ವಚನ ವೈವಿಧ್ಯ#46: ಜಾತಿಯ ಬಿಡಬೇಕು, ಧರ್ಮವ ಬಿಡಬೇಕು-ಅಮುಗೆ ರಾಯಮ್ಮ

ಶೀಲ, ಆಚಾರ, ವ್ರತ, ನೇಮ ಇವು ಒಂದೇ ಅರ್ಥದವು ಎಂದೂ, ಬೇರೆ ಬೇರೆ ಎಂದೂ ವಚನಗಳಲ್ಲಿ ವಾದ ವಾಗ್ವಾದ ನಡೆದವೆ. ಅಮುಗೆ ರಾಯಮ್ಮನವರ ಈ ವಚನವು ಸಮಯ ಎಂಬ ಮಾತನ್ನು ಬಳಸುವುದನ್ನು ಗಮನಿಸಬೇಕು…ಓ.ಎಲ್.ನಾಗಭೂಷಣ ಸ್ವಾಮಿ

ಶೀಲವಂತನಾದಡೆ ಜಾತಿಯ ಬಿಡಬೇಕು
ಶಿವಜ್ಞಾನಿಯಾದಡೆ ಸಮಯವ ಬಿಡಬೇಕು
ಹೀಂಗಲ್ಲದೆ ಜಗದಲ್ಲಿ ನಡೆವ ಭ್ರಾಂತರ ಸುದ್ದಿಯೇಕೆ ನಿಭ್ರಾಂತನಾದ ಶರಣಂಗೆ
ಅಮುಗೇಶ್ವರಾ

[ಶೀಲ-ನಡತೆ, ಸಮಯ-ರೂಢಿ, ಪದ್ಧತಿ, ಮತ, ಧರ್ಮ, ಕಾಲ; ಭ್ರಾಂತರ-ಭ್ರಮೆಗೆ ಒಳಗಾದವರ, ನಿಭ್ರಾಂತ-ಭ್ರಾಂತಿಯನ್ನು ಕಳೆದುಕೊಂಡ]

ಶೀಲವಂತರಾದವರು ಜಾತಿಯನ್ನು ತೊರೆದು ಬದುಕಬೇಕು; ಶಿವಜ್ಞಾನಿಗಳಾದವರು ಕಾಲಾನುಗುಣವಾಗಿ ರೂಢಿಗತವಾದ ಧಾರ್ಮಿಕ ಪದ್ಧತಿಗಳನ್ನು ಬಿಡಬೇಕು. ಹೀಗಿರದೆ ಭ್ರಾಂತಿಗೆ ಒಳಗಾಗಿ ಜಗತ್ತಿನಲ್ಲಿ ಬದುಕವವರ ಸುದ್ದಿ ಶರಣರಿಗೆ ಯಾಕೆ ಬೇಕು?

ಶೀಲ, ಆಚಾರ, ವ್ರತ, ನೇಮ ಇವು ಒಂದೇ ಅರ್ಥದವು ಎಂದೂ, ಬೇರೆ ಬೇರೆ ಎಂದೂ ವಚನಗಳಲ್ಲಿ ವಾದ ವಾಗ್ವಾದ ನಡೆದವೆ. ಅಮುಗೆ ರಾಯಮ್ಮನವರ ಈ ವಚನವು ಸಮಯ ಎಂಬ ಮಾತನ್ನು ಬಳಸುವುದನ್ನು ಗಮನಿಸಬೇಕು. ಕಾಲ ಎಂಬ ಸಾಮಾನ್ಯ ಅರ್ಥ ಮಾತ್ರವಲ್ಲದೆ ಮತ, ಧರ್ಮ, ಪದ್ಧತಿ, ರೂಢಿ ಎಂಬ ಅರ್ಥಗಳೂ ಇವೆ. ಕೊನೆಗೂ ಧರ್ಮವೆಂಬ ಸಂಸ್ಥೆಗೆ ಊರುಗೋಲಾಗಿರುವುದು ನೆಮ್ಮದಿಯ ಭಾವವನ್ನು ತರುವ ಪದ್ಧತಿ, ರೂಢಿ, ಆಚರಣೆಗಳೇ. ಇವೆಲ್ಲವೂ ಆಯಾ ಕಾಲದ ಕಟ್ಟಳೆಗೂ ಹೌದು. ಈ ವಚನವು ನಿಜವಾದ ಶೀಲವೆಂದರೆ ಜಾತಿಯನ್ನು ಬಿಡುವುದು ಮತ್ತು ಆಚರಣೆಯೇ ಪ್ರಧಾನವಾದ ಧರ್ಮವನ್ನು ಬಿಡುವುದು ಎನ್ನುತ್ತಿದೆ. ಶೀಲಗಳಿಗೂ, ವ್ರತ, ನೇಮ ಆಚಾರಗಳಿಗೂ ವ್ಯತ್ಯಾಸವೇನು, ಅರುವತ್ತನಾಲ್ಕು ಶೀಲಗಳು ಯಾವವು ಇವೆಲ್ಲ ಭ್ರಾಂತಿಯ ಚರ್ಚೆಗಳು. ಮುಖ್ಯವಾದ ಸಂಗತಿ ಎಂದರೆ ಜಾತಿ-ಹುಟ್ಟಿನ ಮೂಲಕ ವ್ಯತ್ಯಾಸ, ಭೇದಗಳನ್ನು ಒಪ್ಪಿ ಆಚರಿಸುವುದು, ಇಂಥ ಆಚಾರಗಳ ಪಾಲನೆಯೇ ಧರ್ಮ ಎಂದು ವಿವರಿಸಿಕೊಳ್ಳುವುದು ಸರಿಯಲ್ಲ. ಇಂಥ, ಜಾತಿಯನ್ನು ಬಿಡದಿದ್ದರೆ, ಧರ್ಮವನ್ನು ಬಿಡದಿದ್ದರೆ ಶೀಲವಂತರೂ ಅಲ್ಲ, ಶಿವಜ್ಞಾನಿಗಳೂ ಅಲ್ಲ.

ಜಾತಿಯೂ ಮನುಷ್ಯ ಕಲ್ಪನೆ, ಧರ್ಮದ ಕಟ್ಟಳೆಗಳೂ ಮನುಷ್ಯ ನಿರ್ಮಿತ. ಆಧ್ಯಾತ್ಮ ಸಾಧನೆಯನ್ನು ಬಯಸುವವರು ʻಸಹಜʼವೆಂದು ಕಲಿಸಲಾಗಿರುವ ಭೇದಗಳನ್ನು ಮೀರದಿದ್ದರೆ ವಿವರಗಳ ಭ್ರಾಂತಿಯಲ್ಲೇ ಮುಳುಗುತ್ತಾರೆ. ಸೃಷ್ಟಿಯಲ್ಲಿ ಎಲ್ಲವು ಸಮವೇ, ಸಹಜವೇ. ಅದನ್ನು ಅಸಹಜಗೊಳಿಸಿ ಅಧಿಕಾರ ಗಳಿಸಲು ಹವಣಿಸುವುದು ಜ್ಞಾನವೂ ಅಲ್ಲ, ಶೀಲವೂ ಅಲ್ಲ ಅನ್ನುತ್ತಿದೆ ಈ ವಚನ. 


ಅಮುಗೆ ರಾಯಮ್ಮ

ಸು. ೧೧೫೦ರ ಕಾಲದ ವಚನಕಾರ್ತಿ, ವರದಾನಿಯಮ್ಮ ಎಂಬುದು ಈಕೆಯ ಇನ್ನೊಂದು ಹೆಸರು. ಈಕೆಯ ೧೧೬ ವಚನಗಳು ಪ್ರಕಟವಾಗಿವೆ. ಅಮುಗೇಶ್ವರ ಎಂಬುದು ವಚನಾಂಕಿತ. ರಾಯಮ್ಮನು ಅಮುಗೆ ದೇವಯ್ಯನ ಹೆಂಡತಿ. ನೇಕಾರ ವೃತ್ತಿಯವರು. ಸೊನ್ನಲಿಗೆಯ ಸಮೀಪದ ಪುಳಜೆ,ಇದ್ದೆ ಎಂಬ ಊರುಗಳಲ್ಲಿದ್ದವರು. ಅಮುಗಿ ದೇವಯ್ಯನಿಗೆ ಇದ್ದೆ ಎಂಬ ಗ್ರಾಮವನ್ನು ದಾನವಾಗಿ ಕೊಟ್ಟ ಬಗ್ಗೆ ೧೧೯೯ರ ಶಾಸನವೊಂದು ಹೇಳುತ್ತದೆ, ಅಥವಾ ಈಗಿನ ಸೊಲ್ಲಾಪುರದಲ್ಲಿದ್ದ ದಂಪತಿ ಇವರು. ಅಮುಗೆ ದೇವಯ್ಯನ ಬಗ್ಗೆ ಅಮುಗೆ ದೇವಯ್ಯ ಸಾಂಗತ್ಯ ಎಂಬ ಕೃತಿ ನಡುಗನ್ನಡ ಕಾಲದಲ್ಲಿ ರಚನೆಯಾಗಿದೆ.  ಈ ದಂಪತಿ ಕುರಿತು ಹಲವು ಐತಿಹ್ಯಗಳಿವೆ. ದೇವಯ್ಯನು ಸಿದ್ಧರಾಮನನ್ನು ಭವಿ ಎಂದು ಕರೆದು, ಆತ ನೀಡಿದ ಭಿಕ್ಷೆ ತಿರಸ್ಕಾರ ಮಾಡಿದ; ಸಿದ್ಧರಾಮನ ಆಜ್ಞೆಯಂತೆ ಊರು ಬಿಟ್ಟು ಹೋಗುವಾಗ ಸ್ವತಃ ಕಪಿಲಸಿದ್ಧ ಮಲ್ಲಿಕಾರ್ಜುನನು ಬಂದು ಅವನ ಸಾಮಗ್ರಿಗಳನ್ನು ಹೊತ್ತು ನಡೆದ ಎಂಬ ಕಥೆ ಪ್ರಸಿದ್ಧವಾಗಿದೆ. ಸಿದ್ಧರಾಮ ಅನುಸರಿಸುತ್ತಿದ್ದ ಸ್ಥಾವರ ಪೂಜೆಯನ್ನು ತಿರಸ್ಕಾರ ಮಾಡಿ ಇಷ್ಟಲಿಂಗದ ಆರಾಧನೆಯತ್ತ ಜನ ಒಲಿದದ್ದರ ಸಂಕೇತವೆಂದು ಈ ಕಥೆಯನ್ನು ವ್ಯಾಖ್ಯಾನಿಸುವುದಿದೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.