ವಚನ ವೈವಿಧ್ಯ#42: ಒಲಿದವರನ್ನು ಕೊಲ್ಲಲು ಒಲ್ಲೆ ಎಂಬ ಮಾತು ಸಾಲದೆ – ಗಜೇಶ ಮಸಣಯ್ಯ

ಭಕ್ತಿಯೂ ನಾನತ್ವವನ್ನು ಇಲ್ಲವಾಗಿಸಿಕೊಂಡು ನನಗಿಂತ ದೊಡ್ಡದಾದುದರೊಡನೆ ಒಂದಾಗುವ ಅಪೇಕ್ಷೆ. ಇದು ಸಾಮೂಹಿಕವಾದಾಗ ಶರಣರ (ನಾನತ್ವ ಇಲ್ಲವಾಗಿಸಿಕೊಂಡವರ) ಸಮುದಾಯ ಸೃಷ್ಟಿಯಾಗುತ್ತದೆ. ಶರಣ ಸಮುದಾಯ ಒಲ್ಲೆನೆಂದರೆ ತುಪ್ಪ ಸುರಿದು ಬೆಂಕಿ ಆರಿಸಿದಂತೆ ಅನ್ನುವ ವ್ಯಂಗ್ಯ ಇಲ್ಲಿದೆ । ಓ.ಎಲ್.ನಾಗಭೂಷಣ ಸ್ವಾಮಿ

ಒಲಿದವರ ಕೊಲುವಡೆ
ಮಸೆದ ಕೂರಲಗೇಕೆ
ಅವರನೊಲ್ಲೆನೆಂದಡೆ ಸಾಲದೆ
ಮಹಾಲಿಂಗ ಗಜೇಶ್ವರನ ಶರಣರನಗಲಿದಡೆ
ತುಪ್ಪದಲ್ಲಿ ಕಿಚ್ಚ ನಂದಿಸಿದಂತಾದೆನವ್ವಾ

[ಕೂರಲಗು-ಮಸೆದ ಕತ್ತಿಯ ಅಂಚು]

ಪ್ರೀತಿಸುವವರನ್ನು ಕೊಲ್ಲುವುದಕ್ಕೆ ಮಸೆದ ಚೂಪು ಕತ್ತಿ ಯಾಕೆ ಬೇಕು, ನಿನ್ನನ್ನು ಒಲ್ಲೆ ಎಂಬ ಮಾತು ಹೇಳಿದರೆ ಸಾಕು, ಅಲ್ಲವೇ? ಮಹಾಲಿಂಗ ಗಜೇಶ್ವರನ ಶರಣರು ನನ್ನನ್ನು ಒಲ್ಲೆನೆಂದು ದೂರವಾದರೆ ನಾನು ತುಪ್ಪಸುರಿದು ಆರಿಸಿದ ಬೆಂಕಿಯಂತೆ ಆದೆ, ಅವ್ವಾ.

ಸರಳವೆನಿಸುವ ಈ ವಚನ ಒಲುಮೆ-ತಿರಸ್ಕಾರ, ಕೊಲೆ/ಹಿಂಸೆ-ಭಾಷೆ, ವ್ಯಕ್ತಿ-ಸಮುದಾಯಗಳ ಸಂಬಂಧದ ಬಗ್ಗೆ ಗಹನವಾದ ವಿಚಾರಗಳನ್ನು ಹೇಳುವಂತಿದೆ. ಒಲುಮೆಯಲ್ಲಿ ಪರಸ್ಪರ ಒಪ್ಪಿಗೆ ಬಹಳ ಮುಖ್ಯ. ಒಪ್ಪಿಗೆ ಇಲ್ಲದ ಸಂಬಂಧ ಅಧಿಕಾರ-ಅಧೀನತೆಯ ಸಂಬಂಧವಾಗುತ್ತದೆ. ಒಲಿವರಲ್ಲಿ ಒಬ್ಬರು ಯಾವುದೇ ಕಾರಣಕ್ಕೆ ತಮ್ಮ ಜೊತೆಯ ಇನ್ನೊಂದು ಒಲುಮೆಯ ಜೀವವನ್ನು ʻಒಲ್ಲೆʼ ಎಂದು ನಿರಾಕರಿಸಿದರೆ ಅದು ಕತ್ತಿಯಿಂದ ಇರಿದು ಪ್ರಾಣ ತೆಗೆದಂತೆಯೇ ಸರಿ. ಒಲುಮೆಯಲ್ಲಿ ಮಾತು ಹೂವೂ ಆದೀತು ಕೊಲ್ಲುವ ಕತ್ತಿಯೂ ಆದೀತು. ಒಲಿದವರ ಆಡುವ ಒಲ್ಲೆನೆಂಬ ನುಡಿಗೆ ಗುರಿಯಾಗುವುದು ಜೀವ ಹೋದ ಹಾಗೆ, ಅಂತೆಯೇ  ಶರಣ ಸಮುದಾಯದಿಂದ ದೂರವಾಗುವುದು ಬೆಂಕಿಯ ಉರಿಯಲ್ಲಿ ಸುಟ್ಟುಕೊಂಡ ಹಾಗೆ. ಸಮುದಾಯದ ಹಂಗಿಲ್ಲದೆ ಸ್ವತಂತ್ರವಾಗಿರುವುದು ಅಂದರೆ ಒಂಟಿತನದ ಉರಿಯಲ್ಲಿ ಬೆಂದ ಹಾಗೆ.

 ಭಕ್ತಿಯೂ ನಾನತ್ವವನ್ನು ಇಲ್ಲವಾಗಿಸಿಕೊಂಡು ನನಗಿಂತ ದೊಡ್ಡದಾದುದರೊಡನೆ ಒಂದಾಗುವ ಅಪೇಕ್ಷೆ. ಇದು ಸಾಮೂಹಿಕವಾದಾಗ ಶರಣರ (ನಾನತ್ವ ಇಲ್ಲವಾಗಿಸಿಕೊಂಡವರ) ಸಮುದಾಯ ಸೃಷ್ಟಿಯಾಗುತ್ತದೆ. ಶರಣ ಸಮುದಾಯ ಒಲ್ಲೆನೆಂದರೆ ತುಪ್ಪ ಸುರಿದು ಬೆಂಕಿ ಆರಿಸಿದಂತೆ ಅನ್ನುವ ವ್ಯಂಗ್ಯ ಇಲ್ಲಿದೆ.

ಒಲುಮೆ ಭಕ್ತಿ ಎರಡೂ ಸ್ವೀಕಾರ ಮನೋಧರ್ಮದವು, ನಿರಾಕರಣೆ ಸಾವಿಗೆ ಸಮ ಎಂದು ಹೇಳುವ ಈ ವಚನ ದೊಡ್ಡ ಚರ್ಚೆಯನ್ನೇ ಹುಟ್ಟಿಸಬಹುದು. ವ್ಯಕ್ತಿ ಸ್ವಾತಂತ್ರ್ಯ, ಸಾಮೂಹಿಕ ಬದುಕು ಇವೆರಡರ ಹದ ಎಂಥದಿರಬೇಕು ಅನ್ನುವ ಹುಡುಕಾಟಕ್ಕೂ ತೊಡಗಿಸಬಹುದು. 


ಗಜೇಶ ಮಸಣಯ್ಯ

ಈ ವಚನಕಾರರ ಮಹಲಿಂಗ ಗಜೇಶ್ವರಾ ಅಂಕಿತದ ೭೦ ವಚನಗಳು ಪ್ರಕಟವಾಗಿವೆ. ಈಗಿನ ವಿಜಯಪುರದಿಂದ ೬೦ ಮೈಲು ದೂರದ ಅಕ್ಕಲಕೋಟೆಗೆ ಸಮೀಪದಲ್ಲಿರುವ ಕರಜಿಗೆ ಗ್ರಾಮದವರು. ಅಲ್ಲಿಗೆ  ಹತ್ತಿರದ ಮನಹಳ್ಳಿಯಲ್ಲಿ ಮಸಣಯ್ಯನ ದೇವಾಲಯವಿದ್ದು ವರ್ಷಕ್ಕೊಮ್ಮೆ ಜಾತ್ರೆ ನಡೆಯುತ್ತದೆ. ಅಲ್ಲೇ ಹತ್ತಿರದ  ಹಳ್ಳದ ಬಳಿಯಲ್ಲಿ ಮಸಣಯ್ಯ ಪೂಜೆ ಮಾಡುತ್ತಿದ್ದರು. ಪೂಜೆಯಲ್ಲಿ ಮೈಮರೆತಿರುವಾಗ ಕಾಡುಪ್ರಾಣಿ, ಗುಡುಗು,ಸಿಡಿಲು ಕೂಡ ಗಮನಕ್ಕೆ ಬರುತ್ತಿರಲಿಲ್ಲವೆಂಬ ಕಥೆ ಇದೆ. ಗಜೇಶ ಮಸಣಯ್ಯನವರ ವಚನಗಳಲ್ಲಿ ಮಧುರಭಾವ ಮುಖ್ಯವಾಗಿದೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.