ಉಬುಂಟು – ಉಪಕಾರದ ಸಹಜ ಧರ್ಮ । ಅಧ್ಯಾತ್ಮ Story #28

ನಾವು ದಕ್ಕಿಸಿಕೊಳ್ಳಬೇಕಾದ್ದು ಹೀಗೆ. ಕೊಡುವುದೂ ಅಲ್ಲ, ಪಡೆಯುವುದೂ ಅಲ್ಲ, ಹಂಚಿಕೊಳ್ಳುವುದು ಕೂಡ ಅಲ್ಲ. ಪರಸ್ಪರ ಸಹಕಾರದಿಂದ ಒಟ್ಟಿಗೆ ದಕ್ಕಿಸಿಕೊಳ್ಳಬೇಕು, ಹೊಂದಬೇಕು… । ಚೇತನಾ ತೀರ್ಥಹಳ್ಳಿ

ದಕ್ಷಿಣ ಆಫ್ರಿಕಾದ ತಂತ್ರಜ್ಞಾನಿ ಮತ್ತು ಉದ್ಯಮಿ ಮಾರ್ಕ್ ಶಟಲ್ ವರ್ತ್ 2004ರಲ್ಲಿ ಮುಕ್ತ ಆಪರೇಟಿಂಗ್ ಸಿಸ್ಟಮ್‌ನ ಮೊದಲ ಆವೃತ್ತಿಯನ್ನು ಜನರ ಬಳಕೆಗೆ ಲಭ್ಯವಾಗಿಸಿದರು. ಅದಕ್ಕೆ ಅವರು ಇಟ್ಟ ಹೆಸರು ‘ಉಬುಂಟು’. ಇದರ ಅರ್ಥ, ‘ನಿಮ್ಮಿಂದಾಗಿ ನಾನು’ ಎಂದು. I am because we are – ನಾವೆಲ್ಲರೂ (ಜೊತೆಗೆ) ಇರುವುದರಿಂದ ನಾನೂ ಅಸ್ತಿತ್ವದಲ್ಲಿದ್ದೇನೆ ಅನ್ನುವುದು ಇದರ ವಿಸ್ತೃತ ಅರ್ಥ. ಇದು ದಕ್ಷಿಣ ಆಫ್ರಿಕಾದ ಸಂಸ್ಕೃತಿಯ ಮೂಲ ತತ್ವ. ಇದರ ಕುರಿತಾಗಿ ಸುಂದರವಾದ ಕತೆಯೊಂದಿದೆ.

ಒಮ್ಮೆ ಮಾನವಶಾಸ್ತ್ರಜ್ಞನೊಬ್ಬ ದಕ್ಷಿಣ ಆಫ್ರಿಕಾದ ಹಳ್ಳಿಯೊಂದಕ್ಕೆ ಭೇಟಿ ಕೊಟ್ಟ. ಅಲ್ಲಿನ ಮಕ್ಕಳೊಡನೆ ಆಡುತ್ತಾ, ದೂರದಲ್ಲೊಂದು ಹಣ್ಣಿನ ಬುಟ್ಟಿ ಇಟ್ಟು, ‘ಯಾರು ಮೊದಲು ಆ ಬುಟ್ಟಿಯ ಬಳಿ ತಲುಪ್ತಾರೋ ಅವರಿಗೇ ಎಲ್ಲಾ ಹಣ್ಣು’ ಅಂದ. ಮಕ್ಕಳು ಮುಖ ಮುಖ ನೊಡಿಕೊಂಡರು. ಅಕ್ಕಪಕ್ಕ ಸಾಲಾಗಿ ನಿಂತು, ಒಬ್ಬರೊಬ್ಬರ ಕೈಹಿಡಿದು ಬುಟ್ಟಿಯತ್ತ ಓಡಿದರು. ಬುಟ್ಟಿಯಲ್ಲಿದ್ದ ಹಣ್ಣನ್ನು ಎಲ್ಲರೂ ಹಂಚಿಕೊಂಡರು.

ಆ ವಿದೇಶಿಗನಿಗೆ ಅಚ್ಚರಿ. ‘ಅರೆ! ಒಬ್ಬರೇ ಓಡಿ ಹೋಗಿದ್ದರೆ ಒಬ್ಬರಿಗೇ ಎಲ್ಲಾ ಸಿಗ್ತಾ ಇತ್ತಲ್ಲ?’ ಕೇಳಿದ. ಆ ಹುಡುಗರಲ್ಲೊಬ್ಬ ಮುಂದೆ ಬಂದು ಅವನಿಗೂ ಒಂದು ಹಣ್ಣು ಕೊಡುತ್ತಾ, ‘ಉಬುಂಟು’ ಅಂದ. ‘ಉಬುಂಟು… ಎಲ್ಲರೂ ಬೇಸರದಲ್ಲಿರುವಾಗ ಒಬ್ಬ ಮಾತ್ರ ಖುಷಿಯಾಗಿರಲು ಹೇಗೆ ಸಾಧ್ಯ?’

ಮಾರ್ಕ್ ಶಟಲ್ ವರ್ತ್ ಕೂಡ ಇದೇ ಚಿಂತನೆಯನ್ನು ಆಧರಿಸಿ, ತಂತ್ರಜ್ಞಾನವು ಎಲ್ಲರಿಗೂ ಉಚಿತವಾಗಿ ಮತ್ತು ಮುಕ್ತವಾಗಿ ಸಿಗಬೇಕೆಂಬ ಆಶಯದಿಂದ ಉಬುಂಟು OS ಆರಂಭಿಸಿದ್ದು. ಇದು ಒಬ್ಬರು ಗಳಿಸಿ ಮತ್ತೊಬ್ಬರಿಗೆ ನೀಡುವುದಕ್ಕಿಂತ ವಿಶೇಷವಾದದ್ದು. ಆ ಮಕ್ಕಳಲ್ಲಿ ಒಬ್ಬ ಹುಡುಗ ಎಲ್ಲರಿಗಿಂತ ಮೊದಲು ಬುಟ್ಟಿಯನ್ನು ಮುಟ್ಟಿ, ತಾನು ಗೆದ್ದ ಹಣ್ಣುಗಳನ್ನು ಹಂಚಬಹುದಿತ್ತು. ಆದರೆ ಅವರಲ್ಲಿ ಯಾವೊಬ್ಬ ಹುಡುಗನೂ ಹಾಗೆ ಮಾಡಲಿಲ್ಲ. ಎಲ್ಲರೂ ಒಗ್ಗಟ್ಟಿನಿಂದ ಬಹುಮಾನ ದಕ್ಕಿಸಿಕೊಂಡರು. ಅಲ್ಲಿ ಗೆಲ್ಲುವ ಅಹಂಕಾರವಾಗಲೀ ನೀಡುವ ಅಹಂಕಾರವಾಗಲೀ, ಸೋತ ಬೇಸರವಾಗಲೀ ಪಡೆಯುವ ಕೀಳರಿಮೆ ಅಥವಾ ಹಿಂಜರಿಕೆಯಾಗಲೀ ಉಂಟಾಗಲು ಅವಕಾಶವನ್ನೆ ಕೊಡಲಿಲ್ಲ.

ನಾವು ದಕ್ಕಿಸಿಕೊಳ್ಳಬೇಕಾದ್ದು ಹೀಗೆ. ಕೊಡುವುದೂ ಅಲ್ಲ, ಪಡೆಯುವುದೂ ಅಲ್ಲ, ಹಂಚಿಕೊಳ್ಳುವುದು ಕೂಡ ಅಲ್ಲ. ಪರಸ್ಪರ ಸಹಕಾರದಿಂದ ಒಟ್ಟಿಗೆ ದಕ್ಕಿಸಿಕೊಳ್ಳಬೇಕು, ಹೊಂದಬೇಕು.

~

ರಾಮಕೃಷ್ಣ ಪರಮಹಂಸರು ‘ಪರೋಪಕಾರ’ ಅನ್ನುವ ಪದ ಬಳಕೆಯನ್ನೇ ವಿರೋಧಿಸುತ್ತಿದ್ದರು. ನಾವು ಮತ್ತೊಬ್ಬರಿಗಾಗಿ ಏನನ್ನಾದರೂ ಮಾಡುವುದರಿಂದ ನಮಗೆ ನಾವೆ ಉಪಕರಿಸಿಕೊಳ್ಳುತ್ತೇವೆ. ಉಪಕಾರ ಅಂದರೆ ಉಪಕಾರ ಅಷ್ಟೇ, ಅದು ಮತ್ತೊಬ್ಬರಿಗೆ ಮಾಡುವುದಲ್ಲ, ನಮಗೆ ನಾವೇ ಮಾಡಿಕೊಳ್ಳುವುದು ಅನ್ನುತ್ತಿದ್ದರು. ಉಪಕಾರ ನಮ್ಮಲ್ಲಿ ಸ್ವಾರ್ಥ ಲೋಭ ಮೋಹಗಳು ತಲೆ ಎತ್ತದಂತೆ ಮಾಡುತ್ತವೆ. ನಮ್ಮನ್ನು ಸಾತ್ವಿಕರನ್ನಾಗಿಸುತ್ತದೆ. ನಮ್ಮ ಬದುಕಿಗೆ ಶಾಂತಿ – ನೆಮ್ಮದಿ ನೀಡುತ್ತವೆ. ಆದ್ದರಿಂದ, ಉಪಕಾರ ಮಾಡುವ ಅವಕಾಶ ಸಿಕ್ಕರೆ, ಅದಕ್ಕಾಗಿ ನಾವು ಋಣಿಯಾಗಿರಬೇಕೆಂದು ಅವರು ಹೇಳುತ್ತಿದ್ದರು.

~

ಸೃಷ್ಟಿಯ ಪ್ರತಿಯೊಂದೂ ಮತ್ತೊಂದಕ್ಕೆ ಪ್ರಯೋಜನಕಾರಿಯಾಗಿರುತ್ತದೆ. ಅದು ಅತ್ಯಂತ ಸಹಜ ಸಂಗತಿ. ಯಾವ ನದಿಯೂ ನೆಲದ ಒಡಲಿಂದ ಚಿಮ್ಮುವಾಗ ನಾನು ಜೀವರಾಶಿಯ ಪ್ರಯೋಜನಕ್ಕೆ ಬರಬೇಕೆಂದು ಚಿಮ್ಮೋದಿಲ್ಲ. ಅದೊಂದು ಪ್ರಾಕೃತಿಕ ಘಟನೆಯಷ್ಟೇ. ಆದರೆ ಮನುಷ್ಯರೂ ಸೇರಿದಂತೆ ಎಲ್ಲ ಜೀವರಾಶಿಗಳೂ ನದಿಯ ನೀರಿನ ಪ್ರಯೋಜನ ಪಡೆಯುತ್ತವೆ. ಯಾವ ಮರವೂ ಜನ ಹಣ್ಣು ತಿನ್ನಲೆಂದು ಫಲಿಸೋದಿಲ್ಲ. ಅದರ ಸಂತಾನೋತ್ಪತ್ತಿ ಚಕ್ರದ ಒಂದು ಹಂತವು ಮನುಷ್ಯರು ಮತ್ತಿತರ ಪ್ರಾಣಿ – ಪಕ್ಷಿಗಳಿಗೆ ಒದಗುತ್ತವೆ. ಅದೇ ರೀತಿ ಮನುಷ್ಯರೂ ಸೇರಿದಂತೆ ಎಲ್ಲ ಜೀವರಾಶಿಗಳೂ ಒಂದಲ್ಲ ಒಂದು ರೀತಿಯಲ್ಲಿ ಒಂದರಿಂದ ಮತ್ತೊಂದು ಪ್ರಯೋಜನ ಪಡೆಯುತ್ತಲೇ ಇರುತ್ತವೆ. ಆದ್ದರಿಂದ, ಪರೋಪಕಾರವನ್ನು ಸಾಧನೆಯಾಗಿ ನೋಡಬೇಕಿಲ್ಲ; ಅದೊಂದು ಅತ್ಯಂತ ಸಹಜ ಮತ್ತು ಪ್ರಾಕೃತಿಕ ಘಟನೆಯನ್ನಾಗಿ ನೋಡಬೇಕು. ನಮ್ಮಿಂದ ಮತ್ತೊಬ್ಬರು ಪ್ರಯೋಜನ ಪಡೆಯಲು ಅನುವು ಮಾಡಿಕೊಡಬೇಕು. ನಮ್ಮಿಂದ ಮತ್ತೊಬ್ಬರಿಗೆ ಉಪಕಾರವಾದರೆ ಅದನ್ನು ನಮ್ಮ ಹಿರಿಮೆ ಎಂದು ಬೀಗಬಾರದು. ನಮ್ಮಿಂದ ಯಾರಿಗೂ ಯಾವ ಪ್ರಯೋಜನವೂ ಆಗದಂತೆ ನಮ್ಮನ್ನು ನಾವು ತಡೆಹಿಡಿದರೆ, ಅದು ಅಸ್ವಾಭಾವಿಕ. ಅದು ಪ್ರಕೃತಿ ಧರ್ಮಕ್ಕೆ ವಿರುದ್ಧ. ಅದು ಅಸಹಜ ಮತ್ತು ಜೀವ ವಿರೋಧಿ. ನಾವು ಕೈ ಎತ್ತಿ ಯಾರಿಗೂ ಯಾವುದನ್ನೂ ಕೊಡದೆ ಹೋದರೂ ನಮ್ಮಿಂದ ಮತ್ತೊಬ್ಬರು ಏನಾದರೂ ಪಡೆಯುವಂತಿದ್ದರೆ, ಕನಿಷ್ಠ ಅದಕ್ಕೆ ಅವಕಾಶ ಬಿಟ್ಟುಕೊಡಬೇಕು. ಆಗ ಮಾತ್ರ ಈ ಸೃಷ್ಟಿಯಲ್ಲಿ ನಾವು ಪಡೆಯುತ್ತಿರುವ ಪಾಲಿಗೆ ನ್ಯಾಯ ಸಲ್ಲಿಸಿದಂತೆ ಆಗುವುದು.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.