ಶೇಖ್ ಸನ್ನಾನನ ಕತೆಯಲ್ಲಿ ಬದುಕನ್ನು ಕನಸಿನಂತೆಯೂ ನಾರದನ ಕತೆಯಲ್ಲಿ ಮಾಯೆಯಂತೆಯೂ ತೊರಿಸಲಾಗಿದೆ. ಕೇವಲ ಒಂದು ಕನಸಿನಂಥ, ಮಿಥ್ಯಾ ಮಾಯೆಯಾದ ಈ ಬದುಕಿನ ಆಗುಹೋಗುಗಳಿಗೆ ಆತುಕೊಳ್ಳುವ ಮೂರ್ಖರು ನಾವಾಗಿದ್ದೇವೆ. ನಾವು ನಮ್ಮ ದೇಹವನ್ನು ಜೀವಿತದ ಅಗತ್ಯಕ್ಕೆ ಸೀಮಿತಗೊಳಿಸಿದರೆ ಮಾತ್ರ, ಅಹಂಕಾರ ಮಿತಿ ಮೀರದಂತೆ ಕಾಯಬಹುದು. ಅದು ಬಹಳ ಕಷ್ಟ! ~ ಚೇತನಾ ತೀರ್ಥಹಳ್ಳಿ
ನಮಗೆ ನಮ್ಮ ಮಿತಿಯನ್ನೇ ಮರೆಸುವಂಥ ಭ್ರಮೆ ಆಚರಿಸುವುದು ಯಾವಾಗ? ಅಹಂಕಾರದ ಕೈ ಮೇಲಾದಾಗ. ನಮ್ಮ ನೈಜ ಅಸ್ತಿತ್ವ (ಆತ್ಮ) ತನ್ನನ್ನು ದೇಹದೊಡನೆ ಗುರುತಿಸಿಕೊಳ್ಳೋದು, ಹೆಸರಿನೊಡನೆ, ಸ್ಥಾನದೊಡನೆ, ದೇಹದ ಸಾಧನೆಗಳೊಡನೆ ಗುರುತಿಸಿಕೊಳ್ಳೋದು ಸಹಜ. ಲೌಕಿಕದಲ್ಲಿ ಬಾಳಲಿಕ್ಕೆ ಇದು ಅಗತ್ಯ ಕೂಡ. ಆದರೆ, ಈ ಗುರುತಿಸಿಕೊಳ್ಳುವಿಕೆ ಒಂದು ವ್ಯಸನವಾದಾಗ, ಅಂಕೆತಪ್ಪಿ ಈ ದೇಹವೇ ನಾನೆಂದು ಬಗೆಯತೊಡಗಿದಾಗ ಅಹಂಕಾರದ ಕೈ ಮೇಲಾಗುತ್ತೆ. ಈ ಅಹಂಕಾರ ನಮ್ಮನ್ನು ಪ್ರತಿಯೊಂದು ಸೋಲಿಗೂ ಹೊಡೆತಕ್ಕೂ ನಷ್ಟಕ್ಕೂ ಹತಾಶೆಯಿಂದ ಪ್ರತಿಕ್ರಿಯಿಸುವಂತೆ ಮಾಡುತ್ತೆ. ಈ ಪ್ರತಿಕ್ರಿಯೆ ಕೆಲವೊಮ್ಮೆ ಸಿಟ್ಟಿನ ರೂಪದಲ್ಲಿ ಹೊರಬಿದ್ದರೆ, ಕೆಲವೊಮ್ಮೆ ದುಃಖದ ರೂಪದಲ್ಲಿ ಹೊರಬೀಳುತ್ತೆ. ಇನ್ನು ಕೆಲವೊಮ್ಮೆ, ಕೆರಳಿ ದುಷ್ಟತನವಾಗಿ ರೂಪಾಂತರವಾಗುತ್ತೆ.
ಅತ್ತಾರ್ ನಿಶಾಪುರಿ ಎಂದೇ ಜನಪ್ರಿಯರಾದ ಸೂಫಿ ಕವಿ ಫರೀದ್ ಉದ್ದೀನ್ ಅತ್ತಾರರ ಕತೆಯೊಂದು ಹೀಗಿದೆ;
ಮೆಕ್ಕಾದಲ್ಲಿ ಶೇಖ್ ಸನ್ನಾನ್ ಹೆಸರಿನ ಧರ್ಮಬೋಧಕನೊಬ್ಬನಿದ್ದ. ಐವತ್ತು ವರ್ಷಗಳಿಗೂ ಹೆಚ್ಚು ಕಾಲ ಸಾಧನೆ ನಡೆಸಿ ಜ್ಞಾನ ಸಂಪಾದಿಸಿದ್ದ ಅವನಿಗೆ ನೂರಾರು ಶಿಷ್ಯರಿದ್ದರು. ಕಾಲ ಕ್ರಮೇಣ ಸನ್ನಾನ್ ತನ್ನ ಶಿಷ್ಯಂದಿರ ಸಂಖ್ಯೆಯ ಬಗ್ಗೆ ಹೆಮ್ಮೆ ಪಡತೊಡಗಿದ. ಇಷ್ಟೊಂದು ಜನ ನನ್ನನ್ನು ಹುಡುಕಿ ಬರುತ್ತಾರೆಂದರೆ, ನಾನು ನಿಜಕ್ಕೂ ಸಾಧಕನೇ ಅನ್ನುವ ಭಾವನೆ ಅವನ ತಲೆಯೇರಿ ಕುಳಿತಿತು.
ಒಮ್ಮೆ ಸನ್ನಾನ್‌ಗೆ ತಾನು ರೋಮ್ ನಗರದಲ್ಲಿ ವಿಗ್ರಹವೊಂದನ್ನು ಆರಾಧಿಸುತ್ತಿರುವಂತೆ ಕನಸು ಬಿತ್ತು. ಇದರ ಅರ್ಥವೇನೆಂದು ತಿಳಿಯುವ ಕುತೂಹಲದಿಂದ ಅವನು ರೋಮ್‌ಗೆ ಹೋದ. ಅಲ್ಲಿ ಒಬ್ಬ ಕ್ರಿಶ್ಚಿಯನ್ ಯುವತಿಯನ್ನು ಕಂಡು ಮೋಹಗೊಂಡ. ಅವಳನ್ನು ಹೊಂದುವ ಸಲುವಾಗಿ ತನ್ನೆಲ್ಲ ಪವಿತ್ರ ನಿಯಮಗಳನ್ನು ಬದಿಗೊತ್ತಿದ. ಅವಳಿಗಾಗಿ ತನ್ನ ಪವಿತ್ರ ಗ್ರಂಥವನ್ನು ಸುಟ್ಟ. ಮದ್ಯಪಾನ ಮಾಡಿದ. ಕೊನೆಗೆ ಅವಳ ಅಣತಿಯಂತಿ ಹಂದಿ ಮೇಯಿಸುವ ಕೆಲಸವನ್ನೂ ಮಾಡಿದ. ಅವನನ್ನು ಹಿಂಬಾಲಿಸಿದ್ದ ಶಿಷ್ಯರೆಲ್ಲ ಅವನಿಂದ ದೂರವಾದರು.
ಒಂದು ದಿನ ಸನ್ನಾನ್ ಹಂದಿ ಮೇಯಿಸಿಕೊಂಡು ಮರಳಿದಾಗ ಆ ಕ್ರಿಶ್ಚಿಯನ್ ಯುವತಿ ಇದ್ದ ಮನೆ ಕಾಣೆಯಾಗಿತ್ತು. ಸುತ್ತಮುತ್ತಲೆಲ್ಲ ಬದಲಾಗಿತ್ತು. ಅವನು ನಿಂತ ನೆಲ ಮೆಕ್ಕಾ ಆಗಿತ್ತು! ಹಿಂತಿರುಗಿ ನೋಡಿದರೆ ಹಂದಿಗಳೂ ನಾಪತ್ತೆ. ದೂರದಲ್ಲೊಬ್ಬ ನಿಷ್ಠಾವಂತ ಶಿಷ್ಯ ಶೇಖ್ ಸನ್ನಾನ್ ಒಳಿತಿಗಾಗಿ ಪ್ರಾರ್ಥಿಸುತ್ತಿರುವುದು ಕಿವಿಗೆ ಬಿತ್ತು. ಅದನ್ನು ಕೇಳಿದ ಕೂಡಲೇ ಸನ್ನಾನ್ ಮೈಯಲ್ಲಿ ಮಿಂಚು ಹರಿದಂತಾಯಿತು. ತನ್ನ ತಪ್ಪಿನ ಅರಿವಾಗಿ, ತನ್ನಲ್ಲಿ ಮೊಳೆತಿದ್ದ ಅಹಂಕಾರವನ್ನು ಪ್ರಜ್ಞಾಪೂರ್ವಕವಾಗಿ ನಿವಾರಿಸಿಕೊಂಡ. ಇನ್ನೆಂದೂ ಅದು ಹತ್ತಿರ ಸುಳಿಯಲು ಬಿಡಲಿಲ್ಲ.
~
ಇಂಥದೇ ಒಂದು ಹಿಂದೂ ಪುರಾಣ ಕತೆ ಇದೆ.
ಒಮ್ಮೆ ನಾರದನಿಗೆ, ‘ನಾನೂ ಕಾಮದೇವನನ್ನು ಗೆದ್ದಿದ್ದೀನಿ, ನಾನು ಮಹಾದೇವ ಶಿವನಿಗೆ ಸರಿಸಮ’ ಅನಿಸಿತು. ಬರೀ ಅನಿಸಿದ್ದಷ್ಟೇ ಅಲ್ಲ, ತನಗೂ ತ್ರಿಮೂರ್ತಿಗಳಲ್ಲಿ ಒಂದು ಸ್ಥಾನ ಕೊಡಬೇಕು, ನನ್ನನ್ನೂ ಶಿವನಿಗೆ ಸಮನಾಗಿ ಕಾಣಬೇಕು ಅನ್ನುವ ನಿರೀಕ್ಷೆಗಳೂ ಹುಟ್ಟಿಕೊಂಡವು. ಅವನ ಈ ಮಾತನ್ನು ಯಾರೂ ಒಪ್ಪದೇ ಹೋದಾಗ, ‘ನನ್ನನ್ನು ಏನಂದುಕೊಂಡಿದ್ದೀರಿ, ನಾನು ಕಾಮವನ್ನು ಗೆದ್ದವನು, ಮಾಯೆಯನ್ನು ಗೆದ್ದವನು’ ಎಂದು ಅಹಂಕಾರ ತೋರಿದ. ಅದು ಮಿತಿಮೀರಿದಾಗ ನಾರಾಯಣ ಹಸ್ತಕ್ಷೇಪ ಮಾಡಲೇಬೇಕಾಯ್ತು.
ಒಮ್ಮೆ ಲೋಕಸಂಚಾರ ಹೊರಟಿದ್ದ ನಾರಾಯಣ ನಾರದನಿಗೆ ತನ್ನ ಜೊತೆ ಬರುವಂತೆ ಹೇಳಿದ. ಒಂದಷ್ಟು ದೂರ ಹೋದಮೇಲೆ ನಾರಾಯಣ, “ನಾರದಾ, ನನಗೆ ಬಾಯಾರಿಕೆಯಾಗಿದೆ… ಸ್ವಲ್ಪ ನೀರು ತಾ” ಅಂದ. ಸರಿ ಎಂದು ನಾರದ ಹೊರಟ.
ಸ್ವಲ್ಪ ದೂರದಲ್ಲಿ ಒಂದು ಹಳ್ಳಿ ಇತ್ತು. ನಾರದ ನೀರಿಗಾಗಿ ಒಂದು ಮನೆಯ ಬಾಗಿಲನ್ನು ತಟ್ಟಿದ. ಸುಂದರ ಯುವತಿಯೊಬ್ಬಳು ಬಾಗಿಲು ತೆರೆದಳು. ಅವಳ ರೂಪ ಕಂಡು ನಾರದನಿಗೆ ಜಗತ್ತೇ ಮರೆತಂತಾಯ್ತು. ಅವಳ ಪ್ರೇಮಪಾಶಕ್ಕೆ ಸಿಲುಕಿ ಅವಳನ್ನು ಪಡೆಯಲು ಹಂಬಲಿಸಿದ. ಅವಳ ತಂದೆಯನ್ನು ಒಪ್ಪಿಸಿ, ಮದುವೆಯಾಗೇಬಿಟ್ಟ. ಹೀಗೆ ಶುರುವಾದ ನಾರದನ ಸಂಸಾರ ಸುಖವಾಗಿ ಸಾಗಿತು. ಕ್ರಮೇಣ ಮಕ್ಕಳೂ ಆದವು. ಹೀಗೆ ಹನ್ನೆರಡು ವರುಷಗಳು ಕಳೆದುವು. ಮಾವ ಸತ್ತುಹೋದ. ಅವನ ಆಸ್ತಿ ಇವನ ಪಾಲಿಗೆ ಬಂತು. ನಾರದ ಸಂಸಾರ ಸುಖದಲ್ಲಿ ಸಂಪೂರ್ಣ ಮುಳುಗಿಹೋದ.
ಹೀಗಿರುತ್ತ, ಒಮ್ಮೆ ದಿನಗಟ್ಟಲೆ ಮಳೆ ಹೊಳೆ ಉಕ್ಕಿ ಹರಿಯಿತು. ನೆರೆ ಬಿದ್ದು ಮನೆ ಮಠಗಳು ಮುಳುಗಿಹೋದವು. ನಾರದನ ಮನೆ, ಸ್ಥಿರ – ಚರಾಸ್ತಿಗಳೆಲ್ಲವೂ ನೀರುಪಾಲಾದವು. ಅವನು ತನ್ನ ಸಂಸಾರ ನೆರೆಯಲ್ಲಿ ಕೊಚ್ಚಿಹೋಗದಂತೆ ಕಾಪಾಡಲು ಹೆಣಗಿದ. ಒಂದು ತೆಪ್ಪ ಸಿದ್ಧಪಡಿಸಿ, ಅದರಲ್ಲಿ ತನ್ನ ಹೆಂಡತಿ – ಮಕ್ಕಳನ್ನೆಲ್ಲ ಸುರಕ್ಷಿತವಾಗಿ ದಾಟಿಸಲು ಒದ್ದಾಡಿದ. ದೊಡ್ಡದೊಂದು ಸುಳಿಯೆದ್ದು ತೆಪ್ಪವನ್ನೂ ಅದರ ಮೇಲಿದ್ದವರನ್ನೂ ನುಂಗಿಹಾಕಿತು. ನಾರದ ಬಂಡೆಗೆ ತಗುಲಿ ದಡಕ್ಕೆ ಹೋಗಿ ಬಿದ್ದ. ತನ್ನೆದುರೇ ಕೊಚ್ಚಿಕೊಂಡು ಹೋದ ಹೆಂದತಿಯನ್ನೂ ಮಕ್ಕಳನ್ನೂ ನೆನೆದು ಜೋರಾಗಿ ಅಳತೊಡಗಿದ. ಅವನ ಹಿಂದೆ ಮೆಲುದನಿಯೊಂದು, “ನಾರದಾ, ಗಂಟಲು ಒಣಗ್ತಿದೆ, ನೀರೆಲ್ಲಿ!?” ಎಂದು ಪಿಸುಗುಟ್ಟಿತು. ಅವನು ಬೆಚ್ಚಿ ಹಿಂತಿರುಗಿದರೆ, ನಾರಾಯಣ ನಗುತ್ತ ನಿಂತಿದ್ದ! ಎದುರಿದ್ದ ಹೊಳೆ, ನೆರೆ, ಹಳ್ಳಿ ಎಲ್ಲವೂ ಮಾಯ!
ನಾರಾಯಣನ ಮುಗುಳ್ನಗೆ ಕಂಡು ನಾರದನಿಗೆ ಎಲ್ಲವೂ ಅರ್ಥವಾಯಿತು. ಅಹಂಕಾರದ ಪಿಸುರು ಮುಸುಕಿದ್ದ ಒಳಗಣ್ಣು ಲಜ್ಜೆಯ ಕಂಬನಿಯಿಂದ ಶುದ್ಧವಾಯಿತು, ಜ್ಞಾನೋದಯವಾಯಿತು. ಹರಿಯ ಮುಂದೆ ಮಂಡಿಯೂರಿ ಕುಳಿತ ನಾರದ, ಇನ್ನೆಂದೂ ಮಾಯೆ ತನ್ನನ್ನು ಆವರಿಸಲು ಅವಕಾಶ ಕೊಡುವುದಿಲ್ಲೆಂದು ಪ್ರಮಾಣ ಮಾಡಿದ.
~
ನಮ್ಮಲ್ಲೂ ಒಬ್ಬ ಸನ್ನಾನ್ ಅಥವಾ ಒಬ್ಬ ನಾರದ ಇದ್ದೇ ಇದ್ದಾನೆ. ನಾವು ಅವರಂತೆ ಸಾಧಕರೇನಲ್ಲದಿದ್ದರೂ ಅಹಂಕಾರಕ್ಕೆ ಕೊರತೆ ಇಲ್ಲದವರಾಗಿದ್ದೇವೆ. ಅದರಿಂದಾಗಿ ಏನೆಲ್ಲ ಕಳೆದುಕೊಂಡರೂ ನಮಗೆ ಬುದ್ಧಿ ಬರುವುದಿಲ್ಲ. ಬದಲಿಗೆ, ರೊಚ್ಚಿಗೇಳುತ್ತೇವೆ, ರಚ್ಚೆ ಹಿಡಿಯುತ್ತೇವೆ. ನಮ್ಮ ದೇಹಕ್ಕೆ, ನಮ್ಮ ಗುರುತಿಗೆ, ಹೆಸರಿಗೆ, ಸಂಬಂಧಗಳಿಗೆ ಮತ್ತಷ್ಟು ಆತುಕೊಳ್ಳುತ್ತೇವೆ; ಮತ್ತಷ್ಟು ಯಾತನೆ ಪಡುತ್ತೇವೆ.
ಶೇಖ್ ಸನ್ನಾನನ ಕತೆಯಲ್ಲಿ ಬದುಕನ್ನು ಕನಸಿನಂತೆಯೂ ನಾರದ ಮುನಿಯ ಕತೆಯಲ್ಲಿ ಮಾಯೆಯಂತೆಯೂ ತೊರಿಸಲಾಗಿದೆ. ಕೇವಲ ಒಂದು ಕನಸಿನಂಥ, ಮಿಥ್ಯಾ ಮಾಯೆಯಾದ ಈ ಬದುಕಿನ ಆಗುಹೋಗುಗಳಿಗೆ ಆತುಕೊಳ್ಳುವ ಮೂರ್ಖರು ನಾವಾಗಿದ್ದೇವೆ. ನಾವು ನಮ್ಮ ದೇಹವನ್ನು ಜೀವಿತದ ಅಗತ್ಯಕ್ಕೆ ಸೀಮಿತಗೊಳಿಸಿದರೆ ಮಾತ್ರ, ಅಹಂಕಾರ ಮಿತಿ ಮೀರದಂತೆ ಕಾಯಬಹುದು.
ಹೌದು; ಇದು ಬಹಳ ಕಷ್ಟ.

