ವಚನ ವೈವಿಧ್ಯ#28: ಮರುಳುತನಂ-ಸಕಳೇಶ ಮಾದರಸ

 ದೇವರನ್ನು ನಂಬಿರುವುದೇ ಆದರೆ ʻವರಿʼಯಾಗಲೀ ಬದುಕು ʻಯಾಕೆ ಹೀಗೆʼಅನ್ನುವ ಕಾರಣದ ಹುಡುಕಾಟವಾಗಲೀ ಮರುಳಾಟ ಅನ್ನುವಂತಿದೆ ಈ ವಚನ । ಓ.ಎಲ್.ನಾಗಭೂಷಣ ಸ್ವಾಮಿ

ಕಾಮಿಸಿ ಕಲ್ಪಿಸಿ ಭಾವಿಸಿ
ಬರಿದೆ ಬಳಲಿದೆ
ಚಿಂತೆ ಮರುಳುತನಂ
ಅದೆಂತು ಬಂದುದನಂತೆ ಕಾಬುದು
ಚಿಂತೆ ಮರುಳುತನಂ
ಅಚಿಂತ್ಯ ಸಕಳೇಶ್ವರ ಮಾಡಿದಂತೆ
ಅಂತೆಯಲ್ಲದೆ ಎಂತೂ ಆಗದು
ಚಿಂತೆ ಮರುಳುತನಂ

(ಅಚಿಂತ್ಯ-ಚಿಂತನೆಯ ಮೂಲಕ ಅರಿಯಲಾಗದ)

ಬಯಸಿ, ಕಲ್ಪನೆ ಮಾಡಿಕೊಂಡು, ಏನೇನೋ ಭಾವಿಸಿಕೊಂಡು ಬಳಲಿದೆ. ಇಂಥ ಚಿಂತೆ ಮರುಳುತನ.  ಏನೇನು ಬಂದಿತೋ ಅದೆಲ್ಲ ಹಾಗೇ ಸುಮ್ಮನೆ ಬಂದಿತೆಂದು ಭಾವಿಸಿದೆ. ಯಾಕೆ ಬಂದಿತು ಅನ್ನುವ ಚಿಂತೆ ಮರುಳುತನ. ಚಿಂತನೆಯ ಮೂಲಕ ಅರಿಯಲಾಗದ ಸಕಲೇಶಮಾದರಸ ಮಾಡಿದಂತೆ ಅಲ್ಲದೆ ಬೇರೇನೂ ಆಗದು. ಹಾಗಾಗಿ ಆಗುವುದು ಏನು ಎಂಬ ಬಗ್ಗೆ ಚಿಂತೆ ಮಾಡುವುದು ಮರುಳುತನ.

ಬಯಕೆ, ಕಲ್ಪನೆ, ಭಾವನೆ ಇವು ಮೂರೂ ಮನಸ್ಸನ್ನು ಬಳಲಿಸುವ ಸಂಗತಿಗಳು. ಈ ವಚನದಲ್ಲಿ ಭವಿಷ್ಯವನ್ನು ಕುರಿತ ಹಾಗೆ ಇವು ಮೂರೂ ʻಚಿಂತೆʼ ಅಥವಾ ʻವರಿʼ (worry) ಗೆ ಕಾರಣವಾಗಿ ಮನುಷ್ಯರನ್ನು ಬಳಲಿಸುತ್ತವೆ. ಹಾಗೆಯೇ ಏನಾದರೂ ಆದಾಗ ಯಾಕೆ ಆಯಿತು, ಬಂದ ಕಷ್ಟವೋ ದುಃಖವೋ ಯಾಕೆ ಬಂತು ಅನ್ನುವ ಚಿಂತೆಯೂ ನಿಜವಾಗಿ ಅರ್ಥವಿಲ್ಲದ್ದು. ಬಯಕೆ, ಕಲ್ಪನೆ, ಭಾವನೆ, ಈಗ ಬದುಕಿನಲ್ಲಿ ಆಗಿರುವ ಸಂಗತಿ ಇವೆಲ್ಲ ಯಾಕೆ ಅನ್ನುವ ಕಾರಣ ಮೀಮಾಂಸೆ ಇವಷ್ಟೂ ಮರುಳುತನ, ಬದುಕಿಗೆ ನಾವೇ ಕವಿಸಿಕೊಳ್ಳುವ ಮಂಕುತನ. ದೇವ ಸಕಳೇಶನನ್ನು ಚಿಂತೆಯ (ಅಥವಾ ಆಲೋಚನೆಯ) ಮೂಲಕ ಅರಿಯಲು ಯತ್ನಿಸುವುದು ಮರುಳುತನ ಯಾಕೆಂದರೆ ಸಕಳೇಶನು ಅ-ಚಿಂತ್ಯ, ಬೌದ್ಧಿಕ ಚಿಂತನೆಯ ಮೂಲಕ ಅರಿಯಲಾಗದವನು. ಹಾಗಾಗಿ ದೇವರನ್ನು ನಂಬಿರುವುದೇ ಆದರೆ ʻವರಿʼಯಾಗಲೀ ಬದುಕು ʻಯಾಕೆ ಹೀಗೆʼಅನ್ನುವ ಕಾರಣದ ಹುಡುಕಾಟವಾಗಲೀ ಮರುಳಾಟ ಅನ್ನುವಂತಿದೆ ಈ ವಚನ.

ಕನಕದಾಸರ ತಲ್ಲಣಿಸದಿರು ಕಂಡ್ಯ ತಾಳು ಮನವೇ ಎಂಬ ರಚನೆ ತಲ್ಲಣವನ್ನು ಕುರಿತದ್ದೇ ಹೊರತು ನೆಮ್ಮದಿಯ ಚಿತ್ರಣವಲ್ಲ. ತಲ್ಲಣಕ್ಕೆ ಅರ್ಥವಿಲ್ಲವೆಂದು ಸಮಾಧಾನ ಹೇಳಿಕೊಳ್ಳುವ, ಹಾಗೆ ಹೇಳಿಕೊಳ್ಳುವುದನ್ನು ಸಮರ್ಥಿಸಿಕೊಳ್ಳುವ ರಚನೆ. ಅದೇ ರೀತಿಯಲ್ಲಿ ಈ ವಚನವು ಕೂಡ ʻನಿಜ;ವಾಗಿ ಅರ್ಥವಿಲ್ಲದ ಚಿಂತೆ, ಕಾರಣಗಳ ಹುಡುಕಾಟ ಇವು ಮರುಳುತನವೆನ್ನುವಾಗ ಇವು ಮನುಷ್ಯರನ್ನು ಕಾಡುತ್ತವೆ ಅನ್ನುವ ಸತ್ಯದತ್ತ ಗಮನ ಸೆಳೆಯುವ ರಚನೆಯಾಗಿಯೇ ಕಾಣುತ್ತದೆ. ಬುದ್ಧಿ ಮೂಲವಾದ ಸತ್ಯವೂ ಕಲ್ಪನೆಯೋ, ಭಾವನೆಯೋ, ಬಯಕೆಯೋ ಆಗಿರಬಹುದಲ್ಲ ಅನ್ನುವ ಎಚ್ಚರವನ್ನು ಹೇಳುವಂತೆ ತೋರುತ್ತದೆ.  ನಮ್ಮ ಬುದ್ಧಿ, ಭಾವ, ದೇಹ ಅಥವಾ ನಾವು ಏನು ಎಂದು ಕಲ್ಪಿಸಿಕೊಂಡಿದ್ದೇವೋ ಅದಕ್ಕೆಲ್ಲ ಇಡಿಯಾಗಿ ಅನುಭವಕ್ಕೆ ಬಂದದ್ದು ಮಾತ್ರ ಸತ್ಯ ಅನ್ನುತ್ತಿದೆ ಈ ವಚನ ಅಂತಲೂ ಒಮ್ಮೊಮ್ಮೆ ತೋರುತ್ತದೆ.


ಸಕಳೇಶ ಮಾದರಸ

ಸಕಳೇಶ ಮಾದರಸರ ೧೩೫ ವಚನಗಳು ಪ್ರಕಟವಾಗಿವೆ. ಸಕಳೇಶ್ವರ ಎಂಬುದು ವಚನಾಂಕಿತ. ಇವರನ್ನು ಕುರಿತು ಅನೇಕ ಮಧ್ಯಕಾಲೀನ ಕೃತಿಗಳು ಉಲ್ಲೇಖ ಮಾಡುತ್ತವೆ.   ಸಂಗೀತಜ್ಞ,  ವೀಣಾದಿ ವಾದ್ಯಗಳ ಕಲಾವಿದ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.