ಜೀಂಗ್‌ಜಿಯಾನ್ ಧಮ್ಮ ಸ್ವೀಕಾರ ಮಾಡಿ ಬಿಕ್ಖುಣಿಯಾಗಿದ್ದು ವೂವೇ ಪ್ರಾಂತ್ಯದ ಪ್ರತಿಷ್ಠಿತ ಕುಟುಂಬಗಳಲ್ಲಿ ಬದಲಾವಣೆಯ ಸುಂಟರಗಾಳಿಯನ್ನೇ ಎದುರಿಸಿತು. ವಿಧವೆಯರು, ಅರೆವಿಧವೆಯರು, ಸಂಸಾರದಲ್ಲಿ ರುಚಿ ಕಳೆದುಕೊಂಡ ಮಹಿಳೆಯರೆಲ್ಲ ಧಮ್ಮದ ಆಸರೆ ಪಡೆಯಲು ಧಾವಿಸಿದರು. ಗಂಡನಿಲ್ಲದ ತಾವು ಸ್ವತಂತ್ರರು. ಯಾರದ್ದೋ ಮಗಳು, ಯಾರದೋ ಸೊಸೆ ಅನ್ನುವ ಗುರುತಿನಲ್ಲಿ ಜೀವನಪೂರ್ತಿ ಕಳೆಯುವುದಕ್ಕಿಂತ, ಬೋಧಿಸತ್ವರಾಗಿ ಬಾಳುವುದು ಶ್ರೇಷ್ಠವೆಂದು ಅವರು ನಂಬಿದ್ದರು… । ಚೇತನಾ ತೀರ್ಥಹಳ್ಳಿ
ಚೀನಾದಲ್ಲಿ ಬೌದ್ಧ ಧರ್ಮ ಇನ್ನೂ ಅಂಬೆಗಾಲಿಡುತ್ತಿದ್ದ ಕಾಲದಲ್ಲಿ ದೊಡ್ಡ ಸಂಖ್ಯೆಯ ಹೆಣ್ಣುಮಕ್ಕಳು ಬೌದ್ಧ ಧರ್ಮ ಸ್ವೀಕರಿಸುವಂತೆ ಮಾಡಿದ್ದು ಝು ಜೀಂಗ್‌ಜಿಯಾನ್. ಇವಳು ಚೀನಾದ ಮೊತ್ತಮೊದಲ ಬೌದ್ಧ ಬಿಕ್ಖುಣಿ. ಬೌದ್ಧ ಧರ್ಮದ ಬೋಧನೆಗಳನ್ನು ಅರಿತು, ಅಳವಡಿಸಿಕೊಂಡು, ತಾನೂ ಬೌದ್ಧಳಾಗಬೇಕೆಂದು ನಿರ್ಧರಿಸಿದ ಈಕೆ, ಅಧಿಕೃತವಾಗಿ ಬಿಕ್ಖುಣಿ ದೀಕ್ಷೆ ಸ್ವೀಕರಿಸಲು 40 ವರ್ಷಗಳ ಕಾಲ ಕಾಯಬೇಕಾಯ್ತು. ಅವಳ ಈ ತಪನೆ ಮತ್ತು ಸಹನೆ ಸೂಕ್ತ ಫಲವನ್ನೇ ನೀಡಿತು ಮತ್ತು ಅವಳನ್ನು ಝೊಂಗ್‌ಗುವೋದ (ಚೀನಾ ದೇಶ) ಮೊದಲ ಬಿಕ್ಖುಣಿ ಪಟ್ಟದಲ್ಲಿ ಕೂರಿಸಿತು.
ಝು ಜೀಂಗ್‌ಜಿಯಾನ್ ಹುಟ್ಟು ಹೆಸರು ಝೊಂಗ್ ಲಿಂಗ್‌ಯಿ. ಝೊಂಗ್ ಅವಳ ಮನೆತನದ ಹೆಸರು. ಪೆಂಗ್‌ಚೆಂಗ್ ಪಟ್ಟಣದಲ್ಲಿ ನೆಲೆಸಿದ್ದ ಅವಳ ಕುಟುಂಬದ ಗಂಡಸರು ರಾಜ ದರ್ಬಾರಿನಲ್ಲಿ ಒಂದಲ್ಲ ಒಂದು ಪ್ರತಿಷ್ಠಿತ ಹುದ್ದೆಗಳಲ್ಲಿ ದುಡಿಯುತ್ತಿದ್ದರು. ಅವಳ ತಂದೆ ಝೊಂಗ್ ಹುವಾನ್ ವೂವೇ ಪ್ರಾಂತ್ಯದ ರಾಜ್ಯಪಾಲನಾಗಿದ್ದ. ಅವಳ ಕುಟುಂಬದ ಹೆಂಗಸರು ಪ್ರತಿಷ್ಠಿತ ಕುಟುಂಬಗಳ ಸೊಸೆಯಂದಿರಾಗಿ ಸಮಾಜದ ಕಣ್ಣಲ್ಲಿ ಮನೆತನದ ಹಿರಿಮೆ ಹೆಚ್ಚಿಸಿದ್ದರು. ಅವರೆಲ್ಲರೂ ಸುಸಂಸ್ಕೃತರು, ಸುಶಿಕ್ಷಿತರು. ಲಿಂಗ್‌ಯಿಗೆ ಕೂಡ ಕುಟುಂಬದ ಇತರ ಹೆಣ್ಣುಮಕ್ಕಳಂತೆ ಅಧಿಕಾರಿಯೊಬ್ಬನ ಜೊತೆ ಮದುವೆ ಮಾಡಲಾಗಿತ್ತು. ಆದರೆ ಆತ ಬಹಳ ಬೇಗ ತೀರಿಕೊಂಡು, ಇಪ್ಪತ್ತರ ಹರೆಯದಲ್ಲೇ ಅವಳು ವಿಧವೆಯಾದಳು.
ಲಿಂಗ್‌ಯಿ, ಶಾಸ್ತ್ರಾಧ್ಯಯನ, ತರ್ಕ, ಗಣಿತ, ವರ್ಣಚಿತ್ರ ಇತ್ಯಾದಿ ತರಬೇತಿ ಪಡೆದ ಬುದ್ಧಿವಂತೆ. ಗಂಡ ತೀರಿಕೊಂಡ ಮೇಲೆ ಅವಳು ಸುಮ್ಮನೆ ಕೂರಲಿಲ್ಲ. ಅಪ್ಪನ ಮನೆಯಲ್ಲಿದ್ದಾಗ ಅವಳಿಗೆ ಕೆಲವು ಬೌದ್ಧ ಬಿಕ್ಖುಗಳ ಪರಿಚಯವಾಗಿತ್ತು. ಅವು, ಚೀನಾದೇಶಕ್ಕೆ ಭಾರತದ ಬಿಕ್ಖುಗಳು ಧರ್ಮಪ್ರಚಾರಕ್ಕಾಗಿ ಕಾಲಿಟ್ಟ ಮೊದಲ ದಿನಗಳು. ಅವರೆಲ್ಲ ಜನಸಂಪರ್ಕಕ್ಕಾಗಿ, ಪ್ರಚಾರಕ್ಕಾಗಿ ಅಧಿಕಾರಿಗಳನ್ನು ಆಶ್ರಯಿಸಬೇಕಿತ್ತು. ವುವೇ ಪ್ರಾಂತ್ಯದ ಪರಮೋನ್ನತ ಅಧಿಕಾರಿಯಾಗಿದ್ದ ಝೊಂಗ್ ಹುವಾನ್ ಮನೆಗೆ ಅವರ ಭೇಟಿ ಸಹಜವೇ ಆಗಿತ್ತು. ಗಂಡ ತೀರಿಕೊಂಡ ಮೇಲೆ ಲಿಂಗ್‌ಯಿ ಆಸಕ್ತಿ ಧಾರ್ಮಿಕ ಸಂಗತಿಗಳತ್ತ ಹೊರಳಿತು. ಅದಾಗಲೇ ಬೌದ್ಧ ಧರ್ಮದಲ್ಲಿ ರುಚಿ ಬೆಳೆಸಿಕೊಂಡಿದ್ದ ಅವಳು, ಬಿಕ್ಖುಗಳ ಬೋಧನೆಗಳನ್ನು ಕೇಳಲು ಹೊರಟುಬಿಡುತ್ತಿದ್ದಳು. ಅಂದಿನ ಕಾಲದಲ್ಲಿ ವಿಧವೆಯರು ಮನೆಯಲ್ಲೇ ಉಳಿದು ಗಂಡನ ಕುಟುಂಬದ ಸೇವೆಗೆ ಜೀವನ ಮುಡಿಪಾಗಿಡಬೇಕಿತ್ತು. ಆದರೆ ಲಿಂಗ್‌ಯಿ ರಾಜ್ಯಪಾಲನ ಮಗಳು. ಕಲಿತ ಹೆಣ್ಣು. ಸಮಾಜದಲ್ಲಿ ಅವಳಿಗಿದ್ದ ಸ್ಥಾನಮಾನಗಳು ಯಾರೂ ಅವಳೆದುರು ನಿಂತು ಪ್ರಶ್ನಿಸದಂತೆ ಮಾಡಿತ್ತು.
ಆ ದಿನಗಳಲ್ಲಿ ಭಾರತದಿಂದ ಧಮ್ಮಪ್ರಚಾರಕ್ಕಾಗಿ ಕಶ್ಯಪ ಮಾತಂಗನೊಡನೆ ಚೀನಾದೇಶಕ್ಕೆ ಬಂದಿದ್ದ ಬೌದ್ಧ ಗುರು ಧರ್ಮರತ್ನ ವೂವೇ ಪ್ರಾಂತ್ಯದಲ್ಲಿ ಬೀಡುಬಿಟ್ಟಿದ್ದ. ಚೀನಾ ದೇಶದಲ್ಲಿ ಅವನ ಹೆಸರು ಝು ಫಲಾನ್. ಪ್ರಾಚೀನಾ ಚೀನಾದಲ್ಲಿ ಭಾರತವನ್ನು ಝುಟಿಯಾನ್ ಎಂದೂ (ಸಿಂಧು ಪದದ ಉಚ್ಚಾರಣೆಗೆ ಹೊಂದುವ ಚೀನೀ ಹೆಸರು) ಭಾರತೀಯರನ್ನು ಝು ಎಂದೂ ಗುರುತಿಸುವ ಪದ್ಧತಿ ಇತ್ತು. ‘ಫ’ ಅಂದರೆ ಧರ್ಮ, ‘ಲಾನ್’ ಅಂದರೆ ಅಮೂಲ್ಯ ಮಣಿ. ಹೀಗೆ ಭಾರತದ ಬಿಕ್ಖು ಧರ್ಮರತ್ನ, ಚೀನಾ ದೇಶದಲ್ಲಿ ಝು ಫಲಾನ್ ಆಗಿದ್ದ. ಝೊಂಗ್ ಲಿಂಗ್‌ಯಿ ಅವನಿಂದ ಧಮ್ಮಸಾರದ ಶಿಕ್ಷಣ ಪಡೆದಳು. ಸ್ವಂತ ಆಲೋಚನೆ ಮತ್ತು ಧ್ಯಾನದಿಂದ ಅದನ್ನು ಅರಿತುಕೊಂಡು ಹೃದ್ಗತ ಮಾಡಿಕೊಂಡಳು. ಅಷ್ಟು ಸಾಕಾಗಲಿಲ್ಲ, ತಾನೂ ಸನ್ಯಾಸ ಸ್ವೀಕರಿಸಿ ಬಿಕ್ಖುಣಿಯಾಗಬೇಕೆಂದು ಬಯಸಿದಳು. ಆದರೆ ಆ ದಿನಗಳಲ್ಲಿ ಚೀನಾ ದೇಶದಲ್ಲಿ ಮಹಿಳೆಯರಿಗೆ ಸನ್ಯಾಸಿನಿಯಾಗುವ ಅವಕಾಶ ಇನ್ನೂ ದೊರೆತಿರಲಿಲ್ಲ. ಅವರೇನಿದ್ದರೂ ಭಕ್ತಿಮಾರ್ಗದಲ್ಲಿ ಧಮ್ಮವನ್ನು ಅಪ್ಪಿಕೊಳ್ಳಬಹುದಾಗಿತ್ತು. ಇದಕ್ಕೆ ಕಾರಣವೂ ಇತ್ತು. ಬಿಕ್ಖುಣಿಯರ ನಿಯಮಗಳನ್ನು ಬೋಧಿಸುವ ‘ಬಿಕ್ಖುಣಿ ವಿನಯ’ ಆಗಿನ್ನೂ ಚೀನೀಯರ ಭಾಷೆಗೆ ಅನುವಾದಗೊಂಡಿರಲಿಲ್ಲ. ನಿಯಮಗಳನ್ನೆ ಬೋಧಿಸದೆ ಸನ್ಯಾಸ ದೀಕ್ಷೆ ನೀಡುವುದು ಹೇಗೆ ಅನ್ನುವ ಪ್ರಶ್ನೆ ಎದುರಾಯಿತು. ಆದರೆ ಲಿಂಗ್‌ಯಿ ಇಟ್ಟ ಹೆಜ್ಜೆ ಹಿಂದಿಡಲು ಒಪ್ಪಲಿಲ್ಲ. ಗುರುವನ್ನು ಒಪ್ಪಿಸಿ, ಅವನಿಂದ ಹತ್ತು ಶ್ರಮಣೇರಿಕ ನಿಯಮಗಳ ಬೋಧನೆ ಪಡೆದುಕೊಂಡೇಬಿಟ್ಟಳು. ಅಂದಿನಿಂದ ಅವಳ ಹೆಸರು ಝು ಜೀಂಗ್‌ಜಿಯಾನ್ ಎಂದಾಯ್ತು. ಭಾರತದ ಗುರುವಿನಿಂದ ದೀಕ್ಷೆ ಪಡೆದಿದ್ದರಿಂದ ಅವಳ ಹೆಸರಿನ ಮುಂದೆ ಗುರುಪರಂಪರೆಯ ಸೂಚಕವಾಗಿ ಝು ಸೇರಿಕೊಂಡಿತು ಮತ್ತು ಧಮ್ಮದೆಡೆಗಿನ ಅವಳ ಪವಿತ್ರ ಬದ್ಧತೆಯೇ (ಜೀಂಗ್‌ಜಿಯಾನ್) ಅವಳ ಹೆಸರಾಯಿತು.
ಜೀಂಗ್‌ಜಿಯಾನ್ ಧಮ್ಮ ಸ್ವೀಕಾರ ಮಾಡಿ ಬಿಕ್ಖುಣಿಯಾಗಿದ್ದು ವೂವೇ ಪ್ರಾಂತ್ಯದ ಪ್ರತಿಷ್ಠಿತ ಕುಟುಂಬಗಳಲ್ಲಿ ಬದಲಾವಣೆಯ ಸುಂಟರಗಾಳಿಯನ್ನೇ ಎದುರಿಸಿತು. ವಿಧವೆಯರು, ಅರೆವಿಧವೆಯರು, ಸಂಸಾರದಲ್ಲಿ ರುಚಿ ಕಳೆದುಕೊಂಡ ಮಹಿಳೆಯರೆಲ್ಲ ಧಮ್ಮದ ಆಸರೆ ಪಡೆಯಲು ಧಾವಿಸಿದರು. ಅವರೆಲ್ಲ ಸಮಾಜದಲ್ಲಿ ದೊಡ್ದ ಸ್ಥಾನಮಾನ ಹೊಂದಿದ್ದರಿಂದ ಕಟ್ಟುಪಾಡುಗಳ ಹಿಂಜರಿಕೆ ಇರಲಿಲ್ಲ. ಜೊತೆಗೆ ಅವರಲ್ಲಿ ಬಹುಪಾಲು ಹೆಣ್ಣುಗಳು ಸುಶಿಕ್ಷಿತರಾಗಿದ್ದರು. ತಾವೇಕೆ ಧಮ್ಮವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇವೆಂದು ವಾದ ಮಂಡಿಸಿ ಕುಟುಂಬದವರನ್ನು ಯಶಸ್ವಿಯಾಗಿ ಒಪ್ಪಿಸುತ್ತಿದ್ದರು. ಗಂಡನಿಲ್ಲದ ತಾವು ಸ್ವತಂತ್ರರು. ಯಾರದ್ದೋ ಮಗಳು, ಯಾರದೋ ಸೊಸೆ ಅನ್ನುವ ಗುರುತಿನಲ್ಲಿ ಜೀವನಪೂರ್ತಿ ಕಳೆಯುವುದಕ್ಕಿಂತ, ಬೋಧಿಸತ್ವರಾಗಿ ಬಾಳುವುದು ಶ್ರೇಷ್ಠವೆಂದು ಅವರು ನಂಬಿದ್ದರು.
ಜೀಂಗ್‌ಜಿಯಾನ್ ಬಿಕ್ಖುಣಿಯಾದ ಮೇಲೆ ತನ್ನ ಪಾಲಿನ ಸಂಪತ್ತನ್ನು ಧಮ್ಮ ಪ್ರಚಾರಕ್ಕಾಗಿ ವಿನಿಯೋಗಿಸಿದಳು. ತವರು ಮನೆಯವರ ಸಹಾಯ ಪಡೆದು ಬಿಕ್ಖುಣಿಯರಿಗೆ ತಂಗುದಾಣ ಮತ್ತು ಧಮ್ಮದ ಕುರಿತ ಚರ್ಚೆಗಳಿಗಾಗಿ ಝುಶೆಂಗ್ ವಿಹಾರವನ್ನು ಕಟ್ಟಿಸಿದಳು. ಕ್ರಮೇಣ ಜೀಂಗ್‌ಜಿಯಾನ್ ಸುತ್ತ ಹೆಣ್ಣುಮಕ್ಕಳ ಶಿಷ್ಯವರ್ಗ ಬೆಳೆಯಿತು. ಅವರಲ್ಲಿ ಹುಯಿಗುವೊ ಎಂಬಾಕೆಗೆ ತಮಗೆ ದೊರೆಯುತ್ತಿರುವ ದೀಕ್ಷೆ ಪರಿಪೂರ್ಣವಾಗಿರಬೇಕೆಂಬ ಬಯಕೆ ಹುಟ್ಟಿತು. ಪ್ರಭಾವಶಾಲಿ ಅಧಿಕಾರಿಯ ಮಗಳಾಗಿದ್ದ ಹುಯಿಗುವೊ, ಸಿಂಹಳದಿಂದ (ಶ್ರೀಲಂಕಾ) ಬಿಕ್ಖುಣಿಯರನ್ನು ಕರೆಸಿ, ಅವರ ಮೂಲಕ ಬಿಕ್ಖುಣಿ ದೀಕ್ಷೆಯನ್ನು ಬೋಧಿಸುವ ಏರ್ಪಾಟು ಮಾಡಿದಳು. ಅದೇ ವೇಳೆಗೆ ಸಿಂಹಳದ ಬೌದ್ಧ ಗುರುಗಳಾದ ಹುಯಿಶೌ (ಶ್ರೀಗುಪ್ತ) ಮತ್ತು ಭಾರತದ ತಾನ್‌ಮೋಜಿ (ಧರ್ಮಗುಪ್ತ) ಭಾರತದಿಂದ ಬಿಕ್ಖುಣಿ ದೀಕ್ಷೆಗೆ ಅಗತ್ಯವಿದ್ದ ನಿರ್ದೇಶನಗ ಪಠ್ಯದೊಂದಿಗೆ ಚೀನಾಕ್ಕೆ ಬಂದರು. ಕೊನೆಗೂ ಕ್ರಿ.ಶ.357ರಲ್ಲಿ, ತನ್ನ 65ನೇ ವಯಸ್ಸಿನಲ್ಲಿ ಜೀಂಗ್‌ಜಿಯಾನ್ 24 ಇತರ ಹೆಣ್ಣುಗಳೊಂದಿಗೆ ಸಿ ನದಿಯ ನಡುವಿನಲ್ಲಿ, ನಾವೆಯಲ್ಲಿ ನಿರ್ಮಿಸಲಾಗಿದ್ದ ಪೀಠದಲ್ಲಿ ಗುರು ತಾನ್‌ಮೋಜಿಯಿಂದ ಅಧಿಕೃತವಾಗಿ ಬಿಕ್ಖುಣಿ ದೀಕ್ಷೆ ಪಡೆದಳು.
ಝು ಜೀಂಗ್‌ಜಿಯಾನ್‌ಗಿಂತ ಮೊದಲು ಕೆಲವು ಹೆಣ್ಣುಗಳು ಧಮ್ಮವನ್ನು ಆಚರಿಸುತ್ತಿದ್ದ ಉಲ್ಲೇಖಗಳಿದ್ದರೂ, ಸಂಸಾರ ತ್ಯಜಿಸಿ ಬಿಕ್ಖುಣಿಯಾಗುವ ಮತ್ತು ವಿಹಾರ ನಿರ್ಮಿಸಿ ಧಮ್ಮಪ್ರಚಾರದಲ್ಲಿ ತೊಡಗುವ ಮೂಲಕ ಜೀಂಗ್‌ಜಿಯಾನ್, ಚೀನಾದೇಶದ ಮೊದಲ ಬಿಕ್ಖುಣಿಯಾದಳು, ಬಿಕ್ಖುಣೀಸಂಘದ ಮೊದಲಿಗಳಾಗಿ, ಸಂಘವು ಬಲವಾಗಿ ಬೇರೂರಲು ಕಾರಣವಾದಳು.
(ಆಕರಗಳು: Daughters of Emptiness; Lives of the nuns; Buddhist Nuns, Pi qui ni of Zhongguo and online sources)

