲ್ಲಿ ‘ಶೂನ್ಯ’ ಎಂದರೆ ‘ಏನೂ ಇಲ್ಲ’ ಎಂದಲ್ಲ. ಅದರ ಅರ್ಥ ‘ಪೂರ್ಣ’ ಎಂದು. ಶೂನ್ಯವು ಎಲ್ಲ ಸಾಧ್ಯತೆಗಳ ತಾಯಿ. ಆಲದ ಬೀಜದಲ್ಲಿ ಏನೂ ಕಾಣಿಸುವುದಿಲ್ಲ ಎಂದರೆ, ಅಲ್ಲಿ ಎಲ್ಲವೂ ಆಗಬಲ್ಲ ಸಾಮರ್ಥ್ಯ ಅಡಗಿದೆ ಎಂದರ್ಥ.
ವಿಜ್ಞಾನದ ಭಾಷೆಯಲ್ಲಿ ಹೇಳುವುದಾದರೆ: ಪರಮಾಣುವಿನ ಶೇ. 99.9999999% ಭಾಗ ಕೇವಲ ಶೂನ್ಯ ಅನ್ನಲಾಗುತ್ತದೆ. ಅಂದರೆ, ಈ ಜಗತ್ತಿನಲ್ಲಿರುವ ಎಲ್ಲ ಮನುಷ್ಯರ ದೇಹದೊಳಗಿನ ಈ ‘ಖಾಲಿ ಜಾಗ’ವನ್ನು ತೆಗೆದುಬಿಟ್ಟರೆ, ಇಡೀ ಮಾನವ ಕುಲವನ್ನೇ ಒಂದು ಸಣ್ಣ ‘ಸೇಬಿನ ಹಣ್ಣಿನ’ಲ್ಲಿ ಅಡಗಿಸಬಹುದಂತೆ!
ಕ್ವಾಂಟಮ್ ಫಿಸಿಕ್ಸ್ ಪ್ರಕಾರ ಈ ಶೂನ್ಯವೆಂಬುದು ಶೂನ್ಯವಲ್ಲ; ಅದು ಕ್ವಾಂಟಮ್ ಫೀಲ್ಡ್. “ಅಲ್ಲಿ ದ್ರವ್ಯ (Matter) ಇಲ್ಲದಿರಬಹುದು, ಆದರೆ ಅನಂತವಾದ ಕಂಪನಗಳು (Vibrations) ಇರುತ್ತವೆ” ಅನ್ನುತ್ತಾರೆ ವಿಜ್ಞಾನಿಗಳು.
ಹಾಗೇ ನಮ್ಮ ಜ್ಞಾನವೂ, ನಮ್ಮ ಬದುಕೂ. ನಿಜವಾದ ಜ್ಞಾನ ಇರುವುದು ಕಣ್ಣಿಗೆ ರಾಚುವ ಮಾಹಿತಿಗಳಲ್ಲಿ ಅಲ್ಲ, ಅದು ಇರುವುದು ಕಣ್ಣಿಗೆ ಕಾಣದ ಸತ್ಯದ ಅರಿವಿನಲ್ಲಿ. ನಿಜವಾದ ಬದುಕು ಇರುವುದು ಭೌತಿಕ ಸುಖಗಳು ಅಥವಾ ಐಹಿಕ ವಸ್ತುಗಳಲ್ಲಿ ಅಲ್ಲ. ಅದು ಇರುವುದು ಕಣ್ಣಿಗೆ ಕಾಣದ ಶಾಂತಿ ಮತ್ತು ಸಂತೋಷದಲ್ಲಿ. ಹಣ, ಅಂತಸ್ತು – ಇವೆಲ್ಲ ಆಲದ ಮರದ ಎಲೆಗಳಿದ್ದಂತೆ. ಇವು ಸುಂದರವಾಗಿ ಕಾಣುತ್ತವೆ ನಿಜ, ಆದರೆ ಇವುಗಳ ಇರುವಿಕೆಯ ಮೂಲ ಸ್ರೋತ ಅಡಗಿರುವುದು ಬೀಜದೊಳಗಿನ ಖಾಲಿಯಲ್ಲಿ, ಅಗೋಚರ ಸೂಕ್ಷ್ಮ ಚೈತನ್ಯದಲ್ಲಿ. ಅಂದರೆ; ನಮ್ಮ ದೇಹದೊಳಗಿನ ಅಗೋಚರ ಆತ್ಮದಲ್ಲಿ, ಅದರ ಸೂಕ್ಷ್ಮ ಚೈತನ್ಯದಲ್ಲಿ.
ಉದ್ಧಾಲಕ ಆರುಣಿ ಹೇಳಿದ್ದೂ ಇದನ್ನೇ. ಲಾವೋ ಜಿ ಹೇಳಿದ್ದು ಇದನ್ನೇ. ಆಧುನಿಕ ವಿಜ್ಞಾನಿಗಳ ಕಾಣ್ಕೆಯಿಂದ ನಾವು ಕಲಿಯಬೇಕಿರುವುದೂ ಇದನ್ನೇ.

