“We learn from history that we do not learn from history” ಅನ್ನುವ ಹೇಳಿಕೆ ಕುರಿತು ಹೆಗಲ್ ಒಳನೋಟ ಬೇರೆಯೇ ಬಗೆಯದು… । ಕನ್ನಡಕ್ಕೆ: ಚಿದಂಬರ ನರೇಂದ್ರ
ತತ್ವಶಾಸ್ತ್ರದ ಅತ್ಯಂತ ಪ್ರಸಿದ್ಧ ಮಾತುಗಳಲ್ಲಿ ಒಂದಾದ ಈ ಮಾತು ಜಗತ್ತಿನಾದ್ಯಂತ ಅತ್ಯಂತ ತಪ್ಪಾಗಿ ತಿಳಿದುಕೊಳ್ಳಲಾಗಿರುವ ಮಾತು ಕೂಡ ಹೌದು. ಈ ಮಾತನ್ನು ಹೇಳಿರುವುದು ಜಗತ್ತಿನ ಶ್ರೇಷ್ಠ ತತ್ವಜ್ಞಾನಿಗಳಲ್ಲಿ ಒಬ್ಬನಾದ ಹೇಗಲ್. ಮತ್ತು ಹೇಗಲ್ ಕೂಡ ಇದನ್ನ ಜನ ಬಹಳ ತಪ್ಪಾಗಿ ಅರ್ಥೈಸಿಕೊಂಡಿರುವ ಬಗ್ಗೆ ಒಪ್ಪಿಕೊಳ್ಳುತ್ತಾನೆ. ಆ ಮಾತು ಯಾವುದೆಂದರೆ, “We learn from history that we do not learn from history “ ನಾವು ಇತಿಹಾಸದಿಂದ ಏನನ್ನ ಕಲಿಯುತ್ತೇವೆಯೆಂದರೆ, ಇತಿಹಾಸದಿಂದ ನಾವು ಏನನ್ನೂ ಕಲಿಯುವುದಿಲ್ಲ.
ಜನ ಇದನ್ನ ಹೇಗೆ ಅರ್ಥೈಸಿಕೊಂಡಿದ್ದಾರೆಂದರೆ, ಮನುಷ್ಯ ತನ್ನ ಹಿಂದಿನದರಿಂದ ಏನನ್ನೂ ಕಲಿಯುವುದಿಲ್ಲ, ಅವನು ಅದೇ ತಪ್ಪುಗಳನ್ನ ಮತ್ತೆ ಮತ್ತೆ ಮಾಡುತ್ತ ಹೋಗುತ್ತಾನೆ, ಎಂದು. ಇದು ಒಂದು ಆಸಕ್ತಿಕರ ಒಳನೋಟ ಹೌದು ಆದರೆ ಹೇಗಲ್ ನ ಅರ್ಥ ಇದಾಗಿರಲಿಲ್ಲ.
ಹೇಗಲ್ ಈ ಮಾತುಗಳನ್ನು ಹೇಳುವುದು ಅವನು ಒಂದು ಬಗೆಯ ಪುನರುತ್ಥಾನದ ಮನುಷ್ಯನನ್ನು ಕ್ರಿಟಿಸೈಸ್ ಮಾಡುವಾಗ. ಹೇಗಲ್ ಈ ಮಾತನ್ನ ಹೇಳುವುದು ಜನ ಹಿಂದಿನ ತತ್ವಜ್ಞಾನಿಗಳ ಮಾತನ್ನು ಇಂದಿನ ವಾಸ್ತವವನ್ನ ವಿವರಿಸಲು ಅನಾಮತ್ ಆಗಿ ಬಳಸುವುದನ್ನ ಕುರಿತು. ಈ ಜನ ಹಿಂದಿನ ಜನರ ವಿವೇಕಯುತ ಮಾತುಗಳನ್ನ ಅನಾಮತ್ ಆಗಿ ಎತ್ತಿಕೊಂಡು ಬಂದ ಇಂದಿನ ಜನರ, ಇಂದಿನ ಜಗತ್ತಿನ, ಇಂದಿನ ಸಮಸ್ಯೆಗಳಿಗೆ ಪರಿಹಾರ ಎಂಬಂತೆ ಬಿಂಬಿಸಲು ಪ್ರಯತ್ನಿಸುವುದು.
ಹೇಗಲ್ ನ ಪ್ರಕಾರ ಇಂಥ ನಡೆ ಹಾಸ್ಯಾಸ್ಪದವಾದದ್ದು. ಆರಿಸ್ಟಾಟಲ್ ಪ್ರಾಚೀನ ಅಥೆನ್ಸ್ ಬಗ್ಗೆ ಮಾತನಾಡುತ್ತಿದ್ದ, ಸಿಸಿರೋ (Cicero) ಪುರಾತನ ರೋಮ್ ಬಗ್ಗೆ ಮಾತನಾಡುತ್ತಿದ್ದ, ಕನ್ಫ್ಯೂಷಿಯಸ್ ಅಂದಿನ ಚೈನಾದ ಬಗ್ಗೆ ಮಾತನಾಡುತ್ತಿದ್ದ. ಹಿಂದಿನ ತತ್ವಜ್ಞಾನಿಯ ಮಾತನ್ನ ಹೀಗೆ ಧುತ್ತನೇ ಕೋಟ್ ಮಾಡುವುದು ಜನರನ್ನ ತಪ್ಪುದಾರಿಗೆ ಎಳೆಯುವುಂಥದು ಮತ್ತು ಸಂಪ್ರದಾಯಕ್ಕೆ ಮಂಕುಬೂದಿ ಎರಚುವುದಾಗಿದೆ. ಏಕೆಂದರೆ ಯಾವುದೇ ತತ್ವಜ್ಞಾನಿ ಮನುಷ್ಯ ಸ್ವಭಾವದ ಬಗ್ಗೆ ಮಾತನಾಡುವಾಗ ಅವನು ಅಂದು ತನ್ನ ಮುಂದೆ ಇದ್ದ ಜನರನ್ನು ಕುರಿತು ಮಾತನಾಡುತ್ತಿರುತ್ತಾನೆ.
ಆದರೆ ಇತಿಹಾಸವನ್ನು ಅಧ್ಯಯನ ಮಾಡುವುದು ವ್ಯರ್ಥ ಎಂದು ಹೇಗಲ್ ಹೇಳುತ್ತಿಲ್ಲ. ನಾವು ಇತುಹಾಸದಿಂದ ಏನನ್ನ ಕಲಿಯಬಹುದೆಂದರೆ, broad, abstract general principles. ಆದರೆ ಈ ಮೌಲ್ಯಗಳು ಎಷ್ಟು ವಿಶಾಲ ಹರವಿನವು ಎಂದರೆ ಒಬ್ಬ ಪ್ರಾಯೋಗಿಕ ಇತಿಹಾಸಕಾರನಿಗೆ ಇವು ಯಾವ ಉಪಯೋಗವನ್ನೂ ಮಾಡುವುದಿಲ್ಲ. ಹಾಗಾಗಿ ಹೇಗಲ್ ಈ ಮಾತುಗಳನ್ನ ಹೇಳುವಾಗ ಅವನ ಮನಸ್ಸಿನಲ್ಲಿ ಏನಿತ್ತು ಎಂದರೆ, ನಾವು ಇತಿಹಾಸದಿಂದ ಏನನ್ನ ಕಲಿಯುತ್ತೇವೆಯೆಂದರೆ, ಇತಿಹಾಸದಿಂದ ನಾವು ಏನನ್ನೂ ಕಲಿಯುವುದಿಲ್ಲ, ಎಂದು. ಮತ್ತು ಈ ತಿಳುವಳಿಕೆ, ನಾವೆಲ್ಲ ಅರ್ಥೈಸಿಕೊಂಡಿರುವುದಕ್ಕಿಂತ ಬೇರೆಯದೇ ಆದ ಸ್ವಾದವನ್ನು ಹೊಂದಿದೆ.

