ಕಸಾಂಡ್ರಾಳಿಗೆ ವಿದ್ಯೆಯನ್ನೇನೋ ಕೊಡಲಾಯಿತು ಆದರೆ ಅವಳನ್ನು ನಂಬುವ ಸಂಗತಿಯನ್ನು ಕಿತ್ತುಕೊಳ್ಳಲಾಯಿತು. ಪ್ರತಿ ಕಾಲಮಾನದಲ್ಲೂ ಈ ಮಾತನ್ನು ಸಾಬೀತು ಮಾಡುವಂಥ ಜನರಿರುತ್ತಾರೆ… । ಸಂಗ್ರಹಾನುವಾದ: ಚಿದಂಬರ ನರೇಂದ್ರ
ಗ್ರೀಕ್ ಪುರಾಣದಲ್ಲಿ ಒಂದು ಘಟನೆ ನಡೆಯುತ್ತದೆ. ಗ್ರೀಕ್ ದೇವತೆ ಅಪೋಲೋ ಗೆ ಟ್ರೋಜನ್ ರಾಜಕುಮಾರಿ ಕಸಾಂಡ್ರಾ ಳ ಮೇಲೆ ಪ್ರೇಮ ಆಗುತ್ತದೆ. ಅವನು ಕಸಾಂಡ್ರ ಳ ಮನಸ್ಸು ಗೆಲ್ಲಲು, ಅವಳ ಹೃದಯದಲ್ಲಿ ಜಾಗ ಪಡೆಯಲು ಆಕೆಗೆ ಭವಿಷ್ಯ ವನ್ನು ಗೊತ್ತು ಮಾಡಿಕೊಳ್ಳುವ ವರ ಕೊಡುತ್ತಾನೆ. ಆದರೆ ಕಸಾಂಡ್ರಾ ಅವನ ಪ್ರೇಮವನ್ನು ನಿರಾಕರಿಸಿದಾಗ ಸಿಟ್ಟಿಗೇಳುವ ಅಪೋಲೋ ಆಕೆಗೆ ಶಾಪ ಕೊಡುತ್ತಾನೆ. ಈ ಶಾಪದ ಪ್ರಕಾರ ಆಕೆಗೆ ಭವಿಷ್ಯವೇನೋ ಗೊತ್ತಾಗುತ್ತದೆ ಆದರೆ ಅವಳ ಮುನ್ಸೂಚನೆಗಳನ್ನ, ಎಚ್ಚರಿಕೆಗಳನ್ನ ಯಾರೂ ನಂಬುವುದಿಲ್ಲ. ಕಸಾಂಡ್ರಾ ಟ್ರೊಜನ್ ಹಾರ್ಸ್ ಮೂಲಕ ಟ್ರೊಯ್ ವಿನಾಶದ ಬಗ್ಗೆ ಭವಿಷ್ಯ ಹೇಳಿದಾಗ ಅವಳನ್ನು ಯಾರೂ ನಂಬಲಿಲ್ಲ.
ಅಂದಿನಿಂದ To be a Casandra ಎನ್ನುವ ವಾಕ್ಯ ಪ್ರಸಿದ್ಧವಾಯಿತು. ಹಾಗೆಂದರೆ, ಕಸಾಂಡ್ರಾಳಿಗೆ ವಿದ್ಯೆಯನ್ನೇನೋ ಕೊಡಲಾಯಿತು ಆದರೆ ಅವಳನ್ನು ನಂಬುವ ಸಂಗತಿಯನ್ನು ಕಿತ್ತುಕೊಳ್ಳಲಾಯಿತು. ಪ್ರತಿ ಕಾಲಮಾನದಲ್ಲೂ ಈ ಮಾತನ್ನು ಸಾಬೀತು ಮಾಡುವಂಥ ಜನರಿರುತ್ತಾರೆ. ಆದ್ದರಿಂದಲೇ ಸಾಕ್ರೆಟಿಸ್ ವಿಷ ಕುಡಿಯಬೇಕಾಯಿತು, ಅನ್ ಅಲ್ ಹಕ್ ಎಂದು ಘೋಷಣೆ ಮಾಡಿದ ೧೦ ನೇ ಶತಮಾನದ ಸೂಫಿ ಸಂತ ಮನ್ಸೂರ್ ಅಲ್ ಹಲ್ಲಾಜ್ ನಗು ನಗುತ್ತ ನೇಣುಗಂಬ ಏರಬೇಕಾಯಿತು. ಕೆಲವೊಮ್ಮೆ ವಿದ್ಯೆ ಕೇವಲ ಉಡುಗೊರೆಯಲ್ಲ ಶಿಕ್ಷೆಯೂ ಆಗಿಬಿಡುತ್ತದೆ.
ಆಧುನಿಕ ಮನಶಾಸ್ತ್ರದಲ್ಲಿ, ಸಮಾಜಶಾಸ್ತ್ರದಲ್ಲಿ ತಮ್ಮ ವಿದ್ಯೆಯನ್ನ, ಮಾತುಗಳನ್ನ ಜನ ನಂಬದೇ ಹೋದಾಗ ಆ ವ್ಯಕ್ತಿ ಅನುಭವಿಸುವ ಆತಂಕವನ್ನ, ಖಿನ್ನತೆಯನ್ನ ವಿವರಿಸಲು ಕಸಾಂಡ್ರಾ ಕಾಂಪ್ಲೆಕ್ಸ್ ಎನ್ನುವ ಮಾತನ್ನು ಬಳಸುತ್ತಾರೆ. ಬಹುತೇಕ whistleblower ಗಳ ಮಾತನ್ನು ಜನ ನಂಬದೇ ಹೋದಾಗ ಅವರು ಅನುಭವಿಸುವ ಅಸಹಾಯಕತೆ, ಅಪನಂಬಿಕೆ ಗಳನ್ನು ವಿವವರಿಸಲೂ to be a Casandra ಎನ್ನುವ ಮಾತು ಬಳಕೆಯಾಗುತ್ತದೆ.
********************************

