ಹೋಳಿ ಹುಣ್ಣಿಮೆ ಅಂದರೆ ಕಾಮನ ಹಬ್ಬವೂ ಹೌದು. ಈ ನಿಮಿತ್ತ ಕೆಲವು ಶೃಂಗಾರಭರಿತ ಪ್ರೇಮಪದ್ಯಗಳು ಇಲ್ಲಿವೆ… । ಕನ್ನಡಕ್ಕೆ: ಚಿದಂಬರ ನರೇಂದ್ರ
ಅವಳನ್ನು
ಸೃಷ್ಟಿಸಿಯಾದಮೇಲೆ ದೇವರು,
ಆ ಚೆಂದದ ಮುಖವನ್ನು
ತನ್ನ ಬೊಗಸೆಯಲ್ಲಿ ಹಿಡಿದುಕೊಂಡು,
ಆಕೆಯ ಎರಡೂ ಗಲ್ಲಗಳನ್ನು
ಹೆಬ್ಬೆರಳುಗಳಿಂದ ಒತ್ತಿಹಿಡಿದು
ತನ್ನ ಸೃಷ್ಟಿಯನ್ನೊಮ್ಮೆ
ಹೆಮ್ಮೆಯಿಂದ ನೋಡಿರಬಹುದು.ಅವಳ ಕೆನ್ನೆಯ ಮೇಲಿನ
ಪರಿಪೂರ್ಣ ಗುಳಿಗಳ ಹುಟ್ಟಿಗೆ ಕಾರಣ
ಬಹುಶಃ ದೇವರ
ಆ ದಿವ್ಯ ಬೆರಳುಗಳೇ ಇರಬಹುದು.
~ ಶ್ರೀಹರ್ಷ
ನಿನ್ನ ತುಟಿಗಳ ರಂಗನ್ನು ಕಂಡು
ನೇಣು ಹಾಕಿಕಿಕೊಂಡಿವೆ ಮರಕ್ಕೆ
ಕಳವಳದಲ್ಲಿ,
ಚೆರ್ರಿ ಹಣ್ಣುಗಳು.
~ ಸೋಮಪ್ರಭಾ ಸೂರಿ
ಅವಳು ತನ್ನ
ಹಣೆಯ ನಡುವೆ ಹಚ್ಚಿಕೊಂಡಿರುವ
ಉದ್ದನೆಯ ತಿಲಕ,
ಕಾಮದೇವ
ಆಕೆಯ ಹುಬ್ಬಿನ ಬಿಲ್ಲಿಗೆ ಹೆದೆಯೇರಿಸಿ
ನೇರವಾಗಿ ಸ್ವರ್ಗಕ್ಕೆ ಹೂಡಿದ ಬಾಣ.
ಭೂಮಿಯನ್ನೇನೋ ಗೆದ್ದಾಯಿತು
ಇನ್ನು ಸ್ವರ್ಗದ ಪಾಳಿ.
~ ಪದ್ಮಗುಪ್ತ

ಅಡುಗೆ ಮನೆಯ ಗಡಿಬಿಡಿಯಲ್ಲಿ
ಬೆಂಕಿ ಒಲೆಯ ಕಟ್ಟಿಗೆ ಸರಿಮಾಡುತ್ತ
ಮುಖ ಒರೆಸಿಕೊಂಡಿದ್ದಾಳೆ ಆಕೆ
ತನ್ನ ಇದ್ದಲು ಕೈಗಳಿಂದ.
ಥೇಟ್ ಚಂದ್ರನ ಹಾಗೆ ಕಾಣುತ್ತಿದ್ದಾಳೆ !
ಹುಚ್ಚನಾಗೋದೊಂದು ಬಾಕಿ
ಇನ್ನು ಆಕೆಯ ಪ್ರೇಮಿ.
~ ಹಾಲ
ಗೆಳೆಯ,
ಚುಚ್ಚಿದ ಮುಳ್ಳು
ಕಾಣಿಸುತ್ತಿದೆ ಹಗಲಿನಷ್ಟೇ ಸ್ಪಷ್ಟವಾಗಿ,
ತೆಗೆದುಬಿಡು ಒಮ್ಮೆ ನಿನ್ನ ಉಗುರುಗಳಿಂದ
ಆದರೆ ಮೆತ್ತಗೆ, ಸಾವಧಾನ
ಆಕೆ ಇರಿಸಿದಳು ತನ್ನ ಪಾದಗಳನ್ನ
ಅವನ ತೊಡೆಯ ಮೇಲೆ
ಇರಲೇ ಇಲ್ಲ ಅಲ್ಲಿ ಯಾವ ಮುಳ್ಳು,
ನಡೆದು ಹೋಗುತ್ತದೆ ಲೀಲೆ ಒಮ್ಮೊಮ್ಮೆ
ಆಧಾರವಾಗಿದ್ದರೂ ಸುಳ್ಳು.
~ ಶಾರಂಗಧರ

ಪ್ರೇಮದ ಜಾದೂ ನಗರಿಯಲ್ಲಿ
ಬೇಕು ಎನ್ನುವುದು ಬೇಡ ಎಂದು ಕೇಳಿಸಿದರೆ,
ಬೇಡ ಎನ್ನುವುದು ಬೇಕು ಎನ್ನುವಂತೆ.
ಅವರು ನಿರ್ಲಕ್ಷ ಮಾಡಿದಷ್ಟು
ಹೆಚ್ಚು ಅವರ ಮೇಲೆ ನಮಗೆ ಬಯಕೆ,
ಕಡೆಗಣಿಸಿಬಿಡುತ್ತದೆ ಪ್ರೇಮ
ತನ್ನ ತಾಳಕ್ಕೆ ಕುಣಿಯುವವರನ್ನ.
ಹಾಗಾಗಿಯೇ ಒಮ್ಮೊಮ್ಮೆ
ಗಾಂಭೀರ್ಯ, ರಸಿಕರ ರಸವಿದ್ಯೆ.
~ ಸೋಮೇಶ್ವರ
ಅವಳು ಕರಗಿ ಹೋಗಿದ್ದಾಳೆಯೇ
ನನ್ನ ಹೃದಯದಲ್ಲಿ?
ಅಥವಾ ಅಲ್ಲಿ ಕಾಣುತ್ತಿರುವುದು
ಕೇವಲ ಅವಳ ಪ್ರತಿಬಿಂಬವೆ?
ಬಹುಶಃ ಚಿತ್ರಿಸಲಾಗಿದೆ ಅವಳನ್ನ ಅಲ್ಲಿ,
ಅಥವಾ ಕುಸುರಿ ಕೆತ್ತಲಾಗಿದೆಯಾ
ನನ್ನ ಎದೆಯ ಮೇಲೆ?
ಅಥವಾ ಜೋಡಿಸಲಾಗಿದೆಯಾ
ಬಹುಮೂಲ್ಯ ರತ್ನಗಳಂತೆ ನಾಜೂಕಾಗಿ?
ಅಥವಾ ಪ್ರತಿಷ್ಠಾಪಿಸಲಾಗಿದೆಯಾ
ದೇವಿಯಂತೆ ಪೀಠದ ಮೇಲೆ?
ಅಥವಾ ಮುಚ್ಚಿಡಲಾಗಿದೆಯಾ ನೆಲದಲ್ಲಿ
ಅಪೂರ್ವ ನಿಧಿಯಂತೆ ?
ಅಥವಾ ಕಾಮದೇವನ ಐದು ಬಾಣಗಳಿಂದ
ಅಂಟಿಸಲಾಗಿದೆಯಾ ನನ್ನ ಎದೆಯ ಮೇಲೆ?
ಅಥವಾ ಹೊಲಿಗೆ ಹಾಕಲಾಗಿದೆಯಾ
ಎದೆಯ ಹರವಿನ ಮೇಲೆ
ನನ್ನ ಯೋಚನೆಯ ಎಳೆಗಳಿಂದ ಹೊಲಿದು
ಗಟ್ಟಿಯಾಗಿ.
~ ಭವಭೂತಿ

ಎದೆಯ ಗೋಡೆಯ ಮೇಲೆ
ನನ್ನ ಹುಚ್ಚು ಮನಸ್ಸು
ಭರವಸೆಯ ಬಳಪದಿಂದ
ಬರೆದುಕೊಂಡಿದ್ದ ಎಲ್ಲವನ್ನೂ
ಅಳಿಸಿ ಹಾಕಿಬಿಡುತ್ತಾನೆ ವಿಧಿರಾಯ,
ಅಳಿಸುವಂತೆ
ಶಾಲೆಯ ತುಂಟ ಹುಡುಗನೊಬ್ಬ
ಹುಡುಗಿಯರ ಮನೆಪಾಠ.
~ ಹಾಲ
ಕಾಮನ ಉಪಟಳವನ್ನು
ಸಹಿಸಿಕೊಳ್ಳುವುದಾದರೂ ಹೇಗೆ?
ಪ್ರೇಮದಲ್ಲಿ
ದೇಹಗಳನ್ನು ಬಹಳ ಮುತುವರ್ಜಿಯಿಂದ
ಸಿಂಗರಿಸುವ ಕಾಮದೇವ,
ಸೊರಗಿಸಿ ಹಿಂಡಿ ಹಿಪ್ಪೆ ಮಾಡಿಬಿಡುತ್ತಾನೆ ವಿರಹದಲ್ಲಿ.
ಆದರೆ ಯಮಧರ್ಮ ಮಾತ್ರ ಮಾಡುವುದಿಲ್ಲ
ಯಾವುದೇ ಪಕ್ಷಪಾತ ಎಣಿಸುವಲ್ಲಿ ಉಳಿದಿರುವ
ಬಾಕಿ ದಿನಗಳನ್ನು.
ಪ್ರೇಮಿಗಳೇ ಕರುಣೆ ತೋರಿಸಿ,
ಒಬ್ಬರು
ಇನ್ನೊಬ್ಬರ ಮೇಲೆ,
ಮುಗಿಯದಿರಲಿ ಯಾವತ್ತೂ ಯಮನ ಎಣಿಕೆ
ಮುಂದುವರೆಯಲಿ ಸದಾ
ಕಾಮದೇವನ ಎದುರು ಮಣಿಯುವಿಕೆ.
~ ಅಮರುಕ
ನಿನ್ನ ಮುಖದ ಚೆಲುವಿಕೆಗೆ
ಇನ್ನೊಂದು ಹೋಲಿಕೆಯನ್ನು ಸೃಷ್ಟಿಮಾಡುವ ಭರವಸೆಯಿಂದ,
ಪ್ರತಿದಿನ ಜೋಡಿಸುತ್ತಲೇ ಹೋಗುತ್ತಾನೆ ಸೃಷ್ಟಿಕರ್ತ
ಚಂದ್ರನನ್ನು ತುಣುಕುಗಳಲ್ಲಿ.
ಮತ್ತೆ ಮತ್ತೆ ಕಿತ್ತು ಹಾಕುತ್ತಾನೆ
ಜೋಡಿಸಿದ ಚಂದ್ರನ ತುಣುಕುಗಳನ್ನ
ಹೊಸದಾಗಿ ಪ್ರಯತ್ನಿಸಲು ಮತ್ತೊಮ್ಮೆ
ಹತಾಶೆಯಲ್ಲಿ.
~ ಹಾಲ

