ಪ್ರತಿಯೊಂದು ಪದವನ್ನೂ ಖಚಿತವಾಗಿ ಕಲ್ಪಿಸಿಕೊಂಡರೆ ಈ ವಚನದ ಅದ್ಭುತ ಮನಸಿಗೆ ಬರುತ್ತದೆ । ಓ.ಎಲ್.ನಾಗಭೂಷಣ ಸ್ವಾಮಿ
ಕತ್ತಲೆಯೊಳಗಡಗಿದ ನೆಳಲಿನ ಬೀಜ
ಬಿತ್ತದ ಮುನ್ನ ಮಾಮರನಾಯಿತ್ತು
ತನ್ನ ನೆಳಲೆಲ್ಲಾ ಬೆಳದಿಂಗಳು
ನೋಡ ಹೋದವರ ಕಣ್ಣೆಲ್ಲಾ ಒಡೆದವು
ಉಲುಹಿದ್ದೂ ಉಲುಹಿಲ್ಲ
ಕಪಿಲಸಿದ್ಧಮಲ್ಲಿಕಾರ್ಜುನಯ್ಯ ಆ ಮರದ
ಹೋಟೆಯೊಳಗಣ ಮಧುವಿನಂತಿದ್ದನು [೪.೪೦೪]
[ಮಾಮರ-ಮಾವಿನ ಮರ; ಉಲುಹು-ಸದ್ದು, ಮರ್ಮರ; ಹೋಟೆಯೊಳಗಣ-ಓಟೆಯೊಳಗಿನ]
ನೆರಳಿನ ಬೀಜ ಕತ್ತಲೆಯಲ್ಲಿ ಅವಿತಿತ್ತು. ಆ ಬೀಜವನ್ನು ಬಿತ್ತುವ ಮೊದಲೇ ಮಾವಿನ ಮರವಾಗಿ ಬೆಳೆದಿತ್ತು. ಆ ಮರದ ನೆರಳು ತಿಂಗಳ ಬೆಳಕು. ಅದನ್ನು ನೋಡಲು ಹೋದವರ ಕಣ್ಣು ಒಡೆದವು. ಮರ್ಮರವಿದ್ದರೂ ಕೇಳುತಿಲ್ಲ. ಕಪಿಲಸಿದ್ಧಮಲ್ಲಿಕಾರ್ಜುನನು ಓಟೆಯೊಳಗಿರುವ ಸಿಹಿಯಂತೆ ಇದ್ದನು.
ಈ ವಚನ ಓದುತ್ತಿರುವಾಗ ʻಅಪರಿಮಿತದ ಕತ್ತಲಲ್ಲಿ ವಿಪರೀತದ ಬೆಳಗುʼ ಎಂಬ ಅಲ್ಲಮ ವಚನ ನೆನಪಾಯಿತು [೨.೪೪೯]. ಪ್ರತಿಯೊಂದು ಪದವನ್ನೂ ಖಚಿತವಾಗಿ ಕಲ್ಪಿಸಿಕೊಂಡರೆ ಈ ವಚನದ ಅದ್ಭುತ ಮನಸಿಗೆ ಬರುತ್ತದೆ. ನೆರಳಿನ ಬೀಜ. ಅದು ಕತ್ತಲಲ್ಲಿ ಅಡಗಿದೆ. ಯಾರಾದರೂ ಆ ಬಿತ್ತವನ್ನು ನೆಲಕ್ಕೆ ಹಾಕಿ, ನೀರು ಸುರಿದು ಬೆಳೆಸುವ ಮೊದಲೇ ಅದು ಮಾವಿನ ಮರವಾಗಿತ್ತು. ಆ ಮರದ ನೆರಳು-ಬೆಳದಿಂಗಳು! ನೋಡಲು ಹೋದವರ ಕಣ್ಣು ಒಡೆದು ಹೋದವು. ಕಣ್ಣಿಂದ ಕಾಣಬಹುದಾದ ಬೆಳುದಿಂಗಳಲ್ಲ. ಉಲುಹಿದ್ದೂ ಉಲುಹಿಲ್ಲ ಅನ್ನುವ ಮಾತು ಕಣ್ಣಲ್ಲಿ ನೋಡಲು ಹೋಗಿ ಕಣ್ಣು ಕಳೆದುಕೊಂಡವರ ಉಲುಹು ಅಡಗಿತ್ತು ಅಂತಲೋ, ಮಾವಿನ ಮರದ ಮರ್ಮರ ಇದ್ದರೂ ಕೇಳುವುದಿಲ್ಲ ಅಂತಲೋ? ಎರಡೂ ಸಾಧ್ಯವಿರಬಹುದು. ಕಪಿಲಸಿದ್ಧಮಲ್ಲಿಕಾರ್ಜುನ ಮಾತ್ರ ಓಟೆಯೊಳಗೆ ಇಲ್ಲವಾಗಿ ಅಡಗಿರುವ ಸವಿಯಲ್ಲದೆ ಬೇರೇನೂ ಅಲ್ಲ.
ದೇವರೆಂಬುದು ಇರುವ ವಸ್ತುವಲ್ಲ, ಆಗಬಹುದಾದ ಅನುಭವಕ್ಕೆ ಇಟ್ಟುಕೊಂಡಿರುವ ಹೆಸರು. ಅದು ಬೆಳುದಿಂಗಳ ನೆರಳನ್ನು ಕೊಡುವ ಮೌನದ ಮಾವಿನ ಮರವಲ್ಲ, ಮರದ ಹಣ್ಣಲ್ಲ, ಹಣ್ಣಿನೊಳಗಿನ ಓಟೆಯೂ ಅಲ್ಲ, ನಮ್ಮ ರುಚಿಗೆ ಒದಗುವ ಹಾಗೆ ಓಟೆಯೊಳಗೇ ಅಡಗಿದ್ದ ಸವಿ. ಇದನ್ನು ಕಾಣಲು ಹೋದರೆ ಕುರುಡಾಗದೆ ಬೇರೆ ದಾರಿಯಿಲ್ಲ.
ಸಿದ್ಧರಾಮ
ವಚನ ಯುಗದ ಪ್ರಮುಖ ವಚನಕಾರರಾದ ಸಿದ್ಧರಾಮ ಸೊನ್ನಲಿಗೆಯವರು; ಅವರ ಪ್ರಯತ್ನದಿಂದ ಅದು ನಗರವಾಗಿ ಬೆಳೆದು ಸೊಲ್ಲಾಪುರವಾಯಿತು ಎಂಬ ಮಾತಿದೆ. ಅಲ್ಲಮ, ಮಹದೇವಿ ಅಕ್ಕರಂತೆ ಸಿದ್ಧರಾಮ ಕೂಡ ಶ್ರೀಶೈಲ ಮಲ್ಲಿಕಾರ್ಜುನನ ಆರಾಧಕರು.. ಅವರು ಯೋಗ ಸಾಧಕರೆಂದೂ ಪ್ರಸಿದ್ಧರು. ಸಿದ್ಧರಾಮರ ಬದುಕು, ಸಾಧನೆಗಳನ್ನು ಕುರಿತು ರಾಘವಾಂಕನು ಸಿದ್ಧರಾಮ ಚರಿತೆಯನ್ನು ಬರೆದಿದ್ದಾನೆ. ಕರ್ಮಯೋಗದ ದಾರಿಯಲ್ಲಿ ಸಾಗಿ ಭಕ್ತಿ ಮಾರ್ಗಕ್ಕೆ ಹೊರಳಿದ ಈ ವಚನಕಾರರ ೧೯೯೨ ವಚನಗಳು ಪ್ರಕಟವಾಗಿವೆ. ಅಂಕಿತ ʻಕಪಿಲಸಿದ್ಧ ಮಲ್ಲಿಕಾರ್ಜುನʼ ಮತ್ತು ಅದರ ಭಿನ್ನ ರೂಪಗಳು. ಸಿದ್ಧರಾಮರ ವಚನಗಳ ಸಂಖ್ಯೆಯನ್ನು ಕುರಿತ ಚರ್ಚೆ ನಡೆದೇ ಇದೆ.

