ಚಂದಿಮರಸರ ಈ ವಚನ ಗುರುವನ್ನು ಕನ್ನಡಿಗೆ ಹೋಲಿಸುತ್ತಿದೆ… । ಓ.ಎಲ್.ನಾಗಭೂಷಣ ಸ್ವಾಮಿ
ತನ್ನದಾದಡೇನೋ ಕನ್ನಡಿ
ಅನ್ಯರದಾದಡೇನೋ ಕನ್ನಡಿ
ತನ್ನ ರೂಪ ಕಂಡಡೆ ಸಾಲದೆ
ಸದ್ಗುರು ಆವನಾದಡೇನೋ
ತನ್ನನರುಹಿಸಿದಡೆ ಸಾಲದೆ ಸಿಮ್ಮಲಿಗೆಯ ಚೆನ್ನರಾಮಾ (ಸಂ.೭, ವ.೬೦೭)
(ತನ್ನದಾದಡೇನೋ-ತನ್ನದಾದರೆ ಏನೋ; ಅನ್ಯರದಾದಡೇನೋ-ಬೇರೆಯವರದಾದರೆ ಏನೋ; ಆವವಾದಾದಡೇನೋ-ಯಾರದಾದರೆ ಏನೊ; ಅ಼಼ಱುಹಿಸು-ತಿಳಿವಳಿಕೆ ಕೊಡು)
ಕನ್ನಡಿ ತನ್ನದಾದರೇನು, ಬೇರೆಯವರದಾರೇನು, ತನ್ನ ರೂಪ ತನಗೆ ಕಂಡರೆ ಸಾಕು. ಸದ್ಗುರು ಯಾವನಾದರೇನು, ತಿಳಿವಳಿಕೆಯನ್ನು ಕೊಟ್ಟರೆ ಸಾಕು. ಕನ್ನಡಿಯು ಕನ್ನಡಿಯ ಎದುರಿಗಿನ ವಸ್ತುವಿನ ಪ್ರತಿಬಿಂಬವನ್ನು ತೋರಿಸುವ ಕೆಲಸ ಮಾಡಿದರೆ ಸಾಕು. ಆ ಕನ್ನಡಿಯ ಒಡೆತನದ ಪ್ರಶ್ನೆ ಮುಖ್ಯವಲ್ಲ. ಹಾಗೇ ತನ್ನ ಬಗ್ಗೆ ತನಗೆ ಅರಿವು ಮೂಡಿಸುವವ ಸದ್ಗುರು. ಆತ ವ್ಯಕ್ತಿಯಾಗಿ ಏನೇ ಆಗಿರಲಿ, ಅದು ಮುಖ್ಯವಲ್ಲ.
ಕನ್ನಡಿಯಲ್ಲಿ ಕಾಣುವುದು ದೊಡ್ಡದೊಂದು ರೂಪಕವಾಗಿ ವಚನಗಳಲ್ಲಿ ಬಳಕೆಯಾಗಿದೆ. ಮನಶ್ಶಾಸ್ತ್ರದಲ್ಲೂ ಕನ್ನಡಿ ಮುಖ್ಯವಾದೊಂದು ರೂಪಕ. ತನ್ನತನದ ಅರಿವು ಮೂಡಲು ತನ್ನ ಬಿಂಬವನ್ನು ತೋರಿಸುವ ವಸ್ತು, ಕನ್ನಡಿ, ಬೇಕೇಬೇಕು. ಅನ್ಯದೊಡನೆ ಒಡನಾಡುವ ಮೂಲಕವಷ್ಟೇ ತಾನು ಇತರ ಎಲ್ಲಕ್ಕಿಂತ ಬೇರೆ ಅನ್ನುವ ಅರಿವು ಮೂಡುತ್ತದೆ. ಕನ್ನಡಿಯಲ್ಲಿ ಕಾಣುವ ಬಿಂಬ ತನ್ನದೇ ರೂಪವೆಂದು ಗುರುತು ಹಿಡಿಯುವ ಮೂಲಕವೇ ತನ್ನತನದ ಬೆಳವಣಿಗೆ ಶುರುವಾಗುತ್ತದೆ. ಹಾಗೆ ತನ್ನನ್ನು ತನಗೆ ತೋರಿಸಿಕೊಡುವ ಕನ್ನಡಿಯನ್ನು ಗುರುವೆಂದು, ಇಡೀ ಲೋಕವನ್ನು, ಸೃಷ್ಟಿಯನ್ನು ಸೃಷ್ಟಿಕರ್ತನನ್ನು ತೋರುವ ಕನ್ನಡಿಯೆಂದು ಹಲವು ಬಗೆಗಳಲ್ಲಿ ವಚನಕಾರರು ವಿವರಿಸಿದ್ದಾರೆ. ಎದುರಿಗೆ ಯಾರೂ ಇರದಿದ್ದರೂ ಪ್ರತಿಬಿಂಬಿಸುವ ತನ್ನ ಕೆಲಸವನ್ನು ಕನ್ನಡಿಯು ಎಂದೂ ತೊರೆಯುವುದಿಲ್ಲ ಎಂದು ಪೋಲೆಂಡ್ ಕವಿ ವಿಶಾವ ಶಿಂಬೋರ್ಸ್ಕಾ ಹೇಳಿರುವುದುಂಟು.
ʻಕನ್ನಡಿಯಿಲ್ಲದಿರ್ದಡೆ ತನ್ನ ಮುಖವ ಕಾಣಬಹುದೆʼ (ಚೆನ್ನಬಸವಣ್ಣ, ೩.೮೭೭), ತನ್ನ ತಾನರಿದವರು ಎಂತಿಪ್ಪರೆಂದರೆ,
ಕನ್ನಡಿಗೆ ಕನ್ನಡಿಯ ತೋರಿದಂತಿಪ್ಪರು (ಹಡಪದ ಅಪ್ಪಣ್ಣ, ೯.೯೫೩) ನೋಡುವ ಕಣ್ಣ ಕನ್ನಡಿ ನುಂಗಿದ ಮತ್ತೆ
ನೋಡಿ ನೋಡಿಸಿಕೊಂಬವರಿನ್ನಾರು ಹೇಳಾ (ಅವಸರದ ರೇಕಣ್ಣ, ೬.೭೨೫) ಇಂಥ ಕೆಲವು ವಚನಗಳನ್ನು ಆಸಕ್ತರು ನೋಡಬಹುದು. ಚಂದಿಮರಸರ ಈ ವಚನ ಗುರುವನ್ನು ಕನ್ನಡಿಗೆ ಹೋಲಿಸುತ್ತಿದೆ. ಗುರುವಿನ ವರ್ತನೆ, ಸ್ವಭಾವ ಹೇಗೇ ಇದ್ದರೂ ತನಗೆ ತನ್ನನ್ನು ತೋರಿಸಿಕೊಡುವ ಕೆಲಸ ಮಾಡುವ ಕನ್ನಡಿಯಂತಿದ್ದರೆ ಸಾಕು ಅನ್ನುವ ಮಾತು ಗುರುವನ್ನು ಪ್ರಶ್ನಿಸುವುದು ಕನ್ನಡಿಯನ್ನು ಪ್ರಶ್ನಿಸುವುದು ಎರಡೂ ಒಂದೇ, ಗುರು-ಕನ್ನಡಿ ತನ್ನ ಬಿಂಬವನ್ನು ತೋರುವುದು, ಅದನ್ನು ಒಪ್ಪುವ ಧೈರ್ಯವೇ ತನ್ನರಿವು ಎಂದು ಹೇಳುವಂತಿದೆ.
ಚಂದಿಮರಸ
ಬಸವಣ್ಣನವರ ಹಿರಿಯ ಸಮಕಾಲೀನ. ಕೃಷ್ಣಾನದೀತೀರದ ಚಿಮ್ಮಲಿಗೆಯೆಂಬ ಊರಿನವನು ಸಿಮ್ಮಲಿಗೆಯ ಚೆನ್ನರಾಮ ಎಂಬ ಅಂಕಿತದಲ್ಲಿ ಈ ವಚನಕಾರ ರಚಿಸಿರುವ ೧೫೭ ವಚನಗಳು ದೊರೆತಿವೆ. ಈ ವಚನಕಾರರ ರಚನೆಗಳಲ್ಲಿ ಆತ್ಮಜ್ಞಾನವನ್ನು ಕುರಿತ ವಚನಗಳು ಹೆಚ್ಚಾಗಿವೆ

