ಕಾಫ್ಕಾನಿಗೆ ಬದುಕು ಎನ್ನುವುದು, ಅಭಿನಯ ಮತ್ತು ಇದು ಎಂಥ ಢೋಂಗೀ ಎಂದು ಗೊತ್ತು ಮಾಡಿಕೊಳ್ಳುವುದರ ನಡುವೆ ತೂಗಾಡುತ್ತಿರುವ ಥಿಯೇಟರ್. ನಾವೆಲ್ಲರೂ ಕೇವಲ ನಮ್ಮ ನಮ್ಮ ಸಾಲುಗಳನ್ನ ಅಭಿನಯಿಸುತ್ತಿರುವ ನಟರು… । ಚಿದಂಬರ ನರೇಂದ್ರ
ಮಾನಸಿಕ ವಿಜ್ಞಾನದ ವಲಯದಲ್ಲಿ ಬಹುಮಟ್ಟಿಗೆ ಎಲ್ಲರಿಗೂ ಪರಿಚಿತವಾಗಿರುವ ಒಂದು ವಿದ್ಯಮಾನ ಇದೆ. ಅದೇ Imposter Syndrome. ಇದು ವ್ಯಕ್ತಿಯೊಬ್ಬ ತನ್ನ ಜ್ಞಾನ, ತಿಳುವಳಿಕೆ, ಕೌಶಲ್ಯಗಳನ್ನು ತಾನೇ ಅನುಮಾನಿಸುತ್ತ, ತಾನು ಅದೃಷ್ಟವಂತ ಮಾತ್ರ, ತಾನೊಬ್ಬ ವಂಚಕ ಎನ್ನುವ ಭಾವವನ್ನು ಬೇರೆ ಎಲ್ಲರೂ ಹೊಂದಿದ್ದಾರೆ ಎನ್ನುವ ಸಾಕ್ಷರಹಿತ ಭಯದಿಂದ ತೊಳಲಾಡುವ ಸ್ಥಿತಿ.
ಬೇರೆ ಜನ ಸುಮ್ಮನೇ ಯಾವ ಆಧಾರವಿಲ್ಲದೇ ಇಂಥ ಭಾವವನ್ನು ನಮ್ಮೊಳಗೆ ಮೂಡಿಸುತ್ತಿದ್ದಾರೆ ಮತ್ತು ಅವರು ಕೂಡ ಇಂಥದೇ ಒಂದು ಭಾವವನ್ನು ಹೊತ್ತು ಸಂಕಟಪಡುತ್ತಿದ್ದಾರೆ ಎನ್ನುವುದು ನಮಗೆ ಗೊತ್ತಾದಾಗ Imposter Syndrome ಇನ್ನೂ ಆಳವಾಗುತ್ತ ಹೋಗುತ್ತದೆ. ಮತ್ತು ನಾವು ಎಲ್ಲರೂ ಸಾಧ್ಯವಾದಷ್ಟು ಕಾಲ ಈ ಅಭಿನಯವನ್ನು ಮಾಡುತ್ತ ಬದುಕನ್ನು ಎಳೆದುಕೊಂಡು ಮುನ್ನಡೆಯುತ್ತಿದ್ದೇವೆ.
ಈ ಒಂದು ಭಾವವನ್ನೇ ಕಾಫ್ಕಾ ತನ್ನ ಎಲ್ಲ ಕೃತಿಗಳಲ್ಲಿ, ವಿಶೇಷವಾಗಿ ತನ್ನ ಕಾದಂಬರಿ The Trial ನಲ್ಲಿ ಚಿತ್ರಿಸುತ್ತಾನೆ. The trial ಕಾದಂಬರಿಯಲ್ಲಿ ವಿಶೇಷ ಅಧಿಕಾರವನ್ನು ಹೊಂದಿದ ಹಲವಾರು ಪಾತ್ರಗಳನ್ನು ನಾವು ಭೇಟಿ ಮಾಡುತ್ತೇವೆ. ಇವರು ಜಡ್ಜಗಳು, ವಕೀಲರು, ಪುರೋಹಿತರು, ಆಫೀಸಿನ ಅಧಿಕಾರಿಗಳು ಆದರೆ ಈ ಯಾರಿಗೂ ತಾವು ಕೆಲಸ ಮಾಡುತ್ತಿರುವ ವ್ಯವಸ್ಥೆಯ ಕುರಿತು ತಿಳುವಳಿಕೆಯಿಲ್ಲ. ಆದರೂ ಅವರು ತಮ್ಮ ಕೆಲಸವನ್ನು ಮಾತ್ರ ಅತ್ಯಂತ ಗಂಭೀರತೆಯಿಂದ ಮುಂದುವರೆಸುತ್ತಿದ್ದಾರೆ ಆದರೆ ಅವರಿಗೆ ಆಪಾದಿತನ ಜೊತೆ ಏನಾಗುತ್ತಿದೆ ಎನ್ನುವುದರ ಬಗ್ಗೆ ಯಾವುದೇ ಅರಿವು ಇಲ್ಲ. ಎಲ್ಲ ವ್ಯವಸ್ಥೆಯೂ ಖಾಲೀತನದಿಂದ ತುಂಬಿ ತುಳುಕುತ್ತಿದೆ.
ಕಾಫ್ಕಾನಿಗೆ ಬದುಕು ಎನ್ನುವುದು, ಅಭಿನಯ ಮತ್ತು ಇದು ಎಂಥ ಢೋಂಗೀ ಎಂದು ಗೊತ್ತು ಮಾಡಿಕೊಳ್ಳುವುದರ ನಡುವೆ ತೂಗಾಡುತ್ತಿರುವ ಥಿಯೇಟರ್. ನಾವೆಲ್ಲರೂ ಕೇವಲ ನಮ್ಮ ನಮ್ಮ ಸಾಲುಗಳನ್ನ ಅಭಿನಯಿಸುತ್ತಿರುವ ನಟರು. ಆದರೆ ಕೆಲವೊಮ್ಮೆ ಮಾತ್ರ ನಾವು ನಮ್ಮ ನಟನೆಯನ್ನು ನಿಲ್ಲಿಸಿ ಇದು ಎಷ್ಟು ridiculous. ಎಂದು ಪ್ರಶ್ನೆ ಮಾಡುತ್ತೇವೆ.
ಕಾಫ್ಕಾ ಕೇಳುವ ಪ್ರಶ್ನೆ ಏನೆಂದರೆ, ನಮಗೆ ನಮ್ಮ ಪರಿಸ್ಥಿತಿಯ ಬಗ್ಗೆ ಅರಿವಾದಾಗ, ಎಲ್ಲರೂ ಕೇವಲ ನಟನೆಯನ್ನು ಮಾತ್ರ ಮುಂದುವರೆಸಿದ್ದಾರೆ ಎನ್ನುವುದು ಗೊತ್ತಾದಾಗ, ನಾವು ಈ ಬಗ್ಗೆ ಏನು ಮಾಡುತ್ತೇವೆ? ನಾವು ನಮ್ಮ ಸಾಲುಗಳನ್ನ ಹೇಳುವುದನ್ನ ಮುಂದುವರೆಸುತ್ತೇವೆಯಾ ? ಅಥವಾ ನಾಟಕದ ವೇದಿಕೆಯಿಂದ ಕೆಳಗೆ ಇಳಿದು ಬೇರೆ ಎಲ್ಲಿಗೋ ಹೋಗುವ ಸಾಹಸ ಮಾಡುತ್ತೇವೆಯಾ?
********************************

