ಜಗತ್ತಿನ ಯಾವುದೇ ವಸ್ತು ಅಥವಾ ಘಟನೆ ಸ್ವತಂತ್ರವಾಗಿ ಉಂಟಾಗುವುದಿಲ್ಲ. ಪ್ರತಿಯೊಂದೂ ಒಂದಲ್ಲ ಒಂದು ಕಾರಣವನ್ನು ಅವಲಂಬಿಸಿರುತ್ತದೆ ಅನ್ನುತ್ತಾನೆ ಬುದ್ಧ. ಇದನ್ನು ಅವನು ‘ಪ್ರತೀತ್ಯ ಸಮುತ್ಪಾದ’ದ ಮೂಲಕ ವಿವರಿಸುತ್ತಾನೆ.
‘ಪ್ರತೀತ್ಯ ಸಮುತ್ಪಾದ’ವು ಬೌದ್ಧ ಧರ್ಮದ ಅತ್ಯಂತ ಪ್ರಮುಖ ಹಾಗೂ ಆಳವಾದ ತತ್ವ ಚಿಂತನೆ. ಇಲ್ಲಿ ಪ್ರತೀತ್ಯ ಅಂದರೆ ಅವಲಂಬನೆ, ಸಮುತ್ಪಾದ ಅಂದರೆ ಹುಟ್ಟು ಅಥವಾ ಉಗಮ. ಇದನ್ನು ‘ಪರಸ್ಪರ ಅವಲಂಬನೆಯ ಸಿದ್ಧಾಂತ’ ಅಥವಾ ‘ಕಾರಣ – ಕಾರ್ಯ ನಿಯಮ’ ಎಂದು ವಿವರಿಸಲಾಗುತ್ತದೆ. “ಇದು ಇರುವುದರಿಂದ, ಅದು ಉಂಟಾಗುತ್ತದೆ; ಇದು ಇಲ್ಲದಿದ್ದರೆ, ಅದು ಇರುವುದಿಲ್ಲ.” ಅನ್ನುವುದು ಈ ಚಿಂತನೆಯ ಸೂತ್ರ. ಇದರ ಪ್ರಕಾರ, ಜಗತ್ತಿನ ಯಾವುದೇ ವಸ್ತು ಅಥವಾ ಘಟನೆ ಸ್ವತಂತ್ರವಾಗಿ ಉಂಟಾಗುವುದಿಲ್ಲ. ಪ್ರತಿಯೊಂದೂ ಒಂದಲ್ಲ ಒಂದು ಕಾರಣವನ್ನು ಅವಲಂಬಿಸಿರುತ್ತದೆ.
ಮಾನವನ ಜೀವನದಲ್ಲಿ ದುಃಖ ಹೇಗೆ ಸಂಭವಿಸುತ್ತದೆ ಎಂಬುದನ್ನು ಬುದ್ಧ ಪ್ರತೀತ್ಯ ಸಮುತ್ಪಾದ ತತ್ವದಲ್ಲಿ 12 ಹಂತಗಳ ಮೂಲಕ ವಿವರಿಸಿದ್ದಾನೆ. ಇದನ್ನು ಒಂದು ಚಕ್ರಕ್ಕೆ ಹೋಲಿಸಲಾಗುತ್ತದೆ:
ಅವಿದ್ಯೆ : ಸತ್ಯದ ಅರಿವಿಲ್ಲದಿರುವುದು.
ಸಂಸ್ಕಾರ : ಹಿಂದಿನ ಕರ್ಮಗಳ ಪ್ರಭಾವ.
ವಿಜ್ಞಾನ : ಪ್ರಜ್ಞೆ ಅಥವಾ ಅರಿವು.
ನಾಮರೂಪ : ಮನಸ್ಸು ಮತ್ತು ದೇಹ.
ಷಡಾಯತನ : ಐದು ಇಂದ್ರಿಯಗಳು ಮತ್ತು ಮನಸ್ಸು.
ಸ್ಪರ್ಶ : ಇಂದ್ರಿಯಗಳು ಹೊರಗಿನ ಪ್ರಪಂಚದೊಂದಿಗೆ ಬೆರೆಯುವುದು.
ವೇದನೆ : ಸುಖ ಅಥವಾ ದುಃಖದ ಅನುಭವ.
ತೃಷ್ಣೆ : ಆಸೆ ಅಥವಾ ಹಂಬಲ.
ಉಪಾದಾನ : ವಿಷಯಗಳಿಗೆ ಅಂಟಿಕೊಳ್ಳುವುದು.
ಭವ : ಪುನರ್ಜನ್ಮಕ್ಕೆ ಕಾರಣಗಳ ಸೃಷ್ಟಿ (ಪುನರ್ಜನ್ಮಕ್ಕೆ ಸಜ್ಜಾಗುವುದು)
ಜಾತಿ : ಹುಟ್ಟು.
ಜರಾ-ಮರಣ : ಮುಪ್ಪು, ಸಾವು ಮತ್ತು ದುಃಖ.
ನಮ್ಮ ಅಸ್ತಿತ್ವವೇ ಇತರ ಅಂಶಗಳ ಮೇಲೆ ಅವಲಂಬಿತವಾಗಿದೆ ಎಂದು ತಿಳಿದಾಗ ‘ನಾನು’ ಎಂಬ ಅಹಂಕಾರ ಕಡಿಮೆಯಾಗುತ್ತದೆ. ದುಃಖಕ್ಕೆ ಮೂಲ ಕಾರಣ ‘ಅವಿದ್ಯೆ’ ಮತ್ತು ‘ತೃಷ್ಣೆ’ ಎಂದು ತಿಳಿದರೆ, ಅವುಗಳನ್ನು ಹೋಗಲಾಡಿಸುವ ಮೂಲಕ ಸಂಸಾರ ಚಕ್ರದಿಂದ ಮುಕ್ತಿ ಪಡೆಯಬಹುದು. ಯಾವುದೂ ಶಾಶ್ವತವಲ್ಲ, ಎಲ್ಲವೂ ಬದಲಾಗುತ್ತಿರುತ್ತದೆ ಎಂಬ ಸತ್ಯವನ್ನು ಇದು ಸಾರುತ್ತದೆ. ಈ ಹನ್ನೆರಡು ಕೊಂಡಿಗಳಲ್ಲಿ ಯಾವುದಾದರೂ ಒಂದು ಕೊಂಡಿಯನ್ನು (ವಿಶೇಷವಾಗಿ ಅವಿದ್ಯೆ ಅಥವಾ ತೃಷ್ಣೆಯನ್ನು) ಜ್ಞಾನದ ಮೂಲಕ ಕತ್ತರಿಸಿದರೆ, ಮನುಷ್ಯರು ನಿರ್ವಾಣ ಅಥವಾ ಪರಮ ಶಾಂತಿಯನ್ನು ಹೊಂದಬಹುದು ಅನ್ನುತ್ತಾನೆ ಬುದ್ಧ.

