ನಮಗೆ ನಮ್ಮ ಸುರಕ್ಷತೆ ಮುಖ್ಯ. ಆದರೆ ವಾಸ್ತವ, ಹಳೆಯ ಸಂಗತಿಯಲ್ಲ, ಅದು ಹೊಸದು, ಅದು ಜೀವಂತ, ಅದು ಈಗ ನಡೆಯುತ್ತಿರುವುದು, ಆದ್ದರಿಂದ ಕೃಷ್ಣಮೂರ್ತಿಯವರು ಹೇಳುತ್ತಾರೆ, ಪರಂಪರೆ ಎನ್ನುವುದು ಸತ್ಯವನ್ನು ನೋಡುವುದರಿಂದ ನಿಮ್ಮನ್ನು ತಡೆಯುತ್ತಿರುವ ಪಂಜರ… । ಚಿದಂಬರ ನರೇಂದ್ರ
ನೀವು ನೀತಿ, ನಿಯಮ, ಸಂಪ್ರದಾಯಗಳನ್ನು ಪಾಲಿಸುವುದು ಅವು ಸತ್ಯವೆಂದೋ ಅಥವಾ ಅವು ಪವಿತ್ರವೆಂದೋ? ತತ್ವಜ್ಞಾನಿ ಜಿಡ್ಡು ಕೃಷ್ಣಮೂರ್ತಿಯವರ ಪ್ರಕಾರ ನೀವು ಇವನ್ನೆಲ್ಲ ಪಾಲಿಸುವುದು ನೀವು ಭಯಭೀತರಾಗಿರುವ ಕಾರಣದಿಂದ. ನಿಮಗೆ ಒಂಟಿಯಾಗಿ ಉಳಿಯುವ, ನಿಮಗೆ ಪ್ರತ್ಯೇಕವಾಗಿ ಉಳಿಯುವ ಭಯ. ಆದ್ದರಿಂದ ನೀವು ಸಾವಿರಾರು ವರ್ಷಗಳ ಹಿಂದೆ ಸತ್ತು ಹೋಗಿರುವ ಜನರಿಗೆ, ನೀವು ಏನು ತಿನ್ನಬೇಕು, ಏನು ಮಾಡಬೇಕು, ಏನು ಮಾಡಬಾರದು, ಯಾರನ್ನ ಮದುವೆಯಾಗಬೇಕು, ಏನನ್ನ ನಂಬಬೇಕು ಇತ್ಯಾದಿಗಳನ್ನು ನಿರ್ಧರಿಸುವ ಅಧಿಕಾರವನ್ನು ಕೊಟ್ಟಿರುವಿರಿ.
ಕೃಷ್ಣಮೂರ್ತಿಯವರು ನಿಮ್ಮ ಇಂಥ ಬದುಕನ್ನ Second hand life ಎಂದು ಗುರುತಿಸುತ್ತಾರೆ. ಅವರ ಪ್ರಕಾರ ನಾವು ಬಹುತೇಕರು real individuals ಅಲ್ಲವೇ ಅಲ್ಲ. ನಾವು ನಮ್ಮ ತಂದೆ ತಾಯಂದಿರ ನಕಲು, ಮತ್ತು ಅವರು ತಮ್ಮ ಅಪ್ಪ ಅಮ್ಮಂದಿರ ಕಾಪಿ. ನಾವು ಅವರ ರೀತಿ ರಿವಾಜುಗಳನ್ನ ಪಾಲಿಸುತ್ತೇವೆ, ಅವರ ವೈರಿಗಳೊಂದಿಗೆ ಹೊಡೆದಾಡುತ್ತೇವೆ, ಅವರ ದೇವತೆಗಳ ಪೂಜೆ ಮಾಡುತ್ತೇವೆ. ನೀವು ನಿಮಗೆ ಹುಟ್ಟಿದಾಗ ದೊರೆತ ಅವರ ಪ್ರೊಗ್ರಾಂ ನ್ನೇ ರಿಪೀಟ್ ಮಾಡುತ್ತಿದ್ದಿರಾದರೆ, ನಿಜವಾದ ನೀವು ಎಲ್ಲಿದ್ದೀರಿ?
ಕೃಷ್ಣಮೂರ್ತಿ ಪ್ರಶ್ನೆ ಮಾಡುತ್ತಾರೆ, ನಿಮಗೆ ಈ ಹರಿವಿನಿಂದ ಹೊರಗೆ ಬರುವುದು ಸಾಧ್ಯವೆ? ನಿಮ್ಮ ಅಪ್ಪ ಅಮ್ಮ ಅಥವಾ ನಿಮ್ಮ ಅಜ್ಜ ಅಜ್ಜಿ ಪೂಜಿಸುತ್ತಿದ್ದರು ಎನ್ನುವ ಕಾರಣಕ್ಕೆ ನೀವು ಅದೇ ದೇವರನ್ನು ಪೂಜಿಸುತ್ತಿದ್ದೀರಾದರೆ ಇದು ನಂಬಿಕೆ, ವಿಶ್ವಾಸ ಅಲ್ಲ, ಇದು ನಿಮ್ಮ ತರಬೇತಿ, ಕಂಡೀಷನಿಂಗ್. ಇದು ಒಂದು ಮಾನಸಿಕ ಗುಲಾಮಿತನ. ಬುದ್ಧಿವಂತರಾಗುವುದೆಂದರೆ ಪ್ರಶ್ನೆಗಳನ್ನು ಕೇಳುವುದು. ಪರಂಪರಾಗತ ಜ್ಞಾನ, ಅದು ನಿಜವೋ ಸುಳ್ಳೋ ಎನ್ನುವುದನ್ನ ಒರೆಗೆ ಹಚ್ಚಿ ನೋಡುವುದು. ಒಂದು ಸಂಗತಿ ಸಾವಿರಾರು ವರ್ಷಗಳಿಂದ ಪ್ರಚಲಿತದಲ್ಲಿದೆ ಎಂದ ಮಾತ್ರಕ್ಕೆ ಅದು ಸತ್ಯ ಆಗಿರಬೇಕಿಲ್ಲ, ಬದಲಾಗಿ ಅದು ಒಂದು ಜನಪ್ರಿಯ ಸುಳ್ಳು ಆಗಿರಬಹುದು.
ಈ ಸಂಗತಿಯೇ ನಮ್ಮನ್ನು ಕೃಷ್ಣಮೂರ್ತಿಯವರ ಮುಖ್ಯ ಐಡಿಯಾ ಒಂದಕ್ಕೆ ಕರೆದುಕೊಂಡು ಬರುತ್ತದೆ, Freedom from the known. ನಮ್ಮ ಮನಸ್ಸಿಗೆ ಯಾವುದು ಇಷ್ಟವೆಂದರೆ ನಮಗೆ ಪರಿಚಿತವಾಗಿರುವುದು, familiar ಆಗಿರುವುದು. ನಮಗೆ ನಮ್ಮ ಸುರಕ್ಷತೆ ಮುಖ್ಯ. ಆದರೆ ವಾಸ್ತವ, ಹಳೆಯ ಸಂಗತಿಯಲ್ಲ, ಅದು ಹೊಸದು, ಅದು ಜೀವಂತ, ಅದು ಈಗ ನಡೆಯುತ್ತಿರುವುದು, ಆದ್ದರಿಂದ ಕೃಷ್ಣಮೂರ್ತಿಯವರು ಹೇಳುತ್ತಾರೆ, ಪರಂಪರೆ ಎನ್ನುವುದು ಸತ್ಯವನ್ನು ನೋಡುವುದರಿಂದ ನಿಮ್ಮನ್ನು ತಡೆಯುತ್ತಿರುವ ಪಂಜರ.
ನೀವು ಒಂದು ಹೆಣ್ಣನ್ನು ನೋಡಿದಾಗ ನೀವು ಕೇವಲ ಆ ಹೆಣ್ಣನ್ನು ನೋಡುವುದಿಲ್ಲ. ಬದಲಾಗಿ ನೀವು, ನಿಮಗೆ ನಿಮ್ಮ ಸಂಸ್ಕೃತಿ ನೀಡಿರುವ ಅವಳ ಮೇಲಿನ ಹಣೆಪಟ್ಟಿಗಳನ್ನ ನೋಡುತ್ತೀರಿ. ಉದಾಹರಣೆಗೆ ಪತ್ನಿ, ದೇವಿ ಅಥವಾ ಕೆಳಜಾತಿ ಇತ್ಯಾದಿಯಾಗಿ. ಇಂಥ ನೋಡುವಿಕೆಯಿಂದ ನೀವು ಹೊರತಾಗಬೇಕು, ಇರುವುದನ್ನ ಇರುವಹಾಗೆ ನೋಡುವುದನ್ನ ರೂಢಿಸಿಕೊಳ್ಳಬೇಕು. ಯಾವುದನ್ನೂ ನಿಮ್ಮ ಕಂಡಿಷನಿಂಗ್ ನ ಮೂಲಕ ನೋಡಿ ಅಳೆಯುವುದನ್ನ ನೀವು ನಿಲ್ಲಿಸಬೇಕು.

