ಪ್ರಾಮಾಣಿಕತೆಯ ಅಭಿನಯ, ಸತ್ಯದ ಮೌಲ್ಯವನ್ನು ನಾವು ಗೌರವಿಸುತ್ತೇವೆ ಎನ್ನುವುದು, ಇನ್ನೊಬ್ಬರಿಂದ ನಾವು ಇದನ್ನೇ ನಿರೀಕ್ಷಿಸುತ್ತೇವೆ ಎನ್ನುವುದು, ನಮ್ಮನ್ನು ನಾವು ಸತ್ಯ ಹೇಳಲು ಸತ್ಯ ಕೇಳಲು ಹಿಂದೆ ಮುಂದೆ ನೋಡದವರು ಎಂದು ತೋರಿಸಿಕೊಳ್ಳುವುದು, ಇವೆಲ್ಲ ನಾವು ವೇಷಬದಲಿಸುವ ಬೇರೆ ಬೇರೆ ರೀತಿಗಳು ಅನ್ನುತ್ತಾನೆ La Rochefoucauld ತನ್ನ ಪುಸ್ತಕ Maxims ನಲ್ಲಿ । ಚಿದಂಬರ ನರೇಂದ್ರ
ಬಹಳಷ್ಟು ಜನ, ಸತ್ಯ ಹೇಳಿ ನಮಗೆ ಎನ್ನುತ್ತಾರೆ. ಎಷ್ಟು ಕಠಿಣವಾದರೂ ಸತ್ಯ ಹೇಳಿ ಎನ್ನುತ್ತಾರೆ, ಆರಾಮದಾಯಕ ಸುಳ್ಳುಗಳು ನಮಗೆ ಬೇಡ ಎನ್ನುತ್ತಾರೆ. ಆದರೆ ಫ್ರೆಂಚ್ ತತ್ವಜ್ಞಾನಿ La Rochefoucauld ನ ಪ್ರಕಾರ, ವಾಸ್ತವದಲ್ಲಿ ಜನರಿಗೆ, ಅಂಥ ಕಠಿಣ ಸತ್ಯಗಳೇನೂ ಬೇಕಾಗಿರುವುದಿಲ್ಲ. ಅಂಥ ಸತ್ಯಗಳನ್ನು ಅವರು ಅರಗಿಸಿಕೊಳ್ಳುವುದೂ ಇಲ್ಲ.
La Rochefoucauld ತನ್ನ ಪುಸ್ತಕ Maxims ನಲ್ಲಿ ವಾದಮಾಡುವುದೇನೆಂದರೆ, ತಾವು ತೆರೆದಿಟ್ಟ ಪುಸ್ತಕದ ಹಾಗೆ ಎಂದು ಹೇಳುವ ಬಹುತೇಕರು ಒಪ್ಪಿಕೊಳ್ಳುವುದು ಸತ್ಯದ ಸಣ್ಣ ಭಾಗವನ್ನು ಮಾತ್ರ. ಉದಾಹರಣೆಯಾಗಿ ನಮ್ಮ ದೌರ್ಬಲ್ಯಗಳ ಬಗ್ಗೆ ಹೇಳುವಾಗ, ನಮ್ಮೊಳಗೆ ಬೇರೆ ಯಾವ ದೊಡ್ಡ ದೌರ್ಬಲ್ಯ ಇಲ್ಲ ಎಂದು ಇತರರನ್ನು ನಂಬಿಸಲು, ನಾವು ನಮ್ಮ ಸಣ್ಣ ಸಣ್ಣ ತಪ್ಪುಗಳನ್ನ ಕೂಡಲೇ ಒಪ್ಪಿಕೊಂಡುಬಿಡುತ್ತೇವೆ.
ಉದಾಹರಣೆಗೆ, ನಾವು ಮೀಟಿಂಗ್ ಗಳಲ್ಲಿ ಯಾವ ಸಂಕೋಚ ಇಲ್ಲದೇ ಒಪ್ಪಿಕೊಳ್ಳುವುದು ಏನೆಂದರೆ, “ಕ್ಷಮಿಸಿ, ನನಗೆ ಟೈಂ ಮ್ಯಾನೇಜ್ ಮೆಂಟ್ ನ ಸಮಸ್ಯೆ ಇರುವುದರಿಂದ ಪೂರ್ತಿ ಕೆಲಸ ಮಾಡಿ ಮುಗಿಸಲಿಕ್ಕಾಗಲಿಲ್ಲ”. ಇದು ನಿಜ ಇರಬಹುದು, ಇದು ನಮ್ಮ ದೌರ್ಬಲ್ಯ ಇರಬಹುದು. ಆದರೆ ಇದು ಯಾರು ಕೂಡ ಕ್ಷಮಿಸಬಲ್ಲಂಥ ಸಾಮಾನ್ಯ ದೌರ್ಬಲ್ಯ. ಆದರೆ La Rochefoucauld ನ ಪ್ರಕಾರ ಇದು ನಮ್ಮ ಕ್ಷಮಿಸಲಾಗದಂಥ ದೊಡ್ಡ ದೌರ್ಬಲ್ಯವನ್ನ ಮರೆಮಾಚಲು ನಾವು ಬಳಸುವ ಮುಖವಾಡ ಆಗಿರಬಹುದು. ನಿಜದಲ್ಲಿ ನಾವು ಮೈಗಳ್ಳರಾಗಿರಬಹುದು, ಅಥವಾ ಆ ಕೆಲಸ ಮಾಡಲು ಅಸಮರ್ಥರಾಗಿರಬಹುದು, ಅಥವಾ ಯೋಗ್ಯರಲ್ಲದಿರಬಹುದು. ಇವು ನಾವು ಇನ್ನೊಬ್ಬರಿಂದ ಮರೆಮಾಚಲು ಪ್ರಯತ್ನಿಸುತ್ತಿರುವ ಕಠೋರ ಸತ್ಯಗಳು.
ತನ್ನ ಪುಸ್ತಕ Maxims ನಲ್ಲಿ La Rochefoucauld ಹೇಳುವುದೇನೆಂದರೆ, ಇನ್ನೊಬ್ಬರಿಂದ ತಪ್ಪಿಸಿಕೊಳ್ಳಲು ವೇಷಬದಲಾಯಿಸಿಕೊಳ್ಳುವುದರಲ್ಲಿ ನಾವು ಎಷ್ಟು ನಿಷ್ಣಾತರಾಗಿದ್ದೇವೆಯೆಂದರೆ, ಕೊನೆಗೆ ನಾವು ನಮಗೇ ಮೋಸ ಮಾಡಿಕೊಳ್ಳುತ್ತೇವೆ. ಅವನ ವಾದ ಏನೆಂದರೆ ಈ ಪ್ರಾಮಾಣಿಕತೆಯ ಅಭಿನಯ, ಸತ್ಯದ ಮೌಲ್ಯವನ್ನು ನಾವು ಗೌರವಿಸುತ್ತೇವೆ ಎನ್ನುವುದು, ಇನ್ನೊಬ್ಬರಿಂದ ನಾವು ಇದನ್ನೇ ನಿರೀಕ್ಷಿಸುತ್ತೇವೆ ಎನ್ನುವುದು, ನಮ್ಮನ್ನು ನಾವು ಸತ್ಯ ಹೇಳಲು ಸತ್ಯ ಕೇಳಲು ಹಿಂದೆ ಮುಂದೆ ನೋಡದವರು ಎಂದು ತೋರಿಸಿಕೊಳ್ಳುವುದು, ಇವೆಲ್ಲ ನಾವು ವೇಷಬದಲಿಸುವ ಬೇರೆ ಬೇರೆ ರೀತಿಗಳು. ನಮಗೆ ಮೌಲ್ಯಗಳು ಮುಖ್ಯ ಎನ್ನುವ ನಮ್ಮ ನಕಲೀತನದ ಸಾಕ್ಷ್ಯಗಳು.
La Rochefoucauld ಹೇಳುತ್ತಾನೆ, “ನಾನು ಪ್ರಾಮಾಣಿಕತೆಯನ್ನು ಗೌರವಿಸುತ್ತೇನೆ” ಎಂದು ಹೇಳುವ ಜನ ಕೊನೆಗೆ ಕಠೋರ ಸತ್ಯ ಅವರನ್ನು ತಲುಪಿದಾಗ, ಹೇಗೆ ವರ್ತಿಸುತ್ತಾರೆ ಎನ್ನುವುದನ್ನ ಗಮನಿಸಿ. ಏಕೆಂದರೆ, “ನಾನು ಪ್ರಾಮಾಣಿಕತೆಯನ್ನು ಗೌರವಿಸುತ್ತೇನೆ” ಎಂದು ಹೇಳಲು ನಾವು ಯಾವ ಖರ್ಚೂ ಮಾಡಬೇಕಿಲ್ಲ. ನಮ್ಮ ನಿಜವಾದ ಸ್ವಭಾವ ಹೊರಗೆ ಬರುವುದು, ಬದುಕಿನ ಕಠೋರ, ಆರಾಮದಾಯಕವಲ್ಲದ ಸತ್ಯಗಳು ನಮಗೆ ಅಪ್ಪಳಿಸಿದಾಗ.

