ಸಮೂಹ ಸನ್ನಿಯಿಂದ ಸರ್ವನಾಶ । ಅಧ್ಯಾತ್ಮ Story #29

ಬಹಳ ಸಲ ನಾವೂ ಹೀಗೆ ಮಾಡ್ತೀವಿ. ಯಾರದೋ ಯುದ್ಧ ನಾವು ಮಾಡ್ತಾ ಇರ್ತೀವಿ. ಈ ಕತೆಗಳಲ್ಲಿ ಅದಕ್ಕೆ ಸಂಬಂಧಪಟ್ಟವರೂ ನಷ್ಟ ಅನುಭವಿಸ್ತಾರೆ ಅನ್ನೋದೇ ಒಂಥರಾ ಸಮಾಧಾನ. ಆದ್ರೆ ನಮ್ಮ ಕತೆ ಹಾಗಲ್ಲ. ನಮ್ಮಲ್ಲಿ ನಮ್ಮ ನಡುವಿನ ಜಗಳಕ್ಕೆ ಕಾರಣರಾಗೋ ಬಹುತೇಕರು ಅರಾಮಾಗೇ ಇರ್ತಾರೆ, ಒಬ್ಬರಿಗೊಬ್ಬರು ಒಳ ವ್ಯವಹಾರ ನಡೆಸಿಕೊಂಡು ಮಜವಾಗಿರ್ತಾರೆ… । ಚೇತನಾ ತೀರ್ಥಹಳ್ಳಿ

ಅಲ್ಲಿ ಏನು ನಡೀತಾ ಇದೆ ಅಂತ ಗೊತ್ತಿರೋದಿಲ್ಲ. ಯಾಕೆ ನಡೀತಾ ಇದೆ ಅಂತಲೂ ಗೊತ್ತಿರೋದಿಲ್ಲ. ನಾಲ್ಕು ಜನ ತೋಳೇರಿಸಿ ಹೊರಟರು ಅಂದ್ರೆ ಸಾಕು, ಅವರನ್ನ ಕುರಿಗಳ ಹಾಗೆ ಹಿಂಬಾಲಿಸೋರೇ ಬಹಳ. ಒಂದು ನಾಯಿ ಬೊಗಳಿದರೆ ಅಲ್ಲೆಲ್ಲೋ ಬೀದಿ ತುದಿಯಲ್ಲಿರೋ ಮತ್ತೊಂದು ನಾಯಿ ಬೊಗಳುತ್ತೆ. ಅದನ್ನ ಕೇಳಿಸಿಕೊಂಡು ಸಂಬಂಧವೇ ಇಲ್ಲದಿರೋ ಕೇರಿ ನಾಯಿ ಬೊಗಳುತ್ತೆ. ಮನುಷ್ಯರೇನು ನಾಯಿಗಳಿಗಿಂತ ಹೆಚ್ಚಲ್ಲ. ಸಮೂಹಸನ್ನಿಗೆ ಒಳಗಾಗಿ ಇಲ್ಲಾಜಿಕಲ್ ಆಗಿ ನಡ್ಕೊಳೋ ಜನ ಸುತ್ತಲಿನವರಿಗೆ ಮಾತ್ರ ಅಲ್ಲ, ಕೊನೆಗೆ ತಮ್ಮ ಮನೆಗೇ ಬೆಂಕಿ ಹಾಕ್ಕೊತಾರೆ. ಬರೀ ಕತೆಗಳಲ್ಲಿ ಮಾತ್ರ ಅಲ್ಲ, ಈಗೀಗಂತೂ ನಿಜ್ವಾಗ್ಲೂ ಕಣ್ಣೆದುರೇ ನಡೀತಾ ಇರೋದು ಇದು. ಆದ್ರೂ ಇಂಥದೆರಡು ಕತೆ ಹೇಳೇಬಿಡ್ತೀನಿ ಕೇಳಿ.

ಇದೊಂದು ಥಾಯ್ ಜನಪದ ಕತೆ. ಒಂದಿನ ಒಬ್ಬ ಜೇನುತುಪ್ಪದ ಬಟ್ಟಲು ಹಿಡ್ಕೊಂಡು ರೋಡಲ್ಲಿ ಹೋಗುವಾಗ ತುಳುಕಿ ಒಂದು ಹನಿ ಕೆಳಗೆ ಚೆಲ್ಲಿಬಿಡುತ್ತೆ. ಅದರ ವಾಸನೆ ಹಿಡಿದ ನೊಣ ಹಾರಿಬಂದು ಅದರ ಮೇಲೆ ಕುಳಿತುಕೊಳ್ಳತ್ತೆ. ಆ ನೊಣನ ನೋಡಿ ಒಂದು ಹಲ್ಲಿ ಅದನ್ನ ಹಿಡಿಯೋಕೆ ಸರ ಸರ ಅದರ ಹತ್ತಿರ ಬರುತ್ತೆ. ಆ ಹಲ್ಲಿನ ಹಿಡಿಯೋಕೆ ಒಂದು ಬೆಕ್ಕು ಮೆಟ್ಟಿಲಿಂದ ಕೆಳಗೆ ಧುಮುಕುತ್ತೆ. ಆ ಬೆಕ್ಕನ್ನ ನೋಡಿ ನಾಯಿ ಬೊಗಳ್ತಾ ಓಡೋಡಿ ಬರುತ್ತೆ. ಬೆಕ್ಕಿನ ಯಜಮಾನ ನಾಯಿನ ಬೆದರಿಸೋಕೆ ಕೋಲು ತಗೊಳ್ತಾನೆ. ಅದನ್ನ ನೋಡಿದ ನಾಯಿ ಯಜಮಾನ ತಾನೂ ಬಡಿಗೆ ಹಿಡಿದು ಬೆಕ್ಕಿನ ಯಜಮಾನನ್ನ ತರಾಟೆಗೆ ತೆಗೆದುಕೊಳ್ತಾನೆ. ಅವರಿಬ್ರು ಜಗಳ ಮಾಡ್ತಿರುವಾಗ ಎರಡೂ ಕಡೆಯ ಯಜಮಾನರ ಗೆಳೆಯರು, ನೆರೆಕೆರೆಯವರು ಅವರ ಸುತ್ತ ಮುತ್ತಿಕೊಳ್ತಾರೆ. ತಮತಮಗೆ ಬೇಕಾದವರ ಪರ ವಹಿಸಿ ಹೊಡೆದಾಟಕ್ಕೆ ಇಳೀತಾರೆ.

ರೋಡಲ್ಲಿ ಇಷ್ಟೆಲ್ಲ ನಡಿತಾ ಇರುವಾಗ ಯಾರದೋ ಮನೇಲಿ ಕಿಟಕಿಯಿಂದ ಬೀಸಿದ ಗಾಳಿಗೆ ಚಿಮಣಿ ದೀಪ ಕೆಳಗೆ ಬಿದ್ದು, ಅದರ ಕಿಡಿ ಪರದೆಗೆ ಹತ್ಕೊಂಡು, ಮನೆ ತುಂಬಾ ಬೆಂಕಿ ಹೊತ್ಕೊಳತ್ತೆ. ಎಲ್ಲಾ ಮನೆಗಳವರೂ ಬೀದೀಲಿ ಹೊಡೆದಾಟದಲ್ಲಿ ಮುಳುಗೋಗಿದ್ರಲ್ಲ, ಯಾರಿಗೂ ಬೆಂಕಿ ಗಮನಕ್ಕೆ ಬರೋದೇ ಇಲ್ಲ. ಗಾಳಿ ಜೋರಾಗಿ, ಆ ಮನೆ ಪೂರ್ತಿ ಸುಟ್ಟು, ಪಕಕ್ದ ಮನೆಗೂ ಬೆಂಕಿ ತಗುಲಿ, ಆ ಮನೆನೂ ಸುಟ್ಟು ಹಬ್ತಾ ಹಬ್ತಾ ಇಡೀ ಹಳ್ಳಿಗೆ ಹಳ್ಳಿನೇ ಉರಿದು ಬೂದಿ ಆಗ್ಬಿಡುತ್ತೆ.

ಹಳ್ಳಿಲಿ ಗಲಾಟೆ ನಡಿತಿರೋ ವಿಷಯ ರಾಜನ ಕಿವಿಗೆ ಬಿದ್ದು ಅವನು ಸೈನಿಕರನ್ನ ಅಟ್ತಾನೆ. ಆ ಸೈನಿಕರು ಬಂದು ನೋಡೋ ಹೊತ್ತಿಗೆ ಊರಿಗೂರೇ ಸ್ಮಶಾನ! ಏನಾಯ್ತು ಅಂತ ವಿಚಾರಣೆಗೆ ಇಳಿದಾಗ ಎಲ್ರೂ ಆಕಾಶ ನೋಡೋರೇ. ಇದೆಲ್ಲ ಹೇಗೆ ಶುರುವಾಯ್ತು ಅಂತ ಯಾರಿಗೂ ಗೊತ್ತಿಲ್ಲ. ಆಮೇಲೆ ಬೆಕ್ಕಿನ ಯಜಮಾನ, ನಾಯಿ ಯಜಮಾನನೇ ಗಲಾಟೆ ಶುರು ಮಾಡಿದ್ದು ಅಂತ ಗೊತ್ತಾಗತ್ತೆ. ಯಾಕೆ ಅಂತ ಕೇಳ್ದಾಗ ನಾಯಿ – ಬೆಕ್ಕಿನ ಕಡೆ ಕೈ ತೋರಿಸ್ತಾರೆ. ಆಮೇಲೆ ಹಲ್ಲಿ, ನೊಣ, ಜೇನುತುಪ್ಪದ ಮೇಲೂ ಹೊಣೆ ಹೊರಿಸ್ತಾರೆ. ಆ ಜೇನಿನ ಹನಿ ಚೆಲ್ಲಿದೋನು ಮಾತ್ರ ತನಗೇನೂ ಗೊತ್ತಿಲ್ಲ ಅನ್ನೋ ಹಾಗೆ ಅಲ್ಲಿಂದ ಜಾಗ ಖಾಲಿ ಮಾಡ್ತಾನೆ. ತಮ್ಮದಲ್ಲದ ಉಸಾಬರಿ ಮಾಡಿ ಮನೆಗಳನ್ನೇ ಕಳ್ಕೊಂಡು ನಿಂತಿದ್ದ ಜನ, ತಮ್ಮ ಮೂರ್ಖತನಕ್ಕೆ ಎಷ್ಟು ದೊಡ್ಡ ಬೆಲೆ ತೆರಬೇಕಾಯ್ತಲ್ಲ ಅಂತ ಗೋಳಾಡೋಕೆ ಶುರು ಮಾಡ್ತಾರೆ.

~

ಇದೇ ಥರದ ಒಂದು ರಷ್ಯನ್ ಕತೆ ಇದೆ, ಲಿಯೋ ಟಾಲ್ಸ್‌ಟಾಯ್ ಬರೆದ ಕತೆ. ಒಂದು ಕೋಳಿಮೊಟ್ಟೆಗಾಗಿ ಗೆಳೆಯರಾಗಿದ್ದ ಇವಾನ್ ಮತ್ತು ಗೇಬ್ರಿಯಲ್ ಜಗಳ ಶುರು ಮಾಡ್ತಾರೆ. ಇವಾನ್ ಮನೆಯ ಕೋಳಿ, ಗೇಬ್ರಿಯಲ್ ಮನೆಗೆ ಹೋಗಿ ಮೊಟ್ಟೆ ಇಟ್ಟಿರುತ್ತೆ. ಇವಾನ್ ಸೊಸೆ ಅದನ್ನು ತರಲು ಹೋದಾಗ ಗೇಬ್ರಿಯಲ್ ಮನೆಮಂದಿ ಕೋಳಿ ನಿಮ್ಮದಾದ್ರೇನು, ಮೊಟ್ಟೆ ನಮ್ಮನೇಲಿ ಇಟ್ಟಿರೋದು, ಆದ್ರಿಂದ ಅದು ನಮಗೇ ಸೇರಬೇಕು ಅಂತ ವಾದಿಸ್ತಾರೆ. ಈ ವಾಗ್ವಾದ ಕೋರ್ಟ್‌ವರೆಗೂ ಹೋಗುತ್ತೆ. ಜಗಳ ಮಾಡುವಾಗ ಗೇಬ್ರಿಯಲ್, ಇವಾನ್‌ನ ಗಡ್ಡ ಎಳೆದ ಅಂತ ಕೋರ್ಟ್ ಅವನಿಗೆ ಶಿಕ್ಷೆ ವಿಧಿಸುತ್ತೆ. ಇದರಿಂದ ಸಿಟ್ಟಾದ ಗೇಬ್ರಿಯಲ್, ಒಂದು ರಾತ್ರಿ ಇವಾನ್ ಮನೆಯ ಹುಲ್ಲಿನ ಬಣವೆಗೆ ಬೆಂಕಿ ಇಡ್ತಾನೆ. ಅವನು ಬೆಂಕಿ ಇಡ್ತಿರೋದನ್ನ ನೊಡಿದ ಇವಾನ್ ಅದನ್ನು ನಂದಿಸೋದು ಬಿಟ್ಟು, ಇಟ್ಟವನನ್ನ ಹಿಡಿದು ಪೊಲೀಸರಿಗೆ ಕೊಡ್ತೀನಿ ಅಂತ ಅವನನ್ನು ಅಟ್ಟಿಸಿಕೊಂಡು ಹೋಗ್ತಾನೆ. ಅವನು ಗೇಬ್ರಿಯಲ್‌ನ ಹಿಡಿಯೋ ಹೊತ್ತಿಗೆ ಬೆಂಕಿ ಹಬ್ಬಿ ಅವನ ಮನೆಯ ಜೊತೆಗೆ ಪಕ್ಕದ ಮನೆಯನ್ನೂ ಅರ್ಧಕ್ಕರ್ಧ ಹಳ್ಳಿಯನ್ನೂ ಸುಟ್ಟು ಹಾಕಿರುತ್ತೆ. ಸೇಡಿಗೆ ಬಿದ್ದು ಬೆಂಕಿ ನಂದಿಸೋ ಅವಕಾಶ ಕಳೆದುಕೊಂಡ ಇವಾನ್, ತನ್ನ ಮನೆಯನ್ನೇ ಕಳೆದುಕೊಳ್ಳಬೇಕಾಯ್ತು. ಗೇಬ್ರಿಯಲ್ ಕೂಡಾ ಒಂದು ಮೊಟ್ಟೆಗೆ ಪಟ್ಟು ಹಿಡಿದು ತನ್ನ ನೆಮ್ಮದಿ ಕಳೆದುಕೊಳ್ಳಬೇಕಾಯ್ತು. ಹಳ್ಳಿಯ ಜನರೂ ಅವರ ಜಗಳ ನಿಲ್ಲಿಸುವ ಬದಲು ಅವರಿಗೆ ಕುಮ್ಮಕ್ಕು ಕೊಟ್ಟು ನಷ್ಟ ಅನುಭವಿಸಬೇಕಾಯ್ತು. ತಮಗೆ ಸಂಬಂಧವೇ ಇಲ್ಲದ ಜಗಳಕ್ಕೆ ತಲೆ ಹಾಕಿ, ಬೆಲೆ ತೆರಬೇಕಾಯ್ತು.

~

ಬಹಳ ಸಲ ನಾವೂ ಹೀಗೆ ಮಾಡ್ತೀವಿ. ಯಾರದೋ ಯುದ್ಧ ನಾವು ಮಾಡ್ತಾ ಇರ್ತೀವಿ. ಈ ಕತೆಗಳಲ್ಲಿ ಅದಕ್ಕೆ ಸಂಬಂಧಪಟ್ಟವರೂ ನಷ್ಟ ಅನುಭವಿಸ್ತಾರೆ ಅನ್ನೋದೇ ಒಂಥರಾ ಸಮಾಧಾನ. ಆದ್ರೆ ನಮ್ಮ ಕತೆ ಹಾಗಲ್ಲ. ನಮ್ಮಲ್ಲಿ ನಮ್ಮ ನಡುವಿನ ಜಗಳಕ್ಕೆ ಕಾರಣರಾಗೋ ಬಹುತೇಕರು ಅರಾಮಾಗೇ ಇರ್ತಾರೆ, ಒಬ್ಬರಿಗೊಬ್ಬರು ಒಳ ವ್ಯವಹಾರ ನಡೆಸಿಕೊಂಡು ಮಜವಾಗಿರ್ತಾರೆ. ನಾವು ಯಾರೋ ಒಬ್ಬರು ಘೋಷಣೆ ಕೂಗಿದರು ಅಂತಲೋ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದರು ಅಂತಲೋ ಇಂಪ್ರೆಸ್ ಆಗಿ ಅವರನ್ನೆ ಅನುಸರಿಸ್ತೀವಿ. ನಮಗೆ ಬೇಕಾದವರ ಪರ ಜಿದ್ದಿಗೆ ಬಿದ್ದು ಜಗಳ ಮಾಡ್ತೀವಿ. ಬದುಕಿಗೇ ಬೆಂಕಿ ಬಿದ್ರೂ ನಮಗೆ ಅದರ ಪರಿವೆ ಇರೋದಿಲ್ಲ. ನಿರುದ್ಯೋಗ, ಬೆಲೆ ಏರಿಕೆ, ಟ್ಯಾಕ್ಸು, ಮತ್ತೊಂದು ಅಂದ್ಕೊಂಡು ಸಾವಿರ ಸಮಸ್ಯೆ ಇದ್ರೂ ನಾವು ಜಗಳದಲ್ಲಿ ಮೈಮರೆತುಬಿಡ್ತೀವಿ.

ಈ ಕತೆಗಳನ್ನ ವಿಶುವಲೈಸ್ ಮಾಡ್ಕೊಂಡು ನೋಡಿ ಬೇಕಿದ್ರೆ. ಥಾಯ್‌ ಕತೆಯಲ್ಲಿ ಬೂದಿಯಾದ ಮನೆ ಮುಂದೆ ತಲೆ ತಗ್ಗಿಸಿ ನಿಂತವರಲ್ಲಿ ನಾವೂ ಒಬ್ಬರಾಗಿರ್ತೀವಿ. ಅಥವಾ ಇವಾನ್ ಮತ್ತು ಗೇಬ್ರಿಯಲ್ ಮನೆಗಳ ನೆರಕೆಯಲ್ಲಿರೋ ಮನೆ ನಮ್ಮದೇ ಆಗಿರುತ್ತೆ. ಜೇನುತುಪ್ಪ ಅಥವಾ ಮೊಟ್ಟೆ ನೆವ ಮಾತ್ರ. ನಮ್ಮ ನಷ್ಟಕ್ಕೆ ನಾವೇ ಹೊಣೆ ಅನ್ನೋದು ಮಾತ್ರ ನೂರಕ್ಕೆ ನೂರು ನಿಜ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.