ಈ ವಚನದಲ್ಲಿ ಬೊಂತಾದೇವಿ ತನ್ನ ಅಂಕಿತವನ್ನು ಬಿಡಾಡಿ ಎಂದಿರಿಸಿಕೊಂಡಿರುವುದು ಅಚ್ಚರಿ ಮೂಡಿಸುತ್ತದೆ… । ಓ.ಎಲ್.ನಾಗಭೂಷಣ ಸ್ವಾಮಿ
ಊರ ಒಳಗಣ ಬಯಲು
ಊರ ಹೊರಗಣ ಬಯಲೆಂದುಂಟೆ
ಊರೊಳಗೆ ಬ್ರಾಹ್ಮಣಬಯಲು
ಊರ ಹೊರಗೆ ಹೊಲೆಬಯಲೆಂದುಂಟೆ
ಎಲ್ಲಿ ನೋಡಿದಡೆ ಬಯಲೊಂದೆ
ಭಿತ್ತಿಯಿಂದ ಒಳಹೊರಗೆಂಬನಾಮವೈಸೆ
ಎಲ್ಲಿ ನೋಡಿದಡೆ ಕರೆದಡೆ ಓ ಎಂಬಾತನೆ ಬಿಡಾಡಿ
(೧೦೯೪)
[ನಾಮವೈಸೆ-ಹೆಸರಷ್ಟೇ; ಬಿಡಾಡಿ: ಕಟ್ಟುಪಾಡುಗಳಿರದ, ಯಾರ ಒಡೆತನಕ್ಕೂ ಒಳಪಡದೆ ಆಡುವ]
ಬಯಲು ಅನ್ನುವುದು ಇಡೀ ಸೃಷ್ಟಿಯನ್ನೆಲ್ಲ ಒಳಗೊಂಡಿರುವ ʻಸ್ಪೇಸುʼ. ಊರಿನ ಒಳಗೆ ಬ್ರಾಹ್ಮಣ ಬಯಲು, ಊರ ಹೊರಗಿನ ಹೊಲೆಯರ ಬಯಲು ಅನ್ನುವುದಿಲ್ಲ. ಎಲ್ಲಿ ಕಂಡರೂ ಕಾಣುವುದೆಲ್ಲವೂ ಬಯಲೇ. ಘನವಾದ ಭಿತ್ತಿಯಾದ ಕಾರಣಕ್ಕೆ ಒಳಗೆ, ಹೊರಗೆ ಅನ್ನುವ ಹೆಸರು ಬಂದವು, ಅಷ್ಟೇ ಅಲ್ಲವೇ? ಎಲ್ಲಿ ಬೇಕೋ ಅಲ್ಲಿ ಗಮನವಿಟ್ಟು ನೋಡಿ ಕರೆದರೆ ಅಲ್ಲಿ ಓ ಅನ್ನುವ ಉತ್ತರ ಬರುತ್ತದಲ್ಲ ಆ ಉತ್ತರವೇ ಬಿಡಾಡಿಯದು.
ಬೊಂತಾದೇವಿ ತನ್ನ ಅಂಕಿತವನ್ನು ಬಿಡಾಡಿ ಎಂದಿರಿಸಿಕೊಂಡಿರುವುದು ಅಚ್ಚರಿ ಮೂಡಿಸುತ್ತದೆ. ಬಯಲಿನ ಹಾಗೆ ಯಾವ ಕಟ್ಟುಪಾಡೂ ಇಲ್ಲದೆ ಇಷ್ಟ ಬಂದಂತೆ ಆಡಿಕೊಂಡಿರುವ ಬಿಡಾಡಿ, (ಎಲ್ಲವನ್ನೂ) ಬಿಟ್ಟು ಆಡುವವನು ಎಂಬ ಶಬ್ದ ಶಿವನನ್ನು ಸೂಚಿಸುತ್ತದೆ ಎಂಬ ವ್ಯಾಖ್ಯಾನವಿದೆ. ಗಮನಿಸಬೇಕಾದ ಮಾತೆಂದರೆ ಬಯಲು-ಮತ್ತು ದೇವರು ಅನ್ನುವ ಕಲ್ಪನೆ ಕೂಡ ಒಳಗು/ಹೊರಗು ಅನ್ನುವ ವ್ಯತ್ಯಾಸವಿರದ, ಜಾತಿ, ಕುಲ, ಲಿಂಗಗಳ ಭೇದವಿರದ ಎಲ್ಲೆಲ್ಲೂ ಇರುವ, ಒಳಗು ಹೊರಗನ್ನು ಆವರಿಸಿಕೊಂಡಿರುವ ಸತ್ಯವವಲ್ಲವೇ ಎಂದು ಈ ವಚನ ಕೇಳುತ್ತದೆ. ಸಾಮಾಜಿಕ ವ್ಯತ್ಯಾಸಗಳೆಲ್ಲ ನಾವು ಕಲ್ಪಿಸಿಕೊಂಡದ್ದು, ಸೃಷ್ಟಿಯಲ್ಲಿ ಎಲ್ಲವೂ ಸಮಾನ ಜೀವಗಳೇ ಹೌದು ಅನ್ನುತ್ತದೆ.
ಬೊಂತಾದೇವಿ
ಬಿಡಾಡಿ ಎಂಬ ಅಂಕಿತದಲ್ಲಿ ಬೊಂತಾದೇವಿ ರಚಿಸಿರುವ ೬ ವಚನಗಳು ಪ್ರಕಟವಾಗಿವೆ. ಈಕೆ ಕಾಶ್ಮೀರದ ರಾಜನೊಬ್ಬನ ಮಗಳು, ನಿಜದೇವಿ ಎಂಬ ಹೆಸರಿತ್ತು ಎಂಬ ಐತಿಹ್ಯವಿದೆ. ಅತೀವ ವೈರಾಗ್ಯದಲ್ಲಿ ಬೊಂತಾದೇವಿ ಉಟ್ಟ ಬಟ್ಟೆಯನ್ನೆಲ್ಲ ತೊರೆದು ದಿಗಂಬರೆಯಾಗಿ ಕಲ್ಯಾಣದತ್ತ ನಡೆದಾಗ ಶಿವನು ಯುವಕನ ರೂಪದಲ್ಲಿ ಬಂದು ಮದುವೆಯಾಗಲು ಬಯಸಿದರೂ ಒಪ್ಪಲಿಲ್ಲವೆಂದೂ ಅವನು ಆಕೆಯ ದೃಢತೆಯನ್ನು ಮೆಚ್ಚಿ ʻಬೊಂತೆʼ ಅಥವಾ ಕೌದಿಯನ್ನು ನೀಡಿದ, ಆಕೆಗೆ ಬೊಂತಾದೇವಿಯೆಂದು ಹೆಸರಾಯಿತು ಎಂಬ ಕಥೆಯಿದೆ. ಕಲ್ಯಾಣವು ಹಾಳಾದ ನಂತರವೂ ಬೊಂತಾದೇವಿ ಅಲ್ಲೇ ಇದ್ದು, ಕೊನೆಗೆ ಬೊಂತೆಯನ್ನು ಬಾನಿಗೆಸೆದು ಅದರೊಡನೆ ಕಣ್ಮರೆಯಾದ ಐತಿಹ್ಯವಿದೆ.

