ನಿಜದ ಪ್ರೇಮ ತನ್ನ ಸಂಗಾತಿಗೆ ತನ್ನಿಂದ ಯಾವುದೇ ಕ್ಷಣದಲ್ಲಿ ಹೊರ ನಡೆಯಲು ಯಾವಾಗಲೂ ಮುಕ್ತ ಅವಕಾಶವನ್ನು ನೀಡುತ್ತದೆ. ಆದರೂ ಆ ವ್ಯಕ್ತಿ ತನ್ನ ಸ್ವಇಚ್ಛೆಯಿಂದ ಮನಪೂರ್ವಕವಾಗಿ ನಿಮ್ಮ ಜೊತೆ ಇರಲು ಬಯಸುತ್ತಾರಾದರೆ ಅದು ಪ್ರೇಮ ~ ಚಿದಂಬರ ನರೇಂದ್ರ
ಅಟ್ಯಾಚಮೆಂಟ್ ಮತ್ತು ಪ್ರೀತಿ, ಇವುಗಳ ನಡುವಿನ ವ್ಯತ್ಯಾಸ ಏನು? ಸಮಾಜದ ಪ್ರಕಾರ ಅಟ್ಯಾಚಮೆಂಟ್ ಎನ್ನುವುದೇ ಪ್ರೀತಿಗೆ ಪ್ರಬಲ ಸಾಕ್ಷಿ. ಉದಾಹರಣೆಗೆ , I am obsessed with you, ನನ್ನ ಬಿಟ್ಟು ಹೋಗಬೇಡ, ನಿನ್ನ ಬಿಟ್ಟು ನಾನು ಬದುಕುವುದಿಲ್ಲ, ಇತ್ಯಾದಿ. ಇದೆಲ್ಲ ಪ್ರೀತಿಯಲ್ಲ ಅಟ್ಯಾಚಮೆಂಟ್. ತತ್ವಜ್ಞಾನಿ ಜಿಡ್ಡು ಕೃಷ್ಣಮೂರ್ತಿ ತಮ್ಮ ಪುಸ್ತಕ Freedom from the known ಲ್ಲಿ ಹೇಳುವ ಪ್ರಕಾರ, ಎಲ್ಲಿ ಅಟ್ಯಾಚಮೆಂಟ್ ಇದೆಯೋ ಅಲ್ಲಿ ಪ್ರೀತಿ ಇರುವುದಿಲ್ಲ. ಅಟ್ಯಾಚಮೆಂಟ್ ಎನ್ನುವುದು ರೋಮಾನ್ಸ್ ಅಲ್ಲ, ಅದೊಂದು ಜೈಲು. ಪ್ರೀತಿ ಮತ್ತು ಅಟ್ಯಾಚಮೆಂಟ್ ಗಳ ನಡುವೆ ಒಂದು ಮನೋವೈಜ್ಞಾನಿಕ ವ್ಯತ್ಯಾಸ ಇದೆ. ಪ್ರೀತಿ ಎನ್ನುವುದು ಇನ್ನೊಬ್ಬರನ್ನು ಗೌರವಿಸುವುದು, ಆದರೆ ಅಟ್ಯಾಚಮೆಂಟ್ ಎನ್ನುವುದು ನಿಮ್ಮ ಕುರಿತಾದ ನಿಮ್ಮ ಭಯ.
ಅಟ್ಯಾಚಮೆಂಟ್ ಮುಖ್ಯ ಭಾವವಾಗಿದ್ದಾಗ, ನಿಮ್ಮ ಸಂಗಾತಿ ನಿಮ್ಮ ಹತ್ತಿರ ಇರಬೇಕೆಂದು ನೀವು ಬಯಸುವುದು ಕಾಳಜಿಯ ಕಾರಣವಾಗಿ, ಪ್ರೀತಿಯ ಕಾರಣವಾಗಿ ಅಲ್ಲ, ಬದಲಾಗಿ ನಿಮಗೆ ನಿಮ್ಮ ಒಂಟಿತನದ ಕುರಿತಾಗಿ ಇರುವ ಭಯದ ಕಾರಣವಾಗಿ. ನೀವು ಅವರ ಸಹಾಯ ಬಯಸುವುದು ನಿಮ್ಮ ಖಾಲೀತನವನ್ನು ತುಂಬಿಕೊಳ್ಳುವ ಸಲುವಾಗಿ. ಯಾವಾಗ ನೀವು ನಿಮ್ಮ ಒಂಟಿತನವನ್ನು ಕಳೆದುಕೊಳ್ಳಲು ಇನ್ನೊಬ್ಬರ ಸಾಂಗತ್ಯವನ್ನು ಬಯಸುತ್ತಿರೋ ಆಗ ಪ್ರೀತಿ ನಾಶವಾಗಿ ಹೋಗುತ್ತದೆ. ಕೃಷ್ಣಮೂರ್ತಿಯವರು ಹೇಳುವಂತೆ ಅಟ್ಯಾಚಮೆಂಟ್ ಅವಿವಾರ್ಯವಾಗಿ, ಭಯ, ಅಸೂಯೆ, ಸ್ವಾಮಿತ್ವ, ಆತಂಕ ಗಳನ್ನು ಹುಟ್ಟು ಹಾಕುತ್ತದೆ ಮತ್ತು ಭಯ ಪ್ರೀತಿಯನ್ನು ನಾಶ ಮಾಡುತ್ತದೆ (First & Last freedom, 1954). ಅಟ್ಯಾಚಮೆಂಟ್ ನ ಈ ಎಲ್ಲ ಸಂಗತಿಗಳು ಪ್ರೀತಿಯ ಜೊತೆ ಸಹ ಅಸ್ತಿತ್ವದಲ್ಲಿರುವುದು ಸಾಧ್ಯವೇ ಇಲ್ಲ.
ಓಶೋ ಈ ವಿಷಯವನ್ನೇ ಬಹಳ ಸುಂದರವಾಗಿ ವಿವರಿಸುತ್ತಾರೆ. ನೀವು ಒಂದು ಹೂವನ್ನು ಪ್ರೀತಿಸುತ್ತೀರಾದರೆ ಅದನ್ನು ಗಿಡದಿಂದ ಕೀಳಬೇಡಿ. ನೀವು ಅದನ್ನು ಅದರ ಗಿಡದಿಂದ ಕೀಳುವಿರಾದರೆ ಅದು ಸತ್ತು ಹೋಗುತ್ತದೆ. ನೀವು ಹೂವನ್ನು ಪ್ರೀತಿಸುವಿರಾದರೆ ಅದಕ್ಕೆ ತನ್ನ ಗಿಡದಲ್ಲಿಯೇ ಅರಳಲು ಅವಕಾಶ ಮಾಡಿಕೊಡಿ. ಪ್ರೀತಿ ಎಂದರೆ ಅಧಿಕಾರ ಹೊಂದುವುದಲ್ಲ. ಅಟ್ಯಾಚಮೆಂಟ್ ಬಯಸುವುದೇನೆಂದರೆ, ನೀವು ಆ ಹೂವನ್ನು ಕಿತ್ತು ಮನೆಯಲ್ಲಿಟ್ಟುಕೊಳ್ಳಿ, ಮತ್ತು ಬಾಗಿಲು ಮುಚ್ಚಿಕೊಂಡು ಬಿಡಿ. ಆಗ ಬೇರೆ ಯಾರ ಕಣ್ಣೂ ಹೂವಿನ ಮೇಲೆ ಬೀಳುವುದಿಲ್ಲ.
ಸಂಬಂಧಗಳಲ್ಲೂ ನಾವು ನಮ್ಮ ಇದೇ ಚಾಳಿಯನ್ನು ಮುಂದುವರೆಸುತ್ತೇವೆ. ನಾವು ತಪ್ಪಿತಸ್ಥ ಭಾವ, ನಿಯಮಗಳು ಮತ್ತು ನಿರೀಕ್ಷೆಗಳ ಪಂಜರವನ್ನು ಕಟ್ಟಿ ಅದರೊಳಗೆ ನಮ್ಮ ಸಂಗಾತಿಯನ್ನು ಬಂಧಿಯನ್ನಾಗಿಸುತ್ತೇವೆ. ಆದರೆ ಪ್ರೀತಿ, ಸ್ವಾತಂತ್ರ್ಯದಲ್ಲಿ ಮಾತ್ರ ಉಸಿರಾಡಬಲ್ಲದು. ಒಬ್ಬರು, ನೀವು ಅವರೊಳಗೆ ಹುಟ್ಟಿಸಿರುವ ತಪ್ಪಿತಸ್ಥ ಭಾವದ ಕಾರಣವಾಗಿ, ಅವರಿಗೆ ಆರ್ಥಿಕ ಸಹಾಯ ಮಾಡಿದ ಕಾರಣವಾಗಿ, ಅಥವಾ ಅವರನ್ನು ಭಾವನಾತ್ಮಕವಾಗಿ ಮ್ಯಾನ್ಯುಪ್ಯುಲೇಟ್ ಮಾಡಿರುವ ಕಾರಣಕ್ಕಾಗಿ, ನಿಮ್ಮ ಜೊತೆ ಇದ್ದಾರಾದರೆ ಅವರು ನಿಮ್ಮ ಸಂಗಾತಿಯಲ್ಲ ಬದಲಾಗಿ ಅವರು ನಿಮ್ಮ ಕೈದಿಯಾಗಿದ್ದಾರೆ.
ನಿಜದ ಪ್ರೇಮ ತನ್ನ ಸಂಗಾತಿಗೆ ತನ್ನಿಂದ ಯಾವುದೇ ಕ್ಷಣದಲ್ಲಿ ಹೊರ ನಡೆಯಲು ಯಾವಾಗಲೂ ಮುಕ್ತ ಅವಕಾಶವನ್ನು ನೀಡುತ್ತದೆ. ಆದರೂ ಆ ವ್ಯಕ್ತಿ ತನ್ನ ಸ್ವಇಚ್ಛೆಯಿಂದ ಮನಪೂರ್ವಕವಾಗಿ ನಿಮ್ಮ ಜೊತೆ ಇರಲು ಬಯಸುತ್ತಾರಾದರೆ ಅದು ಪ್ರೇಮ. ಎಲ್ಲಿಯವರೆಗೆ ನಿಮಗೆ ಒಂಟಿಯಾಗಿ ಬದುಕಲು ಬೇಕಾಗುವ ಸಾಮರ್ಥ್ಯವನ್ನು ಹೊಂದಿಸಿಕೊಳ್ಳುವುದು ಸಾಧ್ಯವಿಲ್ಲವೋ, ಅಲ್ಲಿಯವರೆಗೆ ನಿಮಗೆ ಪ್ರೀತಿಸುವುದೂ ಸಾಧ್ಯವಿಲ್ಲ. ಪ್ರೀತಿ ಮಾಲಿಕತ್ವದ ಹಕ್ಕು ಅಲ್ಲ, ಅದು ಒಂದು ಮುಕ್ತ ಹಸ್ತ.
********************************

