ಸಿದ್ಧರಾಮೇಶ್ವರರ ಈ ವಚನ ಸ್ವಸಂಪೂರ್ಣತೆಯ ವಿಶೇಷ ವ್ಯಾಖ್ಯಾನದಂತೆ ತೋರುತ್ತದೆ । ಓ.ಎಲ್.ನಾಗಭೂಷಣ ಸ್ವಾಮಿ
ಲೋಕ ತನ್ನೊಳಗಾದ ಬಳಿಕ
ಲೋಕದ ಸೊಮ್ಮುತನಗೇಕಯ್ಯಾ
ಪರುಷ ತಾನಾದ ಬಳಿಕ
ಸುವರ್ಣದ ಸೊಮ್ಮು ತನಗೇಕಯ್ಯಾ
ಧೇನು ತಾನಾದ ಬಳಿಕ
ಅನ್ಯಗೋವಿನ ಸೊಮ್ಮು ತನಗೇಕಯ್ಯಾ ಕಪಿಲಸಿದ್ಧಮಲ್ಲಿಕಾರ್ಜುನ
[ಸೊಮ್ಮು-ಒಡೆತನಕ್ಕೆ ಒಳಪಡುವ, ಹೆಮ್ಮೆಗೆ ಕಾರಣವಾಗುವ ಸಂಪತ್ತು, ವಿದ್ಯೆ, ಚೆಲುವು ಇತ್ಯಾದಿ; ಪರುಷ-ಸೋಕಿದುದನ್ನೆಲ್ಲ ಚಿನ್ನವಾಗಿಸುವ ಸ್ಪರ್ಶಮಣಿ; ಧೇನು-ಬಯಸಿದ್ದು ಎಲ್ಲವನ್ನೂ ನೀಡುವ ಕಾಮಧೇನು; ಅನ್ಯಗೋವು-ಬೇರೆಯ ಹಸು]
ಇಡೀ ಲೋಕವೇ ತನ್ನೊಳಗೆ ಇರುವಾಗ ಲೋಕದ ಸಂಪತ್ತು ಯಾಕೆ ಬೇಕು? ಸೋಕಿದುದನ್ನೆಲ್ಲ ಹೊನ್ನಾಗಿಸುವ ಸ್ಪರ್ಶಮಣಿಯೇ ತಾನಾಗಿರುವಾಗ ಬಂಗಾರದ ಸಂಪತ್ತು ಯಾಕೆ ಬೇಕು? ಬಯಸಿದ್ದನ್ನೆಲ್ಲಾ ನೀಡುವ ಕಾಮಧೇನುವೇ ತಾನಾಗಿರುವಾಗ ಬೇರೆಯ ಹಸುಗಳ ಸಂಪತ್ತು ಯಾಕೆ ಬೇಕು, ಕಪಿಲಸಿದ್ಧ ಚೆನ್ನಮಲ್ಲಿಕಾರ್ಜುನ.
ಸಿದ್ಧರಾಮೇಶ್ವರರ ಈ ವಚನ ಸ್ವಸಂಪೂರ್ಣತೆಯ ವಿಶೇಷ ವ್ಯಾಖ್ಯಾನದಂತೆ ತೋರುತ್ತದೆ. ಅಹಂಕಾರದ, ನಾನತ್ವದ ಮಿತಿ ಇರದಿದ್ದಾಗ ಇಡೀ ಲೋಕವೇ ತನ್ನೊಳಗೆ ಇರುತ್ತದೆ. ನಾನು ಮತ್ತು ಸೃಷ್ಟಿ ಬೇರೆಬೇರೆಯಲ್ಲ ಅನ್ನುವುದು ಅರಿವಾದಾಗ ಸಾಮಾಜಿಕವಾಗಿ ತುಂಬ ಮುಖ್ಯ, ಬಹಳ ಅಮೂಲ್ಯವೆಂದು ನಾವು ತಿಳಿದಿರುವ ಎಲ್ಲ ಬಗೆಯ ಸಂಪತ್ತು ಅರ್ಥ ಕಳೆದುಕೊಳ್ಳುತ್ತದೆ. ನಾನೇ ಇಡೀ ಲೋಕವಾಗಿರುವಾಗ ಬೇರೆಯ, ನನ್ನದು ಅಂದುಕೊಳ್ಳುವ ಸಂಪತ್ತು ಯಾಕೆ? ಇದು ಚಿನ್ನ ಅಮೂಲ್ಯ, ಇದು ಚಿನ್ನವಲ್ಲ ತಿರಸ್ಕಾರಕ್ಕೆ ಯೋಗ್ಯ ಎಂಬ ಕಲ್ಪಿತ ವ್ಯತ್ಯಾಸ ಇಲ್ಲವಾದಾಗ ಚಿನ್ನಕ್ಕೂ ಮಣ್ಣಿಗೂ ಭೇದ ಕಾಣದು. (ರಾಮಕೃಷ್ಣ ಪರಮಹಂಸರು ದುಡ್ಡನ್ನು ನೀರಿಗೆ ಎಸೆಯುವ ಕಥೆ ನೆನಪಾಗುತ್ತದೆ). ಬಯಕೆ ತನ್ನೊಳಗಿದೆ, ಹೊರಗಿನ ವಸ್ತುವಿನಲ್ಲಿಲ್ಲ ಎಂಬ ಅರಿವು ಮೂಡಿದಾಗ ಬಯಸಿದ್ದನ್ನೆಲ್ಲ, ಕಲ್ಪಿಸಿದ್ದನ್ನೆಲ್ಲ ಕೊಡುವ ಕಾಮಧೇನು ತಾನೇ ಅನ್ನಿಸಿ ಬೇರೆಯ ಹಸು ಯಾಕೆ ಅನಿಸುತ್ತದೆ. ಸೃಷ್ಟಿಯೊಳಗೆ ಒಂದಾಗಿ, ನಾನು ಎಂಬ ಪರಿಮಿತಿ ನೀಗಿಕೊಂಡಾಗ ಸಂಪತ್ತು ಇತ್ಯಾದಿ ಅರ್ಥಹೀನವಾಗಿ ನಾನೇ ಸೃಷ್ಟಿಸಿದ್ದು ಈ ಭ್ರಮೆಗಳನ್ನೆಲ್ಲ ಅನ್ನಿಸುತ್ತದೆಯೋ? ಅಂಥ ಸ್ಥಿತಿಯನ್ನು ಪಡೆಯುವುದು ಅಸಾಧ್ಯವಲ್ಲ ಅನ್ನುವುದು ರಾಮಕೃಷ್ಣರಂಥ ಸಂತರನ್ನು ನೆನೆದಾಗ ಹೊಳೆಯುತ್ತದೆ.
ಸಿದ್ಧರಾಮ
ವಚನ ಯುಗದ ಪ್ರಮುಖ ವಚನಕಾರರಾದ ಸಿದ್ಧರಾಮ ಸೊನ್ನಲಿಗೆಯವರು; ಅವರ ಪ್ರಯತ್ನದಿಂದ ಅದು ನಗರವಾಗಿ ಬೆಳೆದು ಸೊಲ್ಲಾಪುರವಾಯಿತು ಎಂಬ ಮಾತಿದೆ. ಅಲ್ಲಮ, ಮಹದೇವಿ ಅಕ್ಕರಂತೆ ಸಿದ್ಧರಾಮ ಕೂಡ ಶ್ರೀಶೈಲ ಮಲ್ಲಿಕಾರ್ಜುನನ ಆರಾಧಕರು.. ಅವರು ಯೋಗ ಸಾಧಕರೆಂದೂ ಪ್ರಸಿದ್ಧರು. ಸಿದ್ಧರಾಮರ ಬದುಕು, ಸಾಧನೆಗಳನ್ನು ಕುರಿತು ರಾಘವಾಂಕನು ಸಿದ್ಧರಾಮ ಚರಿತೆಯನ್ನು ಬರೆದಿದ್ದಾನೆ. ಕರ್ಮಯೋಗದ ದಾರಿಯಲ್ಲಿ ಸಾಗಿ ಭಕ್ತಿ ಮಾರ್ಗಕ್ಕೆ ಹೊರಳಿದ ಈ ವಚನಕಾರರ ೧೯೯೨ ವಚನಗಳು ಪ್ರಕಟವಾಗಿವೆ. ಅಂಕಿತ ʻಕಪಿಲಸಿದ್ಧ ಮಲ್ಲಿಕಾರ್ಜುನʼ ಮತ್ತು ಅದರ ಭಿನ್ನ ರೂಪಗಳು. ಸಿದ್ಧರಾಮರ ವಚನಗಳ ಸಂಖ್ಯೆಯನ್ನು ಕುರಿತ ಚರ್ಚೆ ನಡೆದೇ ಇದೆ.

