ನಿಷೆಯ Gay Science, ಹೇಗೆ ಅವನು ಜಗತ್ತಿನ ಬಹುತೇಕ ಎಲ್ಲವನ್ನು ತನ್ನ ತುಂಟತನದಲ್ಲಿ ತಮಾಷೆ ಮಾಡುತ್ತಾನೆ ಎನ್ನುವುದನ್ನ ನಮಗೆ ಗೊತ್ತುಮಾಡಿಕೊಡುವ ಅಪರೂಪದ ಅನನ್ಯ ಪುಸ್ತಕ. ಈ ಪುಸ್ತಕದಲ್ಲಿ ಅವನು ಪ್ರತಿ ಪುಟದಲ್ಲಿಯೂ, ಅತ್ಯಂತ ದೊಡ್ಡ ಸಂಗತಿಯಾದ ದೇವರಿಂದ ಹಿಡಿದು ನಮ್ಮಂಥ ಅತ್ಯಂತ ಸಾಮಾನ್ಯ ಓದುಗರನ್ನು ಕೂಡ ತಮಾಷೆ ಮಾಡುತ್ತ ಹೋಗುತ್ತಾನೆ… । ಚಿದಂಬರ ನರೇಂದ್ರ
ನಗು, ನಮ್ಮ ಬಳಿ ಇರುವ ಒಂದು ಅತ್ಯಂತ ಹರಿತವಾದ ಆಯುಧ, ಏಕೆಂದರೆ ನಾವು ಏನನ್ನೋ ನೋಡಿ ನಕ್ಕಾಗ, ಅದನ್ನು ಕುಗ್ಗಿಸುತ್ತೇವೆ, ಅದನ್ನು ನಗಣ್ಯ ಮಾಡುತ್ತೇವೆ. ಆದ್ದರಿಂದಲೇ ಜಗತ್ತಿನ ಎಲ್ಲ ಸರ್ವಾಧಿಕಾರಿಗಳು ತಮಾಷೆಗೊಳಗಾಗುವುದನ್ನು ದ್ವೇಷಿಸುತ್ತಾರೆ. ಏಕೆಂದರೆ ಅದು ಅವರನ್ನು ಕುಗ್ಗಿಸುತ್ತದೆ, ಸಣ್ಣವರನ್ನಾಗಿಸುತ್ತದೆ. ಇದು ನೀವು ಯಾವ ಬಗೆಯಲ್ಲೂ ಅವರು ನಮಗೆ ಮಹತ್ವದವರಲ್ಲ ಎನ್ನುವುದನ್ನು ಸಾರಿ ಹೇಳುತ್ತದೆ. ಇದು ತತ್ವಜ್ಞಾನಿ ನಿಷೆ ಗೆ ಚೆನ್ನಾಗಿ ಗೊತ್ತಿತ್ತು. ಆದ್ದರಿಂದಲೇ ಅವನು ತನ್ನ ಪುಸ್ತಕ Gay Science ನಲ್ಲಿ ಈ ಅರ್ಥರಹಿತ ಜಗತ್ತಿನ ಮುಖದ ಮೇಲೆ ನಾವು ನಕ್ಕು ಬಿಡಬೇಕು ಎಂದು ವಾದ ಮಾಡುತ್ತಾನೆ.
ನಿಷೆಯ ಪುಸ್ತಕ Gay Science, ಹೇಗೆ ಅವನು ಜಗತ್ತಿನ ಬಹುತೇಕ ಎಲ್ಲವನ್ನು ತನ್ನ ತುಂಟತನದಲ್ಲಿ ತಮಾಷೆ ಮಾಡುತ್ತಾನೆ ಎನ್ನುವುದನ್ನ ನಮಗೆ ಗೊತ್ತುಮಾಡಿಕೊಡುವ ಅಪರೂಪದ ಅನನ್ಯ ಪುಸ್ತಕ. ಈ ಪುಸ್ತಕದಲ್ಲಿ ಅವನು ಪ್ರತಿ ಪುಟದಲ್ಲಿಯೂ, ಅತ್ಯಂತ ದೊಡ್ಡ ಸಂಗತಿಯಾದ ದೇವರಿಂದ ಹಿಡಿದು ನಮ್ಮಂಥ ಅತ್ಯಂತ ಸಾಮಾನ್ಯ ಓದುಗರನ್ನು ಕೂಡ ತಮಾಷೆ ಮಾಡುತ್ತ ಹೋಗುತ್ತಾನೆ. ಏಕೆಂದರೆ ನಗು ಎನ್ನುವುದು ನಮ್ಮ abysmal thought (ತಳ ಬುಡವಿಲ್ಲದ, ಕೆಟ್ಟ ಆಲೋಚನೆಗಳು) ಗಳಿಗೆ ಒಳ್ಳೆಯ ಔಷಧಿ ಎನ್ನುವುದು ನಿಷೆ ಗೆ ಗೊತ್ತಿತ್ತು. ನಕ್ಕಾಗ ನಾವು, ನಮ್ಮ ಭಾರ, ಗಂಭೀರ ಮತ್ತು ಸಿನಿಕ ಮನಸ್ಥಿತಿಯಿಂದ ಮೇಲಕ್ಕೇಳುತ್ತೇವೆ ಮತ್ತು ಥಟ್ಟನೆ ಭರವಸೆಯಿಂದ ಸುತ್ತುವರೆಯಲ್ಪಡುತ್ತೇವೆ.
ನಾವು ಜಗತ್ತಿನ ಅರ್ಥಹೀನತೆಯ ಬಗ್ಗೆಯೇ ನಿರಂತರವಾಗಿ ಫೋಕಸ್ ಮಾಡುತ್ತಿದ್ದರೆ, ಚಿಂತೆ ಮತ್ತು ತಲ್ಲಣ ನಮ್ಮ ಹತ್ತಿರವೇ ಸುಳಿದಾಡುತ್ತಿರುತ್ತವೆ. ನಿಷೆಯ ಪ್ರಕಾರ, ನಮಗೆ ಭಾವನಾತ್ಮಕ ಆದರ್ಶಗಳಲ್ಲಿ ( platonic ideals), ಕ್ಯಾಂಟ್ ನ ತಾರ್ಕಿಕ ನೈತಿಕತೆಯಲ್ಲಿ ( Kantian duty) ಅಥವಾ ಮತಧರ್ಮಗಳಲ್ಲಿ ಯಾವ ಉತ್ತರಗಳನ್ನೂ ಕಂಡುಕೊಳ್ಳುವುದು ಸಾಧ್ಯವಿಲ್ಲ ಎನ್ನುವುದು ಯಾವಾಗ ಅರಿವಿಗೆ ಬರುತ್ತದೆಯೋ, ಆಗ ನಾವು ಬದುಕಿಗೆ ಮರಳಿ, ನಮಗೆ ಇಷ್ಟದ ಸಂಗತಿಗಳನ್ನು ಮಾಡುತ್ತ, ನಾವು ಯಾರೋ ಆ ರೀತಿ ಆಗುತ್ತ ಹೋಗುತ್ತೇವೆ. ನಿಷೆ ಗೆ ಜಗತ್ತಿನಲ್ಲಿ ಯಾವ ನಿಗೂಢವೂ ಇಲ್ಲ.
ನಾವು ನಮ್ಮ ಬದುಕನ್ನ ಹೀಗೆಯೇ ಬಾಳಬೇಕು ಎನ್ನುವ ಯಾವ ರೀತಿಯೂ ಇಲ್ಲ. ಮತ್ತು ನಾವು ಕಾಲಿಗೆ ಸ್ಪ್ರಿಂಗ್ ಕಟ್ಟಿಕೊಂಡು ಬದುಕಿಗೆ ಮತ್ತೆ ಮರಳಬೇಕು. ಬದುಕುವ ಖುಶಿಗಾಗಿ ( joie de vivre) ಮತ್ತೆ ನಾವು ಬದುಕಿಗೆ ಮರಳಬೇಕು, ಏಕೆಂದರೆ ಕೊನೆಗೂ ನಮಗೆ ಬೇಕಾಗಿರುವುದು ಖುಶಿ ಮಾತ್ರ. ನಾವು ಬದುಕಿನೆಡೆಗೆ ಮುಖ ಮಾಡಿ ನಗುವುದು ನಮ್ಮ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ ಎಂದಲ್ಲ, ಬದಲಾಗಿ ಪ್ರಶ್ನೆಗಳು ನಮಗೆ ನಿಜವಾಗಿಯೂ ಯಾವತ್ತೂ ಮ್ಯಾಟರ್ ಆಗಿರಲೇ ಇಲ್ಲ ಎನ್ನುವುದು ಗೊತ್ತಾಗಿರುವುದಕ್ಕಾಗಿ.

