ಇಜಾನಗಿಯ ಕತೆಯಾದರೂ ಅಷ್ಟೇ, ಬೈಗಾ ದಂಪತಿಯ ಕತೆಯಾದರೂ ಅಷ್ಟೇ, ಗ್ರೀಕ್ ಪುರಾಣ ಕತೆಯಾದರೂ ಅಷ್ಟೇ… ಜಗತ್ತಿನಲ್ಲಿ ಎಲ್ಲಿಂದ ಎಲ್ಲಿಗೆ ಹೋದರೂ ವಿಷಯ ಇಷ್ಟೇ. ಭೂತ ಕಾಲವನ್ನು ಅಪ್ಪಿಕೊಳ್ಳಲು ಹೋಗಬಾರದು. ಹೋದರೆ, ಅದು ‘ಭೂತದಂತೆ’ ಕಾಡುವುದು ~ ಚೇತನಾ ತೀರ್ಥಹಳ್ಳಿ
ಜಪಾನಿನ ಆದಿ ದೇವತೆಗಳು ಇಜಾನಗಿ ಮತ್ತು ಇಜಾನಮಿ. ಪುರಾಣ ಕತೆಗಳ ಪ್ರಕಾರ ಈ ದೇವ ದಂಪತಿ ಚಾಪ್ ಸ್ಟಿಕ್‌ನಿಂದ ಸಮುದ್ರವನ್ನ ಕಲಕಿ ಜಪಾನ್ ಅನ್ನು ಸೃಷ್ಟಿಸ್ತಾರೆ. ಆಮೇಲೆ ಸುಮಾರು ಜಡ – ಚೇತನಗಳನ್ನು ಹೆರುತ್ತಾರೆ. ಹಾಗೇ ಬೆಂಕಿಯನ್ನು ಹೆರುವಾಗ ಇಜಾನಮಿ ಅದರ ಶಾಖಕ್ಕೆ ಸುಟ್ಟುಹೋಗ್ತಾಳೆ, ಸತ್ತು ಪಾತಾಳ ಸೇರ್ತಾಳೆ.
ಆಮೇಲೆ ಶುರುವಾಗುತ್ತೆ ಇಜಾನಗಿಯ ಶೋಕಪರ್ವ. ಅವನಿಗೆ ಅವಳನ್ನು ಬಿಟ್ಟಿರಲು ಆಗೋದೇ ಇಲ್ಲ. ಪ್ರತಿದಿನ, ಪ್ರತಿ ಕ್ಷಣ ಅವಳನ್ನು ನೆನೆಯುತ್ತ ಕಣ್ಣೀರು ಸುರಿಸುತ್ತಾ ನನ್ನ ಪಾಲಿನ ಬದುಕೇ ಮುಗಿದುಹೋಯ್ತು ಅಂತ ದುಃಖಿಸ್ತಾ ಇರ್ತಾನೆ. ಅವನು ತನ್ನ ಮುಗಿದುಹೋದ ದಿನಗಳನ್ನು ಬಿಟ್ಟುಕೊಡಲು ತಯಾರೇ ಇರೋದಿಲ್ಲ. ಕೊನೆಗೊಮ್ಮೆ ಹೆಂಡತಿಯನ್ನು ವಾಪಸ್ ಕರ್ಕೊಂಡು ಬರ್ತೀನಿ ಅಂತ ಪಾತಾಳಕ್ಕೆ ಹೋಗ್ತಾನೆ. ದೊಡ್ಡ ದನಿ ತೆಗೆದು ಅಳುತ್ತಾ, ‘ಬಂದುಬಿಡು ಇಜಾನಮಿ, ನಿನ್ನನ್ನು ಬಿಟ್ಟಿರಲು ಆಗ್ತಾ ಇಲ್ಲ’ ಅನ್ನುತ್ತಾನೆ. ಅವನ ದುಃಖಕ್ಕೆ ಕರಗಿದ ಪಾತಾಳ ದೇವತೆಗಳು ಅವಳನ್ನು ಕಳಿಸಲು ಒಪ್ಪಿಕೊಳ್ತಾರೆ. ಇಜಾನಮಿಯೂ ಅವನ ಜೊತೆ ಹೋಗಲು ಸಜ್ಜಾಗ್ತಾಳೆ, ಆದರೆ ಅದಕ್ಕೆ ಮೊದಲು ಪಾತಾಳ ದೇವತೆಗಳ ಜೊತೆ ಸ್ವಲ್ಪ ಮಾತಾಡಲು ಬಯಸ್ತಾಳೆ. ‘ನಾನು ಏನೋ ಸ್ವಲ್ಪ ಚರ್ಚೆ ಮಾಡೋದಿದೆ, ಅಲ್ಲಿಯವರೆಗೆ ಕಾಯ್ತಾ ಇರು. ಯಾವ ಕಾರಣಕ್ಕೂ ನನ್ನ ಮುಖ ನೋಡೋ ಸಾಹಸ ಮಾಡ್ಬೇಡ’ ಅನ್ನುತ್ತಾಳೆ. ಇಜಾನಗಿ ಹಾಗೇ ಮಾಡ್ತಾನೆ. ಆದ್ರೆ ಗಂಟೆ ಕಳೆಯುವಷ್ಟರಲ್ಲಿ ಅವನ ತಾಳ್ಮೆ ಕರಗತೊಡಗುತ್ತೆ. ಇವಳೇನು ಇಲ್ಲೇ ಇದ್ದಾಳೋ ಇಲ್ವೋ, ಇವಳ ಮುಖ ಯಾಕೆ ನೋಡಬಾರದು ಅಂತ ಕುತೂಹಲ ತಡೆಯಲಾಗದೆ ತನ್ನ ತಲೆಗೆ ಸಿಕ್ಕಿಸಿಕೊಂಡಿದ್ದ ಮರದ ಹಣಿಗೆಯ ಕಡ್ಡಿ ಕಿತ್ತು, ಗೀರಿ, ಬೆಂಕಿ ಹೊತ್ತಿಸ್ತಾನೆ. ಪಾತಾಳದ ಗವಿಯಲ್ಲಿ ಬೆಳಕು ತುಂಬಿಕೊಂಡು ಇಜಾನಮಿಯ ಮುಖ ಕಾಣಿಸುತ್ತೆ. ಸತ್ತ ದೇಹದ ಕೊಳೆತ ಮುಖ… ವಿಕಾರಗೊಂಡ ಕುರೂಪದ ಮುಖ. ಅದನ್ನು ಕಂಡು ಇಜಾನಗಿ ಕಿಟಾರನೆ ಕಿರುಚಿ ಒಂದೇ ಉಸಿರಿಗೆ ಓಡಿ ಹೋಗ್ತಾನೆ. ಅಷ್ಟು ಹೊತ್ತೂ ತನ್ನ ಸತ್ತುಹೋದ ಹೆಂಡತಿಗಾಗಿ ಹಪಹಪಿಸ್ತಿದ್ದವ ಈಗ ಅವಳ ಭೂತದ ಮುಖ ನೋಡುತ್ತಲೇ ಹೆದರಿ ಓಟ ಕೀಳುತ್ತಾನೆ. ಆ ಸಿಟ್ಟಿಗೆ ಇಜಾನಮಿಯೂ ಪಾತಾಳ ದೇವತೆಗಳೂ ಅವನ ಬೆನ್ನಟ್ಟುತ್ತಾರೆ. ಅವನು ಹೇಗೋ ತಪ್ಪಿಸಿಕೊಂಡು ಗವಿಯಿಂದ ಹೊರಗೆ ಬಂದು, ಅದಕ್ಕೊಂದು ದೊಡ್ಡ ಬಂಡೆ ಅಡ್ಡ ಇಟ್ಟುಬಿಡುತ್ತಾನೆ. ಆಮೇಲೆ ಯಾವತ್ತೂ ಮುಗಿದುಹೋದ ದಿನಗಳಿಗಾಗಿ, ಕಾಲವಾದ ಹೆಂಡತಿಗಾಗಿ ಶೋಕಿಸುತ್ತ ಕೂರುವ ತಪ್ಪು ಮಾಡೋದಿಲ್ಲ.
~
ಈ ಕತೆಯಲ್ಲಿನ ಇಜಾನಮಿಯ ಭೂತವನ್ನು ಸತ್ತ ದೇಹವಾಗಿ ನೋಡುವ ಬದಲು ಸತ್ತ ಅಥವಾ ಮುಗಿದುಹೋದ ಕ್ಷಣಗಳನ್ನಾಗಿ ನೋಡಿದರೆ, ಅಲ್ಲೊಂದು ಪಾಠ ಒದಗುತ್ತದೆ. ಮುಗಿದುಹೋದ ಕಾಲ ಅದೆಷ್ಟೇ ಸವಿಯಾಗಿದ್ದರೂ ಅದು ಭೂತ ಕಾಲವೇ. ಅದು ಅದೆಷ್ಟೇ ಸುಮಧುರ ನೆನಪುಗಳನ್ನು ಹೊತ್ತುಕೊಂಡಿದ್ದರೂ ನಮ್ಮನ್ನು ಹೆದರಿಸುವ ಭೂತವೇ. ನೆನೆಯುವಾಗ ಸುಂದರವಾಗಿ ತೋರುವ ಭೂತಕಾಲದ ಸಂಗತಿಗಳನ್ನು ಮುಟ್ಟಲು ಹೋದರೆ, ಅದು ಮತ್ತೆಂದೂ ಮರಳಿ ಬರುವುದಿಲ್ಲ ಅನ್ನುವ ಸತ್ಯವನ್ನು ನಮ್ಮ ಮುಖಕ್ಕೆ ರಾಚುತ್ತದೆ. ಈ ಸತ್ಯವು ನಮಗೆ ಅರಗುವುದಿಲ್ಲ. ಆದ್ದರಿಂದಲೇ ಅದು ನಮಗೆ ಭಯಾನಕವಾಗಿ ತೋರತೊಡಗುತ್ತದೆ.
ತೀರಿಹೋದ ವ್ಯಕ್ತಿಗಳು ನಮಗೆ ಅದೆಷ್ಟೇ ಪ್ರಿಯರಾಗಿದ್ದರೂ, ಅವರ ಸತ್ತ ದೇಹ ನಮಗೆ ಪ್ರಿಯವಾಗಲಾರದು. ವ್ಯಕ್ತಿಯ ನೆನಪುಗಳನ್ನು ನಾವು ಪ್ರೀತಿಸಬಲ್ಲೆವೇ ಹೊರತು, ಸತ್ತ ಹೆಣವನ್ನು ನಮ್ಮ ಕೋಣೆಯಲ್ಲಿರಿಸಿಕೊಂಡು ಅದರೊಡನೆ ಬಾಳಲಾರೆವು. ಅಂಥ ಹುಚ್ಚುತನ ತೋರುವ ಬೆರಳೆಣಿಕೆ ಮಂದಿಯನ್ನು ಈ ಸಮಾಜ ಮಾನಸಿಕ ಅಸ್ವಸ್ಥರೆಂದು ಗುರುತಿಸುತ್ತದೆ. ಯಾರು ಭೂತವನ್ನು ಬಿಟ್ಟುಕೊಡಲಾರರೋ, ಯಾರು ಗತಕ್ಕೆ ಅಂಟಿಕೊಂಡೇ ಇರುವರೋ, ಯಾರು ಭವಿಷ್ಯದೆಡೆ ಮುಖ ಮಾಡಿ ನಡೆಯಲಾರರೋ ಅವರಿಗೆ ಖಂಡಿತವಾಗಿ ಮಾನಸಿಕ ಶುಶ್ರೂಷೆಯ ಅಗತ್ಯವಿದೆ.
ಈ ಅಂಟಿಕೊಳ್ಳುವಿಕೆ ದೊಡ್ಡ ಗೀಳಿನ ರೂಪದಲ್ಲೆ ಇರಬೇಕೆಂದಿಲ್ಲ. ಅಕ್ಷರಶಃ ಹೆಣದ ಜೊತೆಯಲ್ಲಿ ಜೀವಿಸಲು ಬಯಸಬೇಕೆಂದಿಲ್ಲ. ಚಿಕ್ಕಪುಟ್ಟ ಸಂಗತಿಗಳಿಗೆ ಅಂಟಿಕೊಳ್ಳುವವರೂ ಸಣ್ಣ ಮಟ್ಟದಲ್ಲಿ ಮಾನಸಿಕವಾಗಿ ಸಮಸ್ಯೆ ಅನುಭವಿಸುತ್ತ ಇರುತ್ತಾರೆ. ಆಗಿಹೋಗಿದ್ದನ್ನು ಬಿಟ್ಟುಕೊಡಲಾಗದ ಅವರ ದೌರ್ಬಲ್ಯ ಅವರ ಮನಸ್ಸಿನ ಸ್ವಾಸ್ಥ್ಯವನ್ನು ನುಂಗಿ ಹಾಕುತ್ತಿರುತ್ತದೆ. ಆದ್ದರಿಂದಲೇ ಅವರು ಖಿನ್ನರಾಗುತ್ತಾರೆ, ಉದ್ವಿಗ್ನರಾಗುತ್ತಾರೆ.
~
ಭಾರತದ ಬೈಗಾ ಜನಪದದಲ್ಲೂ ಇಂಥದೊಂದು ಕತೆಯಿದೆ. ಇದರಲ್ಲಿ ಸಾಮಾನ್ಯ ಗಂಡು ಹೆಣ್ಣುಗಳು ಜೊತೆಯಾಗಿ ಸಂಸಾರ ಮಾಡ್ತಾ ಇರುತ್ತಾರೆ. ಹೆಂಡತಿ ಬಹಳ ಸುಂದರಿ. ಗಂಡ ಅವಳನ್ನು ಬಿಟ್ಟು ಒಂದು ಕ್ಷಣವೂ ಇರುತ್ತಿರಲಿಲ್ಲ. ಮದುವೆಯಾಗಿ ನಾಲ್ಕೈದು ವರ್ಷ ಕಳೆಯುವುದರೊಳಗೇ ಹೆಂಡತಿ ಅಚಾನಕ್ಕಾಗಿ ಸತ್ತು ಹೋಗ್ತಾಳೆ. ಗಂಡ ಒಂದಿಡೀ ವರ್ಷ ಶೋಕಾಚರಣೆ ಮಾಡಿ, ಇನ್ನು ತನಗೆ ಉಳಿಗಾಲವಿಲ್ಲ ಅಂದುಕೊಂಡು, ಹೆಂಡತಿಯನ್ನು ಮರಳಿ ಕರೆತರಲು ಹೊರಡ್ತಾನೆ. ಈ ಕತೆಯಲ್ಲೂ ಗಂಡ ಹೋಗ್ತಾ ಹೋಗ್ತಾ ಪಾತಾಳ ತಲುಪ್ತಾನೆ ಮತ್ತು ಹೆಂಡತಿನ ಕೂಗಿ ಕರೀತಾನೆ. ಅವ್ನ ದುಃಖಕ್ಕೆ ಕರಗಿದ ಸತ್ತವರ ಲೋಕದ ಮುಖ್ಯಸ್ಥ, ‘ಸರಿ, ನಿನ್ ಹೆಂಡ್ತೀನ ಕರ್ಕೊಂಡ್ ಹೋಗು. ಆದ್ರೆ ನನ್ನದೊಂದು ಷರತ್ತಿದೆ’ ಅನ್ನುತ್ತಾನೆ. ಅವನ ಹಳ್ಳಿಯ ಗಡಿ ತಲುಪೋವರೆಗೂ ಹಿಂತಿರುಗಿ ಹೆಂಡತಿಯನ್ನು ನೋಡಬಾರದು ಅನ್ನೋದೇ ಆ ಷರತ್ತು.
ಅವರಿಬ್ಬರೂ ಹೊರಡ್ತಾರೆ. ಹೆಂಡತಿಯ ಗೆಜ್ಜೆ ಸದ್ದು ಅವನಿಗೆ ಅವಳು ಬರ್ತಿದಾಳೆ ಅನ್ನೋ ಧೈರ್ಯ ಕೊಡ್ತಿರತ್ತೆ. ಆದ್ರೆ ಒಂದು ಕಡೆ ಅವಳ ಕಾಲಿಗೆ ಮುಳ್ಳು ಚುಚ್ಚಿ ಹೆಜ್ಜೆ ಇಡೋದು ನಿಧಾನ ಆಗಿ, ಗೆಜ್ಜೆ ಸದ್ದು ನಿಂತುಹೋಗುತ್ತೆ. ಗಂಡ ಎಲ್ಲಿ ಹೆಂಡತಿ ವಾಪಸ್ ಹೋಗಿಬಿಟ್ಲೋ ಅನ್ನುವ ಗಾಬರಿಯಿಂದ ಹಿಂದೆ ತಿರುಗಿ ನೋಡಿದ್ರೆ, ಅವನ ಕಣ್ಣೆದುರೇ ಅವನ ಸುಂದರ ಹೆಂಡತಿ ಬೆಳ್ಳನೆ ನೆರಳಿನಂತಾಗಿ, ಹೊಗೆಯಂತಾಗಿ, ಗಾಳಿಯಲ್ಲಿ ಕರಗಿಹೋಗ್ತಾಳೆ. ‘ಹಿಂತಿರುಗಿ ನೋಡಬಾರದು ಅಂತ ಹೇಳಿರಲಿಲ್ವಾ ನಾನು?’ ಅನ್ನುವ ಅಶರೀರವಾಣಿ ಕೇಳಿಸುತ್ತೆ. ಗಂಡ ಪೆಚ್ಚುಮೋರೆ ಹಾಕ್ಕೊಂಡು, ತನ್ನ ಆತುರಬುದ್ಧಿಗೆ ಶಾಪ ಹಾಕ್ತಾ ಹಳ್ಳಿ ತಲುಪಿಕೊಳ್ತಾನೆ.
ಆಮೇಲೆ ಜೀವಮಾನಪೂರ್ತಿ ಹಳಹಳಿಸ್ತಾ ಕೊನೆಗೊಮ್ಮೆ ತೀರಿಹೋದನೇನೋ. ಅದು ಆ ಕತೆಯಲ್ಲಿ ಇರಲಿಲ್ಲ.
~
ಹಿಂತಿರುಗಿ ನೋಡಬಾರದು. ನೋಡುವುದೇ ಆದರೆ, ಕಳೆದುಕೊಳ್ಳೋಕೆ ತಯಾರಿರಬೇಕು; ಇಜಾನಗಿಯ ಹಾಗೆ, ಬೈಗಾ ಗಂಡಸಿನ ಹಾಗೆ. ನಮ್ಮ ಗತಕಾಲವನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಿದ್ದರೆ ಸದ್ಯದ ಶಾಂತಿ ಮತ್ತು ನೆಮ್ಮದಿಯನ್ನು ಕಳೆದುಕೊಳ್ತೀವಿ. ಸಂತಸದ ಕ್ಷಣಗಳನ್ನೇ ಮತ್ತೆ ಮತ್ತೆ ನೆನೆಯುತ್ತ ಅವಕ್ಕೆ ಅಂಟಿಕೊಳ್ಳುವುದಾದರೆ, ಅದಕ್ಕಿಂತ ಹೆಚ್ಚಿನ ಹೊಸ ಸಂತಸಗಳನ್ನು ಸೃಷ್ಟಿ ಮಾಡಿಕೊಳ್ಳುವ ಅವಕಾಶ ಕಡಿಮೆ ಮಾಡಿಕೊಳ್ತೀವಿ. ಅಥವಾ ಆ ಸಂತೋಷದೊಂದಿಗೆ ಈಗಿನದ್ದನ್ನು ಕಂಪೇರ್ ಮಾಡಿಕೊಂಡು ಕೊರಗುತ್ತ ಉಳಿಯುತ್ತೀವಿ.
ಆದ್ದರಿಂದ, ಒಳಿತೋ, ಕೆಡುಕೋ…ಆಗಿಹೋದ ಮೇಲೆ ಮುಗಿಯಿತು. ಅಪರೂಪಕ್ಕೆ ಅವನ್ನು ನೆನೆಸಿಕೊಳ್ಳೋದು ತಪ್ಪಲ್ಲ, ಅವಕ್ಕೆ ಅಂಟಿಕೊಳ್ಳೋದುಸರಿಯಲ್ಲ. ಅವುಗಳಿಂದ ನಮ್ಮ ಈಗಿನ ಬದುಕನ್ನು, ಅದರ ಸಾಧ್ಯತೆಗಳನ್ನು ಕಳೆದುಕೊಳ್ಳೋದು ಸರಿಯಲ್ಲ.
ಅಂದಹಾಗೆ, ಗ್ರೀಕ್ ಪುರಾಣದಲ್ಲೂ ಇಂಥದೊಂದು ಕತೆಯಿದೆ; ಆರ್ಫಿಯಸ್ ಮತ್ತು ಯುರಿಡೈಸ್ ದಂಪತಿಯದ್ದು. ಬೈಗಾ ಗಂಡಸಿನ ಜಾಗದಲ್ಲಿ ಲೈರ್ ಮಾಂತ್ರಿಕ ಯುರಿಡೈಸನನ್ನೂ ಅವನ ಹೆಂಡತಿ ಆರ್ಫಿಯಸ್ ಜಾಗದಲ್ಲಿ ಬೈಗಾ ಹೆಂಗಸನ್ನೂ ಹಾಕಿಕೊಂಡು ಓದಿಕೊಳ್ಳಿ.
ಜಗತ್ತಿನಲ್ಲಿ ಎಲ್ಲಿಂದ ಎಲ್ಲಿಗೆ ಹೋದರೂ ವಿಷಯ ಇಷ್ಟೇ. ಭೂತ ಕಾಲವನ್ನು ಅಪ್ಪಿಕೊಳ್ಳಲು ಹೋಗಬಾರದು. ಹೋದರೆ, ಅದು ‘ಭೂತದಂತೆ’ ಕಾಡುವುದು!

