ಸಾಂಸ್ಕೃತಿಕ ಜೀತದ ಬಿಡುಗಡೆ ಮತ್ತು ಬೌದ್ಧ ತಾತ್ವಿಕತೆಯ ದಾರಿ

ನಾವು ರಾಜಕೀಯ ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇವೆ, ಪ್ರಜಾಸತ್ತೆಯು ಮನುಷ್ಯನ ಅತ್ಯಂತ ಶ್ರೇಷ್ಠ ಆವಿಷ್ಕಾರವೆಂಬುದರಲ್ಲಿ ಸಂಶಯವಿಲ್ಲ. ಆದರೆ ಇಂತಹ ಪ್ರಜಾಸತ್ತೆಯಲ್ಲೂ ನಾವು ಇಷ್ಟೊಂದು ಸ್ತರಗಳ ಕಾಲೋನಿಗಳ ನಡುವೆ ಸಿಲುಕಿಕೊಂಡಿದ್ದೇವೆ. ಈ ಎಲ್ಲಾ ಸ್ತರಗಳಿಂದ ಬಿಡುಗಡೆ ಹೊಂದುವುದು ಕೇವಲ ರಾಜಕೀಯ ಸ್ವಾತಂತ್ರ್ಯದಿಂದ ಸಾಧ್ಯವಿಲ್ಲ; ಅದಕ್ಕೆ ಆಳವಾದ ಆಧ್ಯಾತ್ಮಿಕ ಅರಿವು ಮತ್ತು ಸಾಂಸ್ಕೃತಿಕ ಬದಲಾವಣೆಯ ಅಗತ್ಯವಿದೆ ~ ನಟರಾಜ ಬೂದಾಳ್ । ರಂಗಾಯಣ (ಮೈಸೂರು) ಆಯೋಜನೆಯ ‘ಬಹುರೂಪಿ’ ಗೋಷ್ಟಿಯಲ್ಲಿ ನೀಡಿದ ಉಪನ್ಯಾಸದ ಸಂಕ್ಷಿಪ್ತ ರೂಪ

ಈ ನೆಲದಲ್ಲಿ ಅಥವಾ ಜಗತ್ತಿನ ಯಾವುದೇ ಮೂಲೆಯಲ್ಲಿ ಜನಿಸುವ ಪ್ರತಿ ಜೀವಿಯೂ ಒಂದು ವಿಚಿತ್ರವಾದ ‘ಸಾಂಸ್ಕೃತಿಕ ಜೀತ’ದೊಂದಿಗೆ ತನ್ನ ಬದುಕನ್ನು ಆರಂಭಿಸುತ್ತದೆ. ಮಗು ಅನ್ನ ತಿನ್ನಲು, ನಡೆಯಲು ಅಥವಾ ಮಾತನಾಡಲು ಕಲಿಯುವ ಮೊದಲೇ—ಅಂದರೆ ತನ್ನ ಸ್ವಂತ ವಿವೇಚನಾ ಶಕ್ತಿಯನ್ನು ಬಳಸುವ ಮೊದಲೇ—ಅದರ ಮೇಲೆ ದೈವವಾದ, ಜಾತಿವಾದ (ಅಥವಾ ರೇಸಿಸಂ), ದ್ವೈತವಾದ ಹಾಗೂ ಲಿಂಗ ತಾರತಮ್ಯದಂತಹ ಅನೇಕ ಬಂಧನಗಳನ್ನು ಹೇರಲಾಗುತ್ತದೆ. ಈ ಪ್ರಕ್ರಿಯೆಯು ಯಾವುದೇ ವ್ಯಕ್ತಿಯನ್ನು ಅವರಿಗೇ ಅರಿವಿಲ್ಲದೆ ಒಂದು ರೀತಿಯ ‘ತಾತ್ವಿಕ ಜೀತ’ಕ್ಕೆ ತಳ್ಳುತ್ತದೆ. ಭಾರತದ ಇಂದಿನ ಸಾಮಾಜಿಕ ಮಜಲುಗಳನ್ನು ಗಮನಿಸಿದರೆ, ನಾವು ರಾಜಕೀಯವಾಗಿ ಸ್ವತಂತ್ರರಾಗಿದ್ದರೂ ಸಾಂಸ್ಕೃತಿಕವಾಗಿ ಇನ್ನೂ ಹಲವು ಸ್ತರಗಳ ‘ಕಾಲೋನಿ’ಗಳಲ್ಲಿ ಬದುಕುತ್ತಿದ್ದೇವೆ ಎಂಬ ಆಘಾತಕಾರಿ ಸತ್ಯ ಗೋಚರಿಸುತ್ತದೆ.

ಭಾರತವನ್ನು ನಾವು ರಾಜಕೀಯವಾಗಿ ಸ್ವತಂತ್ರ ದೇಶವೆಂದು ಕರೆದರೂ, ಸಾಮಾಜಿಕವಾಗಿ ಇದು ‘ಹಲವು ಸ್ತರಗಳ ಕಾಲೋನಿ’. ಸಾಮಾನ್ಯವಾಗಿ ‘ಕಾಲೋನಿ’ ಎಂಬ ಪದವನ್ನು ದಲಿತ ಕೇರಿಗಳಿಗೆ ಮಾತ್ರ ಬಳಸಲಾಗುತ್ತದೆ. ಆದರೆ ಸೂಕ್ಷ್ಮವಾಗಿ ಗಮನಿಸಿ; ದಲಿತರು ಸಮಸ್ತ ಸವರ್ಣೀಯರಿಗೆ ಅಥವಾ ಮೇಲ್ಜಾತಿಗಳಿಗೆ ಒಂದು ಕಾಲೋನಿ. ಮಹಿಳೆಯರು ಪುರುಷ ದಬ್ಬಾಳಿಕೆಗೆ ಒಂದು ಕಾಲೋನಿ. ಶೂದ್ರರ ಆಹಾರ ಪದ್ಧತಿ ಮತ್ತು ಭಾಷೆ ಕೂಡ ಆಧಿಪತ್ಯದ ಸಿದ್ಧಾಂತಗಳಿಗೆ ಕಾಲೋನಿಯಾಗಿವೆ. ದಕ್ಷಿಣದ ದ್ರಾವಿಡ ಭಾರತವು ಉತ್ತರದ ವೈದಿಕ ಭಾರತಕ್ಕೆ ಕಾಲೋನಿಯಾಗಿದೆ.

ಈ ಕಾಲೋನೈಸೇಶನ್ ಪ್ರಕ್ರಿಯೆಯಿಂದ ಬಿಡುಗಡೆ ಪಡೆಯುವುದು ಹೇಗೆ? ನಾವು ರಾಜಕೀಯ ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇವೆ, ಪ್ರಜಾಸತ್ತೆಯು ಮನುಷ್ಯನ ಅತ್ಯಂತ ಶ್ರೇಷ್ಠ ಆವಿಷ್ಕಾರವೆಂಬುದರಲ್ಲಿ ಸಂಶಯವಿಲ್ಲ. ಆದರೆ ಇಂತಹ ಪ್ರಜಾಸತ್ತೆಯಲ್ಲೂ ನಾವು ಇಷ್ಟೊಂದು ಸ್ತರಗಳ ಕಾಲೋನಿಗಳ ನಡುವೆ ಸಿಲುಕಿಕೊಂಡಿದ್ದೇವೆ. ಈ ಎಲ್ಲಾ ಸ್ತರಗಳಿಂದ ಬಿಡುಗಡೆ ಹೊಂದುವುದು ಕೇವಲ ರಾಜಕೀಯ ಸ್ವಾತಂತ್ರ್ಯದಿಂದ ಸಾಧ್ಯವಿಲ್ಲ; ಅದಕ್ಕೆ ಆಳವಾದ ಆಧ್ಯಾತ್ಮಿಕ ಅರಿವು ಮತ್ತು ಸಾಂಸ್ಕೃತಿಕ ಬದಲಾವಣೆಯ ಅಗತ್ಯವಿದೆ.

ಕುವೆಂಪು ಅವರು ಹೇಳಿದಂತೆ, ಹುಟ್ಟುವಾಗ ಪ್ರತಿ ಜೀವಿಯೂ ‘ವಿಶ್ವಮಾನವ’. ಆದರೆ ಆ ಜೀವಿಯನ್ನು ಕುಬ್ಜನನ್ನಾಗಿಸುವ, ಸೀಮಿತಗೊಳಿಸುವ ಪ್ರಕ್ರಿಯೆ ಮನೆಯಿಂದಲೇ ಆರಂಭವಾಗುತ್ತದೆ. ರಾಜೇಂದ್ರ ಚೆನ್ನಿಯವರು, ಮಕ್ಕಳನ್ನು ಶಾಲೆಗೆ ಕಳಿಸುವುದು ಅವರನ್ನು ಕೇವಲ ವಿದ್ಯಾವಂತರನ್ನಾಗಿ ಮಾಡಲಿಕ್ಕಲ್ಲ, ಬದಲಾಗಿ ‘ಫ್ಯಾಸಿಸ್ಟರನ್ನಾಗಿ’ ಮಾಡಲು ಎಂಬಂತಾಗಿದೆ ಅನ್ನುತ್ತಿದ್ದರು. ಶಾಲೆ ಕಾಲೇಜುಗಳು ಮಾತ್ರವಲ್ಲ, ಬಹುತೇಕ ಮನೆಗಳೂ ಇಂತಹ ಫ್ಯಾಸಿಸ್ಟ್ ಸೆಂಟರ್‌ಗಳಾಗಿವೆ ಎಂದು ನನಗೆ ಅನಿಸುತ್ತದೆ. ಇದು ಅತ್ಯಂತ ಗಂಭೀರವಾದ ಸಂಗತಿ. ಮನುಷ್ಯನನ್ನು ಸಂಕುಚಿತಗೊಳಿಸುವ ಈ ಆವರಣಗಳಿಂದ ಬಿಡುಗಡೆ ಹೊಂದುವುದು ಅನಿವಾರ್ಯವಾಗಿದೆ.

ಇಂದು ಜಗತ್ತಿನಲ್ಲಿ, ವಿಶೇಷವಾಗಿ ಯುರೋಪಿನ ನಾರ್ವೆ, ಜರ್ಮನಿಯಂತಹ ದೇಶಗಳ ಹೊಸ ಪೀಳಿಗೆಯಲ್ಲಿ (Gen Z) ಒಂದು ವಿಶಿಷ್ಟ ವಿದ್ಯಮಾನ ಗೋಚರಿಸುತ್ತಿದೆ. ಅಲ್ಲಿನ ಶೇಕಡಾ 65 ಕ್ಕಿಂತ ಹೆಚ್ಚು ಯುವಕರು ತಾವು ‘ಧರ್ಮರಹಿತರು’ (Non-religious) ಎಂದು ಘೋಷಿಸಿಕೊಳ್ಳುತ್ತಿದ್ದಾರೆ. ಆದರೆ, ಅವರು ಧರ್ಮವನ್ನು ನಿರಾಕರಿಸುತ್ತಿದ್ದಾರೆಯೇ ಹೊರತು ಆಧ್ಯಾತ್ಮಿಕತೆಯನ್ನಲ್ಲ.

ಒಬ್ಬ ಮನುಷ್ಯನಿಗೆ ಪಾಂಥಿಕ ಧರ್ಮಗಳ ಹಂಗಿಗಿಂತ ಆಧ್ಯಾತ್ಮಿಕತೆಯ ಅಗತ್ಯ ಅತ್ಯಂತಿಕವಾಗಿ ಬೇಕಿದೆ. ಆಧ್ಯಾತ್ಮಿಕತೆ ಎನ್ನುವುದು ಯಾವುದೇ ಸಂಸ್ಥೆ ಅಥವಾ ಪಂಥದ ಚೌಕಟ್ಟಿಗೆ ಬದ್ಧವಾಗದೆ, ಮನುಷ್ಯನನ್ನು ಕೇವಲ ಮನುಷ್ಯನನ್ನಾಗಿ ಕಾಣುವ ಶಕ್ತಿಯನ್ನು ನೀಡುತ್ತದೆ. ನಮ್ಮ ದೇಶದ ‘ಅವಧೂತ ಪ್ರಜ್ಞೆ’ಯು ಇದನ್ನೇ ಸಾರುತ್ತದೆ. “ಯಾವ ಪ್ರಜ್ಞೆಯು ಚಾಂಡಾಲನನ್ನು ಚಾಂಡಾಲತ್ವದಿಂದಲೂ ಮತ್ತು ಬ್ರಾಹ್ಮಣನನ್ನು ಬ್ರಾಹ್ಮಣತ್ವದಿಂದಲೂ ಬಿಡುಗಡೆಗೊಳಿಸುತ್ತದೆಯೋ, ಅದೇ ನಿಜವಾದ ಆಧ್ಯಾತ್ಮಿಕತೆ.” ಬಿಡುಗಡೆ ಎನ್ನುವುದು ಕೇವಲ ತುಳಿಯಲ್ಪಟ್ಟವನಿಗೆ ಅಥವಾ ಶೋಷಿತನಿಗೆ ಮಾತ್ರ ಬೇಕಿರುವ ಸಂಗತಿಯಲ್ಲ; ಅದು ತುಳಿಯುತ್ತಿರುವವನಿಗೂ ಅಷ್ಟೇ ಅಗತ್ಯವಾಗಿದೆ. ಯಾಕೆಂದರೆ, ಶೋಷಕ ಮತ್ತು ಶೋಷಿತ ಇಬ್ಬರೂ ಒಂದು ಅನೈಸರ್ಗಿಕ ಮತ್ತು ಅಸಹಜ ಜೀವನ ಕ್ರಮದಲ್ಲಿ ಬಂಧಿಗಳಾಗಿದ್ದಾರೆ. ಶೋಷಿಸುವವನು ತನ್ನ ಅಹಂಕಾರದ ಬಂಧನದಲ್ಲಿದ್ದರೆ, ಶೋಷಿತನು ಅಸಹಾಯಕತೆಯ ಬಂಧನದಲ್ಲಿದ್ದಾನೆ. ಇವರಿಬ್ಬರೂ ಈ ಮಾನಸಿಕ ಮತ್ತು ಸಾಂಸ್ಕೃತಿಕ ಜೀತದಿಂದ ಮುಕ್ತರಾದಾಗ ಮಾತ್ರ ಒಂದು ಆರೋಗ್ಯವಂತ ಸಮಾಜ ನಿರ್ಮಾಣವಾಗಲು ಸಾಧ್ಯ. ಅಂಬೇಡ್ಕರ್ ಅವರು ಪ್ರತಿಪಾದಿಸಿದ ಆಧ್ಯಾತ್ಮಿಕತೆಯ ಆಯ್ಕೆಯೂ ಇಂತಹದೇ ಒಂದು ವಿಶಾಲವಾದ ಮತ್ತು ಸಮಾನವಾದ ಬಿಡುಗಡೆಯ ಹಾದಿಯಾಗಿತ್ತು.

ಇಡೀ ಭಾರತವು ಇಂದು ವಿವಿಧ ಸ್ತರಗಳ ಕಂಪಾರ್ಟ್‌ಮೆಂಟ್‌ಗಳಲ್ಲಿ ಸಿಲುಕಿಕೊಂಡಿದೆ. ನಮ್ಮ ಇಂದಿನ ಜೀವನ ವಿಧಾನವನ್ನು ಮತ್ತು ಈ ನೆಲದ ಒಟ್ಟು ಬದುಕನ್ನು ಗಮನಿಸಿದರೆ, ಅಲ್ಲಿ ಮುಖ್ಯವಾಗಿ ನಾಲ್ಕು ತಾತ್ವಿಕ ಆವರಣಗಳನ್ನು ನಾವು ಗುರುತಿಸಬಹುದು. ಈ ಆವರಣಗಳು ಕೇವಲ ಧರ್ಮಗಳಲ್ಲ, ಅವು ಭಾರತೀಯರ ದೈನಂದಿನ ನಡವಳಿಕೆಗಳನ್ನು ನಿಯಂತ್ರಿಸುವ ಸಾಂಸ್ಕೃತಿಕ ಚೌಕಟ್ಟುಗಳಾಗಿವೆ. ಇವುಗಳಲ್ಲಿ ಮೊದಲನೆಯದು, ಸೆಮೆಟಿಕ್ ಆವರಣ. ಇದು ಇಸ್ಲಾಂ, ಕ್ರಿಶ್ಚಿಯಾನಿಟಿ ಮತ್ತು ಯಹೂದಿ ಧರ್ಮಗಳನ್ನು ಒಳಗೊಂಡಿರುವ ಆವರಣ. ಇದು ಭಾರತದ ಒಂದು ಪ್ರಮುಖ ಸಾಂಸ್ಕೃತಿಕ ಪಾಲುದಾರನಾಗಿ ತನ್ನದೇ ಆದ ಜೀವನ ವಿಧಾನವನ್ನು ಹೊಂದಿದೆ. ಆಮೇಲೆ ವೈದಿಕ ಆವರಣ. ನಾವು ಬಹಳ ಸೂಕ್ಷ್ಮವಾಗಿ ಮತ್ತು ಎಚ್ಚರದಿಂದ ಗುರುತಿಸಿಕೊಳ್ಳಬೇಕಾದ ಆವರಣವಿದು. ಇದು ವೇದ, ಉಪನಿಷತ್ತು ಮತ್ತು ಸ್ಮೃತಿಗಳಿಂದ—ವಿಶೇಷವಾಗಿ ಮನುಸ್ಮೃತಿಯಿಂದ—ನಿರ್ಣಯಿಸಲ್ಪಡುತ್ತಿದೆ. ಮುಖ್ಯವಾಗಿ ಋಗ್ವೇದದ 90ನೇ ಸೂಕ್ತವಾದ ‘ಪುರುಷ ಸೂಕ್ತ’ದಿಂದ ಭಾರತೀಯ ಜೀವನ ಕ್ರಮವು ಹೇಗೆ ಇರಬೇಕು ಎಂದು ನಿರ್ಣಯಿಸಲಾಗಿದೆಯೋ, ಆ ಚೌಕಟ್ಟಿನಲ್ಲೇ ಇಂದಿಗೂ ಬಹುಪಾಲು ವ್ಯವಸ್ಥೆಗಳು ನಡೆಯುತ್ತಿವೆ. ಮತ್ತೊಂದು, ಶ್ರಮಣ ಧಾರೆಗಳು. ಇಲ್ಲಿ ‘ಶ್ರಮ’ ಎನ್ನುವ ಪದಕ್ಕೆ ಅತ್ಯಂತ ಹೆಚ್ಚಿನ ಮಹತ್ವವಿದೆ. ಇದು ಶ್ರಮಜೀವಿಗಳ ಅಥವಾ ಸಾಧಕರ ಮಾರ್ಗ. ಇದರಲ್ಲಿ ಬೌದ್ಧ, ನಾಥ, ಸಿದ್ಧ ಮತ್ತು ಜೈನ ಪರಂಪರೆಗಳು ಬರುತ್ತವೆ. ಇವುಗಳ ಜೊತೆಗೆ ಈ ನೆಲದ ಮಣ್ಣಿನ ವಾಸನೆಯನ್ನು ಹೊಂದಿರುವ ವಿಶಿಷ್ಟ ಪಂಥಗಳಾದ ವಚನ, ಅಚಲ, ಆರೂಢ, ಅವಧೂತ ಮತ್ತು ಆಜೀವಿಕ ತಾತ್ವಿಕತೆಗಳ ದೊಡ್ಡ ಆವರಣವೇ ಇಲ್ಲಿದೆ. ಇವುಗಳಲ್ಲಿ ಕೆಲವು ಅಲ್ಲಲ್ಲೇ ಸಣ್ಣ ಸಣ್ಣ ಪಾಕೆಟ್‌ಗಳಲ್ಲಿ ಇರಬಹುದು, ಆದರೆ ಬೌದ್ಧ ಮತ್ತು ಜೈನ ಧರ್ಮಗಳು ಪೂರ್ಣ ಪ್ರಮಾಣದ ಧರ್ಮಗಳಾಗಿ ಜಗತ್ತಿನಾದ್ಯಂತ ವಿಸ್ತರಿಸಿಕೊಂಡಿವೆ.ಕೊನೆಯದಾಗಿ ಶೂದ್ರ ಧರ್ಮ. ಭಾರತದ ಬದುಕಿನಲ್ಲಿ ಅತ್ಯಂತ ವಿಸ್ತಾರವಾದ ಮತ್ತು ನಿರ್ಣಾಯಕವಾದ ಆವರಣವೆಂದರೆ ಅದು ‘ಶೂದ್ರ ಧರ್ಮ’. ಇದು ಸವರ್ಣೀಯರ ಜೊತೆಗೆ ದಲಿತರನ್ನೂ ಒಳಗೊಂಡಿರುವ ಬೃಹತ್ ಸಮೂಹ. ಆದರೆ, ಇಲ್ಲಿನ ದೊಡ್ಡ ವ್ಯತಿರಿಕ್ತತೆಯೆಂದರೆ, ಶೂದ್ರ ಧರ್ಮವು ಈವರೆಗಿನ ಶ್ರಮಣ ಧಾರೆಗಳು ಮತ್ತು ವೈದಿಕ ಧಾರೆಗಳ ಜೊತೆಗೆ ಸಂಘರ್ಷ ಹಾಗೂ ಕೊಡು-ಕೊಳ್ಳುವಿಕೆಗಳನ್ನು ನಡೆಸುತ್ತಾ ಬಂದಿದೆ. ದುರದೃಷ್ಟವಶಾತ್, ತನ್ನ ಬದುಕಿನ ಅತ್ಯಂತ ಪ್ರಮುಖ ಎದುರಾಳಿಯಾದ ‘ವೈದಿಕ ತಾತ್ವಿಕತೆ’ಯನ್ನೇ ತನ್ನ ಬದುಕಿನ ನಿರ್ಣಾಯಕ ಸಂಗತಿಯನ್ನಾಗಿ ಮಾಡಿಕೊಂಡಿದೆ.

ಅಂಬೇಡ್ಕರ್ ಅವರ ಎದುರಿಗೆ ಇಷ್ಟು ದೊಡ್ಡ ಮತ್ತು ಸಂಕೀರ್ಣವಾದ ನಾಲ್ಕು ಆವರಣಗಳಿದ್ದವು. ಈ ಎಲ್ಲಾ ದುಷ್ಟ ಸಮೀಕರಣಗಳ ನಡುವೆ ನಿಂತು, ಮನುಷ್ಯನಿಗೆ ಇವುಗಳಿಂದ ಬಿಡುಗಡೆ ಕೊಡಿಸುವುದು ಹೇಗೆ ಎನ್ನುವುದು ಅಂಬೇಡ್ಕರ್ ಮುಂದಿದ್ದ ಮಹತ್ತರ ಸವಾಲಾಗಿತ್ತು. ಅದಕ್ಕಾಗಿ ಅವರು ‘ಸಾಂಸ್ಕೃತಿಕ ಸಂವಿಧಾನ’ವನ್ನು ನೀಡಿದರು. ಅಂಬೇಡ್ಕರ್ ನಮಗೆ ನೀಡಿದ್ದು ಕೇವಲ ರಾಜಕೀಯ ಸಂವಿಧಾನವನ್ನಲ್ಲ, ಬದಲಾಗಿ ಪ್ರತಿನಿತ್ಯದ ಬದುಕನ್ನು ಗೌರವಯುತವಾಗಿ ನಡೆಸಲು ಬೇಕಾದ ‘ಸಾಂಸ್ಕೃತಿಕ ಸಂವಿಧಾನ’ವನ್ನು. ಸಮಾಜವು ಅಸಮಾನತೆಗೆ ಬೇಕಾದ ಒಪ್ಪಿಗೆಯನ್ನು ನಮ್ಮಲ್ಲಿ ವಿವೇಚನಾ ಶಕ್ತಿ ಬಲಿಯುವ ಮೊದಲೇ ನಮ್ಮಿಂದ ಕಿತ್ತುಕೊಂಡಿರುತ್ತದೆ. ಈ ‘ಮೌನ ಒಪ್ಪಿಗೆ’ಯನ್ನು ಹಿಂಪಡೆಯುವ ಪ್ರಕ್ರಿಯೆಯೇ ಅಂಬೇಡ್ಕರ್ ಅವರ ಸಾಂಸ್ಕೃತಿಕ ಸಂವಿಧಾನದ ಆಶಯವಾಗಿತ್ತು.

ಅಂಬೇಡ್ಕರ್ ಅವರು ಬೌದ್ಧ ಧರ್ಮವನ್ನು ಆಯ್ಕೆ ಮಾಡಿಕೊಂಡದ್ದು ಅದನ್ನೊಂದು ಮತವಾಗಿರುವ ಕಾರಣಕ್ಕಲ್ಲ,  ಬದಲಾಗಿ ಅದೊಂದು ಮುಕ್ತ ‘ತಾತ್ವಿಕ ದರ್ಶನ’ವಾಗಿರುವುದರಿಂದ. ಬೌದ್ಧ ಧರ್ಮದ ವೈಶಿಷ್ಟ್ಯವೇ ಅದು ಮರುವ್ಯಾಖ್ಯಾನಕ್ಕೆ ಸದಾ ಮುಕ್ತವಾಗಿರುವುದು.

ಬೌದ್ಧ ತಾತ್ವಿಕತೆಯು ಜಗತ್ತಿನ ಇತರ ಧರ್ಮಗಳಿಗಿಂತ ಭಿನ್ನವಾಗಿ ನಿಲ್ಲುವುದು ಅದರ ‘ಪ್ರಮಾಣ ನಿರಾಕರಣೆ’ಯ ನಿಲುವಿನಿಂದ. ಜಗತ್ತಿನ ಬಹುಪಾಲು ಧರ್ಮಗಳು ಅಥವಾ ಸೆಮೆಟಿಕ್ ರಿಲಿಜಿಯನ್‌ಗಳು ಪ್ರಶ್ನಿಸುವುದನ್ನು ಒಪ್ಪುವುದಿಲ್ಲ; ಅವು ಕೇವಲ ನಂಬಿಕೆಯನ್ನು ಒತ್ತಾಯಿಸುತ್ತವೆ. ಆದರೆ ಬುದ್ಧನು ಮನುಷ್ಯನ ವಿವೇಚನೆಗೆ ಅತ್ಯುನ್ನತ ಸ್ಥಾನ ನೀಡಿದ್ದಾನೆ. ಬುದ್ಧನ ಮಾತುಗಳಲ್ಲೇ ಹೇಳುವುದಾದರೆ: “ಯಾವುದೇ ಮಾತು, ಯಾವುದೇ ಪುಸ್ತಕ ಅಥವಾ ದರ್ಶನವನ್ನು ಅದು ‘ಪ್ರಶ್ನಾತೀತ ಸತ್ಯ’ ಎಂದು ನಂಬಬೇಡ. ಆ ಮಾತನ್ನು ಹೇಳಿದವರು ನಿನ್ನ ತಂದೆ-ತಾಯಿಗಳಾಗಿರಲಿ, ಗೌರವಾನ್ವಿತ ಗುರು-ಹಿರಿಯರಾಗಿರಲಿ, ಜ್ಞಾನಿ ಎನಿಸಿಕೊಂಡವನಿರಲಿ ಅಥವಾ ಸ್ವತಃ ಅವತಾರಿ ಇಲ್ಲವೇ ಪ್ರವಾದಿ ಎಂದು ಕರೆಸಿಕೊಂಡವನೇ ಇರಲಿ—ಯಾರೇ ಹೇಳಿದರೂ ಅದನ್ನು ಕುರುಡಾಗಿ ಒಪ್ಪಿಕೊಳ್ಳಬೇಡ.”

ನನ್ನನ್ನೂ (ಬುದ್ಧನನ್ನು) ಸೇರಿದಂತೆ ಯಾರೇ ಹೇಳಿದ ಮಾತನ್ನು ಮೊದಲು ವಿಮರ್ಶೆಗೆ ಒಳಪಡಿಸು. ಹಾಗೆ ಪ್ರಶ್ನಿಸಿ ನೋಡಿದಾಗ, ಯಾವ ವಿಷಯವು ಈ ಲೋಕಕ್ಕೆ ಮಂಗಳಕರವಾದುದು ಮತ್ತು ನಿನ್ನ ‘ಅಂತಃಪ್ರಜ್ಞೆ’ಗೆ ಸರಿ ಎಂದು ಅನ್ನಿಸುತ್ತದೆಯೋ, ಆ ಮಾತನ್ನು ಮಾತ್ರ ನಂಬು ಮತ್ತು ಅದರಂತೆ ನಡೆದುಕೋ.” ಇದು ಬುದ್ಧನ ಮಾತು.

ಆಧ್ಯಾತ್ಮಿಕತೆಯ ಅತ್ಯಂತ ಪ್ರಮುಖ ಲಕ್ಷಣವೆಂದರೆ ಅದು ‘ನುಡಿ’ಗಿಂತ ಮೊದಲು ‘ನಡೆ’ಯನ್ನು ಬಯಸುತ್ತದೆ. ನಮ್ಮ ನೆಲದ ತತ್ವಪದಕಾರರ ಪರಂಪರೆಯಲ್ಲಿ ತತ್ವ ರಚನೆ ಮಾಡಿದವರಿಗಿಂತ, ಆ ತತ್ವದ ಹಾದಿಯಲ್ಲಿ ನಡೆದ ಸಾಧಕರಿಗೆ ಅತಿ ಹೆಚ್ಚು ಗೌರವ ಮತ್ತು ಗುರುಭಾವವಿರುತ್ತದೆ. ಎಲ್ಲ ಅನುಭವಿ ಪಂಥಗಳು ಮುಂದಿಡುವುದು ಇದನ್ನೇ—”ಮೊದಲು ನಡೆ, ಆಮೇಲೆ ನುಡಿ”.

ಬೌದ್ಧ ತಾತ್ವಿಕತೆಯು ಸುಂದರವಾಗಿ ಓದಿಕೊಳ್ಳುವ, ಕೇಳಿಸಿಕೊಳ್ಳುವ ಅಥವಾ ಉಪನ್ಯಾಸ ಕೊಡುವ ಕೇವಲ ಬೌದ್ಧಿಕ ಕಸರತ್ತಲ್ಲ. ನಮಗೆ ಯಾವುದೋ ಒಂದು ಕಾಯಿಲೆಯಾದಾಗ ನಾವು ಒಬ್ಬ ಸಮರ್ಥ ವೈದ್ಯರನ್ನು ಹುಡುಕುತ್ತೇವೆ. ಆಗ ನಾವು ವೈದ್ಯರ ಜಾತಿ, ಧರ್ಮ ಅಥವಾ ದೇಶವನ್ನು ನೋಡುವುದಿಲ್ಲ; ನಮಗೆ ಬೇಕಿರುವುದು ನಮ್ಮ ಸಂಕಟಕ್ಕೆ ಪರಿಹಾರ. ಬುದ್ಧನೂ ಒಬ್ಬ ಸಮರ್ಥ ವೈದ್ಯನಿದ್ದಂತೆ. ನಾವು ಅವರ ಹತ್ತಿರ ಹೋಗಿ, ಅವರ ದರ್ಶನಗಳನ್ನೆಲ್ಲ ಓದಿ, ನಮ್ಮ ಕಾಯಿಲೆಗೆ ಏನು ಮದ್ದು ಬೇಕು ಎಂದು ಅವರ ಬಳಿ ‘ಪ್ರಿಸ್ಕ್ರಿಪ್ಷನ್’ಬರೆಸಿಕೊಳ್ಳುತ್ತೇವೆ ಎಂದು ಇಟ್ಟುಕೊಳ್ಳೋಣ. ಆ ಚೀಟಿಯನ್ನು ಅತ್ಯಂತ ಅಚ್ಚುಕಟ್ಟಾಗಿ ಮಡಚಿ, ಜೋಬಿನಲ್ಲಿಟ್ಟುಕೊಂಡು ತಿರುಗಾಡಿದರೆ ಅಥವಾ ಆ ಪ್ರಿಸ್ಕ್ರಿಪ್ಷನ್ ಅನ್ನು ದಿನಾ ಪಾರಾಯಣ ಮಾಡಿದರೆ ಕಾಯಿಲೆ ವಾಸಿಯಾಗುತ್ತದೆಯೇ? ಖಂಡಿತ ಇಲ್ಲ. ಆ ಚೀಟಿಯಲ್ಲಿ ಬರೆದ ಮದ್ದನ್ನು ತಂದು ಸೇವಿಸಿದರೆ ಮಾತ್ರ ರೋಗ ವಾಸಿಯಾಗುತ್ತದೆ. ಹಾಗೆಯೇ, ಆಧ್ಯಾತ್ಮಿಕತೆ ಅಥವಾ ಬೌದ್ಧ ತಾತ್ವಿಕತೆಯು ಕೇವಲ ಒಂದು ಚೀಟಿಯಲ್ಲ. ಅದನ್ನು ಬದುಕಿನಲ್ಲಿ ಅಳವಡಿಸಿಕೊಂಡು ಅನುಷ್ಠಾನಕ್ಕೆ ತಂದಾಗ ಮಾತ್ರ ಸಾಂಸ್ಕೃತಿಕ ಬಂಧನಗಳಿಂದ ಬಿಡುಗಡೆ ಸಾಧ್ಯ.

ಇಂದು ಜಗತ್ತು ಟೊಳ್ಳು ತತ್ವಜ್ಞಾನಗಳು ಮತ್ತು ಸುಳ್ಳು ಧರ್ಮಗಳ ಸಂಕಟದಲ್ಲಿ ಸಿಲುಕಿದೆ. ಮನುಷ್ಯ ಮನುಷ್ಯನನ್ನು ಅಸ್ಪೃಶ್ಯನಂತೆ ಕಾಣುವ ಸಮಾಜದಲ್ಲಿ ಮೈತ್ರಿ ಮತ್ತು ಕರುಣೆಯ ಅಗತ್ಯವಿದೆ. ಇನ್ನೊಬ್ಬ ಮನುಷ್ಯನ ಜೊತೆ ಕೂತು ಉಣ್ಣಲು ಸಿದ್ಧವಿಲ್ಲದವನು ಎಂತಹ ಜ್ಞಾನಿಯಾದರೂ ವ್ಯರ್ಥ. ಅಂಬೇಡ್ಕರ್ ಅವರು ತೋರಿದ ಬೌದ್ಧ ಆಧ್ಯಾತ್ಮಿಕತೆಯ ಹಾದಿಯು ನಮಗೆ ‘ಅತ್ತ ದೀಪೋ ಭವ’ (ನಿನಗೆ ನೀನೇ ಬೆಳಕಾಗು) ಎನ್ನುವ ಸಂದೇಶವನ್ನು ನೀಡುತ್ತದೆ. ನಮ್ಮ ಕೈಯಲ್ಲಿರುವ ವಿವೇಚನೆಯ ಬೆಳಕಿನೊಂದಿಗೆ ನಾವೆಲ್ಲರೂ ಈ ಸಾಂಸ್ಕೃತಿಕ ಜೀತದಿಂದ ಬಿಡುಗಡೆಯತ್ತ ಹೆಜ್ಜೆ ಹಾಕೋಣ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.