ಎಂದಿಗೂ ತುಂಬದ ಬಟ್ಟಲು । ಅಧ್ಯಾತ್ಮ Story #31

ಪ್ರತಿದಿನದ ಬದುಕನ್ನು ಸರಳವಾಗಿ, ಸುಂದರವಾಗಿ ಬಾಳುವುದು ನಮ್ಮ ಆದ್ಯತೆ ಆಗಿರುವುದಿಲ್ಲ. ನಮ್ಮ ಬದುಕಿನ ಬಟ್ಟಲು ಆಸ್ತಿ, ಅಂತಸ್ತು, ಕೀರ್ತಿ, ಅಧಿಕಾರ ಎಲ್ಲವನ್ನೂ ಬಯಸುತ್ತದೆ. ಒಂದೊಂದಾಗಿ ಅದರೊಳಗೆ ಹಾಕುತ್ತ ಬಂದರೂ ಅದರ ಹಪಾಹಪಿ ನಿಲ್ಲಿವುದೇ ಇಲ್ಲ… । ಚೇತನಾ ತೀರ್ಥಹಳ್ಳಿ

ಇಬ್ರಾಹಿಂ ಇಬ್ನ್ ಅದಮ್ ಒಬ್ಬ ಸೂಫಿ ಸಂತ. ಒಂದೊಮ್ಮೆ ಬಾಲ್ಖ್‌ನ ರಾಜನಾಗಿದ್ದ ಈತ ಒಂದು ದಿನ ಇದ್ದಕ್ಕಿದ್ದಂತೆ ರಾಜ್ಯಭಾರ, ಅರಮನೆ, ಸಂಸಾರ, ಸಂಪತ್ತು ಎಲ್ಲವನ್ನೂ ತ್ಯಜಿಸಿ ದರವೇಶಿಯಾಗುತ್ತಾನೆ. ಸಾಧನೆ ನಡೆಸಿ ಸೂಫಿ ಸಂತನಾಗುತ್ತಾನೆ, ಇಬ್ರಾಹಿಂ ಬಾಲ್ಖಿ ಎಂದು ಪ್ರಸಿದ್ಧನಾಗುತ್ತಾನೆ.

ಅದೊಂದು ದಿನ ಇಬ್ರಾಹಿಂ ಬಾಲ್ಖಿ ಎಂದಿನಂತೆ ಭಿಕ್ಷಾ ಪಾತ್ರೆ ಹಿಡಿದು ಕುಳಿತಿದ್ದ. ಅದೇ ಬೀದಿಯಲ್ಲಿ ರಾಜನೊಬ್ಬ ಕುದುರೆಯ ಮೇಲೆ ಕುಳಿತು ಹೋಗುತ್ತಿದ್ದ. ಬಾಲ್ಖಿಯ ಮುಖದಲ್ಲಿನ ಪ್ರಶಾಂತತೆ ಅವನನ್ನು ಕೆಣಕಿತು. ಗರ್ವದಿಂದ, ‘ನನ್ನ ಬಳಿ ಹತ್ತು ತಲೆಮಾರಿಗೆ ಸಾಕಾಗುವಷ್ಟು ಸಂಪತ್ತಿದೆ, ನಿನಗೇನು ಬೇಕೋ ಕೇಳು’ ಅಂದ. ಬಾಲ್ಖಿ ಮುಗುಳ್ನಗುತ್ತ ತನ್ನ ಭಿಕ್ಷಾಪಾತ್ರೆಯನ್ನು ಮುಂದೆ ಮಾಡಿ, ‘ಹೆಚ್ಚೇನೂ ಬೇಡ, ಈ ಪಾತ್ರೆಯನ್ನು ಹೇಗಾದರೂ ತುಂಬಿಸಿಕೊಡು ಸಾಕು’ ಅಂದ.

ರಾಜ ಇವನೆಲ್ಲೋ ಮೂರ್ಖ ಅಂದುಕೊಳ್ಳುತ್ತಾ ತನ್ನ ಥೈಲಿಯಲ್ಲಿದ್ದ ಚಿನ್ನದ ನಾಣ್ಯಗಳನ್ನು ಬಟ್ಟಲಿಗೆ ಸುರಿದ. ಮುಕ್ಕಾಲು ಭಾಗ ಮಾತ್ರ ತುಂಬಿತು. ಅದರ ಮೇಲೆ ತನ್ನ ಕೈಗಡಗಗಳನ್ನಿಟ್ಟ. ಕೊರಳ ಹಾರಗಳನ್ನಿಟ್ಟ. ಸೊಂಟದಪಟ್ಟಿಯನ್ನೂ ಕಿವಿಯೋಲೆಯನ್ನೂ ಇಟ್ಟ. ಬಟ್ಟಲು ತುಂಬಲಿಲ್ಲ. ಅರಮನೆಯಿಂದ ಹರಿವಾಣಗಟ್ಟಲೆ ಒಡವೆಗಳನ್ನೂ ಪೆಟ್ಟಿಗೆಗಟ್ಟಲೆ ನಾಣ್ಯಗಳನ್ನೂ ತರಿಸಿದ. ಏನು ಸುರಿದರೂ ಎಷ್ಟು ಸುರಿದರೂ ಬಾಲ್ಖಿಯ ಭಿಕ್ಷೆಯ ಬಟ್ಟಲು ತುಂಬಲಿಲ್ಲ. ಇಡೀ ರಾಜ್ಯದ ಸಂಪತ್ತನ್ನೇ ತರಿಸಿ ಸುರಿದರೂ ತುಂಬಲಿಲ್ಲ. ರಾಜನಿಗೆ ಅಚ್ಚರಿಯಾಯಿತು. ಆವೇಳೆಗೆ ಈತ ಸಾಮಾನ್ಯ ಭಿಕ್ಷುಕನಲ್ಲ ಅನ್ನುವ ಅರಿವೂ ಮೂಡಿತ್ತು.ಇಬ್ರಾಹಿಂ ಬಾಲ್ಖಿಯ ಮುಂದೆ ಮಂಡಿಯೂರಿ ಕುಳಿತು ಕ್ಷಮೆ ಬೇಡಿದ. ಯಾವುದರಿಂದಲೂ ತುಂಬದ ಈ ಬಟ್ಟಲಿನ ರಹಸ್ಯವೇನೆಂದು ಕೇಳಿದ.

‘ರಾಜಾ, ಈ ಪಾತ್ರೆ ಮನುಷ್ಯರ ಹೃದಯದ ಸಂಕೇತವಷ್ಟೇ. ಮನುಷ್ಯರ ಹೃದಯ ಆಸೆಯ ಬಟ್ಟಲಿನಂತೆ. ಯಾವುದರಿಂದಲೂ ಅದಕ್ಕೆ ತೃಪ್ತಿಯಾಗೋದಿಲ್ಲ. ನಿನ್ನ ಬಳಿ ಅಷ್ಟೆಲ್ಲ ಸಂಪತ್ತು, ಸಂತೋಷ ನೀಡುವ ಸಲಕರಣೆಗಳು ಇದ್ದರೂ ನಿನಗೆ ತೃಪ್ತಿಯಿಲ್ಲ. ರಾಜ್ಯದ ಪರಮಾಧಿಕಾರವೇ ನಿನ್ನಲ್ಲಿದ್ದರೂ ನಿನ್ನ ಹೃದಯಕ್ಕೆ ಸಮಾಧಾನವಿಲ್ಲ. ಆದ್ದರಿಂದಲೇ ನೀನು ನನ್ನಂಥ ಒಬ್ಬ ಹಾದಿಬದಿಯ ಭಿಕ್ಷುಕನ ಮೇಲೆ ದರ್ಪ ತೋರಿಸಿ ನಿನ್ನೆದೆಯ  ದಾಹ ತಣಿಸಿಕೊಳ್ಳಲು ಪ್ರಯತ್ನಿಸಿದೆ. ನಾನು ನಿನ್ನಿಂದ ಒಂದಷ್ಟು ನಾಣ್ಯ ಪಡೆದು ಸುಮ್ಮನಾಗಿದ್ದರೆ ನೀನು ಇನ್ನೇನೋ ಮಾಡುತ್ತಿದ್ದೆ, ಅಥವಾ ಇನ್ಯಾರ ಮೇಲೋ ದರ್ಪ ತೋರಿಸಲು, ನಿನ್ನ ಅಧಿಕಾರ ಚಲಾಯಿಸಲು ಹೊರಡುತ್ತಿದ್ದೆ. ನನ್ನ ಭಿಕ್ಷಾಪಾತ್ರೆ ತುಂಬುವುದು ಶರಣಾಗತಿ ಮತ್ತು ವಿನಯವಂತಿಕೆಯಿಂದ ಮಾತ್ರ. ಹಾಗೇ ನೀನೂ ನಿನಗೆ ಇಷ್ಟೆಲ್ಲ ಸಂಪತ್ತು, ಅಧಿಕಾರ ಕೊಟ್ಟ ಭಗವಂತನಿಗೆ ಶರಣಾಗು. ವಿನೀತನಾಗಿ ಒಂದು ಸಕ್ಕರೆ ಹರಳು ಹಾಕಿದರೂ ಈ ಬಟ್ಟಲು ತುಂಬುವುದು’ ಅಂದ.

~

ಇದೊಂದು ದಂತಕತೆ ಅನ್ನುವುದರಲ್ಲಿ ಅನುಮಾನವಿಲ್ಲ. ಆದರೆ ಈ ಕತೆ ಹೇಳುವ ಪಾಠ ಎಲ್ಲ ದೇಶ ಕಾಲಕ್ಕೂ ಜನರಿಗೂ ಸಲ್ಲುವಂತಿದೆ. ನಮ್ಮ ನಿರಂತರ ಅತೃಪ್ತಿಗೆ ಕನ್ನಡಿ ಹಿಡಿಯುವಂತಿದೆ. ಪ್ರತಿದಿನದ ಬದುಕನ್ನು ಸರಳವಾಗಿ, ಸುಂದರವಾಗಿ ಬಾಳುವುದು ನಮ್ಮ ಆದ್ಯತೆ ಆಗಿರುವುದಿಲ್ಲ. ನಮ್ಮ ಬದುಕಿನ ಬಟ್ಟಲು ಆಸ್ತಿ, ಅಂತಸ್ತು, ಕೀರ್ತಿ, ಅಧಿಕಾರ ಎಲ್ಲವನ್ನೂ ಬಯಸುತ್ತದೆ. ಒಂದೊಂದಾಗಿ ಅದರೊಳಗೆ ಹಾಕುತ್ತ ಬಂದರೂ ಅದರ ಹಪಾಹಪಿ ನಿಲ್ಲಿವುದೇ ಇಲ್ಲ. ಅದನ್ನು ತುಂಬಿಸುವ ಜಿದ್ದಿಗೆ ಬಿದ್ದು, ಅದಾಗಲೇ ಅದರೊಳಗೆ ಭರಿಸಿರುವ ಸಾಧನೆಗಳನ್ನೂ ಕಡೆಗಣಿಸುತ್ತೇವೆ. ಅವುಗಳಿಂದ ಸಿಗುವ ತೃಪ್ತಿಯನ್ನು ಅನುಭವಿಸದೆ ಹೋಗುತ್ತೇವೆ; ಜನಪದ ಕತೆಯ ಮರಕುಟಿಗನಂತೆ.

~

ಒಂದೂರಲ್ಲೊಬ್ಬ ಮರಕುಟಿಗ. ಅವನೊಂದು ದಿನ ಕಾಡಿಗೆ ಹೋದಾಗ ಯಕ್ಷನೊಬ್ಬ ಎದುರಾದ. ‘ನಾನು ಈ ನನ್ನ ಲೋಕಕ್ಕೆ ಮರಳಿಹೊರಟಿದೀನಿ, ನನ್ನ ಬಳಿ ಏಳು ಕೊಪ್ಪರಿಗೆಗಳಿವೆ, ಅವುಗಳಲ್ಲಿ ಚಿನ್ನದ ನಾಣ್ಯಗಳಿವೆ. ಅವನ್ನು ಯಾರಿಗಾದರೂ ಕೊಟ್ಟು ಹೋಗೋಣ ಅಂತ ಕಾಯ್ತಿದ್ದೆ’ ಅಂದ. ಮರಕುಟಿಗ ಯಕ್ಷನ ಕಾಲಿಗೆ ಬಿದ್ದು, ಅವನನ್ನು ಹಾಡಿ ಹೊಗಳಿ, ಆ ಕೊಪ್ಪರಿಗೆಗಳನ್ನು ತನ್ನದಾಗಿಸಿಕೊಂಡ, ತನ್ನ ಮನೆಗೆ ಹೊತ್ತು ತಂದ.

ಸಾವಕಾಶವಾಗಿ ಒಂದೊಂದೇ ಕೊಪ್ಪರಿಗೆಗೆ ಕಟ್ಟಿದ್ದ ಬಟ್ಟೆ ಬಿಚ್ಚುತ್ತಾ ಹೋದರೆ, ಹೆಪ್ಪುಗಟ್ಟಿ ಉಕ್ಕುವ ಮೊಸರು ಗಡಿಗೆಯಂತೆ ಪ್ರತಿಯೊಂದೂ ಚಿನ್ನದ ನಾಣ್ಯಗಳಿಂದ ತುಂಬಿಹೋಗಿದ್ದವು. ಆದರೆ ಏಳನೆ ಕೊಪ್ಪರಿಗೆ ಮಾತ್ರ ಮುಕ್ಕಾಲಷ್ಟೇ ತುಂಬಿಕೊಂಡಿತ್ತು.

ಉಳಿದವನ್ನೆಲ್ಲ ಕಟ್ಟಿ ಮುಚ್ಚಿಟ್ಟ ಮರಕುಟಿಗ, ಏನಾದರೂ ಮಾಡಿ ಆ ಏಳನೇ ಕೊಪ್ಪರಿಗೆಯನ್ನೂ ಕಂಠಮಟ್ಟ ತುಂಬಿಸಬೇಕೆಂದು ಯೋಚಿಸಿದ. ಅವನಿಗೆ ಉಳಿದ ಆರು ಕೊಪ್ಪರಿಗೆಗಳ ಸಂಪತ್ತಿನ ಖುಷಿಗಿಂತ, ಏಳನೇ ಕೊಪ್ಪರಿಗೆಯ ಅರ್ಧಖಾಲಿಯ ಅತೃಪ್ತಿಯೇ ಹೆಚ್ಚು ಕಾಡತೊಡಗಿತು. ಆ ಕ್ಷಣವೇ ಅದಕ್ಕಾಗಿ ಟೊಂಕ ಕಟ್ಟಿದ. ಹಗಲಿರುಳು ದುಡಿದ. ಎಷ್ಟು ತಂದು ಸುರಿದರೂ ಏಳನೆ ಕೊಪ್ಪರಿಗೆ ಒಂದಿಂಚೂ ಮೇಲೇರದು! ಧಗಾ, ಮೋಸ ಮಾಡತೊಡಗಿದ. ಊಹೂಂ! ಏಳನೇ ಕೊಪ್ಪರಿಗೆ ಜಪ್ಪಯ್ಯ ಅನ್ನಲಿಲ್ಲ. ಕಳ್ಳತನಕ್ಕಿಳಿದ. ಚಿನ್ನದ ನಾಣ್ಯಗಳನ್ನೇ ಕದ್ದು ತಂದು ಸುರಿದ. ಏನು ಮಾಡಿದರೂ ಆ ಕೊಪ್ಪರಿಗೆ ತುಂಬುತ್ತಲೇ ಇಲ್ಲ. ಕಳ್ಳತನಕ್ಕೆ ಶಿಕ್ಷೆಯಾಗಿ ಜೈಲಿಗೆ ಹೋಗಿ ಬಂದರೂ ಮತ್ತೆ ಕಳ್ಳತನಕ್ಕೆ ಇಳಿಯುತ್ತಿದ್ದ. ಮತ್ತೆ ಜೈಲಿಗೆ ಹೋಗುತ್ತಿದ್ದ. ಜನರೆಲ್ಲ ಛೀ ಥೂ ಅಂದರು. ಅವನ ಲೋಭ, ಹಣದ ಹುಚ್ಚಿಗೆ ಹೇವರಿಕೆ ಬಂದು ಮನೆಯವರೆಲ್ಲ ದೂರವಾದರು. ಆದರೂ ಅವನು ಏಳನೇ ಕೊಪ್ಪರಿಗೆ ತುಂಬಿಸುವ ಪ್ರಯತ್ನ ಮಾಡುತ್ತಲೇ ಇದ್ದ, ಸೋಲುತ್ತಲೇ ಇದ್ದ, ಕೊನೆಗೊಂದು ದಿನ ಸತ್ತುಹೋದ.

~

ನಮ್ಮ ಬಳಿ ಇರುವುದನ್ನು ಅನುಭವಿಸುವ, ಅದರಲ್ಲೇ ಸುಖ ಶಾಂತಿ ಕಂಡುಕೊಳ್ಳುವ ಬದಲು, ನಾವೂ ಆ ಮರಕುಟಿಗನಂತೆ ಕೊರತೆಯನ್ನು ತುಂಬಲು ಹೊರಡುತ್ತೇವೆ. ಈ ಜಂಜಡದಲ್ಲಿ, ಇರುವುದನ್ನು ಅನುಭವಿಸದ ಮೂರ್ಖತನ ಮಾಡುತ್ತೇವೆ. ಅದರಿಂದಾಗಿ ನಮ್ಮ ಬದುಕೂ ಯಾವತ್ತೂ ತುಂಬದ ಏಳನೇ ಕೊಪ್ಪರಿಯಾಗಿ ಉಳಿದುಹೋಗುತ್ತದೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.