ಧಮ್ಮವನ್ನು ಮೇಲ್ವರ್ಗದ ಅಂಗಳ ದಾಟಿಸಿದ ಬಿಕ್ಖುಣಿ ಆನ್ ಲಿಂಗ್‌ಶೌ

ಕೇವಲ ಓದು ಮತ್ತು ಉಪನ್ಯಾಸಗಳನ್ನು ಕೇಳಿಯೇ ಬೌದ್ಧ ಧಮ್ಮದ ರೀತಿಗಳನ್ನು ಅಕ್ಷರಶಃ ಪಾಲಿಸತೊಡಗಿದ್ದ ಲಿಂಗ್‌ಶೌ ವೈರಾಗ್ಯವನ್ನೇ ಹಾಸುಹೊದ್ದಿದ್ದಳು. ಮದುವೆ – ಸಂಸಾರಗಳಲ್ಲಿ ಮಾತ್ರವಲ್ಲ, ಒಟ್ಟು ಲೌಕಿಕ ಜೀವನದಲ್ಲೇ ಅವಳಿಗೆ ಆಸಕ್ತಿ ಇರಲಿಲ್ಲ. ವರ್ಗ ಶ್ರೇಣಿಗಳು, ಹೆಣ್ಣು – ಗಂಡೆಂಬ ಭೇದಗಳು ಅವಳನ್ನು ಕಾಡುತ್ತಿದ್ದವು. ಈ ಎಲ್ಲ ಕಟ್ಟುಪಾಡುಗಳಿಂದ ಹೊರಬಂದು ಕೇವಲ ಒಂದು ಜೀವವಾಗಿ ಬದುಕಿ ಸಾರ್ಥಕತೆ ಅನುಭವಿಸಲು ಸಾಧ್ಯವಾಗುವುದು ಧಮ್ಮದಿಂದ ಮಾತ್ರ ಅನ್ನುವುದನ್ನು ಅವಳು ಅರಿತಿದ್ದಳು. ಅದನ್ನೇ ಅಪ್ಪನ ಮುಂದೆ ಪ್ರಬಲವಾಗಿ ಮಂಡಿಸಿದಳು… । ಚೇತನಾ ತೀರ್ಥಹಳ್ಳಿ

ಚೀನಾ ದೇಶದಲ್ಲಿ ಬೌದ್ಧ ಧರ್ಮದ ಪ್ರಸರಣ ಬಿರುಸಿನ ವೇಗ ಪಡೆದಿದ್ದು ಕ್ರಿ.ಶ.3ನೇ ಶತಮಾನದಲ್ಲಿ. ಈ ಅವಧಿಯಲ್ಲಿ ಅಲ್ಲಿನ ಪುರುಷರಷ್ಟೇ ಸಂಖ್ಯೆಯಲ್ಲಿ ಮಹಿಳೆಯರೂ ಧಮ್ಮದತ್ತ ಆಕರ್ಷಿತರಾದರು. ಚೀನಾ ದೇಶದಲ್ಲಿ ಜಾತಿಗಳಿಲ್ಲ. ಅಲ್ಲಿ ಇರುವುದು ನಿರ್ದಿಷ್ಟ ನಂಬಿಕೆಗಳನ್ನು ಹೊಂದಿರುವ ಮತ್ತು ಧರ್ಮಗಳನು ಪಾಲಿಸುವ ಸಮುದಾಯಗಳು ಮತ್ತು ಸಮಾಜೋ ಆರ್ಥಿಕ ಶ್ರೇಣಿಯ ವರ್ಗಗಳು. ಪ್ರಾಚೀನ ಕಾಲದಲ್ಲಿ ವರ್ಗಾಧಾರಿತ ಸಾಮಾಜಿಕ ವಿಭಜನೆ ಅತಿರೇಕದ ಮಟ್ಟದಲ್ಲಿತ್ತು. ಸಹಜವಾಗೇ ಮೇಲ್ವರ್ಗದ ಜನರು ಎಲ್ಲ ಬಗೆಯ ಪ್ರಿವಿಲೇಜ್‌ಗಳನ್ನು ಅನುಭವಿಸುತ್ತಿದ್ದರು. ಭಾರತದಲ್ಲಿ ಮೊದಲ ಮತಾಂತರಿಗಳು ಮೇಲ್ಜಾತಿಯವರಾಗಿದ್ದಂತೆ, ಚೀನಾದಲ್ಲಿ ಮೇಲ್ವರ್ಗದ ಜನರು ಹೊಸ ಧರ್ಮವನ್ನು ಅಪ್ಪಿಕೊಂಡ ಮೊದಲಿಗರಾಗಿದ್ದರು. ರೂಢಿಗತ ಪದ್ಧತಿಯನ್ನು ಮುರಿಯುವ ಸಾಮರ್ಥ್ಯ ಇದ್ದುದು ಅವರಿಗೆ ಮಾತ್ರ ಹಾಗೂ ಅವರನ್ನು ಪ್ರಶ್ನಿಸುವವರು ಯಾರೂ ಇಲ್ಲದ್ದರಿಂದ ಇದು ಸಾಮಾನ್ಯವಾಗಿತ್ತು.

ಅದಕ್ಕೆ ಸರಿಯಾಗಿ, ಯಾವುದೇ ಹೊಸತು ಮೊದಲು ತಲುಪುತ್ತಿದ್ದುದು ಪ್ರಬಲ ವರ್ಗಗಳನ್ನೇ. ಆದ್ದರಿಂದಲೇ ಬೌದ್ಧ ಧರ್ಮವೂ ಮೊದಲು ಕಾಲಿಟ್ಟಿದ್ದು ಅಧಿಕಾರಸ್ಥದ ಅಂಗಳಕ್ಕೆ. ಧಮ್ಮ ಬೋಧನೆ ಪಡೆದ ನಂತರ ತಮ್ಮ ಅಧಿಕಾರ ಅಂತಸ್ತುಗಳ ಭ್ರಮೆ ಕಳಚಿಕೊಂಡ ನೈಜ ಸಾಧಕರು ಅದನ್ನು ಸಮಾಜದ ಎಲ್ಲ ಜನರ ನಡುವೆ ಹರಡಿದರು. ಇಂಥವರಲ್ಲಿ ಶ್ರೀಮಂತ ಅಧಿಕಾರಿಯ ಮಗಳು ಆನ್ ಲಿಂಗ್‌ಶೌ ಪ್ರಮುಖಳು.

ಆನ್‌ ಲಿಂಗ್‌ಶೌ, ಬಾಲ್ಯದಿಂದಲೇ ಬೌದ್ಧ ಧರ್ಮದತ್ತ ಒಲವು ಬೆಳೆಸಿಕೊಂಡಿದ್ದಳು. ಪುಸ್ತಕಗಳನ್ನು ಓದುವುದು ಮಾತ್ರವಲ್ಲ, ಬರವಣಿಗೆಯಲ್ಲೂ ಅಪಾರ ಕೌಶಲ್ಯ ಹೊಂದಿದ್ದ ಲಿಂಗ್ ಶೌ, ಪದ್ಯಗಳನ್ನೂ ರಚಿಸುತ್ತಿದ್ದಳು. ತಾನು ಮದುವೆಯಾಗುವುದಿಲ್ಲವೆಂದೂ, ಜೀವನ ಪೂರ್ತಿ ಬುದ್ಧನ ಉಪಾಸನೆಯಲ್ಲೇ ಕಳೆಯುತ್ತೇನೆಂದೂ ಹೇಳುತ್ತಿದ್ದಳು.

ಸುಂದರಿಯೂ ಸುಶಿಕ್ಷಿತಳೂ ಆಗಿದ್ದ ಲಿಂಗ್‌ಶೌಳನ್ನು ಮದುವೆಯಾಗಲು ಯುವಕರು ತುದಿಗಾಲಲ್ಲಿ ನಿಂತಿದ್ದರು. ಅವಳ ತಂದೆ ಷು ಚಾಂಗ್ ಮಗಳ ಮನವೊಲಿಸಲು ಎಷ್ಟು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ತಂದೆ ತಾಯಿಯ ಆಸೆಯನ್ನು ಧಿಕ್ಕರಿಸುವುದು ಉತ್ತಮ ನಡವಳಿಕೆಯಲ್ಲ ಎಂದು ಮಗಳನ್ನು ದೂಷಿಸಿದ. ಅಪ್ಪ ಅಮ್ಮನ ಕಣ್ಣಲ್ಲಿ ಕಂಬನಿ ತರಿಸುವ ಮಕ್ಕಳು ಒಳ್ಳೆಯ ಮಕ್ಕಳಾಗಿರಲು ಹೇಗೆ ಸಾಧ್ಯ? ಒಳ್ಳೆಯ ಮಕ್ಕಳಲ್ಲದವರು ಒಳ್ಳೆಯ ಧಾರ್ಮಿಕರಾಗಲು ಹೇಗೆ ಸಾಧ್ಯ ಎಂದು ಮಗಳನ್ನು ಪ್ರಶ್ನಿಸಿದ. ಅಪ್ಪನ ಈ ಯಾವ ಎಮೋಶನಲ್ ಬ್ಲಾಕ್‌ಮೇಲ್‌ಗಳೂ ಲಿಂಗ್‌ಶೌ ಮೇಲೆ ಪರಿಣಾಮ ಬೀರಲಿಲ್ಲ. ಧಮ್ಮದ ಹಾದಿ ಆಯ್ಕೆ ಮಾಡಿಕೊಳ್ಳುವುದು ಪಾಪವಲ್ಲ, ಅದು ಯಾರನ್ನೂ ಕೆಟ್ಟವರನ್ನಾಗಿಸುವುದಿಲ್ಲ, ಈ ಆಯ್ಕೆ ವೈಯಕ್ತಿಕ ಸ್ವಾರ್ಥಕ್ಕಾಗಿ ಮಾಡಿಕೊಳ್ಳುತ್ತಿರುವುದಲ್ಲ, ತಾನು ಧಮ್ಮದ ಹಾದಿ ಹಿಡಿಯುವುದರಿಂದ ತನ್ನ ಕುಟುಂಬಕ್ಕೂ ಒಳಿತಾಗುವುದು ಎಂದು ಅವಳು ಅರಿತಿದ್ದಳು. ಅದನ್ನೇ ಅಪ್ಪನಿಗೂ ಮನವರಿಕೆ ಮಾಡಿಸಲು ಪ್ರಯತ್ನಿಸಿದಳು. ಊಟ ತಿಂಡಿ ಬಿಟ್ಟು ಕುಳಿತಳು. ಕೇವಲ ಓದು ಮತ್ತು ಉಪನ್ಯಾಸಗಳನ್ನು ಕೇಳಿಯೇ ಬೌದ್ಧ ಧಮ್ಮದ ರೀತಿಗಳನ್ನು ಅಕ್ಷರಶಃ ಪಾಲಿಸತೊಡಗಿದ್ದ ಲಿಂಗ್‌ಶೌ ವೈರಾಗ್ಯವನ್ನೇ ಹಾಸುಹೊದ್ದಿದ್ದಳು. ಮದುವೆ – ಸಂಸಾರಗಳಲ್ಲಿ ಮಾತ್ರವಲ್ಲ, ಒಟ್ಟು ಲೌಕಿಕ ಜೀವನದಲ್ಲೇ ಅವಳಿಗೆ ಆಸಕ್ತಿ ಇರಲಿಲ್ಲ. ವರ್ಗ ಶ್ರೇಣಿಗಳು, ಹೆಣ್ಣು – ಗಂಡೆಂಬ ಭೇದಗಳು ಅವಳನ್ನು ಕಾಡುತ್ತಿದ್ದವು. ಈ ಎಲ್ಲ ಕಟ್ಟುಪಾಡುಗಳಿಂದ ಹೊರಬಂದು ಕೇವಲ ಒಂದು ಜೀವವಾಗಿ ಬದುಕಿ ಸಾರ್ಥಕತೆ ಅನುಭವಿಸಲು ಸಾಧ್ಯವಾಗುವುದು ಧಮ್ಮದಿಂದ ಮಾತ್ರ ಅನ್ನುವುದನ್ನು ಅವಳು ಅರಿತಿದ್ದಳು. ಅದನ್ನೇ ಅಪ್ಪನ ಮುಂದೆ ಪ್ರಬಲವಾಗಿ ಮಂಡಿಸಿದಳು.

ಅಪ್ಪ ಮಗಳ ಈ ವಾಗ್ವಾದ ವಿಪರೀತಕ್ಕೆ ಹೋದಾಗ, ಧಮ್ಮ ಗುರುಗಳ ಬಳಿ ಪರಿಹಾರ ಕೇಳುವುದು ಒಳಿತೆಂದು ಹಿತೈಶಿಗಳು ಸಲಹೆ  ನೀಡಿದರು. ಅದರಂತೆ ಷು ಚಾಂಗ್, ಆ ಪ್ರಾಂತ್ಯದ ಗೌರವಾನ್ವಿತ ಬೌದ್ಧ ಗುರು ಝು ಫೋಟುದೆಂಗ್‌ನನ್ನು ಕರೆಸಿಕೊಂಡು ತನ್ನ ವಾದ ಮುಂದಿಟ್ಟ. ಆನ್ ಲಿಂಗ್‌ಶೌಳನ್ನು ನೋಡುತ್ತಲೇ ಫೋಟುದೆಂಗ್‌ಗೆ ಅವಳು ಸಾಮಾನ್ಯಳಲ್ಲ ಅನ್ನುವುದು ಅರಿವಾಯ್ತು. ಅವಳೊಡನೆ ಮಾತನಾಡಿದ ಮೇಲೆ ಅವಳು ಅದಾಗಲೇ ಆಧ್ಯಾತ್ಮಿಕ ಪಥದಲ್ಲಿ ಸಾಕಷ್ಟು ದೂರ ಹೋಗಿದ್ದಾಳೆಂದು ಖಾತ್ರಿಯಾಯ್ತು. ನಂತರ ಅವನು, “ನಿನ್ನ ಮಗಳು ಧಮ್ಮಪ್ರಚಾರಕಿಯಾಗಿ, ಬೋಧಕಿಯಾಗಿ ಸಾವಿರಾರು ಜನರ ಬದುಕಿಗೆ ಬೆಳಕಾಗಲಿರುವ ಚಂದ್ರ. ಅವಳನ್ನು ಹಣತೆಯಂತೆ ಕೋಣೆಯಲ್ಲಿ ಬಚ್ಚಿಡಲು ಹೊರಟಿದ್ದೀಯಲ್ಲ” ಎಂದು ತಿಳಿಹೇಳಿ, ಅವಳನ್ನು ಧಮ್ಮದ ಹಾದಿಯಲ್ಲಿ ನಡೆಯಲು ಬಿಟ್ಟುಕೊಡುವಂತೆ ಸೂಚಿಸಿದ.

ಷು ಚಾಂಗ್‌ನಿಗೆ ತನ್ನ ಮಗಳ ಇಚ್ಛೆಗೆ ವಿರುದ್ಧವಾಗಿ ಹೋಗುವ ಮನಸು ಮೊದಲಿಂದಲೂ ಇರಲಿಲ್ಲ. ಆದರೆ, ಅಧಿಕಾರಿ ವರ್ಗದ ಜನರು ಸಮಾನ ಅಂತಸ್ತಿನವರ ಜೊತೆ ವೈವಾಹಿಕ ಸಂಬಂಧ ಬೆಳೆಸುವುದು ರಾಜಕೀಯ ಕಾರಣಗಳಿಂದ ಬಹಳಮುಖ್ಯವಾಗಿತ್ತು. ಅಂತಹ ಮನೆತನಗಳ ಮಕ್ಕಳು ಮದುವೆಯಾಗದಿರುವುದು ಅಘೋಷಿತ ಸಾಮಾಜಿಕ ಅಪರಾಧವೂ ಆಗಿತ್ತು. ಅದರಿಂದ ಅವನ ಮನೆತನಕ್ಕೆ ಕಳಂಕ ತಗುಲುತ್ತಿತ್ತು, ಜೊತೆಗೆ ಮಗಳ ಹಾದಿಯೂ ಸುಲಭವಾಗಿರುತ್ತಿರಲಿಲ್ಲ. ಆದ್ದರಿಂದಲೇ ಅವನು ಝು ಫೋಟುದೆಂಗ್‌ನನ್ನು ಕರೆಸಿ ಎಲ್ಲರ ಮುಂದೆ ತನ್ನ ಮಗಳ ಬದುಕಿನ ತೀರ್ಮಾನ ಹೊರಡಿಸಿದ್ದು, ಅವಳು ತನ್ನ ಧಮ್ಮದ ಹಾದಿಯಲ್ಲಿ ನಡೆಯಲು ಅನುಕೂಲ ಮಾಡಿಕೊಟ್ಟಿದ್ದು.

ನಂತರ ಆನ್ ಲಿಂಗ್‌ಶೌ, ಗುರು ಝು ಫೋಟುದೆಂಗ್‌ ಮತ್ತು ಚೀನಾದ ಮೊದಲ ಬಿಕ್ಖುಣಿ ಝು ಜೀಂಗ್‌ಜಿನ್ ಅವರ ಶಿಷ್ಯೆಯಾಗಿ ಧಮ್ಮವನ್ನು ಅಭ್ಯಾಸ ಮಾಡಿದಳು. ನಂತರ, ಸಿಂಹಳದ ಬಿಕ್ಖುಣಿಯರ ಸಮಕ್ಷಮದಲ್ಲಿ ಬೌದ್ಧ ಗುರು ತಾನ್‌ಮೋಜಿ (ಧರ್ಮಗುಪ್ತ)ಯಿಂದ ಅಧಿಕೃತವಾಗಿ ಬಿಕ್ಖುಣಿ ದೀಕ್ಷೆ ಪಡೆದಳು.

ಧಮ್ಮದ ವಿಚಾರಗಳನ್ನು ಬಹಳ ಸ್ಪಷ್ಟವಾಗಿ ವಿವರಿಸುತ್ತಿದ್ದ ಲಿಂಗ್‌ಶೌ ಸುತ್ತ ಶಿಷ್ಯ ಸಮೂಹ ಬೆಳೆಯಿತು. ಅವಳ ಪ್ರಭಾವದಿಂದ ಸಮಾಜದ ವಿವಿಧ ವರ್ಗಗಳ ಇನ್ನೂರು ಮಹಿಳೆಯರು ಬೌದ್ಧ ಧರ್ಮವನ್ನು ಸ್ವೀಕರಿಸಿದರು. ಅವಳ ಆಧ್ಯಾತ್ಮಿಕ ಪ್ರಭಾವಕ್ಕೆ ಬೆರಗಾದ ದೊರೆ ಶಿ ಹು, ಅವಳ ತಂದೆ ಷು ಚಾಂಗ್‌ಗೆ ಭಡ್ತಿ ನೀಡಿ ರಾಜ್ಯಪಾಲನನ್ನಾಗಿ ನೇಮಿಸಿದ. ಅವನು ನೀಡಿದ ದೇಣಿಗೆಯಿಂದ ಲಿಂಗ್‌ಶೌ ವಿಶಾಲವಾದ ಜಿನ್‌ಶು ವಿಹಾರವನ್ನೂ ನಂತರದಲ್ಲಿ ವಿವಿಧೆಡೆ ಐದು ಚಿಕ್ಕ ವಿಹಾರಗಳನ್ನೂ ಕಟ್ಟಿಸಿದಳು. ಬೌದ್ಧ ಧರ್ಮವನ್ನು ಮೇಲ್ವರ್ಗದವರ ಅಂಗಳದಿಂದ ಹೊರಗೊಯ್ದು ಸಮಾಜದ ಎಲ್ಲ ವರ್ಗದ ಹೆಣ್ಣುಗಳನ್ನೂ ತಲುಪುವಂತೆ ಮಾಡಿದ್ದು ಇವಳ ಹೆಗ್ಗಳಿಕೆ.


(ಆಕರಗಳು: Daughters of Emptiness; Lives of the nuns; Buddhist Nuns, Biqiuni zhuan and online sources)

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.