ಕೆಲವೊಮ್ಮೆ ಅತ್ಯುತ್ತಮ ಫಿಲಾಸೊಫಿ ನಮಗೆ ಫಿಲಾಸೊಫರ್ ಗಳ ಮೂಲಕ ಸಿಗುವುದಿಲ್ಲ ಬದಲಾಗಿ ಅದು ನಮಗೆ ಕತೆ ಕಾದಂಬರಿಗಳಲ್ಲಿ ಅಡಗಿರುವ ಸತ್ಯದಿಂದ ಗೊತ್ತಾಗಬಹುದು. ಇಂಥ ಒಂದು ತತ್ವಜ್ಞಾನವನ್ನು ನಮಗೆ ಗೊತ್ತು ಮಾಡಿಕೊಡುವ ಕಾದಂಬರಿ Ursula Le Guin ಅವರ The ones who walk away from Omelas. ಮನುಷ್ಯರ ನೈತಿಕ ದ್ವಂದ್ವಗಳನ್ನು ಅದ್ಭುತವಾಗಿ ಚಿತ್ರಿಸುವ ಅಪರೂಪದ ಕಾದಂಬರಿ ಇದು. ಈ ಕಾದಂಬರಿಯ ಸಾರಾಂಶ ಹೀಗಿದೆ… । ಚಿದಂಬರ ನರೇಂದ್ರ
ಓಮೆಲಾಸ್ ಎಂದು ಕರೆಯಲ್ಪಡುವ ಪರಿಪೂರ್ಣ ಆನಂದಮಯ ಶಹರವೊಂದನ್ನು ಕಲ್ಪನೆ ಮಾಡಿಕೊಳ್ಳಿ. ಈ ಊರಿನಲ್ಲಿ ಪ್ರತಿಯೊಬ್ಬರ ಬಳಿಯೂ ಅವರು ಬಯಸಿದ ಎಲ್ಲವೂ ಇದೆ. ಎಲ್ಲರೂ ಅತ್ಯಂತ ಸುಖದಾಯಕವಾದ ಬದುಕನ್ನು ಬಾಳುತ್ತಿದ್ದಾರೆ. ಇದು ಎಲ್ಲರೂ ಹಾಡುವ ಕುಣಿಯುವ ಯುಟೋಪಿಯಾ (ಆದರ್ಶ ರಾಜ್ಯ). ಅಥವಾ ಹಾಗೆ ಕಾಣಿಸಿಕೊಳ್ಳುವ ಒಂದು ಜಾಗ. ಏಕೆಂದರೆ ಓಮೆಲಾಸ್ ನ ಎಲ್ಲೊ ಒಂದು ಕಡೆ ನೆಲಮಾಳಿಗೆಯೊಂದರಲ್ಲಿ ಪುಟ್ಟ ಹುಡುಗಿಯೊಬ್ಬಳನ್ನು ಕಟ್ಟಿ ಹಾಕಲಾಗಿದೆ ಮತ್ತು ಅವಳನ್ನು ನಿತ್ಯವೂ ಹಿಂಸಿಸಲಾಗುತ್ತದೆ. ಪುಟ್ಟ ಹುಡುಗಿ ಆ ಕೊಳಕು ಜಾಗದಲ್ಲಿ ಹಸಿವೆ ನೀರಡಿಕೆಗಳಿಂದ ಬಳಲುತ್ತಿದ್ದಾಳೆ. ನಿರಂತರವಾಗಿ ಅವಳನ್ನು ಹೊಡೆಯಲಾಗುತ್ತದೆ.
ನಮಗೆ ತಿಳಿದು ಬರುವುದೇನೆಂದರೆ ಓಮೆಲಾಸ್ ನ ಜನರು ಇಷ್ಟು ಸುಖವಾಗಿ ಬದುಕುತ್ತಿರುವುದಕ್ಕೆ ಕಾರಣ ಈ ಪುಟ್ಟ ಹುಡುಗಿ ನಿರಂತರವಾಗಿ ಹಿಂಸೆ ಅನುಭವಿಸುತ್ತಿರುವುದು.
ಓಮೆಲಾಸ್ ನ ಮಕ್ಕಳು ದೊಡ್ಡವರಾದಾಗ ಅವರಿಗೆ ಹಿಂಸೆ ಅನುಭವಿಸುತ್ತಿರುವ ಈ ಪುಟ್ಟ ಹುಡುಗಿಯನ್ನು ತೋರಿಸಲಾಗುತ್ತಿತ್ತು. ಕೆಲವರು ಹುಡುಗಿಯನ್ನು ನೋಡಿ ಭಯಭೀತರಾಗುತ್ತಿದ್ದರೆ ಇನ್ನೂ ಕೆಲವರಿಗೆ ಭಯಂಕರ ಕೋಪ ಬರುತ್ತಿತ್ತು. ಕೆಲವರ ಮೇಲೆ ಇದು ಯಾವ ಪರಿಣಾಮವನ್ನೂ ಬೀರುತ್ತಿರಲಿಲ್ಲ. ಕೆಲವರು ದುಃಖಿತರಾದರೂ ಮತ್ತೆ ತಮ್ಮ ತಮ್ಮ ಮನೆಗೆ ತೆರಳಿ ಮೊದಲಿನ ಹಾಗೆ ಸುಖದಿಂದ ಇದ್ದು ಬಿಡುತ್ತಿದ್ದರು. ಆದರೆ ಕೆಲವೇ ಕೆಲವು ಜನ ಮಾತ್ರ ಇದನ್ನು ಸಹಿಸಿಕೊಳ್ಳಲಾರದೇ ಊರು ಬಿಟ್ಟು ಹೋಗಿ ಬಿಡುತ್ತಿದ್ದರು. ಇವರೇ The ones who walk away from Omelas.
ಕಾದಂಬರಿಯಲ್ಲಿ Le Guin ಕೇಳುವ ಪ್ರಶ್ನೆ ಏನೆಂದರೆ, ಒಂದು ಸಮೃದ್ಧ, ಸುಖೀ ಸಮಾಜವನ್ನು ಹೊಂದಲು ನಾವು ಎಷ್ಟು ಕ್ರೌರ್ಯವನ್ನ, ಎಷ್ಟು ಸೇಡಿಸಂ ನ, ಮತ್ತು ಎಷ್ಟು ಅನ್ಯಾಯವನ್ನ ಸಹಿಸಿಕೊಳ್ಳಬಲ್ಲೆವು? ಒಬ್ಬ ವ್ಯಕ್ತಿ ಮಾತ್ರ ಸಂಕಟ ಅನುಭವಿಸುತ್ತಿರುವಾಗ ಕೂಡ ನಾವು ಆದರ್ಶ, ಸುಖೀ ರಾಜ್ಯದ ಕಲ್ಪನೆ ಮಾಡಿಕೊಳ್ಳುವುದು ಸಾಧ್ಯವೆ?
ಹಾಗಾದರೆ ನಿಮ್ಮ ಉತ್ತರ ಏನು? ನೀವು ಏನು ಮಾಡುತ್ತೀರಿ? ಒಂದು ಸಮಾಜ ತನ್ನನ್ನು ತಾನು ಸುಖವಾಗಿ ಇಟ್ಟುಕೊಳ್ಳಲು, ಮಾಡುವ ಅನ್ಯಾಯ, ಕ್ರೌರ್ಯವನ್ನು ನಾನು ನಿಮಗೆ ತೋರಿಸಿದರೆ, ನೀವು ಅಂಥ ಸಮಾಜದಲ್ಲಿ ಮುಂದುವರೆಯುತ್ತೀರಾ? ಅಥವಾ ಅಂಥ ಅಸಮಾನ ಸಮಾಜವನ್ನು ಧಿಕ್ಕರಿಸಿ ಅಲ್ಲಿಂದ ಹೊರಗೆ ನಡೆದುಬಿಡುತ್ತೀರಾ?

