ಚಹಾ ಮಾಸ್ಟರ್ ಸಮುರಾಯ್ ತನ್ನ ಏಕಾಗ್ರತೆಯನ್ನು ನಿರಂತರವಾಗಿರಿಸಿಕೊಂಡಿದ್ದರೆ, ಅವನು ಜಾಗೃತನಾಗುತ್ತಿದ್ದ. ಆದರೆ ಅವನ ಉದ್ದೇಶ ಕೇವಲ ಗೆಲ್ಲುವುದಾಗಿತ್ತು. ವರರುಚಿ ತನ್ನ ಏಕಾಗ್ರತೆಯನ್ನು ಐಹಿಕಕ್ಕೆ ಸೀಮಿತಗೊಳಿಸಿಕೊಂಡು ಭೋಗಭಾಗ್ಯಗಳಲ್ಲೆ ತೃಪ್ತನಾದ. ಜನಕ ಮಹಾರಾಜ ಒಂದಷ್ಟು ಹೆಜ್ಜೆ ಮುಂದುವರಿದು, ತನ್ನ ಏಕಾಗ್ರತೆಯಿಂದ ಐಹಿಕ ಆಕರ್ಷಣೆಗಳನ್ನು ಮಣಿಸಿ ಬ್ರಹ್ಮಜ್ಞಾನದ ಹಾದಿಯಲ್ಲಿ ನಡೆದ. ಬೋಧಿಸತ್ವ ತನ್ನ ಏಕಾಗ್ರತೆಯಿಂದ ನಿತ್ಯಜಾಗೃತ ಸ್ಥಿತಿ ತಲುಪಿದ, ಬುದ್ಧನಾದ । ಚೇತನಾ ತೀರ್ಥಹಳ್ಳಿ
ಜಪಾನಿನ ದೊರೆ ತೋಸಾನ ಖಾಸಗಿ ಅಡುಗೆಮನೆಯಲ್ಲಿ ಒಬ್ಬ ಸಮುರಾಯ್ (ಯುದ್ಧವೀರ) ಇದ್ದ. ಅವನ ಆಸಕ್ತಿಯೆಲ್ಲ ಚಹಾ ತಯಾರಿಕೆಯಲ್ಲೇ ಇದ್ದುದರಿಂದ ಯುದ್ಧಕಲೆಗಳನ್ನು ಕಲಿತಿರಲಿಲ್ಲ. ಆದರೆ ಅವನಷ್ಟು ಅದ್ಭುತವಾಗಿ ಚಹಾ ಮಾಡುವವರು ಯಾರೂ ಇರಲಿಲ್ಲ. ತಾನೇ ತೋಟಕ್ಕೆ ಹೋಗಿ ಚಹಾದ ಎಲೆಗಳನ್ನು ಕೊಯ್ದು ತಂದು, ಒಣಗಿಸಿ ಇಲ್ಲವೇ ಹಸಿಯಾಗಿ – ಅಗತ್ಯಕ್ಕೆ ತಕ್ಕಂತೆ ಅದನ್ನು ಕುದಿಯುವ ನೀರಿನಲ್ಲಿ ಹಾಕಿ, ಒಂದು ನಿರ್ದಿಷ್ಟ ಉಷ್ಣತೆ ಬರುವವರೆಗೆ ಕಾದು ಅದನ್ನು ಕೆಳಗಿಳಿಸುತ್ತಿದ್ದ. ಜಗತ್ತೆಲ್ಲ ಚಹಾದ ಬಟ್ಟಲಲ್ಲೆ ಇದೆಯೇನೋ ಅನ್ನುವಂತೆ ಅವನ ಗಮನ ಸಂಪೂರ್ನವಾಗಿ ಅದರ ಮೇಲೇ ಇರುತ್ತಿತ್ತು. ಜನ ಅವನನ್ನು ಪ್ರೀತಿಯಿಂದ ಚಹಾ ಮಾಸ್ಟರ್ ಎಂದು ಕರೆಯುತ್ತಿದ್ದರು.
ಒಂದು ದಿನ ಚಹಾ ಮಾಸ್ಟರ್, ದೊರೆ ತೋಸಾನೊಂದಿಗೆ ಎಡೋ ನಗರಕ್ಕೆ ಹೋದಾಗ, ಒಬ್ಬ ಸೊಕ್ಕಿನ ಸಮುರಾಯ್ ಅವನನ್ನು ಅಡ್ಡಗಟ್ಟಿದ. “ನೀನು ಸಮುರಾಯ್ ಬಟ್ಟೆ ಧರಿಸಿದ್ದೀಯ, ಬಾ ನನ್ನ ಜೊತೆ ಕತ್ತಿ ವರಸೆ ಮಾಡು, ಇಲ್ಲದಿದ್ದರೆ ಶರಣಾಗು” ಅಂತ ಸವಾಲು ಹಾಕಿದ. ಜೀವನ ಪೂರ್ತಿ ಚಹಾ ಮಾಡಿಕೊಂಡಿದ್ದ ಚಹಾ ಮಾಸ್ಟರ್‌ಗೆ ನೆಟ್ಟಗೆ ಕತ್ತಿ ಹಿಡಿಯಲೂ ಬರುತ್ತಿರಲಿಲ್ಲ. ಆದರೆ ಸಮುರಾಯ್‌ಗಳು ಶರಣಾಗುವುದು ಅವಮಾನ, ಅದರಲ್ಲೂ ದೊರೆಯ ಜೊತೆಗಿರುವ ಸಮುರಾಯ್ ಶರಣಾದರೆ ರಾಜನಿಗೆ ಅವಮಾನ. ಸತ್ತರೂ ಸರಿ, ತಲೆ ಬಾಗೋದಿಲ್ಲ ಅಂದುಕೊಂಡು ಒಂದು ಗಂಟೆ ಸಮಯ ಕೇಳಿ ಕತ್ತಿವರಸೆಯಲ್ಲಿ ನುರಿತ ಗುರುವಿನ ಬಳಿಗೋಡಿದ. “ನಾನಿವತ್ತು ಸಾಯೋದಂತೂ ಹೌದು. ಆದರೆ ಒಬ್ಬ ಸಮುರಾಯ್‌ನಂತೆ ಗೌರವಯುತವಾಗಿ ಸಾಯೋದು ಹೇಗೆ ಕಲಿಸಿಕೊಡಿ” ಅಂತ ಬೇಡಿಕೊಂಡ.
ಆಗ ಆ ಗುರು, “ನೀನು ಸಾಯೋ ಮೊದಲು ನನಗೊಂದು ಕಪ್ ಚಹಾ ಮಾಡಿಕೊಡು” ಅಂದ. ಚಹಾ ಮಾಸ್ಟರ್ ಸಂಪೂರ್ಣ ಏಕಾಗ್ರತೆಯಿಂದ, ತನ್ನ ಸಾವಿನ ಭಯವನ್ನೆಲ್ಲ ಮರೆತು ಶಾಂತವಾಗಿ ಚಹಾ ತಯಾರಿಸಿದ. ಅದನ್ನು ಕಂಡ ಗುರು, “ನೀನು ಕತ್ತಿ ವರಸೆ ಕಲಿಯೋದು ಬೇಕಾಗಿಲ್ಲ. ನೀನೀಗ ಎಷ್ಟು ಏಕಾಗ್ರತೆಯಿಂದ ಮತ್ತು ಶಾಂತವಾಗಿ ಚಹಾ ತಯಾರಿಸಿದೆಯೋ, ಅದೇ ಏಕಾಗ್ರತೆ ಮತ್ತು ಶಾಂತ ಮನಸ್ಸಿನಿಂಡ ಕತ್ತಿ ಹಿಡಿದು ಅವನೆದುರು ನಿಲ್ಲು. ನಿನ್ನ ಎದುರಾಳಿಯ ಕಣ್ಣನ್ನು ದಿಟ್ಟಿಸಿ ನೋಡು, ಅಷ್ಟು ಸಾಕು” ಅಂದ.
ಮರುದಿನ ಮೈದಾನದಲ್ಲಿ, ಚಹಾ ಮಾಸ್ಟರ್ ಯಾವುದೇ ಭಯವಿಲ್ಲದೆ, ಅತ್ಯಂತ ಸ್ಥಿರವಾಗಿ, ಶಾಂತ ಮನಸ್ಸಿನಿಂದ ಕತ್ತಿ ಹಿಡಿದು ಎದುರಾಳಿಯ ಕಣ್ಣನ್ನೇ ದಿಟ್ಟಿಸಿದ. ಅವನ ಮುಖದಲ್ಲಿದ್ದ ಆ ಶಾಂತಿ ಮತ್ತು ಧೈರ್ಯವನ್ನು ಕಂಡ ಸೊಕ್ಕಿನ ಸಮುರಾಯ್ ತತ್ತರಿಸಿಹೋದ.ಇವನೆದುರು ತಾನು ಗೆಲ್ಲೋದಿರಲಿ, ಬದುಕುಳಿಯೋದೂ ಅನುಮಾನ ಅಂದುಕೊಂಡು, ಕ್ಷಮೆ ಕೇಳಿ ಓಡಿಹೋದ.
~
ಪ್ರತಿಯೊಬ್ಬರಲ್ಲೂ ಎದುರಿಸುವ ಶಕ್ತಿ ಇರುತ್ತದೆ. ಆ ಶಕ್ತಿ ನಮ್ಮಲ್ಲಿದೆ ಅನ್ನೋದನ್ನು ನಾವು ಮನದಟ್ಟು ಮಾಡಿಕೊಳ್ಳಬೇಕಷ್ಟು. ಶುರುವಲ್ಲಿ ಚಹಾ ಮಾಸ್ಟರ್ ತನಗೆ ಕತ್ತಿವರಸೆ ಬರೋದಿಲ್ಲ, ತಾನು ಸಾಯುತ್ತೇನೆ ಅಂದುಕೊಂಡಿದ್ದ. ಈ ಹಿಂಜರಿಕೆ ಅವನ ಶಕ್ತಿಯನ್ನು ಹಿನ್ನೆಲೆಗೆ ತಳ್ಳಿತ್ತು. ನಂತರದಲ್ಲಿ ಸೊಕ್ಕಿನ ಸಮುರಾಯ್‌ಗೆ ಇವನ ಪ್ರಭಾವಳಿಯ ಮುಂದೆ ತಾನು ಸೋತುಸುಣ್ಣವಾಗ್ತೀನಿ ಅನ್ನುವ ಭಯ ಆವರಿಸಿತು, ಆಗ ಅವನ ಶಕ್ತಿ ಹಿನ್ನೆಲೆಗೆ ಸರಿಯಿತು. ಮೋಡ ಮುಸುಕಿದಾಗ ಸೂರ್ಯನ ಶಾಖದ ಪ್ರಖರತೆಯೂ ಮಂದವಾಗುತ್ತದೆ, ಹೀಗಿರುವಾಗ ಭಯದ ಮುಸುಕಲ್ಲಿ ಶಕ್ತಿ ಮಂಕಾಗುವುದು ಸಹಜವೇ.
ಪೀನ ಮಸೂರದ ಮೂಲಕ ಸೂರ್ಯನ ಕಿರಣಗಳನ್ನು ಒಗ್ಗೂಡಿಸಿ ಹಾಯಿಸಿದಾಗ, ಅದರೊಳಗಿನ ಬೆಂಕಿಯ ಶಕ್ತಿ ಕಾಣಿಸಿಕೊಳ್ಳುವಂತೆ; ನಮ್ಮೆಲ್ಲ ಬಲವನ್ನು ಏಕಾಗ್ರತೆಯ ಮೂಲಕ ಹಾಯಿಸಿದಾಗ, ನಮ್ಮೊಳಗಿನ ಶಕ್ತಿಯೂ ಪ್ರಕಟವಾಗುತ್ತದೆ – ಅನ್ನುವುದು ನಾವೆಲ್ಲ ಎಳವೆಯಿಂದ ಕಲಿತುಬಂದ ಪಾಠ ಅಲ್ಲವೆ?
ನೀರು ಕುಡಿಯುವಾಗ ನೀರು ಕುಡಿಯುವುದರಲ್ಲೇ ತೊಡಗು. ನಿದ್ದೆ ಮಾಡುವಾಗ ನಿದ್ದೆಯನ್ನಷ್ಟೆ ಮಾಡು. ಕೆಲಸ ಮಾಡುವಾಗ ಸಂಪೂರ್ಣವಾಗಿ ಅದರಲ್ಲಿ ಮುಳುಗು – ಅನ್ನುತ್ತೆ ಝೆನ್. ಮನಸ್ಸು ಒಂದರ ಮೇಲಷ್ಟೆ ನೆಲೆಸಿರುವಾಗ ಅದು ಶಾಂತವಾಗುತ್ತದೆ. ಕದಡಿದ ಕೊಳದಲ್ಲಿ ಬಿಂಬ ಅಸ್ಪಷ್ಟವಾಗಿ ಮೂಡುವಂತೆ, ಹತ್ತಾರು ವಿಚಾರಗಳಲ್ಲಿ ಚದುರಿದ ಮನಸ್ಸೂ ಕದಡಿ ಅಶಾಂತವಾಗುತ್ತದೆ. ಆಗ ನಮ್ಮ ಕೆಲಸಗಳೂ ಅರೆಬರೆಯಾಗುತ್ತವೆ. ಮನಸ್ಸು ಶಾಂತವಾಗಿರಬೇಕೆಂದರೆ, ಅದು ಕೇವಲ ಒಂದರಲ್ಲಿ – ನಾವು ಯಾವ ಕೆಲಸ ಮಾಡುತ್ತ ಇರುತ್ತೇವೋ ಅದರಲ್ಲಿ – ಮಾತ್ರ ನೆಲೆಸಿರಬೇಕು.
~
ಕಥಾ ಸರಿತ್ಸಾಗರದಲ್ಲಿ ಒಂದು ವರರುಚಿ ಎಂಬುವನ ಕತೆಯೊಂದಿದೆ. ಇವನು ರಾಜಾ ವಿಕ್ರಮಾದಿತ್ಯನ ಆಸ್ಥಾನ ಪಂಡಿತರಲ್ಲಿ ಒಬ್ಬ, ಇವನನ್ನು ಏಕಸಂಧಿಗ್ರಾಹಿಯೆಂದೂ ಅಪ್ರತಿಮ ಏಕಾಗ್ರತೆಯುಳ್ಳವನೆಂದೂ ಕೊಂಡಾಡಲಾಗುತ್ತಿತ್ತು. ಇದನ್ನು ಪರೀಕ್ಷಿಸಲು ರಾಜ ಒಂದು ಉಪಾಯ ಹೂಡಿದ. ವರರುಚಿಯ ಕೈಗೆ ಅಂಚಿನಮಟ್ಟದವರೆಗೂ ತುಂಬಿದ ಎಣ್ಣೆಯ ಬಟ್ಟಲೊಂದನ್ನು ಕೊಟ್ಟು, ‘ಇದರ ಒಂದು ಹನಿಯೂ ಚೆಲ್ಲದಂತೆ ಪೇಟೆ ಬೀದಿ ಸುತ್ತಾಡಿ ಬಾ’ ಅಂದ. ಅದಾಂತೆ ವರರುಚಿ ಎಣ್ಣೆ ಬಟ್ಟಲನ್ನು ಬೊಗಸೆಯಲ್ಲಿ ಹಿಡಿದು ಹೊರಟ. ರಾಜ ಅವನ ಮನಸ್ಸನ್ನು ಅತ್ತಿತ್ತ ಸೆಳೆಯಲೆಂದೇ ದಾರಿಯುದ್ದಕ್ಕೂ ಹಲವು ಆಕರ್ಷಣೆಗಳನ್ನು ಏರ್ಪಡಿಸಿದ್ದ. ಹಾಡುವವರು, ಕುಣಿಯುವವರು, ಹಾಸ್ಯಗಾರರು, ಸುಂದರಿಯರು, ಸರ್ಕಸ್ಸಿನವರು ಇತ್ಯಾದಿ ಏರ್ಪಾಟು ಮಾಡಿದ್ದ. ಅವರೆಲ್ಲ ವರರುಚಿಯ ಸುತ್ತಮುತ್ತ ತಿರುಗುತ್ತಾ, ಹಾಡುತ್ತ, ಕುಣಿಯುತ್ತ ಅವನ ಗಮನ ತಪ್ಪಿಸಲು ಯತ್ನಿಸಿದರು; ಸೋತುಹೋದರು. ವರರುಚಿ ಒಂದು ಹನಿ ಎಣ್ಣೆಯನ್ನೂ ಚೆಲ್ಲದೆ ನಿಗದಿತ ಸಮಯದಲ್ಲಿ ಪೇಟೆ ಸುತ್ತಿ ಅರಮನೆಗೆ ಮರಳಿ ಬಂದ.
ವರರುಚಿಯ ಏಕಾಗ್ರತೆಗೆ ಬೆರಗಾದ ರಾಜಾ ವಿಕ್ರಮಾದಿತ್ಯ ಮತ್ತೆಂದೂ ಅವನನ್ನು ಪರೀಕ್ಷಿಸುವ ಸಾಹಸ ಮಾಡಲಿಲ್ಲ.
~
ಇಂಥ ಕತೆಗಳು ನಮ್ಮ ಪ್ರಾಚೀನ ಸಾಹಿತ್ಯದಲ್ಲಿ ಸಾಕಷ್ಟಿವೆ. ಯೋಗವಾಸಿಷ್ಠದಲ್ಲಿ ಜನಕ ರಾಜನು ಸುಖದೇವ ಮುನಿಗೆ ಈ ಪರೀಕ್ಷೆ ಒಡ್ಡುವ ಉಲ್ಲೇಖವಿದೆ. ಅದರಲ್ಲಿ ಸುಖದೇವ ಯಶಸ್ವಿಯಾದ ನಂತರ ಜನಕ ಮಹಾರಾಜ, “ಈ ಎಣ್ಣೆ ಬಟ್ಟಲು ನಮ್ಮ ಆತ್ಮ. ಅರಮನೆಯ ವೈಭವವೇ ಈ ಸಂಸಾರ. ನಾನು ರಾಜನಾಗಿ ಈ ಎಲ್ಲಾ ವೈಭವಗಳ ಮಧ್ಯೆ ಇದ್ದರೂ, ನನ್ನ ಗಮನವೆಲ್ಲಾ ಸದಾ ನನ್ನ ಆತ್ಮದ ಮೇಲಿರುತ್ತದೆ. ಹೇಗೆ ನೀನು ಎಣ್ಣೆ ಚೆಲ್ಲದಂತೆ ಅರಮನೆಯ ಆಕರ್ಷಗಳನ್ನು ಕಡೆಗಣಿಸಿ ಸುತ್ತಿ ಬಂದೆಯೋ, ಹಾಗೇ ನಾನು ಸಂಸಾರದಲ್ಲಿದ್ದರೂ ಅದಕ್ಕೆ ಅಂಟಿಕೊಳ್ಳದೆ ಕರ್ತವ್ಯ ನಿರ್ವಹಿಸುತ್ತೇನೆ’ ಅನ್ನುತ್ತಾನೆ.
ಅದೇ ರೀತಿ, ಬುದ್ಧನು ತನ್ನ ಶಿಷ್ಯರಿಗೆ ಎಣ್ಣೆ ತುಂಬಿದ ಬಟ್ಟಲು ನೀಡಿ ಅವರ ಏಕಾಗ್ರತೆಯನ್ನು ಪರೀಕ್ಷಿಸುತ್ತಿದ್ದನೆಂಬ ಐತಿಹ್ಯಗಳೂ ಇವೆ. ಬೌದ್ಧ ಸಾಹಿತ್ಯದ ಜನಪದ ಕಲ್ಯಾಣಿ ಸುತ್ತದಲ್ಲಿ ಮತ್ತು ಧಮ್ಮಪದ ಅಟ್ಠಕಥಾದಲ್ಲಿ ಇದು ಬೇರೆ ಬೇರೆ ರೀತಿಯಲ್ಲಿ ಕಾಣಿಸಿಕೊಳ್ಳುತ್ತದೆ. “ಜನಪದ ಕಲ್ಯಾಣಿ ಸುತ್ತದಲ್ಲಿ, ತುಂಬಿದ ಎಣ್ಣೆ ಬಟ್ಟಲನ್ನು ಹಿಡಿದು, ಅದರ ಒಂದು ಹನಿಯನ್ನೂ ಚೆಲ್ಲದೆ, ವೇದಿಕೆಯಲ್ಲಿ ಕುಣಿಯುತ್ತಿರುವ ವೇಶ್ಯೆಯನ್ನು ಬಳಸಿ ಬರಬೇಕೆಂಬ ಷರತ್ತು ವಿಧಿಸಲಾಗಿರುತ್ತದೆ. ಅಕಸ್ಮಾತ್ ಚೆಲ್ಲಿದರೆ, ಶಿರಚ್ಛೇದನದ ಶಿಕ್ಷೆ ಘೋಷಿಸಲಾಗಿರುತ್ತದೆ. ಈ ದೃಷ್ಟಾಂತದ ಮೂಲಕ ಬುದ್ಧನು ಎಣ್ಣೆಯ ಬಟ್ಟಲನ್ನು ಕಾಯಗತ ಸತಿ ಎಂದೂ ಅದನ್ನು ಹಿಡಿದ ವ್ಯಕ್ತಿಯು ಹೇಗೆ ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಎಣ್ಣೆಯ ಮೇಲೆ ಮಾತ್ರ ಗಮನವಿಡುತ್ತಾನೋ, ಹಾಗೆಯೇ ಒಬ್ಬ ಸಾಧಕನು ಸಂಸಾರದ ಆಕರ್ಷಣೆಗಳ ಮಧ್ಯೆ ತನ್ನ ಎಚ್ಚರವನ್ನು ಕಳೆದುಕೊಳ್ಳಬಾರದೆಂದೂ ಬೋಧಿಸುತ್ತಾನೆ.
ವರರುಚಿ, ಜನಕ ಮತ್ತು ಬುದ್ಧ – ಈ ಮೂವರ ಕತೆಗಳಲ್ಲೂ ‘ಎಣ್ಣೆ ಬಟ್ಟಲು’ ಎಂಬುದು ಸಾಮಾನ್ಯ ಅಂಶ. ಆದರೆ ಬುದ್ಧನ ಕತೆಯು ಇದು ಕೇವಲ ಏಕಾಗ್ರತೆಯಲ್ಲ, ಅದು ‘ಸತಿ’ (ಸದಾ ಎಚ್ಚರವಾಗಿರುವ ಸ್ಥಿತಿ) ಎಂಬುದನ್ನು ಒತ್ತಿ ಹೇಳುತ್ತದೆ.
~
ಏಕಾಗ್ರತೆ, ಜಾಗೃತಿಯ ಮೊದಲ ಹಂತ. ಚಹಾ ಮಾಸ್ಟರ್ ಸಮುರಾಯ್ ತನ್ನ ಏಕಾಗ್ರತೆಯನ್ನು ನಿರಂತರವಾಗಿರಿಸಿಕೊಂಡಿದ್ದರೆ, ಅವನು ಜಾಗೃತನಾಗುತ್ತಿದ್ದ. ಆದರೆ ಅವನ ಉದ್ದೇಶ ಕೇವಲ ಗೆಲ್ಲುವುದಾಗಿತ್ತು. ವರರುಚಿ ತನ್ನ ಏಕಾಗ್ರತೆಯನ್ನು ಐಹಿಕಕ್ಕೆ ಸೀಮಿತಗೊಳಿಸಿಕೊಂಡು ಭೋಗಭಾಗ್ಯಗಳಲ್ಲೆ ತೃಪ್ತನಾದ. ಜನಕ ಮಹಾರಾಜ ಒಂದಷ್ಟು ಹೆಜ್ಜೆ ಮುಂದುವರಿದು, ತನ್ನ ಏಕಾಗ್ರತೆಯಿಂದ ಐಹಿಕ ಆಕರ್ಷಣೆಗಳನ್ನು ಮಣಿಸಿ ಬ್ರಹ್ಮಜ್ಞಾನದ ಹಾದಿಯಲ್ಲಿ ನಡೆದ. ಬೋಧಿಸತ್ವ ತನ್ನ ಏಕಾಗ್ರತೆಯಿಂದ ನಿತ್ಯಜಾಗೃತ ಸ್ಥಿತಿ ತಲುಪಿದ, ಬುದ್ಧನಾದ.

