ಚಿದಂಬರ ನರೇಂದ್ರ
ಅಳಿಸಿಬಿಡು
ಒಮ್ಮೆ ನೀನು ಬದುಕಿದ್ದೆ ಎನ್ನುವ
ಎಲ್ಲ ಗುರುತುಗಳನ್ನೂ
ಕಂಪಿಸದಿರಲಿ ನಿನ್ನ ಉಸಿರಿಗೆ
ಒಂದೇ ಒಂದು ಜೀವವೂ
ಚಿಗುರದಿರಲಿ ಒಂದೆಲೆಯೂ
ಬೆದರದಿರಲಿ ನಿನ್ನ ಮಿಸುಕಾಟಕ್ಕೆ
ಕಳಚಿ ಎದ್ದು ಬಿಡು
ಬಟ್ಟೆಯ ಒಂದೊಂದು ಎಳೆಯನ್ನೂ
ಒಂದು ಸಣ್ಣ ಸದ್ದಿಗೂ ಸುದ್ದಿ ಕೊಡದಂತೆ
ಈಗ ಇಲ್ಲೇ ಇದ್ದೆ, ಈಗ ಇಲ್ಲ ಅಷ್ಟೆ.
ನೆನಪಿನಲ್ಲಿರಲಿ,
ಬದುಕಿನ ಒಂದು ಸುಕ್ಕೂ ಕೂಡ
ಕಳಂಕ ತರದಿರಲಿ
ಸಾವಿನ ಶುದ್ಧ ಸೌಂದರ್ಯಕ್ಕೆ.
~ Gulzar
ನನ್ನ ಈ ಮಾತು unpopular ಆಗಿರಬಹುದು ಆದರೆ ನಾವು ತಿಳಿದುಕೊಂಡಷ್ಟು ಸಾವು ಕೆಟ್ಟ ಸಂಗತಿಯೇನಲ್ಲ. ವಿಚಿತ್ರ ಆದರೂ ನಮಗೆ ಯಾವಾಗಲೂ ಕಲಿಸಿಕೊಡಲಾಗಿದೆ, ಸಾವು ಒಂದು ದುರಂತ, ಸಾವು ಕರಾಳ ಮತ್ತು ಸಾವು ನಾವು ಯಾವತ್ತೂ ಹೆದರಿಕೊಳ್ಳಬೇಕಾದ ಸಂಗತಿ. ಆದರೆ ಒಮ್ನೆ ವಿಚಾರ ಮಾಡಿ ನೋಡಿ, ಸಾವಿನ ಅರ್ಥ ಎಲ್ಲ ಸಂಗತಿಗಳ ಮುಕ್ತಾಯವಾಗಿದ್ರೆ, ಯಾವ ಆಲೋಚನೆಗಳಿಲ್ಲದ, ಯಾವ ಪಶ್ಚಾತಾಪಗಳಿಲ್ಲದ, ಯಾವ ನೋವು ಇಲ್ಲದ ಸ್ಥಿತಿ ಆಗಿದ್ದರೆ, ಈ ಸಾವು ಯಾರಿಗೆ ತಾನೇ ಕೆಟ್ಟದ್ದು, ಮನುಷ್ಯ ಬಯಸುತ್ತಿರುವ ಸಂಗತಿಗಳು ಇವೇ ಅಲ್ವಾ? ಆದರೆ ಮುಂದಿನದನ್ನು ಫೀಲ್ ಮಾಡಿಕೊಳ್ಳುವ ಸ್ಥಿತಿಯಲ್ಲಿ ನಾವು ಇಲ್ಲವೇ ಇಲ್ಲ.
ಒಮ್ಮೆ ಫಿಲೊಸೊಫರ್ ಥಾಮಸ್ ನಗೇಲ್ ಹೇಳಿದ್ದ, Death is not bad because it hurts, it’s bad because it takes away all the good things you would have lived with. ಸಾವಿನಿಂದ, ಪ್ರೇಮ, ನಗು, ಕುತೂಹಲ, ನೀವು ಭೇಟಿ ಮಾಡುತ್ತಿದ್ದ ಜನ, ನೀವು ಪ್ರೀತಿಸುತ್ತಿದ್ದ ಜನ, ನೀವು ಆನಂದಿಸುತ್ತಿದ್ದ ಸೂರ್ಯಾಸ್ತ, ಈ ಎಲ್ಲ ಸಂಗತಿಗಳನ್ನ ನೀವು ಕಳೆದುಕೊಂಡುಬಿಡ್ತೀರ. ಆದರೆ ಇಲ್ಲಿ ನಾವು ಯೋಚಿಸ ಬೇಕಾದ ಸಂಗತಿಯೊಂದಿದೆ. ನೀವು ಹುಟ್ಟುವುದಕ್ಕಿಂತ ಮುಂಚೆ ಕೂಡ ಎಷ್ಟೋ ಕೋಟಿ ವರ್ಷಗಳ ಬದುಕನ್ನ ನೀವು ಮಿಸ್ ಮಾಡಿಕೊಂಡಿದ್ರಿ ಅಲ್ವಾ? ಆಗ ನಿಮಗೆ ಯಾಕೆ ಬೇಸರ ಆಗಿರಲಿಲ್ಲ? ಆದರೆ ಈಗ ಯಾಕೆ ನೀವು ಮುಂದೆ ಕಳೆದುಕೊಳ್ಳಲಿರುವ ಬದುಕಿನ ಬಗ್ಗೆ ಯೋಚನೆ ಮಾಡುತ್ತ ದುಗುಡದಲ್ಲಿದ್ದೀರ?
ಮತ್ತೊಬ್ಬ ಪ್ರಾಚೀನ ತತ್ವಜ್ಞಾನಿ ಎಪಿಕ್ಯೂರಸ್ ಹೇಳುತ್ತಾನೆ, When we are, death is not. And when death is, we are not. “ನಾ ಸಾವಿಗೆ ಅಂಜೂದಿಲ್ಲ, ಯಾಕಂದ್ರ ನಾ ಇದ್ದಾಗ ಸಾವು ಬರೂದಿಲ್ಲ, ಸಾವು ಬಂದಾಗ ನಾ ಇರೂದಿಲ್ಲ” ಅಂತ ವರಕವಿ ಬೇಂದ್ರೆ ಹೇಳಿದ ಮಾತು ಇದೇ. ಹಾಗಾದರೆ ಸಾವು ನಮಗೆ ಹೇಗೆ ತೊಂದರೆ ಮಾಡ್ತದೆ?
ನನ್ನ ಪ್ರಕಾರ ನಾವು ಸಾವಿಗೆ ಹೆದರೋದಿಲ್ಲ. ನಾವು ಹೆದರೋದು, ನಾವು ಬದುಕಿದ್ದಾಗ ಮಾಡಬಹುದಾಗಿದ್ದ ಸಂಗತಿಗಳನ್ನು ಕಳೆದುಕೊಳ್ಳುತ್ತಿರುವುದಕ್ಕೆ. ಇನ್ನೊಂದು ಸಂಗತಿ ಯೋಚಿಸಿ ನೋಡಿ, ನಮಗೆ ಸಾವೇ ಇರದಿದ್ದರೆ, ಈ ಬದುಕು ನಮಗೆ ಅಷ್ಟು ವಿಶೇಷವಾಗಿ ಇರಬಹುದಾಗಿತ್ತಾ? ಸಾವು ನಮ್ಮ ಎಲ್ಲ ಕ್ಷಣಗಳನ್ನ ಅಮೂಲ್ಯ ಮಾಡಿಬಿಡುತ್ತದೆ. ಪ್ರತಿ ಗೆಳೆತನ, ಪ್ರತಿ ಹಬ್ಬ, ನೀವು ಪ್ರೀತಿಸುತ್ತಿರುವವರೊಡನೆ ಮಾರ್ನಿಂಗ್ ವಾಕ್, ಈ ಎಲ್ಲವೂ ಒಮ್ಮೆ ಮುಗಿದು ಹೋಗುತ್ತದೆ ಎನ್ನುವುದು ನಿಮಗೆ ಗೊತ್ತಿರುವುದರಿಂದ, ನೀವು ಇವುಗಳನ್ನ ಅಷ್ಟು ಪ್ರೀತಿಯಿಂದ ಅನುಭವಿಸುತ್ತಿದ್ದೀರ.

