ತನ್ನ Le Mirouer des simples âmes (The Mirror of Simple Souls) ಕೃತಿಯಲ್ಲಿ ಆತ್ಮವನ್ನು ಹೆಣ್ಣಾಗಿ ಸಂಬೋಧಿಸುವ ಮಾರ್ಗರೆಟ್ ಪೊರೆಟಿ, ಮುಕ್ತಾತ್ಮದ ಒಂಬತ್ತು ಲಕ್ಷಣಗಳನ್ನು ಹೀಗೆ ಪಟ್ಟಿ ಮಾಡುತ್ತಾಳೆ… । ಕನ್ನಡಕ್ಕೆ: ಚೇತನಾ ತೀರ್ಥಹಳ್ಳಿ
ಪತ್ತೆ ಮಾಡಲು ಸಾಧ್ಯವಿಲ್ಲದವಳು: ಆತ್ಮವು ಸಂಪೂರ್ಣವಾಗಿ ದೇವರಲ್ಲಿ ಲೀನವಾಗಿರುವುದರಿಂದ, ಅವಳನ್ನು ಯಾರೂ ಪ್ರತ್ಯೇಕವಾಗಿ ಗುರುತಿಸಲು ಅಥವಾ ಪತ್ತೆ ಮಾಡಲು ಸಾಧ್ಯವಿಲ್ಲ.
ಶುದ್ಧ ನಂಬಿಕೆ: ಅವಳಿಗೆ ಬಾಹ್ಯ ಆಚರಣೆಗಳಿಗಿಂತ ಹೆಚ್ಚಾಗಿ ದೇವರ ಮೇಲಿನ ಅಚಲವಾದ ಶ್ರದ್ಧೆಯೇ ಮುಖ್ಯವಾಗುತ್ತದೆ.
ಪ್ರೀತಿಯಲ್ಲಿ ಐಕ್ಯವಾದವಳು : ಅವಳು ದೈವಿಕ ಪ್ರೀತಿಯೊಂದಿಗೆ ಎಷ್ಟೊಂದು ಬೆರೆತಿರುತ್ತಾಳೆ ಅಂದರೆ, ಅವಳೇ ಪ್ರೀತಿಯ ಪ್ರತಿರೂಪವಾಗಿಬಿಟ್ಟಿರುತ್ತಾಳೆ/
ದೇವರಿಗಾಗಿ ಏನನ್ನೂ ಮಾಡದವಳು: ಅವಳು ದೇವರನ್ನು ಒಲಿಸಿಕೊಳ್ಳಲು ಪ್ರತ್ಯೇಕವಾಗಿ ಏನನ್ನೂ ಮಾಡುವುದಿಲ್ಲ; ಯಾಕೆಂದರೆ ಅವಳು ಮಾಡುವ ಪ್ರತಿಯೊಂದು ಕೆಲಸವೂ ದೇವರ ಇಚ್ಛೆಯೇ ಆಗಿರುತ್ತದೆ; ದೇವರಿಗಾಗಿಯೇ ಇರುತ್ತದೆ.
ತ್ಯಜಿಸಲು ಏನೂ ಇಲ್ಲದವಳು: ಅವಳು ಎಲ್ಲವನ್ನೂ ತ್ಯಜಿಸಿ ಶೂನ್ಯವಾಗಿರುತ್ತಾಳೆ. ಹೊಸತಾಗಿ ತ್ಯಜಿಸುವಂಥದ್ದು ಅವಳಲ್ಲಿ ಏನೂ ಉಳಿದಿರುವುದಿಲ್ಲ.
ಕಲಿಕೆಯ ಅಗತ್ಯ ಇಲ್ಲದವಳು : ಅವಳಿಗೆ ಯಾವ ಗುರುಗಳೂ ಹೊಸತಾಗಿ ಏನನ್ನೂ ಕಲಿಸಲು ಸಾಧ್ಯವಿಲ್ಲ; ಅವಳು ನೇರವಾಗಿ ದೈವಿಕ ಜ್ಞಾನವನ್ನು ಪಡೆದಿರುತ್ತಾಳೆ.
ಲಾಭ-ನಷ್ಟಗಳಿಲ್ಲ: ಅವಳಿಗೆ ಯಾರೂ ಏನನ್ನೂ ಕೊಡಲು ಸಾಧ್ಯವಿಲ್ಲ ಮತ್ತು ಅವಳಿಂದ ಯಾರೂ ಏನನ್ನೂ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಅವಳು ಎಲ್ಲವನ್ನೂ ಮೀರಿದವಳು.
ಸ್ವಂತ ಆಸೆಗಳಿಲ್ಲ: ಅವಳಿಗೆ ತನ್ನದೇ ಆದ ವೈಯಕ್ತಿಕ ಬಯಕೆಗಳಿಲ್ಲ. ದೇವರ ಇಚ್ಛೆಯೇ ಅವಳ ಇಚ್ಛೆಯಾಗಿರುತ್ತದೆ.
ಪರಿಪೂರ್ಣಳು : ಅವಳಿಗೆ ಯಾವುದರ ಕೊರತೆಯೂ ಇಲ್ಲ. ಅವಳು ತನ್ನಷ್ಟಕ್ಕೆ ತಾನೇ ಸಂಪೂರ್ಣಳು, ಪರಿಪೂರ್ಣಳು. ಅವಳಿಗೆ ಬೇರೆ ಯಾರಿಂದಲೂ ಏನೂ ಬೇಕಾಗುವುದಿಲ್ಲ.
ಮಾರ್ಗರೆಟ್ ಪೊರೆಟಿ ಬಗ್ಗೆ ಇಲ್ಲಿ ಓದಿ: https://aralimara.com/2026/01/24/mp/

