ಪಂಚಾಂಗದ ಪ್ರಕಾರ 60 ಸಂವತ್ಸರಗಳ ಚಕ್ರದಲ್ಲಿ ‘ಪರಾಭವ’ ಎಂಬುದು 40ನೇ ಸಂವತ್ಸರ. ಸರಳ ಅರ್ಥದಲ್ಲಿ ಪರಾಭವ ಎಂದರೆ ಸೋಲು ಎಂದರ್ಥ. ಈ ಸಂವತ್ಸರದಲ್ಲಿ ಎಲ್ಲ ಬಗೆಯ ಕೆಡುಕಿಗೂ ಸೋಲಾಗಲಿ. ಎಲ್ಲರ ಬಾಳೂ ಒಳಿತಿನಿಂದ ತುಂಬಿಕೊಳ್ಳಲಿ. ಎಲ್ಲರಿಗೂ ಯುಗಾದಿಯ ಹಾರ್ದಿಕ ಶುಭಾಶಯಗಳು.
ಈ ಸಲದ ಸಂವತ್ಸರ ‘ಪರಾಭವ’ ಸಂವತ್ಸರ. ‘ಪರಾಭವ’ ಎಂದರೆ ಸಾಮಾನ್ಯವಾಗಿ ಪರಾಜಯ ಎಂದರ್ಥ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ವರ್ಷವು ವಿನಯಕ್ಕೆ ಪ್ರತಿಫಲವನ್ನು ನೀಡುತ್ತದೆ ಮತ್ತು ಅಹಂಕಾರಕ್ಕೆ ತಡೆಗೋಡೆಯಾಗಿ ಕಾರ್ಯನಿರ್ವಹಿಸುತ್ತದೆ; ಹಾಗಾಗಿ ಇದು ವೈಯಕ್ತಿಕ ಹಾಗೂ ಆಧ್ಯಾತ್ಮಿಕ ಅಭಿವೃದ್ಧಿಗೆ ಅತ್ಯಂತ ನಿರ್ಣಾಯಕವಾದ ವರ್ಷವಾಗಿದೆ. ಈ ಸಂವತ್ಸರದಲ್ಲಿ ಆಂತರಿಕ ಬೆಳವಣಿಗೆ ಮತ್ತು ಜ್ಞಾನವೃದ್ಧಿಗೆ ಅವಕಾಶ ದೊರೆಯುತ್ತದೆ. ಪರಾಭವವು ಒಂದು ‘ಕಾರ್ಮಿಕ ಶುದ್ಧೀಕರಣ’ದಂತೆಕಾರ್ಯನಿರ್ವಹಿಸುತ್ತದೆ. ಇದು ಹಣಕಾಸು ವ್ಯವಸ್ಥೆ, ರಾಜಕೀಯ ಮತ್ತು ಅಧಿಕಾರದ ಸಮೀಕರಣಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಉಂಟುಮಾಡುವುದೆಂದು ಎಂದು ಹೇಳಲಾಗುತ್ತದೆ.
ಗುರುವು ಈ ಸಂವತ್ಸರದ ಅಧಿಪತಿಯಾಗಿರುವುದರಿಂದ, ಜ್ಞಾನ, ಶಿಕ್ಷಣ ಮತ್ತು ನೈತಿಕ ನಾಯಕತ್ವದ ಪ್ರಾಮುಖ್ಯತೆಗೆ ಈ ವರ್ಷ ಹೆಚ್ಚಿನ ಒತ್ತು ನೀಡುತ್ತದೆ; ಹಾಗೆಯೇ ಕಪಟ ಗುರುಗಳನ್ನು ಪರೀಕ್ಷೆಗೆ ಒಡ್ಡುವ ಸಾಧ್ಯತೆಯೂ ಇದೆ ಎಂದು ಜ್ಯೋತಿಷಿಗಳು ಹೇಳುತ್ತಾರೆ. ಜ್ಯೋತಿಷ್ಯದ ಪ್ರಕಾರ, ಈ ವರ್ಷದ ಪ್ರಮುಖ ಬದಲಾವಣೆಗಳಲ್ಲಿ ಜೂನ್ 2 ರಂದು ಗುರುವು ಕರ್ಕಾಟಕ ರಾಶಿಯನ್ನು ಪ್ರವೇಶಿಸುವುದು ಮತ್ತು ನಂತರ ಸಿಂಹ ರಾಶಿಗೆ ಚಲಿಸುವುದು ಸೇರಿದೆ. ಇದರೊಂದಿಗೆ ಡಿಸೆಂಬರ್ 6 ರಂದು ರಾಹು-ಕೇತುಗಳು ಮಕರ-ಕರ್ಕಾಟಕ ರಾಶಿಗಳಿಗೆ ಸ್ಥಳಾಂತರಗೊಳ್ಳಲಿದ್ದು, ಇವು ಜಾಗತಿಕ ವಿದ್ಯಮಾನಗಳನ್ನು ಗಣನೀಯವಾಗಿ ಬದಲಾಯಿಸಲಿವೆ.
“ಈ ವರ್ಷವು ಹೆಚ್ಚಿದ ರಾಜಕೀಯ ಅಸ್ಥಿರತೆ, ತೀವ್ರ ಹವಾಮಾನ ವೈಪರೀತ್ಯ (ಅಧಿಕ ಮಳೆ) ಮತ್ತು ನಾಯಕತ್ವದಲ್ಲಿ ಅನಿವಾರ್ಯ ಬದಲಾವಣೆಗಳಿಗೆ ಸಾಕ್ಷಿಯಾಗಬಹುದು; ಆದರೆ ಇದೇ ಸಮಯದಲ್ಲಿ ಆಧ್ಯಾತ್ಮಿಕ ಜಾಗೃತಿಗೆ ಹೆಚ್ಚಿನ ಅವಕಾಶಗಳೂ ದೊರೆಯಲಿವೆ ಎಂದು ಜ್ಯೋತಿಷಿಗಳು ಅಭಿಪ್ರಾಯ ಪಟ್ಟಿದ್ದಾರೆ.
ಅದೇನೇ ಇರಲಿ, ಮನುಷ್ಯಪ್ರಯತ್ನ ದೃಢವಾಗಿದ್ದಲ್ಲಿ ಪ್ರತಿ ದಿನವೂ ಹೊಸ ಸಂವತ್ಸರವೇ, ಪ್ರತಿ ಶುರುವಾತೂ ಹೊಸ ಯುಗಾದಿಯೇ. ಈ ಸಂವತ್ಸರ ಎಲ್ಲರ ಬದುಕಿನಲ್ಲಿ ಇಂತಹ ಸಕಾರಾತ್ಮಕ ಚಿಂತನೆ ತುಂಬಲಿ, ಸಕಲರಿಗೂ ಒಳಿತಾಗಲಿ. ಪರಾಭವ ಸಂವತ್ಸರ – ಹೊಸ ವರ್ಷ – ಯುಗಾದಿಯ ಹಾರ್ದಿಕ ಶುಭಾಶಯಗಳು.

