ಅನಂತವನ್ನು ಯಾವತ್ತೂ ಮನುಷ್ಯ ಪರಿಕಲ್ಪನೆಗಳಡಿಯಲ್ಲಿ ಹಿಡಿದಿಡಲು ಸಾಧ್ಯವಾಗುವುದೇ ಇಲ್ಲ… । ಕನ್ನಡ ನಿರೂಪಣೆ: ಚಿದಂಬರ ನರೇಂದ್ರ
ಹಿಂದೂಯಿಸಂ ನಲ್ಲಿ ಭಗವಂತನನ್ನು ವಿವರಿಸುವ ಒಂದು ಅಪರೂಪದ ಫಿಲಾಸೊಫಿಯಿದೆ. ಈ ಫಿಲಾಸೊಫಿಯ ಪ್ರಕಾರ, ಎಷ್ಟು ಸಲ ನೀವು ಭಗವಂತನನ್ನು ವಿವರಿಸುವ ಪ್ರಯತ್ನ ಮಾಡುತ್ತೀರೋ ಅಷ್ಟು ಸಲವೂ ನೀವು ಭಗವಂತನಿಗೆ ಅಪಮಾನ ಮಾಡುತ್ತಿದ್ದೀರಿ.
ಭಗವಂತ ಸರ್ವಶಕ್ತ ಎಂದು ನೀವು ಹೇಳುತ್ತೀರಿ, ಆದರೆ ಇದು ತಪ್ಪು
ಭಗವಂತ ಸರ್ವಜ್ಞಾತ ಎಂದು ನೀವು ಹೇಳುತ್ತೀರಿ, ಆದರೆ ಇದೂ ತಪ್ಪು
ಭಗವಂತ ಸರ್ವವ್ಯಾಪಿ ಎಂದು ನೀವು ಹೇಳುತ್ತೀರಿ, ಆದರೆ ಇದು ಕೂಡ ತಪ್ಪು
ಉಪನಿಷತ್ತಿನ ಪ್ರಾಚೀನ ಋಷಿಗಳ ಪ್ರಕಾರ ಅನಂತವನ್ನು ವಿವರಿಸಲು ಯಾವುದಾದರೂ ಪದವನ್ನು ಬಳಸುತ್ತಿದ್ದೀರಾದರೆ, ಪ್ರತೀ ಬಾರಿ ನೀವು ಭಗವಂತನನ್ನು ಅಪಮಾನಿಸುತ್ತಿದ್ದೀರಿ. ಯಾಕೆ? ಯಾಕೆಂದರೆ ನೀವು ಏನನ್ನಾದರೂ ವ್ಯಾಖ್ಯಾನಿಸುತ್ತಿದ್ದೀರಿ ಎಂದರೆ ಅದನ್ನು ಲಿಮಿಟ್ ಮಾಡುತ್ತಿದ್ದೀರಿ. ಯಾವ ಕ್ಷಣದಲ್ಲಿ ನೀವು ಭಗವಂತನನ್ನು ಒಂದು ಪದದಿಂದ ಗುರುತಿಸುತ್ತಿದ್ದೀರೋ ಆಗ ನೀವು ಅವನನ್ನು ಒಂದು ಬಾಕ್ಸ್ ನಲ್ಲಿ ಬಂಧಿಯಾಗಿಸುತ್ತಿದ್ದೀರಿ. ಆದ್ದರಿಂದ ಡಿವೈನ್ ನ ಹುಡುಕುವ ಏಕೈಕ ರೀತಿಯೆಂದರೆ ಈ ಬಾಕ್ಸ್ ನ್ನೇ ನಾಶ ಮಾಡಿಬಿಡುವುದು. ಇದು ಋಣಾತ್ಮಕ ಧಾರ್ಮಿಕತೆಯ ಮಾಂತ್ರಿಕತೆ.
ಕಲ್ಪನೆ ಮಾಡಿಕೊಳ್ಳಿ, ನೀವು ಒಂದು ಮಹಾ ಸಾಗರದ ಎದುರು ನಿಂತಿದ್ದೀರಿ. ಈಗ ನೀವು ಆ ಸಾಗರದಿಂದ ಒಂದು ಕಪ್ ನೀರು ಹೊರ ತೆಗೆದು ಅದನ್ನು ಮಹಾಸಾಗರ ಎಂದು ಹೇಳುತ್ತಿದ್ದೀರಿ. ಹಾಗಾದರೆ ನೀವು ಸುಳ್ಳು ಹೇಳುತ್ತಿದ್ದೀರಾ, ಇಲ್ಲ ಟೆಕ್ನಿಕಲೀ ನೀವು ಸರಿಯಾಗಿಯೇ ಹೇಳುತ್ತಿದ್ದೀರಿ. ಏಕೆಂದರೆ ಆ ಕಪ್ ನಲ್ಲಿಯ ನೀರು ಆ ಮಹಾಸಾಗರದ ನೀರೇ. ಆದರೆ ಒಂದು ವಿಷಯವನ್ನು ಗಮನಿಸಿ. ಈ ಕಪ್ ಇದೆಯಲ್ಲ, ಇದರೊಂದು ಶೇಪ್ ಇದೆ. ಆದರೆ ಮಹಾಸಾಗರಕ್ಕೆ ಯಾವ ಶೇಪ್ ಇರುವುದಿಲ್ಲ. ಯಾವಾಗ ನೀವು ಆ ನೀರನ್ನು ಕಪ್ಪಿನೊಳಗೆ ಹಾಕುತ್ತೀರೋ ಆಗ ಅದಕ್ಕೊಂದು ಶೇಪ್ ಇರುವಂತೆ ಮಾಡುತ್ತೀರಿ. ನೀವು ಅದನ್ನು ಬಹಳ ಚಿಕ್ಕದು ಮಾಡಿಬಿಡುತ್ತೀರಿ.
ಲಾಜಿಕ್ ಏನೆಂದರೆ, ನಿಮ್ಮ ಭಾಷೆ ಏನಿದೆಯಲ್ಲ, ಅದು ಈ ಚಿಕ್ಕ ಕಪ್ ನ ಹಾಗೆ. ಯಾವಾಗ ನೀವು ಭಗವಂತ ಒಬ್ಬ ರಾಜ ಎಂದು ಹೇಳುತ್ತೀರೋ ಆಗ ನೀವು ಭಗವಂತನನ್ನು ಸಿಂಹಾಸನದ ಮೇಲೆ ಕುಳಿತಿರುವ ಒಬ್ಬ ಮನುಷ್ಯನ ರೂಪದಲ್ಲಿ ಕಲ್ಪಿಸಿಕೊಳ್ಳುತ್ತೀರಿ. ಭಗವಂತನನ್ನು ಬಹಳ ಸಣ್ಣ ಮನುಷ್ಯನನ್ನಾಗಿಸುತ್ತೀರಿ. ಯಾವಾಗ ನೀವು ಭಗವಂತ ಒಳ್ಳೆಯವನೆಂದು ಹೇಳುತ್ತೀರೋ ಆಗ ನೀವು ಅವನನ್ನು ಮನುಷ್ಯರ ನೈತಿಕ ಮೌಲ್ಯದ ಮಾನದಂಡದ ಮೂಲಕ ಜಡ್ಜ್ ಮಾಡುತ್ತಿದ್ದೀರಿ. ನೀವು ಮತ್ತೆ ಅವನನ್ನು ಸಣ್ಣವನಾಗಿಸಿದಿರಿ. ಭಗವಂತನನ್ನು ವಿವವರಿಸಲು ನೀವು ಯಾವ ಪದವನ್ನು ಬಳಸಿದರೂ…. ಉದಾಹರಣೆಗೆ light, energy, truth ಇತ್ಯಾದಿ, ಆದರೆ ಈ ಎಲ್ಲವೂ ಮನುಷ್ಯ ಪರಿಕಲ್ಪನೆಗಳು. ಮತ್ತು ಅನಂತವನ್ನು ಯಾವತ್ತೂ ಮನುಷ್ಯ ಪರಿಕಲ್ಪನೆಗಳಡಿಯಲ್ಲಿ ಹಿಡಿದಿಡಲು ಸಾಧ್ಯವಾಗುವುದೇ ಇಲ್ಲ.
ಈ ಸಮಸ್ಯೆಯ ಪರಿಹಾರವನ್ನ ಉಪನಿಷತ್ ಗಳು ಕೊಡುತ್ತವೆ. ಈ ಅನಂತವನ್ನು ವಿವರಿಸಲು ಅವು ನಮಗೆ ಒಂದು ಸಲಕರಣೆಯನ್ನು ಪ್ರದಾನ ಮಾಡುತ್ತವೆ, ಅದೇ ನೇತಿ ನೇತಿ. ಇದರ ಅರ್ಥ not this, not that. ಇದೊಂದು elimination process. ಇದರ ಪ್ರಕಾರ ….
ಭಗವಂತ ಎಂದರೆ ದೇಹವೇ? ದೇಹಕ್ಕೆ ಸಾವುಂಟು ಆದ್ದರಿಂದ ನೇತಿ.
ಭಗವಂತ ಎಂದರೆ ಬುದ್ಧಿ- ಮನಸ್ಸೇ ( mind) ? ಮೈಂಡ್ ಬದಲಾಗುತ್ತಿರುತ್ತದೆ, ಆದ್ದರಿಂದ ನೇತಿ.
ಭಗವಂತ ಎಂದರೆ ಪ್ರೇಮವೇ- ಪ್ರೇಮ ಒಂದು ಭಾವನೆ ಮತ್ತು ಭಗವಂತ ಭಾವನಗಳನ್ನು ಮೀರಿದವನು. ಆದ್ದರಿಂದ ನೇತಿ.
ಹೀಗೆ ನೇತಿ ನೇತಿ ಎನ್ನುತ್ತ , ಎಲ್ಲ ಪದರಗಳನ್ನು ಬಿಚ್ಚಿಡುತ್ತ ಹೋಗಿ, ಎಲ್ಲ ವ್ಯಾಖ್ಯಾನಗಳನ್ನ ನಾಶ ಮಾಡುತ್ತ ಹೋಗಿ, ಈ ಈರುಳ್ಳಿಯಂತ ಸಂಗತಿಯನ್ನು ಅದು ಏನೂ ಉಳಿಯದ ತನಕ ಸುಲಿಯುತ್ತ ಹೋಗಿ. ಈಗ ಉಳಿದಿರುವ ಖಾಲೀತನದಲ್ಲಿಯೇ, ಮೌನದಲ್ಲಿಯೇ ಎಲ್ಲಿ ಯಾವ ಪದವೂ ಅಸ್ತಿತ್ವದಲ್ಲಿ ಇಲ್ಲವೋ ಅಲ್ಲಿಯೇ ವಾಸ್ತವವನ್ನು ಹುಡುಕುವುದು ನಿಮಗೆ ಸಾಧ್ಯವಾಗುತ್ತದೆ.

