ವಚನ ವೈವಿಧ್ಯ#50: ಬೋಧೆಗೆ ಮರೆಯಿಲ್ಲ: ಅಂಬಿಗರ ಚೌಡಯ್ಯ

 ಅರ್ಥವನ್ನು ಮರೆಮಾಡುವ ವಾಚಾ-ರಚನೆ ಸೂಕ್ತವಲ್ಲ ಅನ್ನುವ ನಿಲುವೂ ಈ ವಚನದಲ್ಲಿದೆ. ಭಾಷೆಯ ಬಳಕೆ, ಜ್ಞಾನದ ಸ್ವರೂಪ ಇವನ್ನು ಕುರಿತು ಚರ್ಚಿಸಬಹದಾದ ಅನೇಕ ಸಂಗತಿಗಳನ್ನು ಈ ವಚನ ಹೊಳೆಯಿಸುತ್ತದೆ । ಓ.ಎಲ್.ನಾಗಭೂಷಣ ಸ್ವಾಮಿ

ವಚನಾರ್ಥವ ಕಂಡಹರೆಂದು
ರಚನೆಯ ಮರೆಮಾಡಿ ನುಡಿಯಲೇತಕ್ಕೆ
ದಾರಿಯಲ್ಲಿ ಸರಕು ಮರೆಯಲ್ಲದೆ
ಮಾರುವಲ್ಲಿ ಮರೆ ಉಂಟೆ
ತಾನರಿವಲ್ಲಿ ಮರೆಯಲ್ಲದೆ
ಬೋಧೆಗೆ ಮರೆಯಿಲ್ಲ ಎಂದನಂಬಿಗ ಚೌಡಯ್ಯ

[ಕಂಡಹರೆಂದು-ಕಾಣುತ್ತಾರೆಂದು; ಬೋಧೆ-ಅರಿವು, ತಿಳಿವಳಿಕೆ]

ನುಡಿದ ವಚನ ಅರ್ಥವಾಗಿಬಿಡುತ್ತದೆ ಎಂದು ವಿಶೇಷವಾಗಿ ಎಂತೆಂಥದೋ ರಚನೆಯನ್ನು ಮಾಡಿ ಅರ್ಥವನ್ನು ಮರೆಮಾಡಿ ಮಾತಾಡುವುದು ಯಾಕೆ? ಸರಕು ತರುವಾಗ ಅದನ್ನು ಹುಷಾರಾಗಿ ಮರೆಮಾಡಿಕೊಂಡು ತರಬೇಕಾದದ್ದು ಸರಿ. ತಂದ ಸರಕನ್ನು ಮಾರುವ ಸ್ಥಳದಲ್ಲಿ ಸರಕನ್ನು ಮರೆಮಾಡಿ ಇಡುವುದು ಸರಿಯೇ? ತನ್ನನ್ನು ತಾನು ಅರಿಯುವ ಪ್ರೋಸೆಸ್‌, ಆತ್ಮಜ್ಞಾನ ಸಂಪಾದನೆ ತನ್ನೊಳಗೇ ಗುಟ್ಟಾಗಿ ನಡೆಯಬೇಕಾದದ್ದು ಸರಿ, ಆದರೆ ಪಡೆದ ತಿಳಿವಳಿಕೆಗೆ ಯಾವ ಮರೆಯೂ ಇರುವುದಿಲ್ಲ.

ಪ್ರೋಸೆಸ್‌ ಖಾಸಗಿಯಾಗಿ ಇರಬೇಕಾದದ್ದು  ಸರಿ, ಪ್ರಾಡಕ್ಟ್‌ ಮಾತ್ರ ಯಾರು ಬಯಸುತ್ತಾರೋ ಅವರಿಗೆ ತಿಳಿಯುವ ಹಾಗೆ ಮುಕ್ತವಾಗಿ  ಇರಬೇಕು ಎಂದು ನಮ್ಮ ಕಾಲದ ನುಡಿಗೆ ಈ ವಚನವನ್ನು ಬದಲಿಸಿಕೊಂಡರೆ ಜ್ಞಾನಚ ಸಂಪಾದನೆ ಖಾಸಗಿ ಕ್ರಿಯೆ, ಜ್ಞಾನವೆಂಬ ವಸ್ತು ಮಾತ್ರ ಪಡೆಯಲು ಬಯಸುವವರಿಗೆ ಸ್ಪಷ್ಟವಾಗಿ ತಿಳಿಯುವಂತೆ ಇರಬೇಕು ಅನ್ನುವ ಅರ್ಥ ಹೊಳೆಯುತ್ತದೆ. ಹಾಗೆಯೇ ತಿಳಿವಳಿಕೆ ಅನ್ನುವುದು ಏನೋ  ಬಹಳ ಜಟಿಲವಾದದ್ದು, ಅದರ ಅರ್ಥ ಎಲ್ಲರಿಗೂ ಆಗಬಾರದು, ವಿವರಣೆ ತಾನೇ ನೀಡಬೇಕು ಅನ್ನುವುದೂ ಸರಿಯಲ್ಲ. ಅರ್ಥವನ್ನು ಮರೆಮಾಡುವ ವಾಚಾ-ರಚನೆ ಸೂಕ್ತವಲ್ಲ ಅನ್ನುವ ನಿಲುವೂ ಈ ವಚನದಲ್ಲಿದೆ. ಭಾಷೆಯ ಬಳಕೆ, ಜ್ಞಾನದ ಸ್ವರೂಪ ಇವನ್ನು ಕುರಿತು ಚರ್ಚಿಸಬಹದಾದ ಅನೇಕ ಸಂಗತಿಗಳನ್ನು ಈ ವಚನ ಹೊಳೆಯಿಸುತ್ತದೆ.


ಈ ವಚನದೊಂದಿಗೆ ವಚನ ವೈವಿಧ್ಯದ ಮೊದಲ ಕಂತನ್ನು ಮುಗಿಸೋಣ. ವಚನಗಳನ್ನು ಬಿಡಿಯಾಗಿ, ಬೇರೆ ಬೇರೆ ವಿಷಯ, ಬೇರೆ ಬೇರೆ ವಚನಕಾರರು ಹೀಗೆ ವೈವಿಧ್ಯವನ್ನು ಗಮನಿಸುವುದು ಕುತೂಹಲ ಕೆರಳಿಸುತ್ತದೆ, ನಿಜ. ಆದರೆ ಒಬ್ಬ ವಚನಕಾರರ ಅಥವಾ ಒಂದು ವಿಷಯವನನು ಕುರಿತ ವಚನಗಳ ಗೊಂಚಲನ್ನು ಕ್ರಮವಾಗಿ ಗಮನಿಸುವುದು ಬೇರೆಯದೇ ಆದ, ಹೆಚ್ಚು ಸಮಗ್ರವೆನಿಸಬಹುದಾದ ತಿಳಿವನ್ನು ನೀಡುತ್ತದೆ. ವಚನ ವೈವಿಧ್ಯ ಸರಣಿಯನ್ನು ರೂಪಿಸುವಾಗ ಪ್ರಮುಖರೆಂದು ಭಾವಿಸದೆ ಇರುವ ವಚನಕಾರರ ರಚನೆಗಳಲ್ಲಿ ಮನುಷ್ಯಾನುಭವ ಮತ್ತು ಚಿಂತನೆಗಳು ವ್ಯಕ್ತವಾಗಿರುವ ರೀತಿಯನ್ನು ತಿಳಿಯಲು ಹಲವು ಸಮಸ್ಯೆಗಳಿವೆ. ಕೆಲವರ ಒಂದೋ ಎರಡೋ ರಚನೆಗಳು ಮಾತ್ರ ದೊರೆತಿರುವುದು ಒಂದು ಕಾರಣ, ಮತಧರ್ಮ ಪ್ರತಿಪಾದನೆಯ ವಚನಗಳೇ ಹೆಚ್ಚಾಗಿರುವುದು ಇನ್ನೊಂದು ಕಾರಣ. ಚೆನ್ನಬಸವಣ್ಣ, ಸಿದ್ಧರಾಮ ಇಂಥ ಕೆಲವರ ರಚನೆಗಳನ್ನು ಪ್ರತ್ಯೇಕವಾಗಿ ಗಮನಿಸುವ ಅಗತ್ಯವಿದೆ. ಅದನ್ನು ನಿಧಾನವಾಗಿ ಮಾಡಬಹುದು ಅನಿಸಿತು. ಓದುಗರಿಗೆ ವಚನಗಳ ವೈವಿಧ್ಯದ ಅರಿವು ದೊರೆಯುವ ಹಾಗೆ ಅಲ್ಲಲ್ಲಿಂದ ಹೆಕ್ಕಿದ ವಚನಗಳನ್ನು ಕುರಿತು ಮಾತಾಡುವುದು ಸೂಕ್ತ ಅನಿಸಿತು.

ಮುಂದೆ ನೀಲಮ್ಮ, ಅಲ್ಲಮ ಇಂಥ ಮುಖ್ಯ ವಚನಕಾರರನ್ನು ನೊಡೋಣ. ಮಧ್ಯೆ ಮಧ್ಯೆ ವಿಚಾರ ವೈವಿಧ್ಯದ ಇತರ ವಚನಗಳನ್ನು ನೋಡೋಣ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.