ಚಿನ್ನದ ಆನೆಯ ವಿಗ್ರಹ, ಸಕ್ಕರೆ ಬೊಂಬೆಗಳು ಮತ್ತು ಆತ್ಯಂತಿಕ ಸತ್ಯ । ಅಧ್ಯಾತ್ಮ Story #19

ಇವೆಲ್ಲವೂ ನಮ್ಮ ಉಳಿವಿಗಾಗಿ / ನಮ್ಮ ಬದುಕಿಗಾಗಿ ಅನ್ನುವ ಅರಿವು ಇದ್ದವರು ತಮ್ಮ ಕೆಲಸಗಳನ್ನು ಎಂಜಾಯ್ ಮಾಡುತ್ತಾರೆ. ತಾವು ಅನಿವಾರ್ಯವಾಗಿ ತೆಗೆದುಕೊಂಡ ನಿರ್ಧಾರಗಳನ್ನು, ಅವು ಎಷ್ಟೇ ಕಷ್ಟದ್ದಾಗಿದ್ದರೂ, ಗೌರವಿಸುತ್ತಾರೆ. ನಮಗೆ ಚಿನ್ನ ಬೇಕು, ಅದು ಆನೆಯ ರೂಪದಲ್ಲಿ ಇರಬಾರದು ಎಂದೆಲ್ಲ ಹಠ ಹಿಡಿದರೆ ಪ್ರಯೋಜನವಿಲ್ಲ. ಚಿನ್ನಕ್ಕೆ ಒಂದು ಆಕರ್ಷಣೆ ಬರುವುದು ಅದಕ್ಕೊಂದು ರೂಪ ದೊರೆತಾಗಲೇ. ಹಾಗೇ ನಮ್ಮ ಬದುಕು ಕಳೆಗಟ್ಟುವುದು ದುಡಿಮೆಯಿಂದ, ನಿರ್ಣಾಯಕ ನಿರ್ಧಾರಗಳಿಂದ ~ ಚೇತನಾ ತೀರ್ಥಹಳ್ಳಿ

ಸ್ವಾಮಿ ರಾಮತೀರ್ಥರು ಹೇಳಿದ ದೃಷ್ಟಾಂತ ಕತೆಯಿದು:

ಒಂದೂರಿನಲ್ಲಿ ಒಬ್ಬ ಶ್ರೀಮಂತ ವ್ಯಾಪಾರಿ ಇರ್ತಾನೆ. ಅವನ ಬಳಿ ಒಂದು ಸುಂದರವಾದ ಚಿನ್ನದ ಆನೆಯ ವಿಗ್ರಹ ಇರುತ್ತೆ. ಅದಕ್ಕೆ ಬಿಳಿ ಹರಳಿನ ಕಣ್ಣು ಕೂರಿಸಲಾಗಿರುತ್ತೆ. ಆ ವ್ಯಾಪಾರಿಗೊಬ್ಬ ಮಗ, ಇನ್ನೂ ಚಿಕ್ಕವನು. ಅವನೊಂದು ದಿನ ಆ ಚಿನ್ನದ ಆನೆಯನ್ನ ನೋಡ್ತಾನೆ. ಅದರ ಹತ್ತಿರ ನಿಂತು ದಿಟ್ಟಿಸಿ ನೋಡಿ, ಬೆಚ್ಚಿದಂತೆ ಹಿಂದಕ್ಕೆ ಸರೀತಾನೆ. ಆಮೇಲೆ, ‘ಅಪ್ಪಾ, ಈ ಆನೆಗೆ ನಿಜವಾದ ಆನೆ ಥರಾನೇ ದಪ್ಪನೆ ಸೊಂಡಿಲಿದೆ, ಭಯ ಆಗುತ್ತೆ’ ಅನ್ತಾನೆ. ಆಗ ಅಪ್ಪ ನಗ್ತಾ, ‘ಅಯ್ಯೋ ಮಗನೇ, ನಿನಗೆ ಆ ವಿಗ್ರಹದಲ್ಲಿ ನಿಜವಾದ ಆನೆ ಕಾಣ್ತಿದೆ, ಅದಕ್ಕೇ ಭಯ ಆಗ್ತಿದೆ. ಆದ್ರೆ ನಂಗೆ ಅದ್ರಲ್ಲಿ ಬರೀ ಚಿನ್ನವೇ ಕಾಣ್ತಿದೆ, ಅದಕ್ಕೇ ಅದನ್ನ ನೋಡಿದಷ್ಟೂ ಖುಷಿಯಾಗುತ್ತೆ’ ಅನ್ತಾನೆ.

ಪುಟ್ಟ ಹುಡುಗನಿಗೆ ಆನೆಯ ರೂಪ ಸತ್ಯವಾಗಿತ್ತು, ಅವನ ಅಪ್ಪನಿಗೆ ಅದರಲ್ಲಿನ ಚಿನ್ನ ಸತ್ಯವಾಗಿತ್ತು. ವಾಸ್ತವದಲ್ಲಿ, ಅದು ಆನೆಯ ರೂಪದಲ್ಲಿದ್ದರೂ ಶುದ್ಧಾಂಗ ಚಿನ್ನವೇ. ಆದ್ದರಿಂದ, ಅಪ್ಪನ ಸತ್ಯವೇ ಸತ್ಯ ಎಂದಾಯ್ತು.

ಸ್ವಾಮಿ ರಾಮತೀರ್ಥರು ಇದನ್ನು ವಿವರಿಸ್ತಾ, ‘ಈ ಜಗತ್ತು ಆ ಚಿನ್ನದ ಆನೆಯಂತೆ. ಅಜ್ಞಾನಿಗಳಿಗೆ, ಆ ಪುಟ್ಟ ಹುಡುಗನಿಗೆ ಹೊರಗಿನ ಆನೆಯ ರೂಪ ಕಂಡಂತೆ ಲೋಕದ ಸುಖ-ದುಃಖ ಮತ್ತು ಭಯಗಳು ಮಾತ್ರ ಕಾಣಿಸ್ತವೆ. ಆದರೆ ಜ್ಞಾನಿಯಾದವರು, ವ್ಯಾಪಾರಿ ಚಿನ್ನವನ್ನು ಕಂಡಂತೆ ಎಲ್ಲ ರೂಪಗಳ ಹಿಂದಿರುವ ‘ಸತ್’ (ಸದ್ವಸ್ತು) ಅಥವಾ ಎಲ್ಲಕ್ಕೂ ಮೂಲವಾಗಿರುವ ‘ಬ್ರಹ್ಮ’ವನ್ನು ಕಾಣುತ್ತಾರೆ. ಒಮ್ಮೆ ನಮಗೆ ಈ ಸೃಷ್ಟಿಯ ಹಿಂದಿರುವ ಮೂಲ ಸತ್ಯ ತಿಳಿದರೆ, ಆನೆಯನ್ನು ನೋಡಿ ಮಗು ಹೆದರಿದಂತೆ ನಾವು ಜೀವನದ ಸಮಸ್ಯೆಗಳನ್ನು ನೋಡಿ ಹೆದರಬೇಕಾಗಿ ಬರುವುದಿಲ್ಲ. ಯಾಕೆಂದರೆ, ಆಗ ನಮಗೆ ಇದೆಲ್ಲವೂ ಒಂದೇ ಪರಮಾತ್ಮದ ಬೇರೆಬೇರೆ ರೂಪಗಳೆಂದು ಅರ್ಥವಾಗಿರುತ್ತದೆ’ ಅನ್ನುತ್ತಾರೆ.

ನಾವು ನಮ್ಮ ದೈನಂದಿನ ಬದುಕಿನಲ್ಲಿ ಇಂಥ ಸಂದರ್ಭಕ್ಕೆ ಮುಖಾಮುಖಿಯಾಗುತ್ತಲೇ ಇರುತ್ತೇವೆ. ಕೇವಲ ವಸ್ತುಗಳು ಮಾತ್ರವಲ್ಲ, ನಾವು ಮಾಡುವ ಕೆಲಸಗಳು (ದುಡಿಮೆ), ತೆಗೆದುಕೊಳ್ಳುವ ನಿರ್ಧಾರಗಳು ಕೂಡ ಹೊರ ರೂಪದಲ್ಲಿ ಏನೇ ಇದ್ದರೂ ಮೂಲದಲ್ಲಿ ಮತ್ತು ಆತ್ಯಂತಿಕವಾಗಿ ನಮ್ಮದೇ ಒಳಿತಿಗೆ ಅನ್ನುವುದನ್ನು ಮರೆತುಬಿಡುತ್ತೇವೆ. ಆ ಕೆಲಸ ನಮ್ಮ ಪಾಲಿಗೆ ಆಸಕ್ತಿದಾಯಕವಲ್ಲದಿದ್ದರೆ, ಆ ನಿರ್ಧಾರಗಳು ನಮಗೆ ತ್ರಾಸದಾಯಕವಾಗಿದ್ದರೆ, ಅದಕ್ಕಾಗಿ ಹಲುಬುತ್ತ ಉಳಿದುಬಿಡುತ್ತೇವೆ. ಆದರೆ, ಇವೆಲ್ಲವೂ ನಮ್ಮ ಉಳಿವಿಗಾಗಿ / ನಮ್ಮ ಬದುಕಿಗಾಗಿ ಅನ್ನುವ ಅರಿವು ಇದ್ದವರು ತಮ್ಮ ಕೆಲಸಗಳನ್ನು ಎಂಜಾಯ್ ಮಾಡುತ್ತಾರೆ. ತಾವು ಅನಿವಾರ್ಯವಾಗಿ ತೆಗೆದುಕೊಂಡ ನಿರ್ಧಾರಗಳನ್ನು, ಅವು ಎಷ್ಟೇ ಕಷ್ಟದ್ದಾಗಿದ್ದರೂ, ಗೌರವಿಸುತ್ತಾರೆ. ನಮಗೆ ಚಿನ್ನ ಬೇಕು, ಅದು ಆನೆಯ ರೂಪದಲ್ಲಿ ಇರಬಾರದು ಎಂದೆಲ್ಲ ಹಠ ಹಿಡಿದರೆ ಪ್ರಯೋಜನವಿಲ್ಲ. ಚಿನ್ನಕ್ಕೆ ಒಂದು ಆಕರ್ಷಣೆ ಬರುವುದು ಅದಕ್ಕೊಂದು ರೂಪ ದೊರೆತಾಗಲೇ. ಹಾಗೇ ನಮ್ಮ ಬದುಕು ಕಳೆಗಟ್ಟುವುದು ದುಡಿಮೆಯಿಂದ, ನಿರ್ಣಾಯಕ ನಿರ್ಧಾರಗಳಿಂದ.

ಇದೇ ಥರದ, ಬಹುತೇಕ ಇದೇ ತಾತ್ವಿಕತೆಯ ಸೂಫಿ ಕತೆಯೊಂದಿದೆ:

ಒಮ್ಮೆ ಒಬ್ಬ ಸೂಫಿ, ‘ಎಲ್ಲ ಜೀವಿಗಳಲ್ಲೂ ಭಗವಂತ ಇರುತ್ತಾನೆ, ಆದ್ದರಿಂದ ಎಲ್ಲರೂ ಸಮಾನರು. ಮನುಷ್ಯರ ನಡುವೆ, ಮನುಷ್ಯ ಮತ್ತು ಜೀವಿಗಳ ನಡುವೆ, ಇಡೀ ಸೃಷ್ಟಿಯಲ್ಲಿ ಯಾವುದೇ ಎರಡು ವಸ್ತುಗಳ ನಡುವೆ ಒಂದು ಮೇಲು ಮತ್ತೊಂದು ಕೀಳು ಅನ್ನುವಂಥದಿಲ್ಲ’ ಅಂತ ಬೋಧಿಸ್ತಾ ಇರ್ತಾನೆ. ಆಗ ಶಿಷ್ಯರು ‘ಅದು ಹೇಗೆ, ಮನುಷ್ಯರಲ್ಲಿ ಪಂಡಿತರು – ಅನಕ್ಷರಸ್ಥರು, ಬಡವರು – ಶ್ರೀಮಂತರು; ಭೂಮಿಯಲ್ಲಿ ಮನುಷ್ಯರು – ಪ್ರಾಣಿ ಪಕ್ಷಿಗಳು ಇವರೆಲ್ಲ ಒಂದೇ ಆಗಿರಲು ಹೇಗೆ ಸಾಧ್ಯ?’  ಅಂತ ಪ್ರಶ್ನೆ ಮಾಡ್ತಾರೆ. ಅವರಿನ್ನೂ ಎಳೆಯ ಹುಡುಗರು. ಅವರಿಗೆ ತನ್ನ ಮಾತನ್ನು ಅರ್ಥ ಮಾಡಿಸಲಿಕ್ಕಾಗಿ ಸೂಫಿ ಅವರನ್ನೆಲ್ಲ ಸಂತೆಗೆ ಕರೆದುಕೊಂಡು ಹೋಗ್ತಾನೆ. ಅಲ್ಲಿ ಒಬ್ಬ ವ್ಯಾಪಾರಿ ಸಕ್ಕರೆಯಿಂದ ಮಾಡಿದ ವಿವಿಧ ಗೊಂಬೆಗಳನ್ನ ಮಾರಾಟ ಮಾಡ್ತಾ ಇರ್ತಾನೆ. ಅಲ್ಲಿ ಸಕ್ಕರೆಯ ಆನೆ, ಸಕ್ಕರೆಯ ಕುದುರೆ, ಸಕ್ಕರೆಯ ಸೈನಿಕ ಇಂಥವೆಲ್ಲ ಇರ್ತವೆ. ಹುಡುಗರು ತಮಗೆ ಈ ಗೊಂಬೆಯೇ ಬೇಕು, ಆಗೊಂಬೆಯೇ ಬೇಕು ಅಂತ ಪೈಪೋಟಿಗೆ ಇಳೀತಾರೆ. ಆಗ ಸೂಫಿ, ನಾಲ್ಕೈದು ಬೇರೆ ಬೇರೆ ಸಕ್ಕರೆ ಬೊಂಬೆಗಳನ್ನು ಕೊಂಡು, ಅವನ್ನು ತುಂಡು ಮಾಡಿ, ಎಲ್ಲರಿಗೂ ಪ್ರತಿಯೊಂದು ಬೊಂಬೆಯ ಒಂದೊಂದು ಚೂರು ಹಂಚ್ತಾನೆ. ಆಮೇಲೆ ಅದರ ರುಚಿಯಲ್ಲೇನಾದರೂ ವ್ಯತ್ಯಾಸ ಇದೆಯಾ ಅಂತ ಕೇಳ್ತಾನೆ. ಹುಡುಗರು, ‘ಇಲ್ಲ, ಎಲ್ಲವೂ ಒಂದೇ ಥರ ಸಿಹಿಯಾಗಿವೆ’ ಅನ್ನುತ್ತಾರೆ. ಆಗ ಸೂಫಿ, ‘ಹಾಗೇ, ಈ ಎಲ್ಲ ಗೊಂಬೆಗಳಲ್ಲೂ ಸಕ್ಕರೆ ಇರುವ ಹಾಗೇ, ಎಲ್ಲರಲ್ಲೂ ಭಗವಂತ ಇರುತ್ತಾನೆ. ರೂಪ – ಆಕಾರ ಏನೇ ಇದ್ರೂ ಸಕ್ಕರೆಯ ಕಾರಣದಿಂದ ಎಲ್ಲ ಗೊಂಬೆಗಳೂ ಒಂದೇ ಆಗಿರುವ ಹಾಗೆ, ಭಗವಂತನ ಕಾರಣದಿಂದ ಎಲ್ಲ ಜೀವಿಗಳೂ ಒಂದೇ – ಸಮಾನವಾಗಿವೆ’ ಅಂತ ವಿವರಿಸ್ತಾನೆ.

ಮಾನವ ಮೂಳೆ ಮಾಂಸದ ತಡಿಕೆ ಅಂತ ಚಿ.ಉದಯ ಶಂಕರ್ ಬರೆದಿದ್ದಾರಲ್ಲ, ಅದೇ ಅಂತಿಮ ಸತ್ಯ. ನಮ್ಮ ಗುರುತು ಏನೇ ಇರಬಹುದು; ಯಾವುದೇ ಜಾತಿ, ಧರ್ಮ, ಉದ್ಯೋಗ, ಹುದ್ದೆ, ನಾಗರಿಕತೆಯೊಡನೆ ನಮ್ಮನ್ನು ನಾವು ಗುರುತಿಸಿಕೊಳ್ಳಬಹುದು. ನಾವೆಲ್ಲರೂ ಕೇವಲ ಮತ್ತು ಕೇವಲ ಮನುಷ್ಯರು, ಹಾಗೂ ನಮ್ಮ ಚರ್ಮದ ಹೊದಿಕೆಯಡಿ – ಎಲ್ಲರಿಗೂ ಇರುವ ಹಾಗೇ – ಕೇವಲ ಮೂಳೆ ಮಾಂಸಗಳಿರುವುದು. ಈ ಸತ್ಯ ಅರಿವಿದ್ದರೆ ಮಾತ್ರ ದುರಹಂಕಾರವನ್ನು ದೂರವಿಡಲು ಸಾಧ್ಯ. ಇಲ್ಲವಾದರೆ, ತನ್ನ ಬಾಲ ತಾನೇ ಕಚ್ಚಿಕೊಳ್ಳಲು ತಿರುಗಿ ತಿರುಗಿ ಹುಚ್ಚು ಹಿಡಿಸಿಕೊಳ್ಳುವ ನಾಯಿಯಂತಾಗುವುದು ನಮ್ಮ ಪಾಡು. ಆಯ್ಕೆ, ನಮ್ಮ ಕೈಯಲ್ಲೇ ಇರುವುದು.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.