ಯಾವುದನ್ನ ಕಾಮು, ಅಸಂಗತ (absurd) ಎಂದು ಗುರುತಿಸುತ್ತಿದ್ದನೋ, ಯಾವಾಗ ಮನುಷ್ಯ ತನ್ನ ಬದುಕಿನ ಅಂಥ ದುಃಖಭರಿತ ಅರ್ಥಹೀನತೆಯನ್ನು ಎದುರುಗೊಳ್ಳುತ್ತಾನೋ, ಆಗ ಅವನು ಈ ಎರಡು ದಾರಿಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುತ್ತಾನೆ ~ ಚಿದಂಬರ ನರೇಂದ್ರ
ಆಲ್ಬರ್ಟ್ ಕಾಮು ನ ಪ್ರಕಾರ ಬದುಕಿನ ವಿರುದ್ಧ ನೀವು ಮಾಡುವಂಥ ಪಾಪ ಯಾವುದಾದರೂ ಇದ್ದರೆ ಅದು ಮುಂದಿನ ಬದುಕಿನ ಬಗ್ಗೆ ಭರವಸೆ ಇಟ್ಟುಕೊಳ್ಳುವುದು. ಭರವಸೆ ಬಹಳ ಒಳ್ಳೆಯದು, ಭರವಸೆಯ ಮೇಲೆಯೇ ಜಗತ್ತು ನಿಂತಿರುವುದು ಎಂದೆಲ್ಲ ನಮಗೆ ಹೇಳಿಕೊಡಲಾಗಿದೆ, ಆದರೆ ಆಲ್ಬರ್ಟ ಕಾಮು ನ ಪ್ರಕಾರ ಭರವಸೆ ಎಂದರೆ ಸೋಲೊಪ್ಪಿಕೊಳ್ಳುವುದು. ನನ್ನ ಈ ಬದುಕು ಅಷ್ಟು ಚೆನ್ನಾಗಿಲ್ಲ ಆದ್ದರಿಂದ ಅಸ್ತಿತ್ವದಲ್ಲಿಯೇ ಇರದ ಮುಂದಿನ ಬದುಕಿನ ಮೇಲೆ ನಾನು ಭರವಸೆ ಇಟ್ಟುಕೊಳ್ಳುತ್ತೇನೆ ಎಂದು ಹಲಬುವುದು.
ಕಾಮು ಹೇಳುತ್ತಾನೆ, ನೀವು ನಿಜವಾಗಿ ಸ್ವತಂತ್ರರಾಗಬಯಸುವಿರಾದರೆ ಈ ಬಗೆಯ ಭರವಸೆಯಿಂದ ನೀವು ಹೊರತಾಗಬೇಕು. ಯಾವುದನ್ನ ಕಾಮು, ಅಸಂಗತ (absurd) ಎಂದು ಗುರುತಿಸುತ್ತಿದ್ದನೋ, ಯಾವಾಗ ಮನುಷ್ಯ ತನ್ನ ಬದುಕಿನ ಅಂಥ ದುಃಖಭರಿತ ಅರ್ಥಹೀನತೆಯನ್ನು ಎದುರುಗೊಳ್ಳುತ್ತಾನೋ, ಆಗ ಅವನು ಈ ಎರಡು ದಾರಿಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುತ್ತಾನೆ.
ಮೊದಲ ದಾರಿ ಶಾರೀರಿಕ ಆತ್ಮಹತ್ಯೆ, ಹಾಗೆಂದರೆ ತಮ್ಮ ಜೀವನವನ್ನು ಕೊನೆಗಾಣಿಸಿಕೊಂಡು ಬಿಡುವುದು. ಆದರೆ ಕಾಮು ಇದನ್ನು ತಿರಸ್ಕರಿಸಿದ. ಅವನ ತಿರಸ್ಕಾರದ ಕಾರಣ ಇದು ಅನೈತಿಕ ಅಂತಲ್ಲ ಬದಲಾಗಿ ಇದು ಸೋಲೊಪ್ಪಿಕೊಂಡಂತೆ ಎಂದು. ನೀವು ನಿಮ್ಮ ಬದುಕಿನ ಕಷ್ಟಗಳಿಂದ ಓಡಿ ಹೋದಂತೆ ಎಂದು.
ಮತ್ತು ಎರಡನೇ ದಾರಿ ಫಿಲೊಸೊಫಿಕಲ್ ಆತ್ಮಹತ್ಯೆ. ಯಾವಾಗ ಮನುಷ್ಯ ತನ್ನ ಬದುಕಿನ ವಾಸ್ತವಗಳನ್ನು ಎದುರಿಸುವಲ್ಲಿ ವಿಫಲನಾಗುತ್ತಾನೋ ಆಗ ಅವನು ಕತೆಗಳನ್ನು ಹುಟ್ಟು ಹಾಕುತ್ತಾನೆ. ಮತ್ತು ಹಾಗೆ ಮಾಡುವುದರಿಂದಲೇ, ಭರವಸೆಗಳು, ಐಡಿಯಾಲೊಜಿಗಳು, ಮತ ಧರ್ಮಗಳು ಹುಟ್ಟಿಕೊಳ್ಳುತ್ತದೆ. ಆಗ ನೀವು ನಿಮ್ಮ ಭಾವನೆಗಳನ್ನು ರಕ್ಷಿಸಿಕೊಳ್ಳಲು ನಿಮ್ಮ rational mind ನ ಕೊಂದು ಹಾಕುತ್ತಿದ್ದೀರಿ, ಇದು ಫಿಲೊಸೊಫಿಕಲ್ ಆತ್ಮಹತ್ಯೆ. ಆಗ ನೀವು ಅಸಂಗತ ವಾಸ್ತವವನ್ನು ಬಿಟ್ಟು ಕಲ್ಪನಾ ಲೋಕದಲ್ಲಿ ಬದುಕಲು ಆರಂಭಿಸುತ್ತೀರಿ.
ಕಾಮು ಈ ಸಮಸ್ಯೆಯ ಪರಿಹಾರವನ್ನೂ ಸೂಚಿಸಿದ. ನೀವು ಇದರ ವಿರುದ್ಧ ಬಂಡೇಳಬೇಕು ( revolt). ನೀವು ಈ ಅಸಂಗತತೆಯನ್ನು ಎದುರಿಸಬೇಕು. ನಿಮ್ಮ ಬದುಕಿಗೆ ಯಾವ ಮಹಾ ಅರ್ಥ ಇಲ್ಲ ಎನ್ನುವುದನ್ನ ನೀವು ಒಪ್ಪಿಕೊಳ್ಳಬೇಕು. ಯಾವ ಭಗವಂತನ ಯೋಜನೆ, ಯಾವ ಹ್ಯಾಪಿ ಎಂಡಿಂಗ್ ಇಲ್ಲ ಎನ್ನುವುದನ್ನ ಒಪ್ಪಿಕೊಳ್ಳಬೇಕು. ಇದನ್ನು ಅರ್ಥ ಮಾಡಿಕೊಳ್ಳುತ್ತಲೇ ನೀವು ನಿಮ್ಮ ಬದುಕನ್ನು ಬಾಳಬೇಕು. ಇದು ಬಹಳ ಡಿಪ್ರೆಸ್ಸಿಂಗ್ ಅನಿಸಬಹುದು ಆದರೆ ಕಾಮು ಹೇಳುತ್ತಾನೆ, ಇದೇ ಆತ್ಯಂತಿಕ ಸ್ವಾತಂತ್ರ್ಯ.
ಒಮ್ಮೆ ಸಿಸಿಫಸ್ ನ ಬಗ್ಗೆ ಯೋಚನೆ ಮಾಡಿ. ಒಂದು ಬಂಡೆಯನ್ನು ಪರ್ವತವೊಂದರ ಮೇಲೆ ಉರುಳಿಸಿಕೊಂಡು ಹೋಗುವಂತೆ ಸಿಸಿಫಸ್ ಗೆ ಶಿಕ್ಷೆ ನೀಡಲಾಗಿತ್ತು. ಆದರೆ ಆ ಬಂಡೆ ಜಾರಿ ಕೆಳಗೆ ಉರುಳುತ್ತಿತ್ತು. ಇದು ಗೊತ್ತಿದ್ದರೂ ಸಿಸಿಫಸ್ ಆ ಬಂಡೆಯನ್ನು ಮೇಲಕ್ಕೆ ಉರುಳಿಸುವುದನ್ನ ಮುಂದುವರೆಸಿದ್ದು ತಾನು ಗೆಲ್ಲುತ್ತೇನೆ ಎಂದಲ್ಲ, ಹೀಗೆ ಮಾಡುವುದನ್ನ ತಾನೇ ಆಯ್ಕೆ ಮಾಡಿಕೊಂಡಿದ್ದು ಎಂದು. ಹೀಗೆ ಮಾಡುವ ಮೂಲಕ ಅವನು ತನ್ನ ಅದೃಷ್ಟದ ಮಾಲಿಕನಾಗಿ ಬಿಡುತ್ತಾನೆ. ಕಾಮು ಹೇಳುತ್ತಾನೆ, ಅವನ ಈ ಸಂಘರ್ಷ ಮಾತ್ರವೇ ಅವನ ಹೃದಯವನ್ನು ತುಂಬಿಕೊಂಡು ಅವನನ್ನು ಸಂತೋಷದಿಂದಿರುವಂತೆ ಮಾಡಿತು. ಸಂತೋಷ ಏಕೆಂದರೆ ಸಿಫಸ್ ಭವಿಷ್ಯದ ನಿರೀಕ್ಷೆ ಮಾಡುವುದು ಬಿಟ್ಟು ವರ್ತಮಾನವನ್ನು ತನ್ನದಾಗಿಸಿಕೊಳ್ಳಲು ಶುರು ಮಾಡಿದ.

