ನಮ್ಮ ಮೂಗಿನ ನೇರಕ್ಕೆ ಇದು ಒಳ್ಳೆಯದು, ಇದು ಕೆಟ್ಟದ್ದು, ಇದು ಕ್ರೂರಿ, ಇದು ಬಲಿಪಶು ಎಂದೆಲ್ಲ ವಿಂಗಡಣೆ ಮಾಡುವುದು ಸರಿಯಲ್ಲ. ಸೃಷ್ಟಿಯಲ್ಲಿ ಪ್ರತಿಯೊಂದೂ ತನ್ನದೇ ಆದ ಸ್ವಭಾವವನ್ನು ಹೊತ್ತು ಬಂದಿರುತ್ತದೆ.
ಹುಲ್ಲಿಗೆ ಜಿಂಕೆ ಅಪಾಯಕಾರಿಯಾಗಿಯೂ ಸಿಂಹ ರಕ್ಷಕನಾಗಿಯೂ ತೋರುತ್ತವೆ. ನಾವು ಸಿಂಹವನ್ನು ಭಯಾನಕ ಪ್ರಾಣಿಯಾಗಿ ನೋಡುತ್ತೇವೆ ಮತ್ತು ಜಿಂಕೆಗಳನ್ನು ಮುಗ್ಧ ಬಲಿಪಶುಗಳನ್ನಾಗಿ. ಆದರೆ ಹುಲ್ಲಿನ ಪಾಲಿಗೆ ತನ್ನನ್ನು ತಿನ್ನುವ ಜಿಂಕೆ ಭಯಾನಕ ಮತ್ತು ತನ್ನ ತಂಟೆಗೆ ಬರದ ಸಿಂಹ ರಕ್ಷಕ.
ಒಂದು ವೇಳೆ ಸಿಂಹಕ್ಕೆ ಮಾತನಾಡಲು ಸಾಧ್ಯವಿದ್ದರೆ, ತಾನು ಬದುಕಲು ಜಿಂಕೆಗಳನ್ನು ತಿನ್ನುವುದು ಅನಿವಾರ್ಯ ಎಂದು ಅದು ಹೇಳಬಹುದು. ಅದು ಕೇವಲ ತನ್ನ ಸ್ವಭಾವದಂತೆ ನಡೆದುಕೊಳ್ಳುತ್ತಿದೆ ಅಷ್ಟೇ. ಆದರೆ ಜಿಂಕೆ ಹೇಳುವ ಕಥೆಯೇ ಬೇರೆ. ಅದರ ಪಾಲಿಗೆ ಸಿಂಹವು ಒಂದು ಭಯಾನಕ ಕೊಲೆಗಡುಕ ಮತ್ತು ತನ್ನ ಪ್ರಪಂಚದ ವಿಲನ್ ಆಗಿ ಕಾಣಿಸುತ್ತದೆ. ಈಗ ಹುಲ್ಲಿನ ಕತೆ ಕೇಳಿ. ಅದರ ಪಾಲಿಗೆ ತನ್ನನ್ನು ತಿನ್ನುವ ಜಿಂಕೆಯೇ ವಿಲನ್. ಸಿಂಹವು ಹುಲ್ಲನ್ನು ತಿನ್ನುವ ಜಿಂಕೆಯನ್ನು ಕೊಲ್ಲುವುದರಿಂದ, ಹುಲ್ಲಿನ ಪಾಲಿಗೆ ಸಹಜವಾಗಿಯೇ ಅದು ಹೀರೋ.
ಜಗತ್ತಿನ ವಿದ್ಯಮಾನಗಳನ್ನು ನಾವು ನೋಡಬೇಕಿರೋದು ಹೀಗೆ. ನಮ್ಮ ಮೂಗಿನ ನೇರಕ್ಕೆ ಇದು ಒಳ್ಳೆಯದು, ಇದು ಕೆಟ್ಟದ್ದು, ಇದು ಕ್ರೂರಿ, ಇದು ಬಲಿಪಶು ಎಂದೆಲ್ಲ ವಿಂಗಡಣೆ ಮಾಡುವುದು ಸರಿಯಲ್ಲ. ಸೃಷ್ಟಿಯಲ್ಲಿ ಪ್ರತಿಯೊಂದೂ ತನ್ನದೇ ಆದ ಸ್ವಭಾವವನ್ನು ಹೊತ್ತು ಬಂದಿರುತ್ತದೆ. ಪ್ರತಿಯೊಂದೂ ತನ್ನ ಉಳಿವಿಗಾಗಿ ಪ್ರಯತ್ನಿಸುತ್ತದೆ ಮತ್ತು ಅನಿವಾರ್ಯ ಆಯ್ಕೆಗಳನ್ನು ಮಾಡಿಕೊಳ್ಳುತ್ತದೆ. ಇದನ್ನು ಅರ್ಥ ಮಾಡಿಕೊಂಡರೆ ಮಾತ್ರ ನಮಗೆ ಜಗತ್ತನ್ನು ಅದು ಇರುವಂತೆ, ಸಹಜವಾಗಿ ನೋಡಲು ಸಾಧ್ಯವಾಗೋದು.

